ಸಿದ್ದು, ಡಿಕೆಶಿ ನಡುವೆ ಪೈಪೋಟಿ ಇಲ್ಲ: ನಾಗೇಂದ್ರ, ಚಲುವರಾಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಯಾವುದೇ ಪೈಪೋಟಿ ಇಲ್ಲ. ಪ್ರತಿಪಕ್ಷಗಳು ಆ ರೀತಿ ಭಾವಿಸಿಕೊಳ್ಳಲಿ. ನಾವು ಒಟ್ಟಿಗೆ ಇರುತ್ತೇವೆ ಎಂದು ಕ್ರೀಡಾ ಸಚಿವ ಬಿ.ನಾಗೇಂದ್ರ ಮತ್ತು ಕೃಷಿ ಸಚಿವ ಚಲುವರಾಯಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರು (ಆ.26): ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಯಾವುದೇ ಪೈಪೋಟಿ ಇಲ್ಲ. ಪ್ರತಿಪಕ್ಷಗಳು ಆ ರೀತಿ ಭಾವಿಸಿಕೊಳ್ಳಲಿ. ನಾವು ಒಟ್ಟಿಗೆ ಇರುತ್ತೇವೆ ಎಂದು ಕ್ರೀಡಾ ಸಚಿವ ಬಿ.ನಾಗೇಂದ್ರ ಮತ್ತು ಕೃಷಿ ಸಚಿವ ಚಲುವರಾಯಸ್ವಾಮಿ ಟಾಂಗ್ ಕೊಟ್ಟಿದ್ದಾರೆ. ಶುಕ್ರವಾರ ವಿಧಾನಸೌಧದಲ್ಲಿ ಪ್ರತ್ಯೇಕವಾಗಿ ಸುದ್ದಿಗಾರರ ಜತೆ ಅವರು ಮಾತನಾಡಿದರು. ಇದೇ 27ಕ್ಕೆ ಸರ್ಕಾರ 100 ದಿನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಸಮನ್ವಯದಲ್ಲಿ ಕೆಲಸ ಮಾಡುತ್ತಿದ್ದಾರೆ.
ಪ್ರತಿಪಕ್ಷಗಳ ಆರೋಪಗಳು ಸುಳ್ಳಾಗಿದ್ದು, ನಾವೆಲ್ಲಾ ಒಟ್ಟಾಗಿದ್ದೇವೆ. ಜನರಿಗೆ ಸ್ಪಂದಿಸುವ ರೀತಿಯಲ್ಲಿ ಕೆಲಸ ಮಾಡುತ್ತೇವೆ ಎಂದು ಸಚಿವ ನಾಗೇಂದ್ರ ತಿಳಿಸಿದರು. ಪಕ್ಷದ ತತ್ವ, ಸಿದ್ಧಾಂತ ಒಪ್ಪಿ ಬಂದರೆ ಎಲ್ಲರಿಗೂ ಸ್ವಾಗತ. ಆದರೆ, ಯಾರನ್ನೂ ಬಲವಂತದಿಂದ ಸೇರಿಸಿಕೊಳ್ಳುತ್ತಿಲ್ಲ. ಪಕ್ಷ ಬಿಟ್ಟವರನ್ನು ವಾಪಸ್ ಯಾವ ರೀತಿಯಲ್ಲಿ ಕರೆಸಿಕೊಳ್ಳಬೇಕು ಎಂಬುದನ್ನು ಪಕ್ಷ ತೀರ್ಮಾನಿಸಲಿದೆ. ಲೋಕಸಭೆಯಲ್ಲಿ ನಮ್ಮ ಜಿಲ್ಲೆಯಲ್ಲಿ(ಬಳ್ಳಾರಿ) ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದರು.
ವಿಜಯಪುರ ಲೋಕಸಭೆ ಟಿಕೆಟ್ ಈ ಸಲವೂ ನನಗೇ ಖಚಿತ: ಸಂಸದ ಜಿಗಜಿಣಗಿ
ಸಚಿವ ಚಲುವರಾಯಸ್ವಾಮಿ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಬರಲಿದೆ ಎಂದು ಕೆಲವರು ಭಾವಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಹೊಂದಾಣಿಕೆ ಇಲ್ಲ ಎಂಬುದಾಗಿ ತಿಳಿದುಕೊಂಡಿದ್ದರು. ಆದರೆ, ನಾವೆಲ್ಲರೂ ಒಟ್ಟಿಗೆ ಹೋಗಿ 135 ಸ್ಥಾನಗಳನ್ನು ಗೆದ್ದಿದ್ದೇವೆ. ಈಗಲೂ ಹಾಗೆಯೇ ಅಂದುಕೊಳ್ಳಲಿ, ನಾವು ಒಟ್ಟಿಗೆ ಇರುತ್ತೇವೆ ಎಂದು ತಿರುಗೇಟು ನೀಡಿದರು.
ಕಾವೇರಿ ವಿವಾದಕ್ಕೆ ಮೇಕೆದಾಟು ಪರಿಹಾರ: ‘ಪ್ರಸ್ತುತ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಸೃಷ್ಟಿಯಾಗಿರುವ ಕಾವೇರಿ ನೀರು ಹಂಚಿಕೆ ಸಮಸ್ಯೆಗೆ ಮೇಕೆದಾಟು ಯೋಜನೆಯೊಂದೇ ಪರಿಹಾರ. ಮೇಕೆದಾಟು ಅಣೆಕಟ್ಟು ನಿರ್ಮಾಣವಾದರೆ ಇಂತಹ ಸಮಸ್ಯೆಯೇ ಬರುವುದಿಲ್ಲ. ಈ ಬಗ್ಗೆ ನಾವು ಸುಪ್ರೀಂಕೋರ್ಚ್‌ಗೆ ಮಾಹಿತಿ ನೀಡಿದ್ದೇವೆ. ಈ ಬಗ್ಗೆ ನ್ಯಾಯಾಲಯ ಗಮನ ಹರಿಸಬೇಕು’ ಎಂದು ಜಲಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಅಣೆಕಟ್ಟು ನಿರ್ಮಾಣವಾಗಿದ್ದರೆ ಕಾವೇರಿ ನೀರಿನ ಸಮಸ್ಯೆಯೇ ಉದ್ಭವಿಸುತ್ತಿರಲಿಲ್ಲ. ಕಳೆದ ವರ್ಷ 400 ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರದ ಪಾಲಾಗಿದೆ. ಸ್ವಲ್ಪ ಪ್ರಮಾಣದ ನೀರು ಶೇಖರಿಸಿದ್ದರೂ ಸಮಸ್ಯೆಯಾಗುತ್ತಿರಲಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಚ್ ಗಮನ ಹರಿಸಬೇಕು ಎಂದು ಹೇಳಿದರು.
ನ್ಯಾಯಾಲಯವೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ರಚನೆ ಮಾಡಿದೆ. ಇದು ತಾಂತ್ರಿಕ ಸಮಿತಿಯಾಗಿದ್ದು, ಸದ್ಯ ತಾಂತ್ರಿಕ ಅಂಶಗಳ ಬಗ್ಗೆ ಗಮನ ಹರಿಸಬೇಕು. ರಾಜ್ಯದಲ್ಲಿ ತೀವ್ರ ಬರ ಎದುರಾಗಿ ನೀರಿಲ್ಲದಂತಾಗಿರುವಾಗ ಅಷ್ಟುಪ್ರಮಾಣದ ನೀರನ್ನು ತಮಿಳುನಾಡಿಗೆ ಬಿಡಲು ಆಗುವುದಿಲ್ಲ. ಹೀಗಾಗಿಯೇ ಸುಪ್ರೀಂ ಕೋರ್ಚ್‌ಗೆ ಮೇಲ್ಮನವಿ ಸಲ್ಲಿಸಿದ್ದೇವೆ ಎಂದರು.
ಪೊಲೀಸರ ಕಾರ್ಯವೈಖರಿ ಅರಿಯಲು ಡಿಜಿಪಿ ‘ಮಫ್ತಿ’ ತಂತ್ರ: ಮೂವರು ಸಸ್ಪೆಂಡ್
ಇಂತಹ ಪರಿಸ್ಥಿತಿಯಲ್ಲಿ ಪ್ರಮುಖ ಪರಿಹಾರ ಎಂದರೆ ಅದು ಮೇಕೆದಾಟು ಯೋಜನೆ ಮಾತ್ರ. ಮೇಕೆದಾಟು ಅಣೆಕಟ್ಟು ನೀರನ್ನು ನಾವು ನೀರಾವರಿಗೆ ಬಳಸಲು ಸಾಧ್ಯವಿಲ್ಲ. ಕೇವಲ ಕುಡಿಯುವ ನೀರಿನ ಉಪಯೋಗಕ್ಕೆ ಬಳಸಬಹುದು. ಮೇಕೆದಾಟು ಯೋಜನೆ ಮಾಡಿದರೆ ಇಂತಹ ಸಂಕಷ್ಟದ ಸಮಯದಲ್ಲಿ ಹೆಚ್ಚು ಸಹಾಯಕ್ಕೆ ಬರುತ್ತದೆ. ನಾವು ಸುಪ್ರೀಂ ಕೋರ್ಚ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದೇವೆ. ಸುಪ್ರೀಂ ಕೋರ್ಚ್ ಈ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.