Uddhav Thackeray letter to rebels: ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಬಂಡಾಯ ಶಾಸಕರಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ. ಬಂಡಾಯ ಶಾಸಕರ ಮನವೊಲಿಸಲು ಸಂಪೂರ್ಣ ವಿಫಲರಾಗಿರುವ ಠಾಕ್ರೆ ಬಣ, ಕಡೆಯದಾಗಿ ಭಾವನಾತ್ಮಕ ತಂತ್ರಕ್ಕೆ ಮೊರೆ ಹೋಗಿದೆ. ಶೀಘ್ರ ಬಂಡಾಯ ಶಾಸಕರು ಮುಂಬೈಗೆ ಬರುವ ಸಾಧ್ಯತೆಯಿದೆ. 

ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ (Maharashtra Political Crisis) ಎದ್ದಿರುವ ಭಿನ್ನಮತ ಬಹುತೇಕ ತಾರ್ಕಿಕ ಅಂತ್ಯದತ್ತ ದಾಪುಗಾಲಿಡುತ್ತಿದೆ. ಬಂಡಾಯ ಶಾಸಕರ ನಾಯಕ ಏಕನಾಥ ಶಿಂಧೆ (Rebel leader Eknath Shinde) ಶೀಘ್ರವೇ ಮುಂಬೈಗೆ ಬರಲಿದ್ದೇವೆ ಎಂದು ಹೇಳಿದ್ದಾರೆ. ಮುಂಬೈ ತಲುಪಿದ ನಂತರ ರಾಜ್ಯಪಾಲರನ್ನು ಭೇಟಿ ಮಾಡಿ, ಉದ್ಧವ್‌ ಠಾಕ್ರೆ (Uddhav Thackeray) ನೇತೃತ್ವದ ಮಹಾ ವಿಕಾಸ ಅಗಾಢಿಗೆ (Maha Vikas Agadhi) ಬಹುಮತವಿಲ್ಲ, ಸದನ ಕರೆದು ಬಹುಮತ ಸಾಬೀತುಪಡಿಸುವಂತೆ ಕೋರುವ ಸಾಧ್ಯತೆಯಿದೆ. ಈತನ್ಮಧ್ಯೆ ಶಿವಸೇನೆ ಮುಖ್ಯಸ್ಥ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಬಂಡಾಯ ಶಾಸಕರಿಗೆ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ. "ಆಂತರ್ಯದಲ್ಲಿ ನೀವಿನ್ನೂ ಶಿವಸೇನೆಯ ಜೊತೆಗೇ ಇದ್ದೀರಿ. ಬನ್ನಿ ಮುಂಬೈಗೆ, ಮಾತನಾಡೋಣ," ಎಂದು ಠಾಕ್ರೆ ಹೇಳಿದ್ದಾರೆ. 

"ಶಿವಸೇನಾ ಕುಟುಂಬದ ಮುಖ್ಯಸ್ಥನಾಗಿ, ನನಗೆ ನಿಮ್ಮೆಲ್ಲರ ಬಗ್ಗೆಯೂ ಕಳಕಳಿಯಿದೆ. ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳಿಂದ ಕಳವಳ ಉಂಟಾಗಿದೆ. ಕೆಲವರು ಈಗಲೂ ನಮ್ಮ ಜೊತೆ ಸಂಪರ್ಕದಲ್ಲಿದ್ದೀರಿ. ನೀವೆಲ್ಲರೂ ಇನ್ನೂ ಮಾನಸಿಕವಾಗಿ ಶಿವಸೇನೆಯಲ್ಲೇ ಇದ್ದೀರಿ," ಎಂಬ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ. 

ಬಂಡಾಯ ಶಾಸಕರ ಕುಟುಂಬಸ್ಥರು ಠಾಕ್ರೆ ಬಳಿ ಮಾತನಾಡಿದ್ದಾರೆ. ಅವರೆಲ್ಲರೂ ಶಿವಸೇನೆಯ ಬಗ್ಗೆ ಬಂಡಾಯ ಶಾಸಕರಿಗಿರುವ ಭಾವನಾತ್ಮಕ ನಂಟಿನ ಬಗ್ಗೆ ಮಾತನಾಡಿದ್ದಾರೆ ಎಂದು ಠಾಕ್ರೆ ಹೇಳಿದ್ದಾರೆ. "ನಿಮ್ಮ ಭಾವನೆಗಳನ್ನು ನಾನು ಗೌರವಿಸುತ್ತೇನೆ. ಮುಖ್ಯಸ್ಥನಾಗಿ ನಾನು ಹೃದಯದಿಂದ ಮಾತನಾಡುತ್ತಿದ್ದೇನೆ. ಇನ್ನೂ ತಡವಾಗಿಲ್ಲ. ಬಂದು ನನ್ನ ಮುಂದೆ ಕುಳಿತು ಜನರ ಮತ್ತು ಶಿವಸೈನಿಕರ ಅನುಮಾನಗಳನ್ನು ಬಗೆಹರಿಸುವಂತೆ ಮನವಿ ಮಾಡುತ್ತೇನೆ. ಏನೇ ಸಮಸ್ಯೆಯಿದ್ದರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ. ಶಿವಸೇನೆ ನಿಮ್ಮೆಲ್ಲರಿಗೂ ಕೊಟ್ಟಷ್ಟು ಗೌರವ ಇನ್ಯಾವ ಪಕ್ಷದಲ್ಲೂ ದಕ್ಕುವುದಿಲ್ಲ," ಎಂದು ಠಾಕ್ರೆ ಹೇಳಿದ್ದಾರೆ. 

ಇದನ್ನೂ ಓದಿ: Maharashtra Political Crisis ನಡುವೆ ಶಿವಸೇನೆ ಸಂಜಯ್‌ ರಾವತ್‌ಗೆ ಇಡಿ ನೊಟೀಸ್‌

ಬೆಳಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಏಕನಾಥ ಶಿಂಧೆ, ಇಪ್ಪತ್ತು ಬಂಡಾಯ ಶಾಸಕರು ಠಾಕ್ರೆ ಸಂಪರ್ಕದಲ್ಲಿದ್ದಾರೆ ಎಂಬ ಮಾತನ್ನು ತಿರಸ್ಕರಿಸಿದ್ದರು. ಯಾವ ಶಾಸಕರೂ ಉದ್ಧವ್‌ ಠಾಕ್ರೆಯವರ ಜೊತೆ ಸಂಪರ್ಕದಲ್ಲಿಲ್ಲ ಎಂದು ಹೇಳಿದ್ದರು. "ಎಲ್ಲಾ ಶಾಸಕರೂ ಅವರಾಗಿಯೇ ಬಂದಿದ್ದಾರೆ ಮತ್ತು ಹಿಂದುತ್ವ ಪ್ರತಿಪಾದನೆಗಾಗಿ ಬಂದಿದ್ದಾರೆ," ಎಂದು ಶಿಂಧೆ ಹೇಳಿದ್ದರು. 
ಮಹಾರಾಷ್ಟ್ರದಲ್ಲಿ ರಾಜಕೀಯ ಅಸ್ಥಿರತೆಯನ್ನು ಏಕನಾಥ ಶಿಂಧೆ ಸೃಷ್ಟಿಸಿದ್ದರು. ಮೂವತ್ತಕ್ಕೂ ಹೆಚ್ಚು ಶಿವಸೇನೆ ಶಾಸಕರ ಬೆಂಬಲದೊಂದಿಗೆ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರ ವಿರುದ್ಧ ತಿರುಗಿ ಬಿದ್ದಿದ್ದರು. ಕಾಂಗ್ರೆಸ್‌, ಎನ್‌ಸಿಪಿ ಮತ್ತು ಶಿವಸೇನೆ ಒಳಗೊಂಡ ಮಹಾ ವಿಕಾಸ್ ಅಗಾಢಿ ಸರ್ಕಾರ ಶಿಂಧೆಯ ದಿಢೀರ್‌ ಬಂಡಾಯದಿಂದ ತಲ್ಲಣಗೊಂಡಿತ್ತು. ಈಗ ದಿನದಿಂದ ದಿನಕ್ಕೆ ಶಿಂಧೆ ಬಲ ಕೂಡ ಹೆಚ್ಚುತ್ತಿದೆ. ಪಕ್ಷದ ಮೂರನೇ ಎರಡು ಭಾಗದಷ್ಟು ಶಾಸಕರು ಶಿಂಧೆ ಜೊತೆಯಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಕಡೆಯ ಪ್ರಯತ್ನವಾಗಿ ಠಾಕ್ರೆ ಭಾವನಾತ್ಮಕ ಪತ್ರ ಬರೆದಿದ್ದಾರೆ ಎಂದೂ ಹೇಳಲಾಗುತ್ತಿದೆ. 

ಇದನ್ನೂ ಓದಿ: ಬಂಡಾಯ ಶಾಸಕರ ಅನರ್ಹತೆ ಯತ್ನಕ್ಕೆ ಸುಪ್ರೀಂ ತಡೆ: ಅಘಾಡಿ ಸರ್ಕಾರಕ್ಕೆ ಭಾರೀ ಹಿನ್ನಡೆ!

ಸುಪ್ರೀಂ ಕೋರ್ಟ್‌ನಲ್ಲೂ ಶಿಂಧೆ ತಂಡಕ್ಕೆ ಜಯ:
ಮಹಾರಾಷ್ಟ್ರ ಡೆಪ್ಯುಟಿ ಸ್ಪೀಕರ್‌ ಬಂಡಾಯ ಶಾಸಕರನ್ನು ಅನರ್ಹಗೊಳಿಸಲು ನೊಟೀಸ್‌ ಜಾರಿಮಾಡಿದ್ದರು. ಇದನ್ನು ಪ್ರಶ್ನಿಸಿ ಶಿಂಧೆ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಾದ ಪ್ರತಿವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್‌ ಜುಲೈ 11ರವರೆಗೆ ಬಂಡಾಯ ಶಾಸಕರಿಗೆ ನೀಡಿದ್ದ ಅನರ್ಹತೆ ನೊಟೀಸನ್ನು ತಡೆ ಹಿಡಿದಿದೆ. ಈ ಮೂಲಕ ಸುಪ್ರೀಂ ಕೋರ್ಟಿನಲ್ಲೂ ಉದ್ಧವ್‌ ಠಾಕ್ರೆ ಅವರಿಗೆ ಹಿನ್ನಡೆಯಾದಂತಾಗಿದೆ.