Karnataka Politics: ಹರಿಪ್ರಸಾದ್‌ಗೆ ಪರಿಷತ್ ವಿಪಕ್ಷ ನಾಯಕ ಸ್ಥಾನ?
* ಮುಖ್ಯ ಸಚೇತಕ ಹುದ್ದೆ ನಜೀರ್ ಅಹ್ಮದ್‌ಗೆ ಖಚಿತ
* ಫೆಬ್ರವರಿ ಮೊದಲ ವಾರ ಹೆಸರು ಅಂತಿಮ ಸಾಧ್ಯತೆ
* ಹರಿಪ್ರಸಾದ್‌ಗೆ ಮಾತೇ ಪ್ಲಸ್ ಪಾಯಿಂಟ್
ಬೆಂಗಳೂರು(ಜ.26): ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್(BK Hariprasad) ಅವರಿಗೆ ವಿಧಾನ ಪರಿಷತ್ ಪ್ರತಿಪಕ್ಷ ಸ್ಥಾನ(Vidhan Parishat Leader of Opposition) ದೊರೆಯುವುದು ಬಹುತೇಕ ನಿಕ್ಕಿಯಾಗಿದೆ. ಇದೇ ವೇಳೆ ವಿಧಾನ ಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಹುದ್ದೆ ಅಲ್ಪಸಂಖ್ಯಾತ ನಾಯಕರಿಗೆ ಲಭಿಸುವ ಸಾಧ್ಯತೆಯಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಲಿಂಗಾಯತ ಸಮುದಾಯದ ಎಂ.ಬಿ. ಪಾಟೀಲ್ ಅವರಿಗೆ ದೊರೆಯುವುದರೊಂದಿಗೆ ವಿಧಾನ ಪರಿಷತ್‌ನಲ್ಲಿ(Vidhan Parishat) ಖಾಲಿಯಿರುವ ಪ್ರತಿಪಕ್ಷ ನಾಯಕ ಹಾಗೂ ಮುಖ್ಯ ಸಚೇತಕ ಹುದ್ದೆಗಳ ನೇಮಕ ವಿಚಾರವೂ ಮುನ್ನೆಲೆಗೆ ಬಂದಿದೆ. ನಂಬಲರ್ಹ ಮೂಲಗಳ ಪ್ರಕಾರ ಫೆಬ್ರವರಿ ಮೊದಲ ವಾರದೊಳಗೆ ಈ ಹುದ್ದೆಗಳಿಗೂ ಹೈಕಮಾಂಡ್(High Command) ಹೆಸರು ಅಂತಿಮಗೊಳಿಸುವ ಸಾಧ್ಯತೆಯಿದೆ.
ತತ್ವ ಸಿದ್ದಾಂತ, ನಂಬಿಕೆಯಿಂದ ಯಾರೂ ಸಿದ್ದು ಜೊತೆ ಹೋಗಲ್ಲ: ಬಿಜೆಪಿ
ಪೈಪೋಟಿ ಇತ್ತು:
ಪ್ರತಿಪಕ್ಷ ನಾಯಕರಾಗಿದ್ದ ಎಸ್.ಆರ್. ಪಾಟೀಲ್(SR Patil) ಅವರ ಅವಧಿ ಮುಗಿದ ನಂತರ ಈ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ(Congress) ಭಾರಿ ಪೈಪೋಟಿ ನಿರ್ಮಾಣವಾಗಿತ್ತು. ಅಲ್ಪಸಂಖ್ಯಾತ(Minorities) ಸಮುದಾಯದವರಿಗೆ ಈ ಸ್ಥಾನ ನೀಡಬೇಕು ಎಂದು ತೀವ್ರ ಒತ್ತಡ ನಿರ್ಮಾಣವಾಗಿತ್ತು. ಈ ಸಮುದಾಯದ ನಜೀರ್ ಅಹ್ಮದ್, ಸಿ.ಎಂ. ಇಬ್ರಾಹಿಂ ಬಹಿರಂಗವಾಗಿಯೇ ತಾವು ಈ ಹುದ್ದೆಯ ಆಕಾಂಕ್ಷಿ ಎಂದು ಘೋಷಿಸಿಕೊಂಡಿದ್ದರು. ಇನ್ನೂ ಹಿಂದುಳಿದ ಈಡಿಗ ಸಮುದಾಯದ ಹರಿಪ್ರಸಾದ್ ಅವರು ತಮ್ಮ ಹಿರಿತನದ ಆಧಾರದ ಮೇಲೆ ಈ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಆದರೆ, ವಿಧಾನಸಭೆಯಲ್ಲಿ ಪ್ರತಿಪಕ್ಷ ಸ್ಥಾನ ಹಿಂದುಳಿದ ವರ್ಗದ ಸಿದ್ದರಾಮಯ್ಯ(Siddaramaiah) ಅವರಿದ್ದಾರೆ. ಪರಿಷತ್ತಿನಲ್ಲೂ ಹಿಂದುಳಿದವರಿಗೆ ಈ ಸ್ಥಾನ ನೀಡುವುದಕ್ಕಿಂತ ಅಲ್ಪಸಂಖ್ಯಾತರಿಗೆ ಮನ್ನಣೆ ನೀಡಬೇಕು ಎಂಬ ವಾದ ಕೇಳಿ ಬಂದಿತ್ತು.
ಹೀಗಾಗಿಯೇ ಕಾಂಗ್ರೆಸ್‌ನ ಬಣಗಳು ಸಹ ಈ ವಿಚಾರದಲ್ಲಿ ವಿಭಜಿತವಾಗಿದ್ದವು. ಡಿ.ಕೆ. ಶಿವಕುಮಾರ್(DK Shivakumar) ಬಣ, ಕಾಂಗ್ರೆಸ್‌ನೊಳಗಿನ ‘ತೃತೀಯ ರಂಗ’ (ಹರಿಪ್ರಸಾದ್, ಮುನಿಯಪ್ಪ, ಪರಮೇಶ್ವರ್ ಮೊದಲಾದ ಸಮಾನ ಮನಸ್ಕ ಹಿರಿಯ ನಾಯಕರ ಗುಂಪು) ಸೇರಿದಂತೆ ಬಹುತೇಕರು ಹರಿಪ್ರಸಾದ್ ಪರ ನಿಂತಿದ್ದರೆ, ಸಿದ್ದರಾಮಯ್ಯ ಬಣ ಮಾತ್ರ ಅಲ್ಪಸಂಖ್ಯಾತರಿಗೆ ಈ ಹುದ್ದೆ ನೀಡುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು.
'ಬಿಜೆಪಿಯಿಂದ ಯಾರೂ ಹೊರ ಹೋಗುವ ಪ್ರಶ್ನೆಯಿಲ್ಲ, ಸ್ವಲ್ಪ ದಿನದಲ್ಲೇ ಭಾರೀ ಬದಲಾವಣೆ: ಸಿಎಂ
ಹರಿಪ್ರಸಾದ್‌ಗೆ ಮಾತೇ ಪ್ಲಸ್‌ಪಾಯಿಂಟ್:
ಆದರೆ, ವಿಧಾನ ಪರಿಷತ್ತಿನ ಪ್ರತಿಪಕ್ಷ ಸ್ಥಾನದಲ್ಲಿರುವವರು ಉತ್ತಮ ವಾಗ್ಮಿಯಾಗಿರಬೇಕು ಹಾಗೂ ಕೇಂದ್ರ ಸರ್ಕಾರವನ್ನು ಸಮರ್ಪಕವಾಗಿ ಟೀಕೆ ಮಾಡುವ ಗುಣ ಹೊಂದಿರಬೇಕು ಎಂಬ ವಾದ ಮೇಲುಗೈ ಪಡೆದು ಹರಿಪ್ರಸಾದ್ ಅವರ ಹೆಸರು ಮುಂಚೂಣಿಗೆ ಬಂದಿದೆ. ಹೈಕಮಾಂಡ್ ಕೂಡ ಹರಿಪ್ರಸಾದ್ ಅವರ ಹೆಸರಿಗೆ ಬಹುತೇಕ ಒಪ್ಪಿದೆ ಎನ್ನಲಾಗಿದೆ. ಇನ್ನು ಅಲ್ಪಸಂಖ್ಯಾತರಿಗೆ ಮುಖ್ಯ ಸಚೇತಕ ಹುದ್ದೆಯನ್ನು ನೀಡಲು ತೀರ್ಮಾನಿಸಲಾಗಿದೆ. ಈ ಹುದ್ದೆ ಅನಾಯಾಸವಾಗಿ ನಜೀರ್ ಅಹ್ಮದ್ ಅವರಿಗೆ ಲಭಿಸಲಿದೆ. ಒಂದು ವೇಳೆ ಅವರೇನಾದರೂ ಈ ಹುದ್ದೆ ಒಲ್ಲೆ ಎಂದರೆ ಮಾತ್ರ ಕಾರ್ಯಾಧ್ಯಕ್ಷರು ಆಗಿರುವ ಸಲೀಂ ಅಹ್ಮದ್ ಅವರಿಗೆ ಹೆಚ್ಚುವರಿ ಹೊಣೆಗಾರಿಕೆ ಲಭಿಸುವ ಸಂಭವವಿದೆ ಎನ್ನುತ್ತವೆ ಪಕ್ಷದ ಉನ್ನತ ಮೂಲಗಳು.
ಎಂಬಿ ಪಾಟೀಲ್‌ಗೆ ಪ್ರಚಾರ ಸಮಿತಿ ಅಧ್ಯಕ್ಷ ಹುದ್ದೆ, ಕಾಂಗ್ರೆಸ್ ತಂತ್ರ, ಸಿದ್ದುಗೆ ಮೇಲುಗೈ
ಮಾಜಿ ಸಚಿವ ಹಾಲಿ ಶಾಕಸ ಎಂ.ಬಿ.ಪಾಟೀಲ್ (MB Patil) ಅವರನ್ನು ಕರ್ನಾಟಕ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ನಿನ್ನೆ (ಮಂಗಳವಾರ) ಈ ಮಹತ್ವದ ಆದೇಶ ಹೊರಡಿಸಿದ್ದು, ವಿಧಾನಸಭೆ ಚುನಾವಣೆಗೆ ಇನ್ನು ಒಂದು ವರ್ಷ ಇರುವಾಗಲೇ ಪ್ರಬಲ ಲಿಂಗಾಯಿತ ಸಮುದಾಯಕ್ಕೆ ಸೇರಿದ ಎಂ.ಬಿ.ಪಾಟೀಲ್ ಗೆ ಈ ಸ್ಥಾನ ನೀಡಿರುವುದರಿಂದ ಲಿಂಗಾಯಿತ ಮತಬ್ಯಾಂಕ್ ಓಲೈಕೆಗೆ ಮುಂದಾಗಿದೆ.