ಈ ಬಾರಿಯೂ ಜೆಡಿಎಸ್, ಬಿಜೆಪಿ ಮ್ಯಾಚ್ ಫಿಕ್ಸಿಂಗ್: ಸಿದ್ದು ಸ್ಫೋಟಕ ಹೇಳಿಕೆ
ಹಳೇ ಮೈಸೂರು, ಹೊಸ ಮೈಸೂರು ಎಂದೇನಿಲ್ಲ. ಅವರು ಎಲ್ಲ ಕಡೆಯೂ ಫಿಕ್ಸಿಂಗ್ ಮಾಡಿಕೊಳ್ಳಬಹುದು. ನನ್ನ ವಿರುದ್ಧ ಯಾರೇ ಸ್ಪರ್ಧೆ ಮಾಡಿದರು ನಾನು ಅದಕ್ಕೆ ಹೆದರುವುದಿಲ್ಲ: ಸಿದ್ದರಾಮಯ್ಯ
ಮೈಸೂರು(ಮಾ.29): ಜೆಡಿಎಸ್, ಬಿಜೆಪಿ ಕಳೆದ ಬಾರಿಯಂತೆ ಈ ಬಾರಿಯೂ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳುವ ಸೂಚನೆ ಇದೆ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಹಳೇ ಮೈಸೂರು, ಹೊಸ ಮೈಸೂರು ಎಂದೇನಿಲ್ಲ. ಅವರು ಎಲ್ಲ ಕಡೆಯೂ ಫಿಕ್ಸಿಂಗ್ ಮಾಡಿಕೊಳ್ಳಬಹುದು. ನನ್ನ ವಿರುದ್ಧ ಯಾರೇ ಸ್ಪರ್ಧೆ ಮಾಡಿದರು ನಾನು ಅದಕ್ಕೆ ಹೆದರುವುದಿಲ್ಲ ಅಂತ ತಿಳಿಸಿದ್ದಾರೆ.
ವರುಣದಿಂದ ವಿಜಯೇಂದ್ರ ಕಣಕ್ಕಿಳಿಯುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನನ್ ವಿರುದ್ಧ ಯಾರೇ ನಿಂತರೂ ನಾನು ಗೆದ್ದೆ ಗೆಲ್ಲುತ್ತೇನೆ. ಕಳೆದ ಚುನಾವಣೆಯಲ್ಲಿ ಸೋತ ಮೇಲೆ ನಾನು ರಾಹು ಕೇತುಗಳು ಒಂದಾದವು ಎಂದು ಹೇಳಿದ್ದೆ, ಈಗ ನಾನು ಆ ಪದ ಬಳಸುವುದಿಲ್ಲ. ಬಳಸಿದರೆ ಅವರು ಈಗ ಸಿಟ್ಟಾಗುತ್ತಾರೆ. ನಾನು ಈ ಬಾರಿ ಗೆಲ್ಲುತ್ತೇನೆ. ಈಗ ಅದನ್ನು ಉಲ್ಲೇಖಿಸುವ ಅಗತ್ಯ ಇಲ್ಲ. ಜನ ನನ್ನ ಪರವಾಗಿ ಇದ್ದಾರೆ ಅಂತ ಹೇಳಿದ್ದಾರೆ.
Yediyurappa House Attack: ಬಿಜೆಪಿಯವರದ್ದೇ ಕೈವಾಡ ಇರಬಹುದು ಎಂದ ಸಿದ್ದರಾಮಯ್ಯ!
ರಾಜ್ಯದಲ್ಲಿ ಆಡಳಿತ ಪಕ್ಷ ಭಾರಿ ಚುನಾವಣಾ ಅಕ್ರಮದಲ್ಲಿ ತೊಡಗುವ ಸಾಧ್ಯತೆ ಇದೆ. ಚುನಾವಣಾ ಆಯೋಗ ನಿಷ್ಪಕ್ಷಪಾತ ಚುನಾವಣೆ ನಡೆಸಲು ಮುಂದಾಗಬೇಕು. ಆಡಳಿತ ಪಕ್ಷ ಇರಲಿ ಯಾವುದೇ ಪಕ್ಷ ಇರಲಿ ಅಕ್ರಮ ಮಾಡಿದರೆ ಕ್ರಮ ಕೈಗೊಳ್ಳಬೇಕು. ಆಡಳಿತ ಪಕ್ಷಕ್ಕೊಂದು ವಿರೋಧ ಪಕ್ಷಗಳಿಗೊಂದು ನ್ಯಾಯ ಮಾಡಬಾರದು. ಕಾಂಗ್ರೆಸ್ ಎರಡನೇ ಪಟ್ಟಿ ಒಂದೆರೆಡು ದಿನದಲ್ಲಿ ಬಿಡುಗಡೆಯಾಗುತ್ತದೆ. ಇವತ್ತು ಸ್ಕ್ರೀನಿಂಗ್ ಕಮಿಟಿ ಸಭೆ ಇದೆ. ಸಭೆ ಮುಗಿಸಿ ಅದನ್ನು ಹೈ ಕಮಾಂಡ್‌ಗೆ ಕಳುಹಿಸುತ್ತೇವೆ. ಆ ನಂತರ ಪಟ್ಟಿ ಬಿಡುಗಡೆಯಾಗುತ್ತದೆ ಅಂತ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಗಾಳಿ ಬೀಸುತ್ತಿದೆ. ಹೀಗಾಗಿ ಟಿಕೆಟ್‌ಗಾಗಿ ಸಾಕಷ್ಟು ಜನರು ಪೈಪೋಟಿ ನಡೆಸುತ್ತಿದ್ದಾರೆ. ಅದರಲ್ಲಿ ಯಾರು ಗೆಲ್ಲುತ್ತಾರೆ ಅಂತಹವರನ್ನು ಹುಡುಕಿ ಟಿಕೆಟ್ ನೀಡಲಾಗುತ್ತಿದೆ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಬಹಳ ದೊಡ್ಡ ಮಟ್ಟದಲ್ಲಿ ಇರುವುದು ಸತ್ಯ ಅಂತ ತಿಳಿಸಿದ್ದಾರೆ.
ಸಿದ್ದರಾಮಯ್ಯ ಈ ಬಾರಿ ಎಲ್ಲಿ ನಿಂತರೂ ಸೋಲುತ್ತಾರೆ: ಸಚಿವ ಕಾರಜೋಳ
ಕೊಳ್ಳೇಗಾಲ ಕಾಂಗ್ರೆಸ್ ಟಿಕೆಟ್ ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿಗೆ ಕೊಡಬೇಕೆಂದು ಸಿದ್ದರಾಮಯ್ಯ ನಿವಾಸದಲ್ಲಿ ಎಆರ್‌ಕೆ ಬೆಂಬಲಿಗರು ಜಮಾಯಿಸಿದ್ದಾರೆ. ಸಿದ್ದರಾಮಯ್ಯ ಭೇಟಿಯಾಗಿ ಎಆರ್‌ಕೆ ಬೆಂಬಲಿಗರು ಒತ್ತಾಯಿಸಿದ್ದಾರೆ. ರಾಮಕೃಷ್ಣ ನಿವಾಸದ ಬಳಿ ಜಮಾಯಿಸಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದ್ದಾರೆ. ಸಿದ್ದರಾಮಯ್ಯ ಕಾರಿಗೆ ಘೇರಾವ್ ಹಾಕಿ ಟಿಕೆಟ್ ನೀಡುವಂತೆ ಬೆಂಬಲಿಗರು ಒತ್ತಾಯಿಸಿದ್ದಾರೆ.
ಇದಕ್ಕೂ ಮುನ್ನ ಸಿದ್ದು ನಿವಾಸಕ್ಕೆ ಭೇಟಿ ನೀಡಿ ಟಿಕೆಟ್ ಆಕಾಂಕ್ಷಿ ಎ.ಆರ್. ಕೃಷ್ಣಮೂರ್ತಿ ಅವರು ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ಕೊಳ್ಳೇಗಾಲ ಕ್ಷೇತ್ರದಲ್ಲಿ ನಾಲ್ವರು ಮಾಜಿ ಶಾಸಕರು ಟಿಕೆಟ್ ಫೈಟ್‌ನಲ್ಲಿದ್ದಾರೆ. ಎ.ಆರ್. ಕೃಷ್ಣಮೂರ್ತಿ, ಬಾಲರಾಜು, ಜಯಣ್ಣ, ಜಿ.ಎನ್. ನಂಜುಂಡಸ್ವಾಮಿ ನಡುವೆ ಟಿಕೆಟ್‌ಗಾಗಿ ಪೈಪೋಟಿ ನಡೆಯುತ್ತಿದೆ.