ಜೆಡಿಎಸ್‌ಗೆ ಹಾಕುವ ಒಂದೊಂದು ಮತವೂ ಕಾಂಗ್ರೆಸ್‌ಗೆ: ಅಮಿತ್ ಶಾ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತಮ ಸರ್ಕಾರ ನೀಡಿದ್ದಾರೆ. ಸದೃಢ ಸರ್ಕಾರಕ್ಕಾಗಿ ಮತ್ತೊಮ್ಮೆ ಬಹುಮತ ನೀಡಬೇಕು. ಭ್ರಷ್ಟಾಚಾರರಹಿತ ಉತ್ತಮ ಆಡಳಿತ ನೀಡುತ್ತೇವೆ, ಈ ಮೂಲಕ ಅಭಿವೃದ್ಧಿಯಲ್ಲಿ ದಕ್ಷಿಣ ಭಾರತದ ನಂಬರ್ ಒನ್ ರಾಜ್ಯವನ್ನಾಗಿಸುತ್ತೇವೆ ಎಂದ ಅಮಿತ್ ಶಾ.
ಸಂಡೂರು(ಫೆ.24): ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಹಾಕುವ ಒಂದೊಂದು ಮತವೂ ಕಾಂಗ್ರೆಸ್ ಪಾಲಾಗಲಿದೆ. ಕಾಂಗ್ರೆಸ್ಸಿಗೆ ಮತ ಹಾಕಿದರೆ, ಸಿದ್ದರಾಮಯ್ಯ ಸರ್ಕಾರ ಬಂದರೆ ಭ್ರಷ್ಟಾಚಾರದ ಆಡಳಿತ ಬರಲಿದೆ. ಹೀಗಾಗಿ ಬಿಜೆಪಿಗೆ ಮತ ನೀಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ ಮತ್ತೊಮ್ಮೆ ಅಧಿಕಾರ ನೀಡಿದರೆ ದಕ್ಷಿಣ ಭಾರತದಲ್ಲೇ ಕರ್ನಾಟಕವನ್ನು ನಂಬರ್ ಒನ್ ರಾಜ್ಯವನ್ನಾಗಿ ಅಭಿವೃದ್ಧಿ ಮಾಡುವುದಾಗಿಯೂ ಅವರು ಭರವಸೆ ನೀಡಿದ್ದಾರೆ.
ನಗರದ ಎಸ್‌ಆರ್‌ಎಸ್ ಮೈದಾನದಲ್ಲಿ ಗುರುವಾರ ಪಕ್ಷದ ಬಹಿರಂಗ ಸಮಾವೇಶವನ್ನುದ್ದೇಶಿಸಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತಮ ಸರ್ಕಾರ ನೀಡಿದ್ದಾರೆ. ಸದೃಢ ಸರ್ಕಾರಕ್ಕಾಗಿ ಮತ್ತೊಮ್ಮೆ ಬಹುಮತ ನೀಡಬೇಕು. ಭ್ರಷ್ಟಾಚಾರರಹಿತ ಉತ್ತಮ ಆಡಳಿತ ನೀಡುತ್ತೇವೆ, ಈ ಮೂಲಕ ಅಭಿವೃದ್ಧಿಯಲ್ಲಿ ದಕ್ಷಿಣ ಭಾರತದ ನಂಬರ್ ಒನ್ ರಾಜ್ಯವನ್ನಾಗಿಸುತ್ತೇವೆ ಎಂದರು.
4 ಜಿಲ್ಲೆ ಪ್ರಮುಖರ ಜೊತೆ ಅಮಿತ್ ಶಾ ಮೀಟಿಂಗ್; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಕುಟುಂಬ ರಾಜಕಾರಣ:
2018ರಲ್ಲಿ ಬಿಜೆಪಿಎಗೆ ಪೂರ್ಣ ಬಹುಮತ ಬರಲಿಲ್ಲ. ಹಾಗಾಗಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ಅಸ್ತಿತ್ವಕ್ಕೆ ಬಂತು. ರಾಜ್ಯದಲ್ಲಿ ಈ ಸರ್ಕಾರ ಲೂಟಿಗೆ ಇಳಿದಿತ್ತು. ಜೆಡಿಎಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಕುಟುಂಬ ರಾಜಕಾರಣ ಮಾಡುತ್ತವೆ. ಕುಟುಂಬ ರಾಜಕಾರಣದಿಂದ ಅಭಿವೃದ್ಧಿ, ಬಡವರ ಕಲ್ಯಾಣ ಮಾಡಲು ಸಾಧ್ಯವಿಲ್ಲ. ಬಿಜೆಪಿಯಿಂದ ಮಾತ್ರ ಜನರ ಅಭಿವೃದ್ಧಿ ಮತ್ತು ಕಲ್ಯಾಣ ಸಾಧ್ಯ ಎಂದರು. ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರ ಎಟಿಎಂ ಸರ್ಕಾರ ಆಗಿತ್ತು. ಆ ಸರ್ಕಾರ ರಾಜ್ಯದ ಹಣ ಹೊಡೆದುಕೊಂಡು ದೆಹಲಿ ಎಟಿಎಂ ತುಂಬುತ್ತಿತ್ತು. ದಿಲ್ಲಿಯಲ್ಲಿ ಕಾಂಗ್ರೆಸ್‌ನ ಎಟಿಎಂ ತಂಡದ ಸದಸ್ಯರು ಇದ್ದಾರೆ ಎಂದು ದೂರಿದರು.
ಮುಖ್ಯಮಂತ್ರಿ ಕುರ್ಚಿಗಾಗಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಜಗಳ ಮಾಡುತ್ತಿದ್ದಾರೆ. ಇನ್ನು ಕಾಂಗ್ರೆಸ್‌ನಲ್ಲಿ ಹಲವರು ಸಿಎಂ ಗಾದಿ ಮೇಲೆ ಕಣ್ಣಿಟ್ಟಿದ್ದಾರೆ. ಕಾಂಗ್ರೆಸ್ಸಿಂದ ಜನರ ಕಲ್ಯಾಣ ಸಾಧ್ಯವಿಲ್ಲ. ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಶಾ ಹೇಳಿದರು.
ದೇಶದಲ್ಲಿ ಪಿಎಫ್‌ಐ ಸಂಘಟನೆ ಬ್ಯಾನ್ ಮಾಡಿದ್ದೇವೆ. ಆದರೆ ಹಿಂದಿನ ಕಾಂಗ್ರೆಸ್ ಸರ್ಕಾರ ಪಿಎಫ್‌ಐ ಮೇಲಿನ 1700 ಪ್ರಕರಣಗಳನ್ನು ಹಿಂಪಡೆದಿತ್ತು. ಮೋದಿ ನೇತೃತ್ವದ ಆಡಳಿತದಿಂದ ದೇಶ ಸುರಕ್ಷಿತವಾಗಿದೆ. ರಾಹುಲ್ ಗಾಂಧಿ ಅವರು, ತುಕ್ಡೇ ತುಕ್ಡೇ ಗ್ಯಾಂಗ್‌ನ ಪರವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Assembly election: ಜನಾರ್ಧನರೆಡ್ಡಿ ಪ್ರಾಬಲ್ಯ ತಗ್ಗಿಸಲು ಅಮಿತ್ ಶಾ ಅಸ್ತ್ರ: ಬಿಜೆಪಿ ಕೋರ್ ಕಮಿಟಿ ಸಭೆ
ದೇವರ ಸ್ಮರಣೆ: ಭಾಷಣ ಆರಂಭದ ವೇಳೆ ಸಂಡೂರಿನ ಶ್ರೀಕುಮಾರಸ್ವಾಮಿ ದೇವರು, ಭಗವಾನ್ ವಿಠೋಬ, ಹನುಮನ ನಾಡು ಅಂಜನಾದ್ರಿಗೆ ನಮಿಸಿದ ಅಮಿತ್ ಶಾ, ಹಕ್ಕ-ಬುಕ್ಕ ಮತ್ತು ಯಶವಂತರಾವ್ ಘೋರ್ಪಡೆ ಅವರನ್ನು ಸ್ಮರಿಸಿದರು.
ರೆಡ್ಡಿ ಪಕ್ಷ ನಾನು ನೋಡಿಕೊಳ್ಳುವೆ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ತಲೆನೋವಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಅವರ ಪಕ್ಷವನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಖಂಡರಿಗೆ ಧೈರ್ಯ ತುಂಬಿದ್ದಾರೆ.