ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮೂವರು ಸುರೇಶ್, ಐವರು ಮಂಜುನಾಥ್ ಸ್ಪರ್ಧೆ!
ಜಿದ್ದಾಜಿದ್ದಿನ ಕಣವಾಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸುರೇಶ್ ಹೆಸರಿನ ಮೂವರು ಹಾಗೂ ಮಂಜುನಾಥ್ ಹೆಸರಿನ ಐವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ರಾಮನಗರ (ಏ.06): ಜಿದ್ದಾಜಿದ್ದಿನ ಕಣವಾಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸುರೇಶ್ ಹೆಸರಿನ ಮೂವರು ಹಾಗೂ ಮಂಜುನಾಥ್ ಹೆಸರಿನ ಐವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯ ಡಾ.ಮಂಜುನಾಥ್ ಮತ್ತು ಕಾಂಗ್ರೆಸ್‌ನ ಡಿ.ಕೆ.ಸುರೇಶ್ ಅವರ ಹೆಸರಿನ ಕುರಿತು ಮತದಾರರಲ್ಲಿ ಗೊಂದಲ ಮೂಡಿಸಿ, ಎದುರಾಳಿಗಳ ವಿರುದ್ಧ ಲಾಭ ಪಡೆಯುವುದಕ್ಕಾಗಿ ಒಂದೇ ರೀತಿಯ ಹೆಸರಿನವರನ್ನು ಕರೆತಂದು ನಾಮಪತ್ರ ಸಲ್ಲಿಸಲಾಗಿದೆ ಎಂಬ ಆರೋಪ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಸಿದ್ದರೆ, ಅದೇ ಹೆಸರಿನಲ್ಲಿ ಕರುನಾಡು ಪಾರ್ಟಿಯಿಂದ ಆನೇಕಲ್ ತಾಲೂಕಿನ ಮುತ್ತಾನಲ್ಲೂರಿನ ಎಸ್. ಸುರೇಶ್, ಪಕ್ಷೇತರರಾಗಿ ಕನಕಪುರ ತಾಲೂಕಿನ ಮರಳೆ ಗ್ರಾಮದ ಎಂ.ಎನ್ .ಸುರೇಶ್ ಉಮೇದುವಾರಿಕೆ ಸಲ್ಲಿಸಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಡಾ.ಸಿ.ಎನ್. ಮಂಜುನಾಥ್ ನಾಮಪತ್ರ ಸಲ್ಲಿಸಿದರೆ, ಚನ್ನರಾಯಪಟ್ಟಣದ ಬಹುಜನ್ ಭಾರತ್ ಪಾರ್ಟಿ ಅಭ್ಯರ್ಥಿಯಾಗಿ ಸಿ.ಎನ್. ಮಂಜುನಾಥ, ಪಕ್ಷೇತರರಾಗಿ ಬೆಂಗಳೂರಿನ ಸಿ.ಮಂಜುನಾಥ್, ಎನ್. ಮಂಜುನಾಥ್ ಹಾಗೂ ಕೆ.ಮಂಜುನಾಥ್ ಎಂಬುವರು ನಾಮಪತ್ರ ಸಲ್ಲಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಕೋಟ ಶ್ರೀನಿವಾಸ ಪೂಜಾರಿಗೆ ಸಮನ್ಸ್
ದಳಪತಿ ಕೋಟೆಯಲ್ಲೇ ಬಂಡೆ ಬ್ರದರ್ಸ್ ಬಿಗ್ ಆಪರೇಷನ್: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿರುವ ಹೊತ್ತಲ್ಲೇ ಬಂಡೆ ಬ್ರದರ್ಸ್ ಖ್ಯಾತಿಯ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರು, ದಳಪತಿ ಎಚ್.ಡಿ.ಕುಮಾರಸ್ವಾಮಿ ಸ್ವಕ್ಷೇತ್ರ ಚನ್ನಪಟ್ಟಣದಲ್ಲೇ ದೊಡ್ಡ ಮಟ್ಟದ ಶಾಕ್ ನೀಡಿದ್ದಾರೆ. ದಳಪತಿ ಭದ್ರಕೋಟೆ ಚನ್ನಪಟ್ಟಣದಲ್ಲಿ ರಹಸ್ಯ ಆಪರೇಷನ್ ನಡೆಸಿ ಜೆಡಿಎಸ್‌ನ ೯ ನಗರಸಭೆ ಸದಸ್ಯರು ಹಾಗೂ ಒಬ್ಬ ಪಕ್ಷೇತರ ಸದಸ್ಯೆಯನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡಿದ್ದು, ಚುನಾವಣೆ ಹೊತ್ತಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್‌ಗೆ ಠಕ್ಕರ್ ನೀಡಿದ್ದಾರೆ.
ಸದ್ದಿಲ್ಲದೇ ಆಪರೇಷನ್ ಹಸ್ತ ನಡೆಸಿದ ಡಿ.ಕೆ.ಸಹೋದರರು ಗುರುವಾರ ತಡರಾತ್ರಿ ೯ ಮಂದಿ ಜೆಡಿಎಸ್ ನಗರಸಭೆ ಸದಸ್ಯರು ಹಾಗೂ ಇವರೊಟ್ಟಿಗೆ ಒಬ್ಬ ಪಕ್ಷೇತರ ಸದಸ್ಯೆಯನ್ನು ಕಾಂಗ್ರೆಸ್‌ಗೆ ಸೆಳೆದಿದ್ದು, ಇವರೆಲ್ಲ ಬೆಂಗಳೂರಿನ ಸದಾಶಿವ ನಗರದಲ್ಲಿರುವ ಡಿ.ಕೆ.ಶಿವಕುಮಾರ್ ಅವರ ಮನೆಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ನಗರಸಭೆ ಅಧ್ಯಕ್ಷ ಪಿ.ಪ್ರಶಾಂತ್, ಸದಸ್ಯರಾದ ಎಂ.ಜೆ.ರೇವಣ್ಣ, ವಿ.ಸತೀಶ್ ಬಾಬು, ಸಿ.ಜೆ.ಲೋಕೇಶ್, ಶ್ರೀನಿವಾಸಮೂರ್ತಿ, ನಾಗೇಶ್, ಸೈಯ್ಯದ್ ರಫೀಕ್ ಅಹಮದ್ ಕುನುಮೀರಿ, ಅಭಿದಾಬಾನು, ಭಾನುಪ್ರಿಯ ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.
ಸುನೀಲ್ ಬೋಸ್ ನಾಮಪತ್ರ ಅಸಿಂಧು ಕೋರಿ ಬಿಜೆಪಿ ದೂರು: ಕಾರಣವೇನು?
ಇವರೊಂದಿಗೆ ಪಕ್ಷೇತರ ಸದಸ್ಯೆ ಉಮಾ ಸಹ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಚನ್ನಪಟ್ಟಣ ನಗರಸಭೆಯ ಜೆಡಿಎಸ್ ಸದಸ್ಯರ ಪೈಕಿ ಮೂರನೇ ಎರಡಷ್ಟು ಮಂದಿ ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದು, ತಮ್ಮನ್ನು ಕಾಂಗ್ರೆಸ್ ಸದಸ್ಯರೆಂದು ಪರಿಗಣಿಸಿ ನಗರಸಭೆಯಲ್ಲಿ ತಮಗೆ ಕಾಂಗ್ರೆಸ್ ಸದಸ್ಯರ ಜತೆ ಕೂರಲು ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕೋರಿದ್ದಾರೆ.