ಮಾಜಿ ಸಚಿವ ಶ್ರೀರಾಮುಲು ಅವರು ಪಕ್ಷ ತೊರೆಯುವುದಿಲ್ಲ ಎಂದು ಖಚಿತಪಡಿಸಿದ್ದಾರೆ. ನೋವುಂಟು ಮಾಡಿದರೂ, ಪಕ್ಷ ಬಿಡುವಂತೆ ಯಾರೂ ಹೇಳಿಲ್ಲ, ಹೇಳುವ ಅಧಿಕಾರ ಯಾರಿಗೂ ಇಲ್ಲ ಎಂದಿದ್ದಾರೆ. ಫೆಬ್ರವರಿ 5 ರ ನಂತರ ದೆಹಲಿಗೆ ತೆರಳಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ಚರ್ಚಿಸುವುದಾಗಿ ತಿಳಿಸಿದ್ದಾರೆ.
ವಿಜಯನಗರ (ಫೆ.1): ನನಗೆ ನೋವಾಗಿದೆ ಎಂದು ಕಾಂಗ್ರೆಸ್ ಸೇರಿ ಎಲ್ಲಾ ಪಕ್ಷದ ನಾಯಕರು ನನ್ನ ಬಗ್ಗೆ ಉತ್ತಮ ಅಭಿಪ್ರಾಯ ಹೇಳಿದ್ದಾರಷ್ಟೇ. ನನಗೆ ಪಕ್ಷ ಬಿಡು ಎಂದು ಹೇಳಲು ಯಾರಿಗೂ ಅಧಿಕಾರ ಇಲ್ಲ ಎಂದು ಮಾಜಿ ಸಚಿವ ಶ್ರೀರಾಮುಲು ತಿಳಿಸಿದರು.
'ಬಿಜೆಪಿ ಸಭೆಯಲ್ಲಿ ಸಭೆಯಲ್ಲಿ ಅವಮಾನ ಬಳಿಕ ಬಿಜೆಪಿ ತೊರೆಯುತ್ತಾರೆ ಎಂಬ ವಿಚಾರವಾಗಿ ಇಂದು ವಿಜಯನಗರದ ಕೂಡ್ಲಿಗಿಯ ಕಾನಾಹೊಸಳ್ಳಿಯಲ್ಲಿ ಪ್ರತಿಕ್ರಿಯಿಸಿದ ಅವರು, ನನಗೆ ನೋವಾಗಿದ್ದು ನಿಜ. ನೋವಿನಲ್ಲಿ ಹಾಗೆ ಮಾತನಾಡಿದ್ದೂ ನಿಜ. ಆದರೆ ಪಕ್ಷ ಬಿಡು ಎಂದು ಯಾರೂ ಹೇಳಿಲ್ಲ. ಹೇಳುವ ಅಧಿಕಾರ ಯಾರಿಗೂ ಇಲ್ಲ ಎಂದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ದಿಲ್ಲಿಗೆ ಬರುವಂತೆ ನನಗೆ ಆಹ್ವಾನಿಸಿದ್ದಾರೆ. ಈಗ ದಿಲ್ಲಿ ಚುನಾವಣೆ, ಸಂಸತ್ ಕಲಾಪ ಇರುವುದರಿಂದ ಫೆ.5 ನಂತರ ತೆರಳಿ, ರಾಷ್ಟದ ನಾಯಕರನ್ನು ಭೇಟಿಯಾಗುತ್ತೇನೆ. ಕೋರ್ ಕಮಿಟಿ ಸಭೆ ಸೇರಿದಂತೆ ಇತ್ತೀಚೆಗೆ ಬಿಜೆಪಿಯಲ್ಲಿ ನಡೆದ ವಿದ್ಯಮಾನಗಳ ಕುರಿತು ವರಿಷ್ಠರೊಂದಿಗೆ ಚರ್ಚಿಸುತ್ತೇನೆ ಎಂದರು.
ಇದನ್ನೂ ಓದಿ: ರೆಡ್ಡಿ ಜೊತೆಗೆ ತಿಕ್ಕಾಟ ಬೆನ್ನಲ್ಲೇ ಚಿಗುರಿತು ದೋಸ್ತಿ: ರಾಮುಲು, ಜಾರಕಿಹೊಳಿ ಈಗ ಭಾಯಿ- ಭಾಯಿ!
ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ. ಪಕ್ಷದಲ್ಲಿ ಬೇರೆ ಬೇರೆ ಕಡೆ ಅಪಸ್ವರದ ಬಗ್ಗೆ ಚರ್ಚೆ ಮಾಡ್ತೇನೆ. ಎಲ್ಲರೂ ಒಗ್ಗಟ್ಟಾಗಿ 2028 ರಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷದ ಸಂಘಟನೆ ಕುರಿತು ಚರ್ಚಿಸುತ್ತೇನೆ ಎಂದರು. ಇದೇ ವೇಳೆ ಪಕ್ಷದ ನಾಯಕರಾದ ಯತ್ನಾಳ್, ರಮೇಶ್ ಜಾರಕಿಹೊಳಿ, ಡಾ.ಸುಧಾಕರ್ ಸೇರಿ ನಾನಾ ನಾಯಕರ ಅಸಮಾಧಾನ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಶ್ರೀರಾಮುಲು. ಎಲ್ಲ ಪಕ್ಷಗಳಲ್ಲೂ ಇದೆಲ್ಲ ಇದ್ದಿದ್ದೇ. ಬಿಜೆಪಿಯಲ್ಲೂ ಅಸಮಾಧಾನ ವಿಚಾರ ಇರೋದು ಸಾಮಾನ್ಯ. ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಿ ಪಕ್ಷ ಸಂಘಟನೆಯಲ್ಲಿ ತೊಡಗುತ್ತೇವೆ ಎಂದರು.
