ರೋಹಿಣಿ ವರ್ಸಸ್ ರೂಪಾಗೆ ಕೋರ್ಟ್ ಬ್ರೇಕ್: ಆಕ್ಷೇಪಾರ್ಹ, ಮಾನಹಾನಿ ಹೇಳಿಕೆ ನೀಡದಂತೆ ಇಬ್ಬರಿಗೂ ತಾಕೀತು
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಅವರಿಗೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಆಕ್ಷೇಪಾರ್ಹ ಹಾಗೂ ಮಾನಹಾನಿ ಹೇಳಿಕೆ ನೀಡದಂತೆ ನಗರದ ಸಿಟಿ ಹಾಗೂ ಸೆಷನ್ಸ್ ನ್ಯಾಯಾಲಯ ತಾಕೀತು ಮಾಡಿದೆ.
ಬೆಂಗಳೂರು (ಫೆ.24): ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಅವರಿಗೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಆಕ್ಷೇಪಾರ್ಹ ಹಾಗೂ ಮಾನಹಾನಿ ಹೇಳಿಕೆ ನೀಡದಂತೆ ನಗರದ ಸಿಟಿ ಹಾಗೂ ಸೆಷನ್ಸ್ ನ್ಯಾಯಾಲಯ ತಾಕೀತು ಮಾಡಿದೆ.
ತಮ್ಮ ವಿರುದ್ಧ ಮಾನಹಾನಿಕಾರ ಸುದ್ದಿ ಪ್ರಸಾರ ಮಾಡದಂತೆ ಮತ್ತು ಆಕ್ಷೇಪಾರ್ಹ ಹೇಳಿಕೆ ನೀಡದಂತೆ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಹಾಗೂ ಮಾಧ್ಯಮಗಳ ವಿರುದ್ಧ ಪ್ರತಿಬಂಧಕ ಆದೇಶ ಹೊರಡಿಸುವಂತೆ ಕೋರಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ದಾವೆಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕೆ.ಎಸ್. ಗಂಗಣ್ಣವರ್ ಅವರ ಪೀಠ ಪರಸ್ಪರ ಯಾವುದೇ ಆಕ್ಷೇಪಾರ್ಹ ಮತ್ತು ಮಾನಹಾನಿ ಹೇಳಿಕೆಗಳನ್ನು ನೀಡದಂತೆ ಇಬ್ಬರಿಗೂ ತಾಕೀತು ಮಾಡಿದೆ.
8 ವರ್ಷದಿಂದ ರೋಹಿಣಿ ನನ್ನ ಮನೆಯವರ ಹಿಂದೆ ಬಿದ್ದಿದ್ದಾರೆ: ರೂಪಾ ಆಡಿಯೋ?
ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ರೋಹಿಣಿ ಸಿಂಧೂರಿ ಅವರ ವಿರುದ್ಧ ಯಾವುದೇ ಮಾನಹಾನಿ ಮತ್ತು ಆಕ್ಷೇಪಾರ್ಹ ಸುದ್ದಿ ಪ್ರಸಾರ ಮಾಡದಂತೆ ಹಲವು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಗೆ ತಾತ್ಕಾಲಿಕ ನಿರ್ಬಂಧಕಾಜ್ಞೆ ನೀಡಿ ನಗರದ 73ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಗುರುವಾರ ಮಧ್ಯಂತರ ಆದೇಶ ಹೊರಡಿಸಿದೆ. ಜತೆಗೆ, ಡಿ.ರೂಪಾ ಮೌದ್ಗಿಲ್ ಮತ್ತು ಹಲವು ಮಾಧ್ಯಮಗಳಿಗೆ ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯವು ವಿಚಾರಣೆಯನ್ನು ಮಾ.7ಕ್ಕೆ ಮುಂದೂಡಿದೆ.
ಪ್ರಕರಣಕ್ಕೆ ಸಂಬಂಧಪಟ್ಟದಂತೆ ಬೆಳವಣಿಗೆಗಳು ಮತ್ತು ದಾಖಲೆಗಳನ್ನು ಪರಿಶೀಲಿಸಿದರೆ, ರೋಹಿಣಿ ಅವರಿಗೆ ಮಾನಹಾನಿ ಉಂಟಾಗುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ರೋಹಿಣಿ ಮತ್ತು ಡಿ.ರೂಪಾ ಅವರು ಸರ್ಕಾರಿ ಅಧಿಕಾರಿಗಳಿದ್ದು, ಜವಾಬ್ದಾರಿಯುತ ಹುದ್ದೆ ಹೊಂದಿದ್ದಾರೆ. ಸೇವಾ ನಿಯಮಗಳ ನಿಯಂತ್ರಣಕ್ಕೆ ಒಳಪಟ್ಟಿದ್ದಾರೆ. ಆದರೆ, ಸಾರ್ವಜನಿಕವಾಗಿ ಪರಸ್ಪರ ಮಾನಹಾನಿ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ. ಪ್ರಕರಣದಲ್ಲಿ ನ್ಯಾಯಾಲಯವು ಮಧ್ಯಪ್ರವೇಶಿಸಿ ತನ್ನ ಅಧಿಕಾರ ಚಲಾಯಿಸುತ್ತಿರುವುದು ದುರದೃಷ್ಟಕರವಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣವೇನು?: ಡಿ.ರೂಪಾ ಮೌದ್ಗಿಲ್ ಅವರು ರೋಹಿಣಿ ಅವರ ಖಾಸಗಿ ಫೋಟೋಗಳನ್ನು ಫೇಸ್‌ಬುಕ್ ಖಾತೆಯಲ್ಲಿ ಪ್ರಕಟಿಸಿದ್ದರು. ನಂತರ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಇಬ್ಬರೂ ಪರಸ್ಪರ ದೂರು ನೀಡಿದ್ದರು. ಇದರಿಂದ ನ್ಯಾಯಾಲಯದ ಮೊರೆ ಹೋಗಿದ್ದ ರೋಹಿಣಿ ಅವರು, ಸೈಬರ್ ವಿಭಾಗದ ಮುಖ್ಯಸ್ಥರಾಗಿದ್ದ ಐಪಿಎಸ್ ಅಧಿಕಾರಿ ರೂಪಾ, ತಮ್ಮ ಮೊಬೈಲ್‌ನಲ್ಲಿನ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಇದು ಕಾನೂನು ಬಾಹಿರವಾಗಿ ಕ್ರಮವಾಗಿದೆ ಎಂದು ದೂರಿದ್ದರು.
ಐಪಿಎಸ್ ರೂಪಾಗೆ ಲೀಗಲ್ ನೋಟಿಸ್ ನೀಡಿದ ರೋಹಿಣಿ ಸಿಂಧೂರಿ!
ಅಲ್ಲದೆ, ತಮ್ಮ ಖಾಸಗಿ ಫೋಟೋ, ಮೊಬೈಲ್ ನಂಬರ್ ಅನ್ನು ರೂಪಾ ಅವರು ಫೇಸ್‌ಬುಕ್ ಖಾತೆಯಲ್ಲಿ ಬಹಿರಂಗಪಡಿಸಿದ್ದಾರೆ. ಬಹಿರಂಗವಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಾ ವೈಯಕ್ತಿಕ ತೇಜೋವಧೆಗೆ ಇಳಿದಿದ್ದಾರೆ. ಇದರಿಂದ ತಮಗೆ ಮಾನಹಾನಿಯಾಗಿದೆ. ಆದ್ದರಿಂದ ದಾವೆದಾರರ ವಿರುದ್ಧ ಆಕ್ಷೇಪಾರ್ಹ ಮತ್ತು ಮಾನಹಾನಿ ಹೇಳಿಕೆ ನೀಡದಂತೆ ರೂಪಾ ಅವರಿಗೆ ನಿರ್ದೇಶಿಸಬೇಕು. ರೂಪಾ ಅವರ ಹೇಳಿಕೆಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೂ ಪ್ರತಿಬಂಧಕ ಆದೇಶ ಹೊರಡಿಸಬೇಕು ಎಂದು ಕೋರಿದ್ದರು.