ಮುಂಬರಲಿರುವ ಚುನಾವಣೆಯಲ್ಲಿ ಮಾಜಿ ಸಚಿವ, ಗೋಕಾಕ ಕ್ಷೇತ್ರದ ಶಾಸಕ ರಮೇಶ್‌ ಜಾರಕಿಹೊಳಿ ಅವರಿಗೆ ಕೊನೇ ಚುನಾವಣೆ ಅಂತೆ. ಹೀಗೆಂದು ಸ್ವತಃ ರಮೇಶ್‌ ಜಾರಕಿಹೊಳಿ ಅವರೇ ಹೇಳಿಕೊಂಡಿದ್ದಾರೆ. 

ಗೋಕಾಕ (ಜ.30): ಮುಂಬರಲಿರುವ ಚುನಾವಣೆಯಲ್ಲಿ ಮಾಜಿ ಸಚಿವ, ಗೋಕಾಕ ಕ್ಷೇತ್ರದ ಶಾಸಕ ರಮೇಶ್‌ ಜಾರಕಿಹೊಳಿ ಅವರಿಗೆ ಕೊನೇ ಚುನಾವಣೆ ಅಂತೆ. ಹೀಗೆಂದು ಸ್ವತಃ ರಮೇಶ್‌ ಜಾರಕಿಹೊಳಿ ಅವರೇ ಹೇಳಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ಭಾನುವಾರ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಈ ವಿಚಾರ ತಿಳಿಸಿದ ಅವರು, ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ಅಂದುಕೊಂಡಿದ್ದೆ. ಆದರೆ ಆ ಮಹಾನ್‌ ನಾಯಕನ ಮಟ್ಟಹಾಕುವ ಸಲುವಾಗಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇನೆ ಎಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಿರುದ್ಧ ಕಿಡಿಕಾರಿದರು.

ಈ ಚುನಾವಣೆ ನಂತರ ಕಾರ್ಯಕರ್ತರಿಗೆ ಮತ್ತು ಪಕ್ಷದ ಇನ್ನುಳಿದ ನಾಯಕರಿಗೆ ಅವಕಾಶ ಬಿಟ್ಟುಕೊಡುವುದಾಗಿ ಹೇಳಿದ ಅವರು, ಬೆಂಗಳೂರಿನ ಮಹಾನ್‌ ನಾಯಕ ಮಾಧ್ಯಮದಲ್ಲಿ ನಮ್ಮ ಬಗ್ಗೆ ಅಪಪ್ರಚಾರ ಮಾಡಿಸುತ್ತ ಬಂದಿದ್ದಾನೆ. ಕಳೆದ ಬಾರಿ ಕಾರ್ಯಕ್ರಮದಲ್ಲಿ ನಾನು ಸಾಂದರ್ಭಿಕವಾಗಿ ಮಾತನಾಡಿದ್ದನ್ನು ಬೇರೆ ಬೇರೆ ರೀತಿಯಲ್ಲಿ ಮಾಧ್ಯಮಗಳಲ್ಲಿ ಬಿತ್ತರಿಸಲಾಗಿದೆ. ನಾನು ಮಾತನಾಡಲು ಕಾರಣ ಜಿಲ್ಲೆಯ ವಿರೋಧ ಪಕ್ಷದ ಕೆಲವರು ಸಚಿವ ಸ್ಥಾನ ಪಡೆಯುವ ಭ್ರಮೆಯಲ್ಲಿದ್ದಾರೆ. ಆದರೆ ಆ ಕನಸು ನನಸಾಗಲ್ಲ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದರು.

ರಾಯಚೂರಿನಲ್ಲಿ ನಡೆದ ಜೆಡಿಎಸ್‌ ಪಂಚರತ್ನ ಯಾತ್ರೆಗೆ ಸಿಂಧನೂರಿನಲ್ಲಿ ಅದ್ಧೂರಿ ತೆರೆ!

ಕಾಂಗ್ರೆಸ್‌ ಪಕ್ಷದ ನಾಯಕರು ಜಾತಿ, ಜಾತಿಗಳ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಾರೆ. ನಾನು ಪಕ್ಷಾಂತರ ಆಗುವುದಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಅವರ ಮಾತಿಗೆ ಕಿವಿಗೊಡದಿರಿ. ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು, ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯೋಣ. ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು ಪ್ರಮುಖ ನಾಯಕರವರೆಗೂ ಒಳ್ಳೆಯ ಸ್ಥಾನ ಬಿಜೆಪಿ ನೀಡಿದೆ ಎಂದು ತಿಳಿಸಿದರು.

ಶಾ ಬೂಸ್ಟರ್‌ ಡೋಸ್‌ ನೀಡಿದ್ದಾರೆ: ಬೆಳಗಾವಿಗೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಜಿಲ್ಲೆಯ ಎಲ್ಲ ನಾಯಕರ ಸಭೆ ನಡೆಸಿ, ಬೂಸ್ಟರ್‌ ಡೋಸ್‌ ನೀಡಿದ್ದಾರೆ. ಎಲ್ಲ ನಾಯಕರು ವೈಮನಸ್ಸು ಬಿಟ್ಟು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ತಿಳಿಸಿದ್ದು, ಬೆಳಗಾವಿಯಲ್ಲಿ ಕನಿಷ್ಠ ಹದಿನೈದು ಸ್ಥಾನ ಗೆಲ್ಲಿಸಲು ಪ್ರಯತ್ನಿಸುವುದಾಗಿ ವರಿಷ್ಠರಿಗೆ ತಿಳಿಸಿರುವೆ. ಬಿಜೆಪಿ ವರಿಷ್ಠರ ಕನಸು ನನಸು ಮಾಡಲು ನಾನು ಸಿದ್ಧನಿದ್ದೇನೆ. ಶನಿವಾರ ಅಮಿತ್‌ ಶಾ ನೀಡಿದ ಸೂಚನೆಯಂತೆ ಕಾರ್ಯನಿರ್ವಹಿಸುತ್ತೇನೆ ಎಂದು ಇದೇ ವೇಳೆ ರಮೇಶ್‌ ಜಾರಕಿಹೊಳಿ ತಿಳಿಸಿದರು.

ಜಾರಕಿಹೊಳಿ ಕ್ಷಮೆಗೆ ಕೂಡಲ ಶ್ರೀ ಆಗ್ರಹ: ಪಂಚಮಸಾಲಿ 2ಎ ಮೀಸಲಾತಿ ಹೋರಾಟಗಾರರನ್ನು ಪಶುಗಳಿಗೆ ಹೋಲಿಸಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ತಕ್ಷಣ ಕ್ಷಮೆ ಕೋರುವಂತೆ ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದ್ದಾರೆ. ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ 15 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ಕೈಗೊಂಡಿರುವ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಮತ್ತೆ ಬಿಜೆಪಿಗೆ ಬಹುಮತ ಖಚಿತ: ಕೆ.ಎಸ್‌.ಈಶ್ವರಪ್ಪ

ರಮೇಶ್‌ ಜಾರಕಿಹೊಳಿ ಆರಂಭದಿಂದ ನಮ್ಮ ಹೋರಾಟ ಬೆಂಬಲಿಸಿದವರು. ಆದರೆ, ತಮ್ಮ ಭಾಷಣದಲ್ಲಿ 2ಎ ಮೀಸಲಾತಿ ಹೋರಾಟಗಾರರ ಬಗ್ಗೆ ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ಹೋರಾಟದಲ್ಲಿ ಮೂರೂ ಪಕ್ಷದ ಮುಖಂಡರು, ವಿವಿಧ ಸ್ವಾಮೀಜಿಯವರು, ಸಾಹಿತಿಗಳು, ಸಮಾಜದ ಮುಖಂಡರು ಪಾಲ್ಗೊಂಡಿದ್ದಾರೆ. ಜಾರಕಿಹೊಳಿ ಹೇಳಿಕೆಯಿಂದಾಗಿ ಹಲವರಿಗೆ ನೋವಾಗಿದೆ. ಅವರು ತಕ್ಷಣ ತಮ್ಮ ಹೇಳಿಕೆ ಹಿಂಪಡೆದು ಕ್ಷಮೆ ಯಾಚಿಸಬೇಕು ಎಂದು ಶ್ರೀಗಳು ಹೇಳಿದ್ದಾರೆ.