ವರ್ಗಾವಣೆ ದಂಧೆ: ಸ್ಪೀಕರ್‌ಗೆ ‘ದಾಖಲೆ’ ಸಲ್ಲಿಸಿದ ಎಚ್‌ಡಿಕೆ
ಹಲವು ದಿನಗಳಿಂದ ರಾಜ್ಯ ಸರ್ಕಾರದಲ್ಲಿನ ವರ್ಗಾವಣೆ ದಂಧೆ ಬಗ್ಗೆ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳುತ್ತಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಬುಧವಾರ ವಿಧಾನಸಭೆಯಲ್ಲಿ ಇಲಾಖೆಯೊಂದರಲ್ಲಿ ವರ್ಗಾವಣೆಗೆ ನಿಗದಿಯಾಗಿರುವ ‘ದರ ಪಟ್ಟಿ’ ಬಗ್ಗೆ ಪ್ರಸ್ತಾಪ ಮಾಡಿದರು.
ವಿಧಾನಸಭೆ (ಜು.13): ಹಲವು ದಿನಗಳಿಂದ ರಾಜ್ಯ ಸರ್ಕಾರದಲ್ಲಿನ ವರ್ಗಾವಣೆ ದಂಧೆ ಬಗ್ಗೆ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳುತ್ತಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಬುಧವಾರ ವಿಧಾನಸಭೆಯಲ್ಲಿ ಇಲಾಖೆಯೊಂದರಲ್ಲಿ ವರ್ಗಾವಣೆಗೆ ನಿಗದಿಯಾಗಿರುವ ‘ದರ ಪಟ್ಟಿ’ ಬಗ್ಗೆ ಪ್ರಸ್ತಾಪ ಮಾಡಿದರು. ಅಲ್ಲದೆ, 2 ಪುಟಗಳ ವರ್ಗಾವಣೆ ದರ ಪಟ್ಟಿಯನ್ನು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳುಹಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ‘ರಾಜ್ಯದ ಜನತೆಗೆ ಐದು ಗ್ಯಾರಂಟಿ ನೀಡಿದ್ದ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಮೇಲೆ ಹಣಕ್ಕಾಗಿ ಪೋಸ್ಟಿಂಗ್ ಗ್ಯಾರಂಟಿ ನೀಡಲು ಮುಂದಾಗಿದೆ. ಈ ಬಗ್ಗೆ ಒಂದು ನಿರ್ದಿಷ್ಟಇಲಾಖೆಗೆ ಸಂಬಂಧಿಸಿದ ದರ ಪಟ್ಟಿನನ್ನ ಬಳಿಯಿದೆ. ಈ ಪಟ್ಟಿಯನ್ನು ಸ್ಪೀಕರ್ ಮೂಲಕ ಮುಖ್ಯಮಂತ್ರಿಗಳಿಗೆ ಕಳುಹಿಸುತ್ತೇನೆ. ಅದನ್ನು ಸರಿಪಡಿಸುತ್ತಾರೋ ಅಥವಾ ಬಿಡುತ್ತಾರೋ ಮುಂದಿನದ್ದು ಅವರಿಗೆ ಬಿಟ್ಟದ್ದು’ ಎಂದು ಹೇಳಿದರು.
ಎಚ್.ಡಿ.ಕುಮಾರಸ್ವಾಮಿಗೆ ಒಕ್ಕಲಿಗರು ಬೆಳೆಯೋದು ಇಷ್ಟವಿಲ್ಲ: ಸಚಿವ ಚಲುವರಾಯಸ್ವಾಮಿ
‘ಪತ್ರಿಕೆಗಳಲ್ಲಿ ವರ್ಗಾವಣೆ ದಂಧೆ ಮತ್ತೆ ಎಡೆ ಎತ್ತಿದೆ ಎಂಬುದು ಪ್ರಕಟವಾಗುತ್ತಿದೆ. ಎಲ್ಲ ಇಲಾಖೆಗಳಲ್ಲಿ ವರ್ಗಾವಣೆಗೆ ದರ ನಿಗದಿ ಆಗಿದೆ ಎಂದು ಹಾದಿಬೀದಿಯಲ್ಲಿ ಜನರು ಆಡಿಕೊಳ್ಳುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಯಾವುದೋ ಒಂದು ಇಲಾಖೆಯಲ್ಲಿ ನಿಗದಿ ಮಾಡಿರುವ ವರ್ಗಾವಣೆಯ ದರಪಟ್ಟಿನನ್ನ ಕೈಯಲ್ಲಿ ಇದೆ. ಅವರ ಹೆಸರೇಳಲ್ಲ, ಯಾವ ಇಲಾಖೆ ಎಂಬುದೂ ಬೇಡ. ಅದನ್ನು ಯಾರೋ ನನಗೆ ತಂದು ನೀಡಿದ್ದಾರೆ’ ಎಂದರು. ಇದೇ ವೇಳೆ, ‘ಈ ಹಿಂದೆ ಕಾಂಗ್ರೆಸ್ ಪಕ್ಷ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ವರ್ಗಾವಣೆಯ ರೇಟ್ ಕಾರ್ಡ್ ಹೊರಡಿಸಿತ್ತು’ ಎಂದು ಕಾಂಗ್ರೆಸ್ ಪಕ್ಷದ ಜಾಹೀರಾತನ್ನೂ ಪ್ರದರ್ಶಿಸಿದ ಅವರು, ‘ಮುಂದೆ ನಿಮ್ಮ ಬಗ್ಗೆ ಈ ತರಹ ಜಾಹೀರಾತು ಬರಬಾರದು ಎಂಬ ಕಾರಣಕ್ಕೆ ಹೇಳುತ್ತಿದ್ದೇನೆ’ ಎಂದು ಸಲಹೆ ನೀಡಿದರು.
ಅಕ್ರಮ ತನಿಖೆ ನಡೆಸಿ: ‘ಭ್ರಷ್ಟಾಚಾರ ರಾಜ್ಯದಲ್ಲಿ ಸಾಂಸ್ಥೀಕರಣ ಎಂಬಷ್ಟುಹೆಚ್ಚಾಗಿದೆ. ಇದನ್ನು ಬೇರು ಸಮೇತ ಕಿತ್ತು ಹಾಕಲು ಆಡಳಿತಾತ್ಮಕ ಬದಲಾವಣೆ ತರುವುದಾಗಿ ರಾಜ್ಯಪಾಲರಿಂದ ಹೇಳಿಸಿದ್ದೀರಿ. ನೀವು ಭ್ರಷ್ಟಾಚಾರ ತೊಡೆದು ಹಾಕುವುದಾದರೆ ನಿಮಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಇದಕ್ಕೂ ಮೊದಲು ನೀವು ಹಿಂದಿನ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರದಿಂದ 1.5 ಲಕ್ಷ ಕೋಟಿ ರು. ಲೂಟಿ ಆಗಿದೆ ಎಂದು ಜಾಹೀರಾತು ನೀಡಿದ್ದಿರಿ. ಈ ಬಗ್ಗೆ ತನಿಖೆ ನಡೆಸಿ ಅಕ್ರಮವನ್ನು ಬಯಲಿಗೆಳೆಯಬೇಕು’ ಎಂದೂ ಒತ್ತಾಯಿಸಿದರು.
Reporters Dairy: ಪ್ರತಿಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆಗಬೇಕಂತೆ..!
ಸದನದಲ್ಲೇ ದಾಖಲೆ ಬಹಿರಂಗಪಡಿಸಿ: ವಿಧಾನಸಭೆ: ಎಚ್.ಡಿ. ಕುಮಾರಸ್ವಾಮಿ ಮಾಡಿದ ವರ್ಗಾವಣೆ ದಂಧೆ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್, ‘ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ರೀತಿ ಬೆಂಗಳೂರು ಸ್ಟಾಕ್ ಎಕ್ಸ್‌ಚೇಂಜ್ ದರ ಪಟ್ಟಿಏನಿದೆ? ಎಂಬದು ಗೊತ್ತಾಗಲಿ. ಸದನದಲ್ಲೇ ಅದನ್ನು ಬಹಿರಂಗಪಡಿಸಿ. ಇಲಾಖೆ ಯಾವುದು ಎಂಬುದನ್ನೂ ತಿಳಿಸಿ’ ಎಂದು ಒತ್ತಾಯಿಸಿದರು. ಇದಕ್ಕೆ ನಿರಾಕರಿಸಿದ ಕುಮಾರಸ್ವಾಮಿ, ‘ಬೇಡ ಮುಖ್ಯಮಂತ್ರಿಗಳಿಗೆ ಕಳುಹಿಸುತ್ತೇನೆ. ನಾನು ಅದನ್ನು ಬಹಿರಂಗಪಡಿಸಲು ಹೋಗಲ್ಲ. ಅವರೇ ನಿರ್ಧಾರ ಮಾಡಲಿ’ ಎಂದು ಸ್ಪೀಕರ್ ಯು.ಟಿ. ಖಾದರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ 2 ಪುಟಗಳ ಕಾಗದಗಳನ್ನು ಕಳುಹಿಸಿಕೊಟ್ಟರು.