ಮುಂಬರುವ ವಿಧಾನಸಭಾ ಚುನಾವಣೆ ಗೆಲ್ಲಲು ಕೇಂದ್ರ ಗೃಹ ಸಚಿವ, ಬಿಜೆಪಿ ತಂತ್ರಗಾರಿಕೆ ನಿಪುಣರೂ ಆಗಿರುವ ಅಮಿತ್ ಶಾ ಅವರು ಪಕ್ಷದ ಮುಖಂಡರಿಗೆ ಪಂಚ ಸೂತ್ರಗಳನ್ನು ಮುಂದಿಟ್ಟಿದ್ದಾರೆ.
ಸಂಡೂರು (ಬಳ್ಳಾರಿ) (ಫೆ.24): ಮುಂಬರುವ ವಿಧಾನಸಭಾ ಚುನಾವಣೆ ಗೆಲ್ಲಲು ಕೇಂದ್ರ ಗೃಹ ಸಚಿವ, ಬಿಜೆಪಿ ತಂತ್ರಗಾರಿಕೆ ನಿಪುಣರೂ ಆಗಿರುವ ಅಮಿತ್ ಶಾ ಅವರು ಪಕ್ಷದ ಮುಖಂಡರಿಗೆ ಪಂಚ ಸೂತ್ರಗಳನ್ನು ಮುಂದಿಟ್ಟಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಬಾರಿ ಪಕ್ಷವು ಗರಿಷ್ಠ ಸ್ಥಾನಗಳನ್ನು ಗೆಲ್ಲಬೇಕಿದ್ದರೆ ತಳಮಟ್ಟದಲ್ಲಿ ಮುಖಂಡರು, ಕಾರ್ಯಕರ್ತರು ಕೆಲಸ ಮಾಡಬೇಕು. ಡಬಲ್ ಎಂಜಿನ್ ಸರ್ಕಾರದ ಸಾಧನೆಗಳು, ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸಬೇಕು ಎಂದು ಅಮಿತ್ ಶಾ ಅವರು ಸಲಹೆ ನೀಡಿದ್ದಾರೆ.
ಸಂಡೂರಲ್ಲಿ ಬಿಜೆಪಿ ಸಮಾವೇಶದ ಬಳಿಕ ಶಿವಪುರ ಪ್ಯಾಲೇಸ್‌ನಲ್ಲಿ ಗುರುವಾರ ಅಮಿತ್ ಶಾ ನೇತೃತ್ವದಲ್ಲಿ ನಡೆದ ಪಕ್ಷದ ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳ ಕೋರ್ ಕಮಿಟಿ ಸಭೆಯಲ್ಲಿ ಅವರು ಚುನಾವಣೆ ಎದುರಿಸುವ ಸಂಬಂಧ ಮಹತ್ವದ ಸಲಹೆ-ಸೂಚನೆಗಳನ್ನು ನೀಡಿದರು.
ಮಾಂಸ ತಿಂದಿದ್ದು ನಿಜ, ಆದರೆ ದೇಗುಲದೊಳಕ್ಕೆ ಹೋಗಿಲ್ಲ: ಸಿ.ಟಿ.ರವಿ
1. ಮೋದಿ, ಪಕ್ಷದ ಹೆಸರಿನಲ್ಲಿ ಪ್ರಚಾರ ಮಾಡಿ: ಎಲ್ಲ ಟಿಕೆಟ್ ಆಕಾಂಕ್ಷಿಗಳು ಪ್ರಧಾನಿ ಮೋದಿ ಹಾಗೂ ಪಕ್ಷದ ಹೆಸರಿನಲ್ಲಿ ಚುನಾವಣಾ ಪ್ರಚಾರ ಮಾಡಬೇಕು. ತಮ್ಮ ವೈಯಕ್ತಿಕ ಹೆಸರಿನಲ್ಲಿ ಪ್ರಚಾರ ಮಾಡುವುದನ್ನು ಕೈಬಿಡಬೇಕು. ಮೋದಿ ಮತ್ತು ಪಕ್ಷವನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗಬೇಕು. ಯಾರೂ ಪಕ್ಷದ ನಿರ್ದೇಶನ ಉಲ್ಲಂಘಿಸಬಾರದು.
2. ಕ್ಲಸ್ಟರ್ ಮಾಡಿಕೊಳ್ಳಿ: ಕ್ಷೇತ್ರದಲ್ಲಿ ಮೂರ್ನಾಲ್ಕು ಗ್ರಾಮಕ್ಕೊಂದು ಕ್ಲಸ್ಟರ್ ಮಾಡಿಕೊಳ್ಳಬೇಕು. ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಕ್ಲಸ್ಟರ್ ಮೂಲಕ ಜನರ ಸಮಸ್ಯೆ ಬಗೆಹರಿಸಬೇಕು.
3 ಯುವ ಮೋರ್ಚಾ ಬಲಪಡಿಸಬೇಕು. ಯುವ ಮೋರ್ಚಾ ಕಾರ್ಯಕರ್ತರು ಬೈಕ್ ಮೂಲಕ ಪ್ರಚಾರ ಮಾಡಬೇಕು.
4 ಪ್ರತಿ ವಿಧಾನಸಭಾ ಕ್ಷೇತ್ರಳಲ್ಲಿ ಮಹಿಳಾ ಮೋರ್ಚಾ ತಂಡಗಳನ್ನು ರಚಿಸಬೇಕು.
5 ಮಹಿಳಾ ಮೋರ್ಚಾ ತಂಡಗಳನ್ನು ಸ್ವ-ಸಹಾಯ ಸಂಘ, ಸ್ತ್ರೀಶಕ್ತಿ ಸಂಘಗಳನ್ನು ಭೇಟಿ ಮಾಡಿ ಸರ್ಕಾರದ ಯೋಜನೆಗಳನ್ನು ತಲುಪಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಜನರಿಗೆ ತಲುಪಿಸಬೇಕು ಎಂದು ಶಾ ಅವರು ಸಭೆಯಲ್ಲಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರೋಹಿಣಿ ವರ್ಸಸ್ ರೂಪಾಗೆ ಕೋರ್ಟ್ ಬ್ರೇಕ್: ಆಕ್ಷೇಪಾರ್ಹ, ಮಾನಹಾನಿ ಹೇಳಿಕೆ ನೀಡದಂತೆ ಇಬ್ಬರಿಗೂ ತಾಕೀತು
ಸುಮಾರು 15ರಿಂದ 20 ನಿಮಿಷಗಳ ಕಾಲ ನಡೆದ ಈ ಸಭೆಯಲ್ಲಿ ಸಚಿವರಾದ ಆನಂದ್ ಸಿಂಗ್, ಶಶಿಕಲಾ ಜೊಲ್ಲೆ ಅವರು ಕೂಡ ಪಕ್ಷ ಸಂಘಟನೆ ಕುರಿತು ಕೆಲ ಸಲಹೆ ನೀಡಿದರು ಎನ್ನಲಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಾರಿಗೆ ಸಚಿವ ಬಿ. ಶ್ರೀರಾಮುಲು ಪಾಲ್ಗೊಂಡಿದ್ದರು. ಸಂಸದರಾದ ದೇವೇಂದ್ರಪ್ಪ, ಕರಡಿ ಸಂಗಣ್ಣ, ಶಾಸಕ ಸೋಮಲಿಂಗಪ್ಪ ಹಾಗೂ ನಾಲ್ಕು ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಹಾಲಿ, ಮಾಜಿ ಶಾಸಕರು ಸೇರಿದಂತೆ 80 ಜನ ಪ್ರಮುಖರು ಇದ್ದರು.
