ದೇಶದಲ್ಲಿ ಕಾಂಗ್ರೆಸ್‌ ಹಾಗೂ ಯುಪಿಎ ಆಡಳಿತದಲ್ಲಿ ಜಾರಿಗೆ ತಂದ ಯೋಜನೆಗಳ ಹೆಸರುಗಳನ್ನು ಬದಲಿಸಿದ್ದೊಂದೇ ಬಿಜೆಪಿಯವರ ಬಹುದೊಡ್ಡ ಸಾಧನೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ವ್ಯಂಗ್ಯವಾಡಿದ್ದಾರೆ.

ಸುವರ್ಣ ವಿಧಾನಸೌಧ (ಡಿ.18): ದೇಶದಲ್ಲಿ ಕಾಂಗ್ರೆಸ್‌ ಹಾಗೂ ಯುಪಿಎ ಆಡಳಿತದಲ್ಲಿ ಜಾರಿಗೆ ತಂದ ಯೋಜನೆಗಳ ಹೆಸರುಗಳನ್ನು ಬದಲಿಸಿದ್ದೊಂದೇ ಬಿಜೆಪಿಯವರ ಬಹುದೊಡ್ಡ ಸಾಧನೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ವ್ಯಂಗ್ಯವಾಡಿದ್ದಾರೆ. ನರೇಗಾ ಯೋಜನೆ ಹೆಸರಲ್ಲಿ ಗಾಂಧೀಜಿ ಹೆಸರು ತೆಗೆದಿರುವ ಕೇಂದ್ರ ಸರ್ಕಾರದ ನಡೆ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2014ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯವರು ಇದುವರೆಗೆ ಏನು ಮಾಡಿದ್ದಾರೆ ತೋರಿಸಿ.

ಸ್ವಾತಂತ್ರ್ಯಾನಂತರ ಆಡಳಿತ ನಡೆಸಿದ ಕಾಂಗ್ರೆಸ್‌ ಹಾಗೂ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರಗಳ ಅವಧಿಯಲ್ಲಿ ಯಾವ್ಯಾವ ಜನಪರ ಯೋಜನೆಗಳನ್ನು ಜಾರಿಗೆ ತರಲಾಗಿತ್ತೋ ಅವುಗಳ ಎಲ್ಲಾ ಹೆಸರುಗಳನ್ನು ಬದಲಾವಣೆ ಮಾಡಿಕೊಂಡು ಬಂದಿದ್ದಷ್ಟೇ ಇವರ ಸಾಧನೆ. ಹೆಸರು ಬದಲಾವಣೆ ಮಾಡಬಹುದು. ಆದರೆ, ಕಾಂಗ್ರೆಸ್‌ ಈ ದೇಶಕ್ಕೆ, ದೇಶದ ಜನರ ಅಭಿವೃದ್ಧಿಗಾಗಿ ಜಾರಿಗೆ ತಂದ ಯಾವ ಯೋಜನೆಯನ್ನೂ ಇವರ ಕೈಯಲ್ಲಿ ಬದಲಾವಣೆ ಮಾಡಲು ಆಗುವುದಿಲ್ಲ. ಹೆಸರು ಬದಲಿಸಿದ್ದು ಬಿಟ್ಟರೆ ಇವರ ಸಾಧಣೆ ದೊಡ್ಡ ಸೊನ್ನೆ ಅಷ್ಟೆ. ನಾಚಿಕೆಯಾಗಬೇಕು ಇವರ ಜನ್ಮಕ್ಕೆ ಎಂದು ಕಿಡಿಕಾರಿದರು.

ಅನುದಾನದ ಪ್ರಮಾಣ ಕಡಿಮೆ

ನರೇಗಾ ಯೋಜನೆಯ ಹೆಸರಷ್ಟೇ ಬದಲಾವಣೆ ಮಾಡಿಲ್ಲ. ರಾಜ್ಯ ಸರ್ಕಾರಗಳಿಗೆ ಈ ಯೋಜನೆಯಡಿ ಬರುತ್ತಿದ್ದ ಅನುದಾನದ ಪ್ರಮಾಣವನ್ನೂ ಕಡಿಮೆ ಮಾಡಿದ್ದಾರೆ. ದೇಶದ ಆರ್ಥಿಕ ವ್ಯವಸ್ಥೆಗೆ ದೊಡ್ಡ ಕೊಡುಗೆ ನೀಡುತ್ತಿರುವ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಿಂದ ಬರುವ ಹಣವನ್ನೆಲ್ಲಾ ಉತ್ತರದ ಗುಜರಾತ್‌ ಸೇರಿದಂತೆ ಇನ್ನಿತರೆ ರಾಜ್ಯಗಳಿಗೆ ಸುರಿಯುತ್ತಿದ್ದಾರೆ.

ದಕ್ಷಿಣದ ರಾಜ್ಯಗಳಿಗೆ ತೆರಿಗೆ ಪಾಲು, ಕೇಂದ್ರದ ಯೋಜನೆಗಳ ಅನುದಾನ ಸೇರಿದಂತೆ ಎಲ್ಲ ಕಡೆಯಿಂದಲೂ ಅನುದಾನ ಕಡಿತಗೊಳಿಸಿ ತೀವ್ರ ಅನ್ಯಾಯ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸುವ ತಾಕತ್ತು ಕರ್ನಾಟಕ ಬಿಜೆಪಿಯವರಿಗೆ ಇಲ್ಲದಾಗಿದೆ. ಮಾಧ್ಯಮಗಳೂ ಇದನ್ನು ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿಲ್ಲ ಏಕೆಂದರೆ ಮೋದಿ ಸೇರಿದಂತೆ ಬಿಜೆಪಿಯ ಯಾವ ನಾಯಕರೂ ಮಾಧ್ಯಮದ ಮುಂದೆ ಬಂದು ಧೈರ್ಯವಾಗಿ ಮಾತನಾಡುವ ಧೈರ್ಯ ತೋರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.