ದೇವೇಗೌಡರ ಕಾಲಿನ ಧೂಳಿಗೂ ನಳಿನ್ ಕಟೀಲ್ ಸಮನಲ್ಲ: ಎಚ್.ಡಿ.ಕುಮಾರಸ್ವಾಮಿ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ ಕಟೀಲ್ ಅವರು ದೇವೇಗೌಡರ ಕಾಲ ಧೂಳು, ಉಗುರಿಗೂ ಸಮ ಆಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಟೀಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿಜಯಪುರ (ಜ.21): ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ದೇವೇಗೌಡರ ಕಾಲಿನ ದೂಳಿಗೆ, ಉಗುರಿಗೂ ಸಹ ಸಮನಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಳಿನಕುಮಾರ ಕಟೀಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಶುಕ್ರವಾರ ಪಂಚರತ್ನ ರಥಯಾತ್ರೆ ನಿಮಿತ್ತ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಅಪ್ಪ- ಮಕ್ಕಳು ಚಪ್ಪಲಿಯಿಂದ ಹೊಡೆದಾಡುತ್ತಾರೆ ಎಂದು ನಳಿನಕುಮಾರ ಕಟೀಲ್ ದೇವೇಗೌಡರ ವಿರುದ್ಧ ಮಾತನಾಡಿದ್ದಕ್ಕೆ ಕೆಂಡಾಮಂಡಲವಾದ ಎಚ್.ಡಿ.ಕುಮಾರಸ್ವಾಮಿ ಅವರು, ದೇವೇಗೌಡರ ಬಗ್ಗೆ ಮಾತನಾಡುವ ಯೋಗ್ಯತೆ ನಳಿನಕುಮಾರ ಕಟೀಲ್‌ಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿಯವರ ಯೋಗ್ಯತೆ ಸರ್ಕಾರ ನಡೆಸಲು ಬರುತ್ತಿಲ್ಲ. ದೇವೇಗೌಡರ ಬಗ್ಗೆ ಮಾತನಾಡುವ ನೈತಿಕತೆ ಇವರಿಗೆ ಇಲ್ಲ ಎಂದು ಅಸಮಾಧಾನ ಹೊರಹಾಕಿದರು. ಎರಡು ದಿನಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ಮಾಡುತ್ತಿದ್ದಾರೆ. ಸೌಜನ್ಯಕ್ಕೂ ಸಚಿವರು ಭೇಟಿ ನೀಡಿಲ್ಲ.
ಮೋದಿ ರಾಜ್ಯ ಭೇಟಿ ಲಗೋರಿ, ಖೋ ಖೋ ಇದ್ದಂತೆ: ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯ
ಸರ್ಕಾರದ ಪಾಪದ ಕೊಡ ತುಂಬಿದೆ ಎಂದು ನಳಿನಕುಮಾರ ಕಟೀಲ್ ವಿರುದ್ಧ ಕಿಡಿ ಕಾರಿದರು. ನರೇಂದ್ರ ಮೋದಿ ಅವರನ್ನು ಕೇಳಿ ದೇವೇಗೌಡ ಅವರು ಏನು ಎಂಬುವುದು ಗೊತ್ತಾಗುತ್ತದೆ. ಒಬ್ಬ ಮಾಜಿ ಪ್ರಧಾನಿ ಹಾಗೂ ಅವರ ಕುಟುಂಬದ ವಿರುದ್ಧ ಮಾತನಾಡುವ ರೀತಿ ಇದೇನಾ? ನಿಮ್ಮ ಸಂಸ್ಕೃತಿ ಇದೇನಾ? ಎಂದರು. ಬಿಜೆಪಿಗೆ ಕೊನೆಗಾಲ ಬಂದಿದೆ. ಪಾಪದ ಕೊಡ ತುಂಬಿದೆ. ಕರ್ನಾಟಕದಿಂದ ನೀವು ನಿಮ್ಮ ಟೆಂಟ್ ಖಾಲಿ ಮಾಡಿಕೊಂಡು ಹೋಗುವ ಕಾಲ ಬಂದಿದೆ. ಧರ್ಮ-ಧರ್ಮಗಳ ಮಧ್ಯೆ ಜಗಳ ಹಚ್ಚುವ ನಿಮ್ಮ ಆಟ ಇನ್ನು ನಡೆಯುವುದಿಲ್ಲ ಎಂದು ಹೇಳಿದರು. ಈ ಜಿಲ್ಲೆಯಲ್ಲಿ ನಿಮ್ಮ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಸಚಿವ ಮುರುಗೇಶ ನಿರಾಣಿ ಏನೆಲ್ಲಾ ಮಾತನಾಡುತ್ತಿದ್ದಾರೆ.
ಅದನ್ನು ಗಮನಿಸಿ. ಇದು ನಿಮ್ಮ ಚಪ್ಪಲಿ ಸಂಸ್ಕೃತಿ. ಅವರಿಬ್ಬರ ಮಾತು ಚಪ್ಪಲಿಗಿಂತ ಕಡೆ. ಈ ಮಾತುಗಳು ನಿಮ್ಮ ಕಿವಿಗೆ ಕೇಳಲಿಲ್ಲವೆ? ಎಂದು ಅಸಮಾಧಾನ ಹೊರ ಹಾಕಿದರು. ನಾಲಿಗೆ ಮೇಲೆ ಹಿಡಿತವಿರಲಿ. ಇನ್ನೊಮ್ಮೆ ಮಾತನಾಡಿದರೆ ತಕ್ಕ ಬುದ್ದಿ ಕಲಿಸುತ್ತೇವೆ. ನಿಮ್ಮ ಮತ್ತು ಯತ್ನಾಳ ಭಾಷೆ ನಮಗೆ ಬರಲ್ಲ. ಇನ್ನಾದರೂ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಬೇಕು . ನೀವು ದೇವೇಗೌಡರ ಧೂಳಿನ ಸಮ, ಉಗುರಿನ ಸಮ ಆಗಲ್ಲ ಎಂದು ಕಟೀಲ್ ಅವರಿಗೆ ಕುಮಾರಸ್ವಾಮಿ ನೇರವಾಗಿ ಎಚ್ಚರಿಕೆ ನೀಡಿದರು.
ರೇವಣಸಿದ್ದೇಶ್ವರ ದೇವಾಸ್ಥಾನಕ್ಕೆ ಭೇಟಿ: ಜ.27 ರಂದು ಜರಗುವ ತ್ರಿಕೋಟಿ ಶಿವಲಿಂಗ ಪ್ರತಿಷ್ಠಾಪನೆಯಲ್ಲಿ ನನ್ನ ಸ್ವಂತ ಖರ್ಚಿನಲ್ಲಿ ಒಂದು ಸಾವಿರ ಶಿವಲಿಂಗ ಪ್ರತಿಷ್ಠಾಪಿಸುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಘೋಷಣೆ ಮಾಡಿದರು. ಸಮೀಪದ ಹೊರ್ತಿಗ್ರಾಮದ ರೇವಣಸಿದ್ದೇಶ್ವರ ದೇವಾಸ್ಥಾನದಲ್ಲಿ ತ್ರಿಕೋಟಿ ಶಿವಲಿಂಗ ಪ್ರತಿಷ್ಠಾಪನೆ ನಿಮಿತ್ತ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಪ್ರಸಿದ್ಧ ಸುಕ್ಷೇತ್ರ ರೇವಣಸಿದ್ದೇಶ್ವರ ದೇವಾಲಯ ಕೂಡಾ ಒಂದು ಪುಣ್ಯಕ್ಷೇತ್ರವಾಗಿದೆ. ಇಂತಹ ಪುಣ್ಯಕ್ಷೇತ್ರದ ಆವರಣದಲ್ಲಿ ತ್ರಿಕೋಟಿ ಶಿವಲಿಂಗ ಪ್ರತಿಷ್ಠಾಪನೆ ಮಾಡುತ್ತಿರುವುದು ಉತ್ತರ ಕರ್ನಾಟಕಕ್ಕೆ ಒಂದು ಹೆಮ್ಮೆ.
ಉತ್ತಮ ಕಾರ್ಯಕ್ರಮ ಕೊಡದಿದ್ದರೆ 2028ರಲ್ಲಿ ಜೆಡಿಎಸ್ ಪಕ್ಷ ವಿಸರ್ಜನೆ: ಎಚ್‌ಡಿಕೆ
ಶಿವನ ಆಶೀರ್ವಾದದಿಂದ ನಾನು ಮುಖ್ಯಮಂತ್ರಿಯಾದರೇ ಹೊರ್ತಿ ಗ್ರಾಮ ಒಂದು ಉತ್ತಮ ಪ್ರವಾಸಿ ತಾಣ ಮಾಡಲು ಪ್ರಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಶಿರಶ್ಯಾಡ ಸಂಸ್ಥಾನ ಮಠದ ಮುರುಗೇಂದ್ರ ಶಿವಾಚಾರ್ಯರು, ರೇವಣಸಿದ್ದೇಶ್ವರ ಸಮಿತಿ ಅಧ್ಯಕ್ಷ ಅಣ್ಣಪ್ಪ ಸಾಹುಕಾರ ಖೈನೂರ, ಮುಖಂಡರಾದ ಶ್ರೀಮಂತ ಗಡ್ಡದ, ಬಿ.ಡಿ.ಪಾಟೀಲ, ಶ್ರೀಶೈಲ ಶಿವೂರ, ಸುರೇಶರೂಗಿ, ಶಿವಾನಂದ ಮೇತ್ರಿ, ಚಾಂದ ಮುಲ್ಲಾ, ಧಾನಪ್ಪ ದುರ್ಗದ, ಶಂಕ್ರಪ್ಪ ಕಡಿಮನಿ ಸೇರಿದಂತೆ ಇತರರು ಇದ್ದರು.