ಭಾಷಣದ ನಡುವೆ ನಾನು ವೀರರಾಣಿ ಕಿತ್ತೂರು ಚೆನ್ನಮ್ಮನ ನಾಡು ಬೆಳಗಾವಿಯಿಂದ ಬಂದವಳು ಎಂದದು ಲಕ್ಷ್ಮಿ ಹೆಬ್ಬಾಳ್ಕರ್‌. ಅದಕ್ಕೆ ನಗುತ್ತಲೇ ಆಕ್ಷೇಪಿಸಿದ ಯು.ಟಿ. ಖಾದರ್‌, ಈಗ ನೀವು ತುಳುನಾಡಿನ ಉಸ್ತುವಾರಿ ಸಚಿವೆ ಆಗಿದ್ದೀರಿ. ಇಲ್ಲಿ ಕೆಲಸ ಮಾಡಬೇಕಾದರೆ ನೀವು ವೀರರಾಣಿ ಅಬ್ಬಕ್ಕ ಆಗಬೇಕು ಎಂದರು.

ಬೆಂಗಳೂರು (ಜು.10): ವಿಧಾನಮಂಡಲದ ಅಧಿವೇಶನ ಆರಂಭಗೊಂಡು ಒಂದು ವಾರ ಕಳೆದಿದೆ. ಈ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಚೊಚ್ಚಲ ಬಜೆಟ್‌ ಕೂಡ ಮಂಡನೆಯಾಗಿದೆ. ಆದರೆ, ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಅಧಿಕೃತ ವಿರೋಧ ಪಕ್ಷ ನಾಯಕರೇ ಇಲ್ಲ. ಇದೊಂದು ಐತಿಹಾಸಿಕ ದಾಖಲೆಯೇ ಸರಿ. ಈ ದಾಖಲೆಗೆ ಕಾರಣರಾಗಿದ್ದು ಬಿಜೆಪಿ ವರಿಷ್ಠರು. ವಿಷಯ ಅದಲ್ಲ. ಅಧಿವೇಶನ ಆರಂಭವಾಗುವ ಮೊದಲು ಮತ್ತು ನಂತರ ರಾಜ್ಯ ರಾಜಕಾರಣದಲ್ಲಿ ಅಕ್ಷರಶಃ ಪ್ರತಿಪಕ್ಷದ ನಾಯಕನಾಗಿ ಪರಿಣಾಮಕಾರಿ ಕೆಲಸ ಮಾಡುತ್ತಿರುವುದು ಕೇವಲ 19 ಸ್ಥಾನಗಳನ್ನು ಗಳಿಸಿರುವ ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯೇ ಹೊರತು 66 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ನಾಯಕರಲ್ಲ. ಇದರ ಬಗ್ಗೆ ಯಾರಿಗೂ ಅನುಮಾನ ಇರಲಿಕ್ಕಿಲ್ಲ. ಕಾಂಗ್ರೆಸ್‌ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿರುವುದು ಹಾಗೂ ಅವರಲ್ಲಿ ಆತಂಕ ಮೂಡಿಸುತ್ತಿರುವುದು ಈ ಕುಮಾರಸ್ವಾಮಿ.

ವರ್ಗಾವಣೆ ದಂಧೆಯನ್ನೇ ಪ್ರಮುಖ ಅಸ್ತ್ರವಾಗಿ ಇಟ್ಟುಕೊಂಡು ‘ವೈಎಸ್‌ಟಿ’ ಬಗ್ಗೆ ಪ್ರಸ್ತಾಪ, ವರ್ಗಾವಣೆ ಕುರಿತಂತೆ ಸಚಿವರೊಬ್ಬರ ಆಡಿಯೋ ಇದೆ ಎನ್ನಲಾದ ಪೆನ್‌ಡ್ರೈವ್‌ ಹೊಂದಿರುವ ಕುಮಾರಸ್ವಾಮಿ ಹೇಳಿಕೆಗಳು ಕಾಂಗ್ರೆಸ್‌ ಸರ್ಕಾರವನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿವೆ. ಕಾಂಗ್ರೆಸ್‌ ಸರ್ಕಾರಕ್ಕೆ ಬಿಜೆಪಿ ಬಗ್ಗೆ ಆತಂಕವೇ ಇಲ್ಲದಂತಾಗಿದೆ. ಕುಮಾರಸ್ವಾಮಿ ಅವರು ಮಾಡಿ ಆಪಾದನೆಯ ಹೇಳಿಕೆಗಳನ್ನೇ ಬಿಜೆಪಿಯವರು ಪುನರುಚ್ಚರಿಸಿ ಅಥವಾ ತಿರುಗುಮುರುಗು ಹೇಳಿ ಮೈಲೇಜ್‌ ಪಡೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆಯೇ ಹೊರತು ನೇರವಾಗಿ ಕಾಂಗ್ರೆಸ್‌ ನಾಯಕರನ್ನು ಅಧೀರರನ್ನಾಗಿಸುವ ಮಟ್ಟಿಗೆ ವಾಗ್ದಾಳಿ ಮಾಡುವ ಧೈರ್ಯ ತೋರುತ್ತಿಲ್ಲ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ.

ಡಿಕೆಶಿ ದಿಢೀರ್ ಸಿಟಿ ರೌಂಡ್ಸ್‌: ಇಂದಿರಾ ಕ್ಯಾಂಟೀನ್​ನಲ್ಲಿ ಉಪಹಾರ, ಘನತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಭೇಟಿ

ಅದರ ಮುಂದುವರೆದ ಭಾಗವಾಗಿ ಪ್ರತಿಪಕ್ಷದ ನಾಯಕನನ್ನಾಗಿ ಬಿಜೆಪಿಯವರೂ ಜೆಡಿಎಸ್‌ನ ಕುಮಾರಸ್ವಾಮಿ ಅವರನ್ನೇ ಒಪ್ಪಿಕೊಳ್ಳುವುದು ಸೂಕ್ತ ಎಂಬ ಮಾತು ವಿಧಾನಸಭೆಯ ಕಾರಿಡಾರ್‌ನಲ್ಲಿ ತೇಲಾಡುತ್ತಿದೆ. ಸಾರ್ವಜನಿಕರು ಅಥವಾ ಜೆಡಿಎಸ್‌ ಮುಖಂಡರು ಇಲ್ಲವೇ ಕಾರ್ಯಕರ್ತರು ಮಾತನಾಡುವುದನ್ನು ಪಕ್ಕಕ್ಕೆ ಇಟ್ಟು ಬಿಡಿ. ಅಲ್ಲಲ್ಲಿ ಬಿಜೆಪಿ ಕಾರ್ಯಕರ್ತರೂ ಈ ರೀತಿ ಮಾತನಾಡಿಕೊಳ್ಳುತ್ತಿದ್ದಾರೆ. ನಮ್ಮ ಶಾಸಕರ ಪೈಕಿ ಯಾರೇ ಪ್ರತಿಪಕ್ಷದ ನಾಯಕರಾದರೂ ಕುಮಾರಸ್ವಾಮಿ ರೀತಿ ಕಾಂಗ್ರೆಸ್‌ ವಿರುದ್ಧ ‘ಅಟ್ಯಾಕ್‌’ ಮಾಡುವುದಿಲ್ಲ. ಅದರ ಬದಲು, ಜೆಡಿಎಸ್‌ ಮತ್ತು ಬಿಜೆಪಿ ಕೂಟ ಅಂತ ಮಾಡಿಕೊಂಡು ಕುಮಾರಸ್ವಾಮಿ ಅವರನ್ನೇ ಅದರ ನಾಯಕನನ್ನಾಗಿ ಮಾಡಿದರೆ ಕಾಂಗ್ರೆಸ್‌ ಸರ್ಕಾರಕ್ಕೆ ಚೆನ್ನಾಗಿ ನೀರಿಳಿಸಬಹುದು ಎಂಬ ಲಘು ಧಾಟಿಯ ಅಭಿಪ್ರಾಯ ಬಿಜೆಪಿ ಪಾಳೆಯದಿಂದ ಪ್ರತಿಧ್ವನಿಸುತ್ತಿರುವುದು ಸುಳ್ಳಲ್ಲ.

ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮದಲ್ಲಿ ಅರಿವಿಲ್ಲದೆ ಬಿಜೆಪಿ ಸಂಸದ ಭಾಗಿ!: ರಾಷ್ಟ್ರಮಟ್ಟದಲ್ಲಿ ಪರಸ್ಪರ ಪ್ರತಿಸ್ಪರ್ಧಿ ಪಕ್ಷಗಳಾಗಿರುವ ಕಾಂಗ್ರೆಸ್‌ ಹಾಗೂ ಬಿಜೆಪಿಯ ರಾಜಕೀಯ ವೈರತ್ವ ಎಲ್ಲರಿಗೂ ಗೊತ್ತಿದೆ. ಆದರೆ, ಹರಪ್ಪನಹಳ್ಳಿಯಲ್ಲಿ ನಡೆದ ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ಭಾಗವಹಿಸಿದ್ದು ಅಚ್ಚರಿ ಮೂಡಿಸಿದೆ. ತಾವು ಕಾಂಗ್ರೆಸ್‌ ಕಾರ್ಯಕ್ರಮಕ್ಕೆ ಬಂದಿರುವುದು ತಡವಾಗಿ ಅರಿತ ಸಂಸದರು ಆಹ್ವಾನ ನೀಡಿದ ಆಯೋಜಕರ ಬಗ್ಗೆ ವೇದಿಕೆ ಮೇಲೆಯೇ ಅಸಮಾಧಾನ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ. ವಿಷಯ ಏನೆಂದರೆ, ಹರಪನಹಳ್ಳಿ ತಾಲೂಕಿನ ಚಿಕ್ಕಮೇಗಳಗೇರಿ ಗ್ರಾಮದಲ್ಲಿ ಏರ್ಪಡಿಸಿದ್ದ ಬಸ್ಸು ನಿಲ್ದಾಣ ಉದ್ಘಾಟನೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. 

ಈ ವೇಳೆ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಅವರೂ ಭಾಗಿಯಾಗಿದ್ದರು. ಸರ್ಕಾರಿ ಕಾರ್ಯಕ್ರಮದಲ್ಲಿ ಕ್ಷೇತ್ರದ ಸಂಸದರು ಭಾಗವಹಿಸುವುದು ವಿಶೇಷವೇನಲ್ಲ. ಆದರೆ, ಕಾಂಗ್ರೆಸ್‌ ಪಕ್ಷದಿಂದ ಹತ್ತಿರದಲ್ಲೇ ಹರಪನಹಳ್ಳಿ ನೂತನ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದ ಪೆಂಡಾಲ್‌ ವೇದಿಕೆಗೆ ತೆರಳಿ ಆಸೀನರಾಗಿಬಿಟ್ಟರು. ಬಸ್ಸು ನಿಲ್ದಾಣದ ಉದ್ಘಾಟನೆಯ ವೇದಿಕೆ ಕಾರ್ಯಕ್ರಮ ಎಂದುಕೊಂಡರೋ ಏನೋ ಯಾವುದೇ ಕಸಿವಿಸಿ ಇಲ್ಲದೆ ಆರಾಮವಾಗಿ ಭಾಗವಹಿಸಿದ್ದರು. ಶಾಸಕರು ಕಾರ್ಯಕ್ರಮ ಉದ್ಘಾಟಿಸಿ ಸಂಸದರನ್ನು ಮಾತನಾಡಲು ಕರೆದಾಗ ವೇದಿಕೆ ಹಿಂಬದಿಯಿದ್ದ ಬ್ಯಾನರ್‌ ಗಮನಿಸಿದರು. 

ಕಾಂಗ್ರೆಸ್‌ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ಸಾಲು-ಸಾಲು ಕೈ ನಾಯಕರ ಭಾವಚಿತ್ರಗಳಿಗೆ ಬ್ಯಾನರ್‌ ಸೀಮಿತವಾಗಿತ್ತು. ಬಿಜೆಪಿ ನಾಯಕರ ಸುಳಿವೇ ಇಲ್ಲ. ಆಗಷ್ಟೇ ಎಚ್ಚೆತ್ತ ಸಂಸದರು, ‘ಕಾಂಗ್ರೆಸ್ಸಿನವರ ಬ್ಯಾನರ್‌ ಹಾಕಿ ನನ್ನ ಕೂರಿಸಿದರೆ ಹೇಗೆ?’ ಎಂದು ಕಸಿವಿಸಿ ವ್ಯಕ್ತಪಡಿಸಿದರು. ಆದ ಪ್ರಮಾದಕ್ಕೆ ಲತಾ ಮಲ್ಲಿಕಾರ್ಜುನ ಅವರು ಕ್ಷಮೆ ಕೋರಿದರು. ಇದಕ್ಕೆ ಸಿದ್ದೇಶ್ವರ ಅವರು, ‘ನೀನಲ್ಲಮ್ಮ, ನಿನ್ನ ಬಗ್ಗೆ ಏನೂ ಆಕ್ಷೇಪವಿಲ್ಲ. ನಿಮ್ಮ ತಂದೆ ಎಂ.ಪಿ. ಪ್ರಕಾಶ್‌ ದೇವರಂತಹ ಮನುಷ್ಯ. ಕಾಂಗ್ರೆಸ್‌ ಪಕ್ಷಕ್ಕೆ ನನ್ನ ಕರೆದವರು ಕ್ಷಮೆ ಕೇಳಬೇಕು. ವಿಧಾನಸಭೆ ಚುನಾವಣೆ ಮುಗಿದಿದೆ. ಮುಂದೆ ನಮ್ಮದು ಇದೆ (ಲೋಕಸಭೆ). ಪತ್ರಿಕೆಯವರು ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿರುವ ಬಗ್ಗೆ ಬರೆದರೆ ಹೇಗೆ?’ ಎನ್ನುತ್ತಾ ತರಾತುರಿಯಲ್ಲಿ ಭಾಷಣ ಮುಗಿಸಿ ಹೊರಟರು.

ಗಂಡಸರ ಮರ್ಯಾದೆ ಉಳಿಸಿದ ವಿದ್ಯಾರ್ಥಿ- ಸ್ಪೀಕರ್‌ ವಿಶೇಷ ಅಭಿನಂದನೆ: ಗಂಡಸರ ಮರ್ಯಾದೆ ಉಳಿಸಿದ ಎಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬರಿಗೆ ಖುದ್ದು ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್‌ ಅವರು ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ. ಅದು ಹೇಗೆ ಅಂತೀರಾ? ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಇತ್ತೀಚೆಗೆ ಮಣಿಪಾಲದಲ್ಲಿ ಪತ್ರಕರ್ತರ ಪ್ರತಿಭಾವಂತ ಮಕ್ಕಳಿಗೆ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೇ ಹೆಬ್ಬಾಳ್ಕರ್‌ ಕೂಡ ವೇದಿಕೆ ಹಂಚಿಕೊಂಡಿದ್ದರು.

ಪುರಸ್ಕಾರಕ್ಕಾಗಿ ಹಾಜರಿದ್ದ ಪ್ರತಿಭಾವಂತ ವಿದ್ಯಾರ್ಥಿಗಳ ಪೈಕಿ ಒಬ್ಬರು ಮಾತ್ರ ಹುಡುಗ ಉಳಿದೆಲ್ಲರೂ ಹುಡುಗಿಯರು. ಈ ಕಾರಣಕ್ಕೆ ಮೈಕ್‌ ತೆಗೆದುಕೊಂಡ ಯು.ಟಿ. ಖಾದರ್‌, ‘ಇಷ್ಟು ಮಂದಿ ಹುಡುಗಿಯರ ಮಧ್ಯೆ ನೀನೊಬ್ಬ ಹುಡುಗ. ನೀನು ನಮ್ಮ ಗಂಡಸರ ಮರ್ಯಾದೆ ಉಳಿಸಿದಿ ಮಾರಾಯ, ನಿನಗೆ ವಿಶೇಷ ಅಭಿನಂದನೆಗಳು’ ಎಂದು ಬಿಟ್ಟಾಗ ಲಿಂಗಬೇಧವಿಲ್ಲದೆ ಸಭಿಕರೆಲ್ಲರೂ ಗೊಳ್ಳೆಂದು ನಕ್ಕರು. ತಕ್ಷಣ ಮೈಕೆತ್ತಿಕೊಂಡ ಲಕ್ಷ್ಮೇ ಹೆಬ್ಬಾಳ್ಕರ್‌, ‘ಇದು ನಮ್ಮ ಹೆಣ್ಣುಮಕ್ಕಳ ಸಾಮರ್ಥ್ಯ ತೋರಿಸುತ್ತಿದೆ. ಆದರೂ ಸರ್ಕಾರದಲ್ಲಿ ಮಾತ್ರ ನನ್ನನ್ನು ಮಹಿಳೆಯನ್ನು ಮಂತ್ರಿಯನ್ನಾಗಿ ಮಾಡಿದ್ದಾರೆ ನೋಡಿ’ ಎಂದು ಅಸಮಾಧಾನದ ಮುಖದಲ್ಲೇ ಹಾಸ್ಯಚಟಾಕಿ ಹಾರಿಸಿದರು.

ಅಮರನಾಥಕ್ಕೆ ತೆರಳಿದ್ದ ರಾಜ್ಯ ಯಾತ್ರಿಕರು ಸೇಫ್‌: ಯಾತ್ರೆಗೆ ತೆರಳಿದ್ದು 80 ಅಲ್ಲ, 300 ಕನ್ನಡಿಗರು

ಭಾಷಣದ ನಡುವೆ ತಾವು ವೀರರಾಣಿ ಕಿತ್ತೂರು ಚೆನ್ನಮ್ಮನ ನಾಡು ಬೆಳಗಾವಿಯಿಂದ ಬಂದವಳು ಎಂದಿದ್ದಕ್ಕೆ ನಗುತ್ತಲೇ ಆಕ್ಷೇಪಿಸಿದ ಯು.ಟಿ. ಖಾದರ್‌, ಈಗ ನೀವು ತುಳುನಾಡಿನ ಉಸ್ತುವಾರಿ ಸಚಿವೆ ಆಗಿದ್ದೀರಿ. ಇಲ್ಲಿ ಕೆಲಸ ಮಾಡಬೇಕಾದರೆ ನೀವು ವೀರರಾಣಿ ಅಬ್ಬಕ್ಕ ಆಗಬೇಕು ಎಂದರು. ಅಲ್ಲದೆ ತಮ್ಮ ವಿದ್ಯಾರ್ಥಿ ಜೀವನವನ್ನೆಲ್ಲಾ ಖುಷಿಯಿಂದ ಮೆಲುಕು ಹಾಕುತ್ತಾ ನಗು ಹಂಚಿದರು. ಪತ್ರಕರ್ತರು ಖಾದರ್‌ ಸಾಹೇಬ್ರ ಜೋಶ್‌ ನೋಡಾ ಎನ್ನುತ್ತಿರುವುದು ಅವರ ಕಿವಿಗೂ ಮುಟ್ಟಿರಬೇಕು. ‘ನಾನು ಮಾತನಾಡಿದ್ದು ನಿಮಗೆ ಅರ್ಥ ಆಯಿತಾ? ನನ್ನ ಕನ್ನಡ ಸ್ವಲ್ಪ ಹಾಗೇ. ಹೀಗಾಗಿ ಇನ್ನು ಜಾಸ್ತಿ ಮಾತನಾಡುವುದಿಲ್ಲ’ ಎಂದು ಸಣ್ಣ ಪುಟ್ಟತಪ್ಪು ಉಚ್ಚಾರಗಳಿಗೆ ಜಾಮೀನು ಪಡೆದು ಕುಳಿತುಬಿಟ್ಟರು.

-ವಿಜಯ್‌ ಮಲಗಿಹಾಳ
-ಬಿ. ರಾಮಪ್ರಸಾದ ಗಾಂಧಿ
-ಸುಭಾಶ್ಚಂದ್ರ ಎಸ್‌.ವಾಗ್ಳೆ, ಉಡುಪಿ