ಈ ಬಾರಿ ಬಿಜೆಪಿಗೆ 150 ಸ್ಥಾನ: ನಳಿನ್ ಕುಮಾರ್ ಕಟೀಲ್ ವಿಶ್ವಾಸ
ಮೀಸಲಾತಿ ಹೆಚ್ಚಳದ ಬಳಿಕ ಜನರು ಬಿಜೆಪಿಯತ್ತ ಹರಿದು ಬರುತ್ತಿರುವುದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಅಧಿಕ ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವಕ್ತಪಡಿಸಿದ್ದಾರೆ.
ಬೆಂಗಳೂರು (ಜ.21): ಮೀಸಲಾತಿ ಹೆಚ್ಚಳದ ಬಳಿಕ ಜನರು ಬಿಜೆಪಿಯತ್ತ ಹರಿದು ಬರುತ್ತಿರುವುದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಅಧಿಕ ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವಕ್ತಪಡಿಸಿದ್ದಾರೆ. ಬಿಜೆಪಿ ರಾಜ್ಯ ಕಚೇರಿಯಲ್ಲಿ ಶುಕ್ರವಾರ ನಡೆದ ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿಯವರ ಕಲಬುರಗಿ, ಹುಬ್ಬಳ್ಳಿ ಕಾರ್ಯಕ್ರಮಗಳಿಗೆ ನಿರೀಕ್ಷೆಗೆ ಮೀರಿದ ಜನಸಾಗರ ಬಂದಿದೆ. ವಿವಿಧ ಸಮಾವೇಶಗಳಲ್ಲೂ ಗರಿಷ್ಠ ಜನರು ಸೇರುತ್ತಿದ್ದಾರೆ. ಸರ್ವ ಸ್ಪರ್ಶಿ, ಸರ್ವವ್ಯಾಪಿಯಾಗಿ ಜನರು ಬಿಜೆಪಿ ಪರ ಒಲವು ತೋರುತ್ತಿದ್ದಾರೆ.
ಈ ಬಿಜೆಪಿ ಪರ ವಾತಾವರಣವನ್ನು ಇನ್ನಷ್ಟು ಗಟ್ಟಿಮಾಡುವ ಕೆಲಸ ರೈತ ಮೋರ್ಚಾದಿಂದ ಆಗಬೇಕು ಎಂದರು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ರೈತಪರ ನಿಲುವು ಹೊಂದಿದ್ದು, ವಿವಿಧ ರೈತೋಪಯೋಗಿ ಕಾರ್ಯ ಮಾಡಿವೆ. ರೈತರ ಒಳಿತಿಗಾಗಿ ಯೋಜನೆಗಳನ್ನು ರೂಪಿಸಿವೆ. ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ರೈತರನ್ನು ಮತಬ್ಯಾಂಕಿಗೆ ಮತ್ತು ಘೋಷಣೆಗೆ ಸೀಮೀತಗೊಳಿಸಿದ್ದವು. ಬಿಜೆಪಿ ಸರ್ಕಾರಗಳು ರೈತಪರ ನಿಲುವು ತೆಳೆದು ರೈತರ ಏಳಿಗೆಗೆ ಶ್ರಮಿಸಿವೆ. ಬಿಜೆಪಿ ನೇತೃತ್ವದ ಡಬಲ್ ಎಂಜಿನ್ ಸರ್ಕಾರಗಳು ಮಾಡಿದ ಸಾಧನೆ ಮತ್ತು ರೈತಪರ ಕೆಲಸಗಳ ಬಗ್ಗೆ ಜನರು ಮತ್ತು ರೈತರಿಗೆ ತಿಳಿಸಬೇಕು ಎಂದು ಹೇಳಿದರು.
ದೇವೇಗೌಡರ ಕಾಲಿನ ಧೂಳಿಗೂ ನಳಿನ್ ಕಟೀಲ್ ಸಮನಲ್ಲ: ಎಚ್.ಡಿ.ಕುಮಾರಸ್ವಾಮಿ
ಅಪ್ಪ ಮಕ್ಕಳ ಪಕ್ಷ, ರಾಷ್ಟ್ರೀಯ ಪಕ್ಷದಲ್ಲಿ ಕಿತ್ತಾಟ: ಅಪ್ಪ ಮಕ್ಕಳ ಪಾರ್ಟಿಯಲ್ಲಿ ಅಣ್ಣ ದೊಡ್ಡವನೋ ತಮ್ಮ ದೊಡ್ಡವನೋ ಎಂದು ಕಿತ್ತಾಟ ಶುರುವಾಗಿದೆ. ಇನ್ನೊಂದು ರಾಷ್ಟ್ರೀಯ ಪಾರ್ಟಿಯಲ್ಲಿ ಮುಖ್ಯಮಂತ್ರಿ ಯಾರೆಂಬ ಕಿತ್ತಾಟ ಆರಂಭವಾಗಿದೆ. ಈ ಚುನಾವಣೆಯಲ್ಲಿ ಬೇರೆ ಬೇರೆ ಪಾರ್ಟಿಯವರು ಶರ್ಟ್ ಹೊಲಿಸಿ ಕಾಯುತ್ತಿದ್ದಾರೆ. ಕೆಲವರು ಕೋಟ್ ಹೊಲಿಸಲು ಅಂಗಡಿಗೆ ಕೊಟ್ಟಿದ್ದಾರೆ. ಇನ್ನೂ ಕೆಲವರು ಹೊಸ ಪ್ಯಾಂಟ್ ಶರ್ಟ್ ಖರೀದಿಸಿದ್ದಾರೆ. ಇನ್ನೂ ಕೆಲವರು ಅವರೊಳಗೇ ಪ್ಯಾಂಟ್, ಶರ್ಟ್ ಹರಿಯಲು ಶುರು ಮಾಡಿದ್ದಾರೆ. ಮೂರು ಪಾರ್ಟಿಯಲ್ಲಿ ಮೂರು ವಿಭಿನ್ನತೆ. ರಾಷ್ಟ್ರೀಯ ಪಾರ್ಟಿ ಇನ್ನೊಂದಿದೆ. ಅವರ ಸಭೆ ಆದಾಗ ಚಪ್ಪಲಿಗಳು ಕೈಯಲ್ಲಿ ಇರುತ್ತದೆ ಎಂದು ಕಾಂಗ್ರೆಸ್ ಪಕ್ಷದ ಹೆಸರು ಹೇಳದೆ ಟೀಕಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ರೈತ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಮತ್ತಿತರರು ಉಪಸ್ಥಿತರಿದ್ದರು.
ಚುನಾವಣೆ ಸಿದ್ಧತೆಗೆ ಸಿಎಂ, ಕಟೀಲ್ ಸಭೆ: ಮುಂಬರುವ ವಿಧಾನಸಭಾ ಚುನಾವಣೆಗೆ ತಾಲೀಮು ಆರಂಭಿಸಿರುವ ಆಡಳಿತಾರೂಢ ಬಿಜೆಪಿ ನಾಯಕರು ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಸಿದರು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಬರುವ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳು, ಅಧಿವೇಶನದ ಜೊತೆ ಜೊತೆಗೆ ಪಕ್ಷದ ಸಂಘಟನೆ, ಫೆಬ್ರವರಿ ಅಂತ್ಯದವರೆಗೆ ಜನ ಸಂಕಲ್ಪ ಯಾತ್ರೆ ಮುಂದುವರೆಸುವುದು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪ್ರಣಾಳಿಕೆ ಸಿದ್ಧಪಡಿಸುವುದು, ರಾಷ್ಟ್ರೀಯ ನಾಯಕರ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರಕ್ಕೆ ಬ್ರೇಕ್ ಹಾಕಿದ ಹೈಕಮಾಂಡ್: ನಳಿನ್ ಕುಮಾರ್ ಕಟೀಲ್ ಸೇಫ್?
ರಾಜ್ಯದ ನಾಲ್ಕು ದಿಕ್ಕುಗಳಿಂದ ರಥಯಾತ್ರೆಯನ್ನು ಫೆಬ್ರವರಿ ಅಂತ್ಯದಲ್ಲಿ ಆರಂಭಿಸಲು ರೂಪರೇಷೆ ಸಿದ್ಧತೆ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ ಎಂದು ಹೇಳಿದರು. ಈ ಸಭೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಆಹ್ವಾನಿಸದೇ ಇರುವ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಉತ್ತರಿಸಿದ ಬೊಮ್ಮಾಯಿ, ಇದು ಪ್ರಾಥಮಿಕ ಹಂತದ ಸಭೆ. ಮುಂದಿನ ಹಂತದ ಸಭೆಯಲ್ಲಿ ಯಡಿಯೂರಪ್ಪ ಸೇರಿದಂತೆ ದೊಡ್ಡ ನಾಯಕರೊಂದಿಗೆ ಚರ್ಚಿಸಲಾಗುವುದು ಎಂದರು.