ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷವು ಮಿತ್ರಪಕ್ಷಗಳ ಬೆಂಬಲದೊಂದಿಗೆ ಬಹುಮತ ಪಡೆದಿದೆ. ಆದಾಗ್ಯೂ, ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನಿಸದ ಕಾರಣ, ವಿಜಯ್ ಅವರನ್ನು ಆಹ್ವಾನಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ತಮಿಳನಾಡು ರಾಜಕೀಯದಲ್ಲಿ ಮತ್ತೆ ಕೋಲಾಹಲ ಎಬ್ಬಿದೆ. ಇತ್ತ ಭಾವಿ ಮುಖ್ಯಮಂತ್ರಿ ಜೋಸೆಫ್​ ವಿಜಯ್​ ಅವರು, ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮ್ಯಾಜಿಕ್​ ನಂಬರ್​ ಅವರಿಗೆ ಸಿಕ್ಕಿದೆ ಎನ್ನಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ 118 ಸ್ಥಾನಗಳಲ್ಲಿ ಜಯಗಳಿಸಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ, ಕಾಂಗ್ರೆಸ್‌ (5), ವಿಸಿಕೆ (2), ಸಿಪಿಐ (2) ಮತ್ತು ಸಿಪಿಎಂ (2) ಪಕ್ಷಗಳು ಬೆಂಬಲ ಘೋಷಿಸಿವೆ. ಹೀಗಾಗಿ ವಿಧಾನಸಭೆಯಲ್ಲಿ ವಿಜಯ್‌ ಸಂಖ್ಯಾಬಲ 119 ಆಗಿದೆ. ಈ ಬಾರಿಯ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ವಿಜಯ್‌, ಒಂದು ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದ್ದು, ಟಿವಿಕೆ ಮೈತ್ರಿಕೂಟದ ಸಂಖ್ಯಾಬಲ 118 ಆಗಲಿದೆ. ಇದು ಸರಳ ಬಹುಮತದ ಸಂಖ್ಯಾಬಲವಾಗಿದೆ.

ಆದರೆ, ಕುತೂಹಲ ಎನ್ನುವಂತೆ ಅದೇ ಇನ್ನೊಂದೆಡೆ, ಟಿವಿಕೆ ನಾಯಕ ಸಿ ಜೋಸೆಫ್ ವಿಜಯ್ ಅವರನ್ನು ರಾಜ್ಯದಲ್ಲಿ ಸರ್ಕಾರ ರಚಿಸಲು ಆಹ್ವಾನಿಸುವಂತೆ ನಿರ್ದೇಶಿಸಬೇಕೆಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಟಿವಿಕೆಯ ಸಕ್ರಿಯ ಸದಸ್ಯೆ ಎಂದು ಕರೆದುಕೊಳ್ಳುವ ವಕೀಲೆ ಕೆ. ಎಳಿಲರಸಿ ಈ ಅರ್ಜಿಯನ್ನು ಸಲ್ಲಿಸಿದ್ದಾರೆ. 2026 ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಸದನಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಈ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಲಾಗಿದೆ.

ಅರ್ಜಿಯಲ್ಲಿ ಏನಿದೆ?

ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) 59 ಸ್ಥಾನಗಳನ್ನು ಗೆದ್ದರೆ, ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) 47 ಸ್ಥಾನ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 5 ಸ್ಥಾನಗಳನ್ನು ಗೆದ್ದಿದೆ. ಪಿಎಂಕೆ, ಐಯುಎಂಎಲ್, ಸಿಪಿಐ, ವಿಸಿಕೆ, ಸಿಪಿಐ(ಎಂ), ಬಿಜೆಪಿ, ಡಿಎಂಡಿಕೆ ಮತ್ತು ಎಎಂಎಂಕೆ ಸೇರಿದಂತೆ ಇತರ ಪಕ್ಷಗಳು ಉಳಿದ ಸ್ಥಾನಗಳನ್ನು ಗೆದ್ದವು. 234 ಸದಸ್ಯರ ವಿಧಾನಸಭೆಯಲ್ಲಿ 108 ಸ್ಥಾನಗಳೊಂದಿಗೆ ಟಿವಿಕೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದರ ಹೊರತಾಗಿಯೂ ಶಾಸಕರ ಕೊರತೆಯಿಂದ ಸರ್ಕಾರ ರಚಿಸಲು ಆಗುತ್ತಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ರಾಜ್ಯಪಾಲರಿಂದ ನಕಾರ

ಪಕ್ಷದ ಮುಖ್ಯಸ್ಥ ವಿಜಯ್ ಮೇ 7 ರಂದು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ಆದರೆ, ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಟಿವಿಕೆ ಮುಖ್ಯಸ್ಥ ವಿಜಯ್ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸುವ ಮೊದಲು ತಮಗೆ ಬಹುಮತದ ಬೆಂಬಲವಿದೆ (118 ಶಾಸಕರ ಬೆಂಬಲ) ಎಂದು ಸಾಬೀತುಪಡಿಸುವಂತೆ ಕೇಳಿಕೊಂಡರು. ಇದು ಸರಿಯಲ್ಲ ಎನ್ನುವುದು ಅರ್ಜಿದಾರರ ವಾದ.

ಅರ್ಜಿಯಲ್ಲಿ ಏನಿದೆ?

ಯಾವುದೇ ಚುನಾವಣಾ ಪೂರ್ವ ಮೈತ್ರಿಕೂಟವು ಬಹುಮತವನ್ನು ಗಳಿಸದ ಕಾರಣ, ರಾಜ್ಯಪಾಲರು ಏಕೈಕ ಅತಿದೊಡ್ಡ ಪಕ್ಷವಾಗಿರುವ ಟಿವಿಕೆಯನ್ನು ಸರ್ಕಾರ ರಚಿಸಲು ಆಹ್ವಾನಿಸಬೇಕು ಮತ್ತು ನಂತರ ಸದನದಲ್ಲಿ ತನ್ನ ಬಹುಮತವನ್ನು ಸಾಬೀತುಪಡಿಸಬೇಕು ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಸದನವು ಬಹುಮತದ ಹಕ್ಕನ್ನು ಪರೀಕ್ಷಿಸಲು ಏಕೈಕ ಕಾನೂನುಬದ್ಧ ಸ್ಥಳವಾಗಿದೆ. ರಾಜ್ಯಪಾಲರಿಗೆ ನೀಡಲಾದ ಯಾವುದೇ ಪತ್ರ, ಅಫಿಡವಿಟ್ ಅಥವಾ ಬೆಂಬಲ ದಾಖಲೆಯು ವಿಧಾನಸಭೆಯಲ್ಲಿ ಮತವನ್ನು ಬದಲಿಸಲು ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಈ ಅರ್ಜಿಯಲ್ಲಿ ಎಸ್.ಆರ್. ಬೊಮ್ಮಾಯಿ v/s ಭಾರತ ಒಕ್ಕೂಟ, ಜಗದಾಂಬಿಕಾ ಪಾಲ್ v/s ಭಾರತ ಒಕ್ಕೂಟ, ಚಂದ್ರಕಾಂತ್ ಕವ್ಲೇಕರ್ v/s ಭಾರತ ಒಕ್ಕೂಟ, ಜಿ. ಪರಮೇಶ್ವರ v/s ಭಾರತ ಒಕ್ಕೂಟ ಮತ್ತು ಶಿವರಾಜ್ ಸಿಂಗ್ ಚೌಹಾಣ್ v/s ಮಧ್ಯಪ್ರದೇಶ ವಿಧಾನಸಭೆ ಸ್ಪೀಕರ್ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪುಗಳನ್ನು ಆಧರಿಸಿ ಇಲ್ಲಿಯೂ ಅದೇ ರೀತಿ ಮಾಡುವಂತೆ ಕೋರಲಾಗಿದೆ.

ಪ್ರಜಾಪ್ರಭುತ್ವದ ಆದೇಶದ ಮೇಲೆ ಪರಿಣಾಮ

ಸರ್ಕಾರ ರಚಿಸಲು ಪಕ್ಷವನ್ನು ಆಹ್ವಾನಿಸುವುದು ಮಾತ್ರ ರಾಜ್ಯಪಾಲರ ಪಾತ್ರ, ಅಂತಹ ಆಹ್ವಾನವನ್ನು ನೀಡುವ ಮೊದಲು ಬಹುಮತದ ಪೂರ್ಣ ಪುರಾವೆಯನ್ನು ಕೋರಬಾರದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಆಹ್ವಾನ ನೀಡುವ ಮೊದಲು 118 ಶಾಸಕರಿಂದ ಪತ್ರಗಳನ್ನು ಸಲ್ಲಿಸುವಂತೆ ಒತ್ತಾಯಿಸುವುದು ಸಾಂವಿಧಾನಿಕ ಅನುಕ್ರಮವನ್ನು ತಲೆಕೆಳಗು ಮಾಡುತ್ತದೆ" ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಸರ್ಕಾರ ರಚಿಸಲು ರಾಜ್ಯಪಾಲರು ಬೇರೆ ಯಾವುದೇ ವ್ಯಕ್ತಿಯನ್ನು ಆಹ್ವಾನಿಸದಂತೆ ತಡೆಯಲು ಮಧ್ಯಂತರ ಅರ್ಜಿಯನ್ನು ಸಹ ಸಲ್ಲಿಸಲಾಗಿದೆ. ವಿಜಯ್ ಹೊರತುಪಡಿಸಿ ಬೇರೆಯವರಿಗೆ ಆಹ್ವಾನ ನೀಡುವುದು ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾಗಿರುತ್ತದೆ ಮತ್ತು ತಮಿಳುನಾಡಿನ ಜನರ ಪ್ರಜಾಪ್ರಭುತ್ವದ ಆದೇಶದ ಮೇಲೆ ಪರಿಣಾಮ ಬೀರುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.