ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಶೇ.15ರಷ್ಟು ಮೀಸಲು ನಿರ್ಧಾರ ಈಗ ಕೈಗೊಂಡ ತೀರ್ಮಾನವಲ್ಲ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು (ಜೂ.21): ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಶೇ.15ರಷ್ಟು ಮೀಸಲು ನಿರ್ಧಾರ ಈಗ ಕೈಗೊಂಡ ತೀರ್ಮಾನವಲ್ಲ. 2019ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ರಚಿಸಿದ್ದ ಸಂಪುಟ ಉಪ ಸಮಿತಿ ಇದನ್ನು ಶಿಫಾರಸು ಮಾಡಿತ್ತು ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟಪಡಿಸಿದ್ದಾರೆ. ಮೀಸಲಾತಿ ಹೆಚ್ಚಳಕ್ಕೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಸಾಚಾರ್ ಸಮಿತಿ ವರದಿ ಪ್ರಕಾರ ಕೇಂದ್ರ ಸರ್ಕಾರದಲ್ಲಿ ಈಗಾಗಲೇ ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಶೇ.15ರಷ್ಟು ಮೀಸಲಾತಿ ಇದೆ. ಅದೇ ರೀತಿ ರಾಜ್ಯದಲ್ಲೂ ನೀಡಬೇಕು ಎಂಬ ಬೇಡಿಕೆ ಇತ್ತು.

ಹೀಗಾಗಿ ಕೇಂದ್ರದ ಮಾದರಿಯನ್ನೇ ಅನುಸರಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ. 2019ರಲ್ಲಿ ಸಂಪುಟ ಉಪ ಸಮಿತಿ ಇದನ್ನು ಶಿಫಾರಸು ಮಾಡಿತ್ತು. ಇದೀಗ ಸಂಪುಟದ ಮುಂದೆ ಬಂದು ಒಪ್ಪಿಗೆ ದೊರೆತಿದೆ. ಅಲ್ಪಸಂಖ್ಯಾತ ಸಮುದಾಯದಲ್ಲಿ ಹೆಚ್ಚಿನ ಬಡ ಕುಟುಂಬಗಳಿದ್ದು, ವಸತಿರಹಿತರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸುವ ಬೇಡಿಕೆ ಇತ್ತು ಎಂದು ತಿಳಿಸಿದ್ದಾರೆ. 2021 ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಸಹ ಶೇ.15ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ತಿಳಿಸಿತ್ತು. ಇದೆಲ್ಲ ವಾಸ್ತವಾಂಶ ತಿಳಿಯದೆ ಪ್ರತಿಪಕ್ಷ ಗಳು ಅನಗತ್ಯ ಟೀಕೆ ಮಾಡುತ್ತಿರುವುದು ಶೋಭೆ ತರುವುದಿಲ್ಲ ಎಂದು ಅವರು ಹೇಳಿದ್ದಾರೆ.

5 ಲಕ್ಷ ನೆರವು: ಆಪ್ತರೊಬ್ಬರ ಮಕ್ಕಳ ಮದುವೆಗೆಂದು ನಗರಕ್ಕೆ ಆಗಮಿಸಿದ್ದ ವಕ್ಫ್ ಸಚಿವ ಜಮೀರ್ ಅಹಮ್ಮದ್ ತಮ್ಮ ಬಳಿ ನೆರವು ಯಾಚಿಸಿದ ಬಡ ಕುಟುಂಬವೊಂದರ ಮಕ್ಕಳ ಮದುವೆ ಖರ್ಚಿಗೆಂದು ಸ್ಥಳದಲ್ಲೇ ₹5 ಲಕ್ಷ ಆರ್ಥಿಕ ಸಹಾಯ ಮಾಡುವ ಮೂಲಕ ಗಮನ ಸೆಳೆದರು. ನಗರದ ಪ್ರತಿಷ್ಠಿತ ಕನ್ವೆನ್ಷನ್‌ ಹಾಲ್‌ನಲ್ಲಿ ಆಪ್ತ ಮುಖಂಡರೊಬ್ಬರ ಮಗನ ಮದುವೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಹೆಲಿಕಾಫ್ಟರ್‌ನಲ್ಲಿ ಸಚಿವ ಜಮೀರ್ ಅಹಮ್ಮದ್ ಬಂದಿದ್ದರು. ಮದುವೆ ಮುಗಿಸಿಕೊಂಡು ಬಾಪೂಜಿ ಎಂಬಿಎ ಹೆಲಿಪ್ಯಾಡ್‌ಗೆ ವಾಪಸಾಗುತ್ತಿದ್ದರು. ಈ ವೇಳೆ ಬಡ ಮುಸ್ಲಿಂ ಕುಟುಂಬವೊಂದು ಸಚಿವರ ಬಳಿ ಮಕ್ಕಳ ಮದುವೆ ಹಾಗೂ ಕುಟುಂಬ ನಿರ್ವಹಣೆ ಬಗ್ಗೆ ಅಳಲನ್ನು ತೋಡಿಕೊಂಡಿತು.

ಬಡ ಕುಟುಂಬದ ಸಂಕಷ್ಟಕ್ಕೆ ಮರುಗಿದ ಸಚಿವ ಜಮೀರ್ ಅಹಮ್ಮದ್ ಸ್ಥಳದಲ್ಲೇ ₹5 ಲಕ್ಷ ಮೌಲ್ಯದ ನೋಟಿನ ಕಟ್ಟುಗಳನ್ನು ಬಡಕುಟುಂಬಕ್ಕೆ ಹಸ್ತಾಂತರಿಸಿದರು. ಈ ಹಣದಲ್ಲಿ ಮಕ್ಕಳ ಮದುವೆ ಮಾಡಿ, ನೆಮ್ಮದಿಯಿಂದ ಜೀವನ ನಿರ್ವಹಣೆ ಮಾಡುವಂತೆ ಶುಭ ಹಾರೈಸಿ, ಎಲ್ಲರ ಮನವನ್ನು ಗೆದ್ದರು. ಆರ್ಥಿಕ ನೆರವು ಕೋರಿದ ಕುಟುಂಬ ಕನಸು ಮನಸ್ಸಿನಲ್ಲಿ ಊಹಿಸಿರದಷ್ಟು ಹಣದ ನೆರವು ಜಮೀರ್‌ ನೀಡುವ ಮೂಲಕ ಮಾನವೀಯತೆ ಮೆರೆದರು.