ರಾಜ್ಯವನ್ನು ಎಟಿಎಂ ಮಾಡಿಕೊಳ್ಳಲು ಕಾಂಗ್ರೆಸ್ ಸಂಚು: ಕೇಂದ್ರ ಗೃಹ ಸಚಿವ ಅಮಿತ್ ಶಾ
ದೇಶದಲ್ಲಿ ಸಮಾಪ್ತಿಯ ಹಂತ ತಲುಪಿರುವ ದೆಹಲಿ ಕಾಂಗ್ರೆಸ್‌ನ ಖಜಾನೆ ಖಾಲಿಯಾಗಿದೆ. ಕರ್ನಾಟಕದಲ್ಲಿ ಅಧಿಕಾರ ಹಿಡಿದು ಖಾಲಿಯಾಗಿರುವ ತನ್ನ ಖಜಾನೆಯನ್ನು ತುಂಬಿಕೊಳ್ಳಲು ಕರ್ನಾಟಕ ಕಾಂಗ್ರೆಸ್ ಅನ್ನು ಎಟಿಎಂ ಮಾಡಿಕೊಳ್ಳಲು ಹೊರಟಿದೆ.
ಬೆಂಗಳೂರು (ಮಾ.25): ‘ದೇಶದಲ್ಲಿ ಸಮಾಪ್ತಿಯ ಹಂತ ತಲುಪಿರುವ ದೆಹಲಿ ಕಾಂಗ್ರೆಸ್‌ನ ಖಜಾನೆ ಖಾಲಿಯಾಗಿದೆ. ಕರ್ನಾಟಕದಲ್ಲಿ ಅಧಿಕಾರ ಹಿಡಿದು ಖಾಲಿಯಾಗಿರುವ ತನ್ನ ಖಜಾನೆಯನ್ನು ತುಂಬಿಕೊಳ್ಳಲು ಕರ್ನಾಟಕ ಕಾಂಗ್ರೆಸ್ ಅನ್ನು ಎಟಿಎಂ ಮಾಡಿಕೊಳ್ಳಲು ಹೊರಟಿದೆ. ರಾಜ್ಯದ ಜನರು ಇದಕ್ಕೆ ಅವಕಾಶ ನೀಡಬಾರದು’ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಕರೆ ನೀಡಿದ್ದಾರೆ. ಶುಕ್ರವಾರ ಸಹಕಾರ ಇಲಾಖೆ ಹಾಗೂ ಇತರೆ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಕೆಂಗೇರಿ ಉಪನಗರದ ಕೊಮ್ಮಘಟ್ಟಮೈದಾನದಲ್ಲಿ ಆಯೋಜಿಸಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ದೇಶದ ಯಾವ ದೊಡ್ಡ ರಾಜ್ಯಗಳಲ್ಲೂ ಕಾಂಗ್ರೆಸ್ ಅಧಿಕಾರದಲ್ಲಿಲ್ಲ. ಸಮಾಪ್ತಿಯ ಹಾದಿಯಲ್ಲಿರುವ ದೆಹಲಿ ಕಾಂಗ್ರೆಸ್‌ನ ಖಜಾನೆ ಸಂಪೂರ್ಣ ಬರಿದಾಗಿದೆ. ಬರಿದಾಗಿರುವ ಖಜಾನೆ ಭರ್ತಿಗೆ ಒಂದು ಎಟಿಎಂ ಬೇಕಿದೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದು ಕರ್ನಾಟಕ ಕಾಂಗ್ರೆಸ್ ಅನ್ನು ಎಟಿಎಂ ಮಾಡಿಕೊಂಡು ಭಷ್ಟಾಚಾರದ ಮೂಲಕ ತನ್ನ ಖಜಾನೆ ತುಂಬಿಕೊಳ್ಳಲು ಹವಣಿಸುತ್ತಿದೆ. ಹಾಗಾಗಿ ಪ್ರತಿ ರಾಜ್ಯಗಳ ಅಭಿವೃದ್ಧಿ ಮೂಲಕ ಇಡೀ ದೇಶದ ಅಭಿವೃದ್ಧಿಯ ಗುರಿ ಹೊಂದಿರುವ ಪ್ರಧಾನಿ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕೋ, ಇಲ್ಲ ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳಲು ಮುಂದಾಗಿರುವ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕೋ ಎಂಬುದನ್ನು ಕರ್ನಾಟಕದ ಜನ ಯೋಚಿಸಬೇಕು ಎಂದರು.
ಮನೆಗೆ ಅಮಿತ್ ಶಾ ಬಂದಿದ್ದರಿಂದ ಆನೆ ಬಲ: ಬಿ.ವೈ.ವಿಜಯೇಂದ್ರ
ದೇಶದ್ರೋಹಿಗಳಿಗೆ ಪ್ರೋತ್ಸಾಹ: ‘ಕಾಂಗ್ರೆಸ್ ಇತಿಹಾಸವೇ ಭ್ರಷ್ಟಾಚಾರದಿಂದ ಕೂಡಿದೆ. ಎಲ್ಲೆಲ್ಲಿ ಕಾಂಗ್ರೆಸ್ ಅಧಿಕಾರ ನಡೆಸಿದೆಯೋ ಅಲ್ಲೆಲ್ಲಾ ಭ್ರಷ್ಟಾಚಾರ, ದಲಿತರು, ಹಿಂದುಳಿದವರು ಮತ್ತು ಆದಿವಾಸಿಗಳಿಗೆ ಅವಮಾನ ಹಾಗೂ ದೇಶದ್ರೋಹಿ ಚಟುವಟಿಕೆಗಳನ್ನು ಪ್ರೋತ್ಸಾಹಿಸಿದೆ ಎಂಬುದನ್ನು ಇತಿಹಾಸವೇ ಹೇಳುತ್ತದೆ. ದೇಶದ ಸುರಕ್ಷತೆಗಾಗಿ ಮೋದಿ ಅವರು ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿದರೆ, ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯಲ್ಲಿ ಪಿಎಫ್‌ಐ ಕಾರ್ಯಕರ್ತರ ಮೇಲಿನ ಎಲ್ಲ ಪ್ರಕಾರದ ಕೇಸುಗಳನ್ನು ಹಿಂಪಡೆದಿದ್ದೇ ಜ್ವಲಂತ ಉದಾಹರಣೆ. ಪ್ರಧಾನಿ ನರೇಂದ್ರ ಮೋದಿ ಈ ಪಿಎಫ್‌ಐ ನಿಷೇಧಿಸುವ ಮೂಲಕ ಇಡೀ ದಕ್ಷಿಣ ಭಾರತ ಮತ್ತು ಕರಾವಳಿಯನ್ನು ಸದೃಢಗೊಳಿಸಿದರು’ ಎಂದು ತಿಳಿಸಿದರು.
ಪ್ರಧಾನಿ ಮೋದಿ ಅವರು ಅಧಕಾರಕ್ಕೆ ಬಂದ ಬಳಿಕ ಸಹಕಾರ ಕ್ಷೇತ್ರವನ್ನು ಸಮೃದ್ಧಗೊಳಿಸಲು ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರತ್ಯೇಕ ಸಹಕಾರ ಇಲಾಖೆ ಸ್ಥಾಪಿಸಿದ್ದಾರೆ. ಬೇರೆ ಬೇರೆ ಕ್ಷೇತ್ರಗಳನ್ನು ಈ ಇಲಾಖೆಗೆ ಸೇರಿಸಿ ರೈತರು, ಹೈನುಗಾರಿಕೆ, ಮಹಿಳಾ ಕಲ್ಯಾಣಕ್ಕೆ ಅನೇಕ ಯೋಜನೆಗಳನ್ನು ರೂಪಿಸಲು ಸಹಕರಿಸಿದ್ದಾರೆ. ಸಹಕಾರ ಕ್ಷೇತ್ರಕ್ಕೆ ಸಾಕಷ್ಟುತೆರಿಗೆ ವಿನಾಯಿತಿ ನೀಡಲಾಗಿದೆ. ಬಹುರಾಜ್ಯ ಕೋ ಆಪರೇಟಿವ್ ಬೀಜ ಮಂಡಳಿ, ಸಾವಯವ ಆಹಾರದ ರಫ್ತು ಸೇರಿದಂತೆ ಅನೇಕ ಪ್ರಕಾರಗಳಿಗೆ ಪ್ರೋತ್ಸಾಹದ ಮೂಲಕ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ತಿಳಿಸಿದರು.
1400 ಕೋಟಿ ರು.ವೆಚ್ಚದ ಯೋಜನೆಗಳಿಗೆ ಚಾಲನೆ: ಇವತ್ತು ಕರ್ನಾಟಕದಲ್ಲಿ 1400 ಕೋಟಿ ರು. ವೆಚ್ಚದ 18 ಯೋಜನೆಗಳಿಗೆ ಭೂಮಿ ಪೂಜೆ ಹಾಗೂ ನೂತನ ಕಟ್ಟಡಗಳನ್ನು ಉದ್ಘಾಟಿಸಲಾಗಿದೆ. ಇಷ್ಟುದೊಡ್ಡ ಯೋಜನೆಗಳ ಚಾಲನಾ ಕಾರ್ಯಕ್ರಮ ಆಯೋಜಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಹೇಳಿದರು. ರೈತರ ಅನುಕೂಲಕ್ಕಾಗಿ ಯಶವಂತಪುರ, ದಾಸನಪುರ, ಬಿನ್ನಿಪೇಟೆ ಸೇರಿದಂತೆ ವಿವಿಧೆಡೆ ಎಪಿಎಂಸಿಗಳನ್ನು ಅಭಿವೃದ್ಧಿಪಡಿಸಲಾಗಿದೆ.
ವರುಣ ಕ್ಷೇತ್ರದ ಬಗ್ಗೆ ಅಮಿತ್ ಶಾ ಜತೆ ಚರ್ಚೆ ಆಗಿದೆ: ಬಿ.ವೈ.ವಿಜಯೇಂದ್ರ
ಹೂವಿನ ಮಾರುಕಟ್ಟೆಗಳನ್ನು ನಿರ್ಮಾಣ ಮಾಡಲಾಗಿದೆ. ಅನೇಕ ಹೊಸ ಕಟ್ಟಡಗಳನ್ನು ಉದ್ಘಾಟಿಸಲಾಗಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಭೂಮಿ ನೀಡಿದ 14 ಹಳ್ಳಿಗಳಿಗೆ ಕಾವೇರಿ ನೀರು ಮತ್ತು ಒಳಚರಂಡಿ ಪೈಪ್‌ಲೈನ್, ಮಂಚನಬೆಲೆ ಜಲಾಶಯದಿಂದ ಕುಂಬಳಗೋಡು ಮತ್ತು ಸುತ್ತಮುತ್ತಲಿನ 73 ಹಳ್ಳಿಗಳಿಗೆ ಜಲಜೀವನ್ ಮಿಷನ್ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರಿನ ಸರಬರಾಜು ಯೋಜನೆಗಳಿಗೆ ಚಾಲನೆ ನೀಡಿದ್ದೇವೆ. ಇವೆಲ್ಲವೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಸಾಕಷ್ಟುಕಾರ್ಯಕ್ರಮಗಳನ್ನು ಮಾಡಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.