Assembly election: ಜನಾರ್ಧನರೆಡ್ಡಿ ಪ್ರಾಬಲ್ಯ ತಗ್ಗಿಸಲು ಅಮಿತ್ ಶಾ ಅಸ್ತ್ರ: ಬಿಜೆಪಿ ಕೋರ್ ಕಮಿಟಿ ಸಭೆ
ಕಲ್ಯಾಣ ಕರ್ನಾಟಕದಲ್ಲಿ ಹೊಸ ಪಕ್ಷ ಸ್ಥಾಪಿಸಿ ಬಿಜೆಪಿಗೆ ಠಕ್ಕರ್ ಕೊಡುತ್ತಿರುವ ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಪ್ರಾಬಲ್ಯವನ್ನು ಕುಗ್ಗಿಸಲು, ಅಮಿತ್ ಶಾ ನೇತೃತ್ವದಲ್ಲಿ ನಾಲ್ಕು ಜಿಲ್ಲೆಗಳ ಕೋರ್ ಕಮಿಟಿ ಸಭೆಯ ಅಸ್ತ್ರ ಪ್ರಯೋಗಿಸುತ್ತಿದೆ.
ಬಳ್ಳಾರಿ (ಫೆ.23): ಕಲ್ಯಾಣ ಕರ್ನಾಟಕದಲ್ಲಿ ಹೊಸ ಪಕ್ಷ ಸ್ಥಾಪಿಸಿ ಬಿಜೆಪಿಗೆ ಠಕ್ಕರ್ ಕೊಡುತ್ತಿರುವ ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಪ್ರಾಬಲ್ಯವನ್ನು ಕುಗ್ಗಿಸಲು, ಅಮಿತ್ ಶಾ ನೇತೃತ್ವದಲ್ಲಿ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಗಳ ಕೋರ್ ಕಮಿಟಿ ಸಭೆಯ ಅಸ್ತ್ರ ಪ್ರಯೋಗಿಸುತ್ತಿದೆ. ಈಗಾಗಲೇ ರೆಡ್ಡಿ ಕೆಆರ್‌ಪಿಪಿಗೆ ಬಿಜೆಪಿಯಿಂದ ಯಾರೊಬ್ಬರೂ ಹೋಗದಂತೆ ಪ್ಲಾನ್ 'ಎ' ರೂಪಿಸಿ ಯಶಸ್ವಿ ಆಗಿರುವ ಬಿಜೆಪಿ, ಈಗ ಕೋರ್ ಕಮಿಟಿ ಪ್ಲಾನ್ 'ಬಿ' ಮೂಲಕ ಸಂಡೂರಿನಲ್ಲಿ ಅಮಿತ್ ಶಾ ನೇತೃತ್ವದ ಬೃಹತ್ ಸಮಾವೇಶ ನಡೆಸಿ ಜನಾರ್ಧನ ರೆಡ್ಡಿ ಹವಾ ತಗ್ಗಿಸಲು ಮುಂದಾಗಿದೆ.
ಈ ಅಮಿತ್ ಶಾ ನೇತೃತ್ವದ ಕೋರ್ ಕಮಿಟಿ ಸಭೆಯಲ್ಲಿ ನಾಲ್ಕು ಮಹತ್ವದ ವಿಷಯಗಳ ಒತ್ತು ನೀಡಲಾಗಿದೆ. ಜನಾರ್ದನರೆಡ್ಡಿಯಿಂದ ಬಿಜೆಪಿಗೆ ಆಗುವ ಡ್ಯಾಮೇಜ್ ಕಂಟ್ರೋಲ್ ಮಾಡುವುದು. ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರಿನಲ್ಲಿ ಜನಾರ್ಧನ ರೆಡ್ಡಿ ಹವಾ ತಗ್ಗಿಸಲು ಅಮಿತ್ ಶಾ ಅಸ್ತ್ರ ಬಳಸುವುದು. ಬಿಜೆಪಿಯ ಯಾರೊಬ್ಬರೂ ಕೂಡ ರೆಡ್ಡಿ ಪಕ್ಷಕ್ಕೆ ಹೆಚ್ಚಿನ ಮಹತ್ವ ಕೋಡೋ ಅಗತ್ಯವಿಲ್ಲ ಎಂಬುದನ್ನು ಸಾರುವುದು. ಜೊತೆಗೆ, ಕಾಂಗ್ರೆಸ್‌ನ ಭದ್ರಕೋಟೆ ಆಗಿರುವ ಸಂಡೂರಿನಲ್ಲಿ ಈವರೆಗೆ ಬಿಜೆಪಿ ಗೆಲ್ಲಲು ಸಾಧ್ಯವಾಗಿಲ್ಲ. ಈಗ ಕೋರ್ ಕಮಿಟಿ ಸಭೆಯನ್ನು ಆಯೋಜಿಸುವ ಮೂಲಕ ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿ ಬಾವುಟ ಹಾರಿಸಲು ತಂತ್ರ ಹೆಣೆಯಲಾಗಿದೆ.
ಸಂಡೂರಿನಿಂದಲೇ ವಿಜಯದ ಕಹಳೆ ಮೊಳಗಿಸಲು ಶಾ ಆಗಮನ : ಶ್ರೀರಾಮುಲು
ಕಾಂಗ್ರೆಸ್ ಭದ್ರಕೋಟೆ ಸಂಡೂರಿನಲ್ಲಿ ಬಿಜೆಪಿ ಪತಾಕೆ: ದೇಶಕ್ಕೆ ಸ್ವಾತಂತ್ರ್ಯ ಬಂದು, ಸಂಡೂರು ವಿಧಾನಸಭಾ ಕ್ಷೇತರ ರಚನೆ ಆದಾಗಿನಿಂದ ಬಿಜೆಪಿ ಗೆಲುವು ಸಾಧಿಸಿಲ್ಲ. ಇಲ್ಲಿ 1985 ರಲ್ಲಿ ಸಿಪಿಐ ಹಾಗೂ 2004 ರಲ್ಲಿ ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಉಳಿದಂತೆ ಬಾಕಿ 12 ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಇದನ್ನು ಕಾಂಗ್ರೆಸ್ ನಾಯಕ ಎಂ.ವೈ. ಘೋರ್ಪಡೆ ಸಾಮ್ರಾಜ್ಯ ಎಂತಲೂ ಹೇಳಲಾಗುತ್ತಿದೆ. ಹೀಗಾಗಿ ಈ ಬಾರಿ ಸಂಡೂರು ಕ್ಷೇತ್ರದಲ್ಲಿ ಗೆಲ್ಲಲು ಬಿಜೆಪಿ ಚಿತ್ತವನ್ನು ನೆಟ್ಟಿದೆ. ಈ ಬಾರಿ ಶ್ರೀರಾಮುಲು ಅವರನ್ನ ಸಂಡೂರಿನಿಂದ ಸ್ಪರ್ಧೆ ಗೆ ಇಳಿಸಲು ಬಿಜೆಪಿ ಪ್ಲಾನ್ 'ಸಿ' ರೂಪಿಸಿದೆ.
ಬಳ್ಳಾರಿಗೆ ಪ್ರಧಾನಿ ಮೋದಿ ಆಗಮನ ಸಾಧ್ಯತೆ: ಬಳ್ಳಾರಿ , ಕೊಪ್ಪಳ ರಾಯಚೂರು, ವಿಜಯನಗರ ಜಿಲ್ಲೆಗಳ ಕೋರ್ ಕಮೀಟಿ ಸಭೆಯು ಸಂಡೂರಿನಲ್ಲಿ ಅಮೀತ್ ಷಾ ನೇತೃತ್ವದಲ್ಲಿ ನಡೆಯಲಿದೆ. ಇದರ ಬೆನ್ನಲ್ಲೇ ಮಾರ್ಚ್ ತಿಂಗಳ 15ನೇ ತಾರೀಖಿನನೊಳಗೆ ಬಳ್ಳಾರಿ ಜಿಲ್ಲೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮನದ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೋರ್ ಕಮೀಟಿ ಸಭೆ ಭಾರಿ ಮಹತ್ವ ಪಡೆದುಕೊಂಡಿದೆ. ನಾಲ್ಕು ಜಿಲ್ಲೆಯ ವಿಭಾಗೀಯ ಕೋರ್ ಕಮೀಟಿ ಸಭೆಯಲ್ಲಿ ಪಕ್ಷ ಸಂಘಟನೆಗೆ ಟಾಸ್ಕ್ ನೀಡಲಾಗುತ್ತದೆ. ವಿಜಯ ಸಂಕಲ್ಪ ರಥಯಾತ್ರೆ ಮಾರ್ಚ್ 3 ರಿಂದ ನಡೆಯಲಿದ್ದು, ನೇತೃತ್ವದ ಬಗ್ಗೆ ಚರ್ಚೆ ಮಾಡಲಾಗುತ್ತದೆ. ನಾಲ್ಕು ಜಿಲ್ಲೆಗಳಲ್ಲಿ ಎಲ್ಲ ಕ್ಷೇತ್ರಗಳ ಸಂಪೂರ್ಣ ಮಾಹಿತಿ ತರುವಂತೆ ಜಿಲ್ಲಾ ಅಧ್ಯಕ್ಷರಿಗೆ ಸೂಚನೆ ನೀಡಲಾಗಿದೆ. ಸಂಡೂರಿನಲ್ಲಿ ಈ ಬಾರಿ ಬಿಜೆಪಿ ಗೆದ್ದೇತೀರಲು ತಂತ್ರ ರೂಪಿಸುವುದು ಸಭೆಯಲ್ಲಿ ನಡೆಯುವ ಪ್ರಮುಖ ಚರ್ಚೆಗಳಾಗಿವೆ.
ನಾಲ್ಕು ಜಿಲ್ಲೆಗಳಲ್ಲಿ 18 ಕ್ಷೇತ್ರ ಗೆಲ್ಲುವ ಗುರಿ: ಪ್ರಸ್ತುತ ಬಳ್ಳಾರಿ , ಕೊಪ್ಪಳ ರಾಯಚೂರು, ವಿಜಯನಗರ ಸೇರಿ ನಾಲ್ಕು ಜಿಲ್ಲೆಯಲ್ಲಿ 22 ವಿಧಾನ ಕ್ಷೇತ್ರಗಳಿವೆ. ಅದರಲ್ಲಿ 10 ಕ್ಷೇತ್ರಗಳಲ್ಲಿ ಬಿಜೆಪಿ, 10 ಕಾಂಗ್ರೆಸ್ ಮತ್ತು 2 ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಈ ಬಾರಿ ಕನಿಷ್ಠ 18 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲೇಬೇಕೆನ್ನುವ ಟಾಸ್ಕ್ ನೀಡಲಾಗುತ್ತದೆ. ಬೂತ್ ಮಟ್ಟದ ಅಭಿಯಾನ ಮತ್ತು ಪೇಜ್ ಅಭಿಯಾನ ಯಾವ ರೀತಿಯಲ್ಲಿ ನಡೆದಿದೆ ಎಂಬುದನ್ನೂ ಪರಿಶೀಲನೆ ಮಾಡಲಾಗುತ್ತದೆ. ಜೊತೆಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆ ಜನರಿಗೆ ತಿಳಿಸಬೇಕು. ಸರ್ಕಾರದ ಸಾಧನೆಗಳನ್ನು ಪೋಸ್ಟರ್ ಮೂಲಕ ಹಂಚಬೇಕು. ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರ ಮನೆಗಳಿಗೆ ಬಾವುಟ ಅಂಟಿಸಬೇಕು ಎಂದು ಟಾಸ್ಕ್ ನೀಡಲಿದ್ದಾರೆ ಎಂದು ಕೇಳಿಬಂದಿದೆ.
ಇಂದು ಸಂಡೂರಿಗೆ ಕೇಂದ್ರ ಸಚಿವ ಅಮಿತ್ ಶಾ
ಮಧ್ಯಾಹ್ನ 1 ಲಕ್ಷ ಜನರಿಗ ಊಟದ ವ್ಯವಸ್ಥೆ: ಸಂಡೂರಿನಲ್ಲಿ ಅಮಿತ್ ಷಾ ಕಾರ್ಯಕ್ರಮಕ್ಕೆ ಒಂದು ಲಕ್ಷ ಜನರು ಸೇರೋ ಹಿನ್ನಲೆಯಲ್ಲಿ ಕಾರ್ಯಕರ್ತರಿಗಾಗಿ ಭರ್ಜರಿ ಬೋಜನದ ತಯಾರಿ ಮಾಡಲಾಗ್ತಿದೆ. ಬೆಳಿಗ್ಗೆ 10 ಸಾವಿರ ಜನರಿಗಾಗಿ ಉಪ್ಪಿಟ್ಟು ಮತ್ತು ಚಿತ್ರಾನ್ನಾ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಊಟಕ್ಕಾಗಿ ಗೋದಿ ಪಾಯಸ, ಫಲಾವ್ ಮತ್ತು ಮೊಸರನ್ನದ ವ್ಯವಸ್ಥೆ ಮಾಡಲಾಗಿದೆ. ಒಂದು ಲಕ್ಷ ಜನರಿಗಾಗಿ ಊಟದ ವ್ಯವಸ್ಥೆ ಮಾಡಲಾಗಿದೆ. ನೂರಕ್ಕೂ ಅಧಿಕ ಕೌಂಟರ್ ಮಾಡಲಾಗಿದೆ. ಇದರಲ್ಲಿ ಮಹಿಳೆ ಮತ್ತು ಪುರುಷರಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಬಳ್ಳಾರಿ, ವಿಜಯನಗರ, ಕೊಪ್ಪಳ ಮತ್ತು ರಾಯಚೂರಿನಿಂದ ಬರಲಿರೋ ಕಾರ್ಯಕರ್ತರು.