Karnataka Politics: ಯಾವುದೇ ಷರತ್ತು ಇಲ್ಲದೆ ಕಾಂಗ್ರೆಸ್‌ಗೆ ಬರುವವರಿಗೆ ಸ್ವಾಗತ: ಸಿದ್ದರಾಮಯ್ಯ
* ಕಾಂಗ್ರೆಸ್ ಸೇರುವ ಬಿಜೆಪಿ, ಜೆಡಿಎಸ್ ಶಾಸಕರ ಜತೆ ಸಂಪರ್ಕ ಈಗಲೂ ಇದೆ
* ಪಕ್ಷ ಪಕ್ಷದ ಸಿದ್ಧಾಂತ ಒಪ್ಪಿ ಬರುವಂತವರಿರಬೇಕು
* ಬಾದಾಮಿಯ ಜನತೆ ಮತ್ತೇ ಇಲ್ಲೇ ಸ್ಪರ್ಧಿಸಲು ಬೇಡಿಕೆಯಿಟ್ಟಿದ್ದಾರೆ
ಬಾಗಲಕೋಟೆ(ಜ.26): ಬಿಜೆಪಿ(BJP) ಮತ್ತು ಜೆಡಿಎಸ್(JDS) ಶಾಸಕರು ತಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಈಗಾಗಲೇ ತಿಳಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಇದೀಗ ಪಕ್ಷದ ಸಿದ್ಧಾಂತ, ನಾಯಕತ್ವಗಳನ್ನು ಒಪ್ಪಿ ಷರತ್ತು ಇಲ್ಲದೆ ಪಕ್ಷಕ್ಕೆ ಸೇರಲು ಬಯಸುವ ಶಾಸಕರಿಗೆ ಸ್ವಾಗತವಿದೆ ಎಂದು ತಿಳಿಸಿದ್ದಾರೆ. ಅದರಲ್ಲೂ ಕಾಂಗ್ರೆಸ್(Congress) ಬಿಟ್ಟು ಹೋದವರೂ ಮರಳಿ ಪಕ್ಷಕ್ಕೆ ಸೇರುವುದಾದಲ್ಲಿ ಅವಕಾಶವಿದೆ ಎಂದು ಹೇಳಿದ್ದಾರೆ.
ಬಾದಾಮಿಯಲ್ಲಿ(Badami) ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಸೇರುವವರು ಪಕ್ಷದ ಸಿದ್ಧಾಂತ ಒಪ್ಪಿ ಬರುವಂತವರಿರಬೇಕು. ಯಾವುದೇ ಷರತ್ತು ಇರದೆ ಬರಬೇಕು, ಪಕ್ಷದ ನಾಯಕತ್ವ ಒಪ್ಪಿಕೊಂಡು ಬರಬೇಕು. ಇವುಗಳನ್ನೆಲ್ಲಾ ಒಪ್ಪಿಕೊಂಡರೆ ಪಕ್ಷಕ್ಕೆ ಸ್ವಾಗತವಿದೆ. ಬಿಜೆಪಿ ಶಾಸಕರು ಮಾತ್ರವಲ್ಲದೆ ಕಾಂಗ್ರೆಸ್ ಬಿಟ್ಟು ಹೋದ ಶಾಸಕರಿಗೂ ಮರಳಿ ಪಕ್ಷಕ್ಕೆ ಸೇರುವವರಿಗೆ ಸ್ವಾಗತವಿದೆ. ಆದರೆ ಯಾವುದೇ ಷರತ್ತು ಇಲ್ಲದೆ ಪಕ್ಷ ಸೇರ್ಪಡೆಯಾಗುವುದಾದರೆ ಸ್ವಾಗತ ಎಂದು ತಿಳಿಸಿದರು. ಇದೇ ವೇಳೆ ಕಾಂಗ್ರೆಸ್ ಪಕ್ಷ ಸೇರಲು ಬಿಜೆಪಿ ಹಾಗೂ ಜೆಡಿಎಸ್ ಶಾಸಕರ ಸಂಪರ್ಕ ಈಗಲೂ ಇದೆ. ಸದ್ಯ ಅವರ ಹೆಸರನ್ನು ಹೇಳುವುದಿಲ್ಲ ಎಂದು ಪುನರುಚ್ಚರಿಸಿದರು.
Karnataka Politics: ಹರಿಪ್ರಸಾದ್‌ಗೆ ಪರಿಷತ್ ವಿಪಕ್ಷ ನಾಯಕ ಸ್ಥಾನ?
ಚುನಾವಣೆಗೆ ಸಿದ್ಧ:
ರಾಜ್ಯದಲ್ಲಿ(Karnataka) ಎದುರಾಗಲಿರುವ ವಿಧಾನಸಭೆ ಚುನಾವಣೆ(Assembly Elections) ಇರಬಹುದು, ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆ ಇರಬಹುದು ಪಕ್ಷ ಸಿದ್ಧವಿದೆ ಎಂದ ಸಿದ್ದರಾಮಯ್ಯ, ಯಾವುದೇ ಚುನಾವಣೆಗಾದರೂ ಪಕ್ಷ ಹಾಗೂ ಕಾರ್ಯಕರ್ತರು ರೆಡಿ ಇದ್ದಾರೆ ಎಂದು ಹೇಳಿದರು.
ಇನ್ನು ಬಾದಾಮಿಯ ಜನತೆ ಮತ್ತೇ ಇಲ್ಲೇ ಸ್ಪರ್ಧಿಸಲು ಬೇಡಿಕೆಯಿಟ್ಟಿದ್ದಾರೆ. ಚುನಾವಣೆಗೆ ಇನ್ನೂ ಸಮಯ ಇರುವುದರಿಂದ ನೋಡೋಣ ಎಂದ ಅವರು, ರಾಜ್ಯದ ವಿವಿಧ ಕಡೆ ಸ್ಪರ್ಧಿಸಲು ಒತ್ತಾಯ ಹೆಚ್ಚಾಗಿದ್ದು ಅವರ ಜೊತೆ ಚರ್ಚಿಸಿದ ನಂತರ ನಿರ್ಧಾರ ತಿಳಿಸುವುದಾಗಿ ತಿಳಿಸಿದರು.
ಉಸ್ತುವಾರಿ ರಾಜ್ಯದ ಜಿಲ್ಲೆಗಳಲ್ಲಿ ಉಸ್ತುವಾರಿ ಮಂತ್ರಿಗಳ ನೇಮಕವನ್ನು ಮಾಡಲಾಗಿದೆಯಾದರೂ ಯಾವ ಜಿಲ್ಲೆಗಳಲ್ಲಿಯೂ ಉಸ್ತುವಾರಿ ಸಚಿವರು ಕೆಲಸ ಮಾಡುತ್ತಿಲ್ಲ. ಎಲ್ಲ ಸಚಿವರು ತಮ್ಮ ತಮ್ಮ ಕ್ಷೇತ್ರಕ್ಕೆ ಸೀಮಿತವಾಗಿದ್ದಾರೆ. ಹೀಗಾಗಿ ಜನರ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ. ಆಡಳಿತದಲ್ಲಿ ಸುಧಾರಣೆ ಕಾಣುತ್ತಿಲ್ಲ, ಎಲ್ಲರೂ ಕಮಿಷನ್‌ಗೆ ನಿಂತಿದ್ದರಿಂದ ಹೀಗಾಗಿದೆ ಎಂದು ಆರೋಪಿಸಿದರು.
16 ಕಾಂಗ್ರೆಸ್ ಶಾಸಕರು ನನ್ನ ಸಂಪರ್ಕದಲ್ಲಿ: ಜಾರಕಿಹೊಳಿ ಬಾಂಬ್
ಬೆಂಗಳೂರು: ಪ್ರತಿಪಕ್ಷ ಕಾಂಗ್ರೆಸ್‌ನ 16 ಶಾಸಕರು ನನ್ನ ಸಂಪರ್ಕದಲ್ಲಿದ್ದು, ಬಿಜೆಪಿ ಹೈಕಮಾಂಡ್ ಸಮ್ಮತಿ ಸೂಚಿಸಿದರೆ ಅವರನ್ನು ಬಿಜೆಪಿಗೆ ಕರೆತರುತ್ತೇನೆ ಎಂದು ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ(Ramesh Jarkiholi) ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ತೊರೆಯುವಾಗ ನನ್ನ ಜತೆ 36 ಶಾಸಕರು ಇದ್ದರು. ಈ ಪೈಕಿ 17 ಶಾಸಕರು ಬಿಜೆಪಿಗೆ ಬಂದೆವು. ಪ್ರಸ್ತುತ 19 ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ಇದರಲ್ಲಿ ಮೂವರು ಜೆಡಿಎಸ್‌ನವರು ಇದ್ದಾರೆ. ಆದರೆ, ಜೆಡಿಎಸ್ ಶಾಸಕರನ್ನು ಕರೆಯುವ ಪ್ರಯತ್ನ ಮಾಡುವುದಿಲ್ಲ. ಯಾಕೆಂದರೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಮತ್ತು ನನ್ನ ಬಾಂಧವ್ಯ ಚೆನ್ನಾಗಿದೆ. ಉಳಿದ 16 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಪಕ್ಷದ ಹೈಕಮಾಂಡ್ ಒಪ್ಪಿದರೆ ಅವರನ್ನು ಬಿಜೆಪಿಗೆ ಕರೆತರುತ್ತೇನೆ ಎಂದು ಹೇಳಿದರು.
Karnataka Politics: ಕಾಂಗ್ರೆಸ್ ಸೇರುವ ಬಿಜೆಪಿಗರ ಪಟ್ಟಿ ಡಿಕೆಶಿ ಬಳಿ ಇದೆ: ಪರಂ
ನಮ್ಮ ಜಿಲ್ಲೆಯ ಇಬ್ಬರು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರಲು ಸಿದ್ಧರಿದ್ದಾರೆ. ಮೂರನೇಯವರು ಸಹ ಬರುವವರು ಇದ್ದಾರೆ. ಆದರೆ, ನಾನು ಅವರನ್ನು ಕರೆದುಕೊಳ್ಳುವುದಿಲ್ಲ. ಅವರು ಬಿಜೆಪಿಗೆ ಬಂದರೆ ನಾನು ಬೇರೆ ಕಡೆ ಹೋಗುತ್ತೇವೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ಪ್ರಸ್ತಾಪಿಸದೆ ಟಾಂಗ್ ಕೊಟ್ಟರು.
ಸಿದ್ದು ಮತ್ತೆ ಸಿಎಂ ಆಗಲ್ಲ- ರಮೇಶ್:
ವಿಧಾನಸಭೆ ಒಳಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಹೇಳಿದ್ದರು ಎಂಬುದನ್ನು ಜ್ಞಾಪಿಸಿಕೊಳ್ಳಬೇಕು. ಟೇಬಲ್ ಕುಟ್ಟಿಯಾವುದೇ ಕಾರಣಕ್ಕೂ ಈ ದ್ರೋಹಿಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಈಗ ಇವರಿಗೆ ಬಿಜೆಪಿ ಸೇರಿದವರ ಉಸಾಬರಿ ಯಾಕೆ ಬೇಕು ಎಂದು ರಮೇಶ್ ಖಾರವಾಗಿ ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಬಿಜೆಪಿ ಸೇರಿದವರನ್ನು ಕರೆಯುತ್ತಿರಬಹುದು. ಆದರೆ, ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದು ಸಾಧ್ಯವಿಲ್ಲ. ಮತ್ತೊಮ್ಮೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಬರಲಿದೆ ಎಂದು ಹೇಳಿದರು.
ಪಕ್ಷ ತೊರೆಯಲ್ಲ: ರಮೇಶ್ ಜಾರಕಿಹೊಳಿ
ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಮುಖ್ಯಮಂತ್ರಿ ಮತ್ತು ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧವಾಗಿರುತ್ತೇನೆ. ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಎಂದು ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಕೇಂದ್ರ ಗೃಹ ಸಚಿವ ಅಮಿತ್(Amit Shah) ಶಾ ಮತ್ತು ಹೈಕಮಾಂಡ್ ನನ್ನ ಜತೆ ಇದ್ದಾರೆ. ನಾನು ಪಕ್ಷದಲ್ಲಿಯೇ ಇದ್ದು, ಪಕ್ಷ ಸಂಘಟನೆ ಮಾಡುತ್ತೇನೆ ಎಂದರು.