ಪೊಲೀಸರ ಕಾರ್ಯವೈಖರಿ ಅರಿಯಲು ಡಿಜಿಪಿ ‘ಮಫ್ತಿ’ ತಂತ್ರ: ಮೂವರು ಸಸ್ಪೆಂಡ್‌

ತಮ್ಮ ದುಃಖ ದುಮ್ಮಾನ ಹೊತ್ತು ನ್ಯಾಯ ಬಯಸಿ ಪೊಲೀಸ್‌ ಠಾಣೆಗೆ ಬರುವ ನಾಗರಿಕರ ಜೊತೆ ಅಧಿಕಾರಿ ಮತ್ತು ಸಿಬ್ಬಂದಿ ನಡವಳಿಕೆ ಬಗ್ಗೆ ಖುದ್ದು ತಿಳಿದುಕೊಳ್ಳಲು ರಾಜ್ಯಾದ್ಯಂತ ಪೊಲೀಸರಿಂದಲೇ ಮಫ್ತಿ (ಡಿಖಾಯತ್‌) ಕಾರ್ಯಾಚರಣೆ ನಡೆಸಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌ ವರದಿ ಪಡೆದುಕೊಂಡಿದ್ದಾರೆ. 
 

DGP Alok Mohan Mufti strategy to know the functioning of the police gvd

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು (ಆ.26): ತಮ್ಮ ದುಃಖ ದುಮ್ಮಾನ ಹೊತ್ತು ನ್ಯಾಯ ಬಯಸಿ ಪೊಲೀಸ್‌ ಠಾಣೆಗೆ ಬರುವ ನಾಗರಿಕರ ಜೊತೆ ಅಧಿಕಾರಿ ಮತ್ತು ಸಿಬ್ಬಂದಿ ನಡವಳಿಕೆ ಬಗ್ಗೆ ಖುದ್ದು ತಿಳಿದುಕೊಳ್ಳಲು ರಾಜ್ಯಾದ್ಯಂತ ಪೊಲೀಸರಿಂದಲೇ ಮಫ್ತಿ (ಡಿಖಾಯತ್‌) ಕಾರ್ಯಾಚರಣೆ ನಡೆಸಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌ ವರದಿ ಪಡೆದುಕೊಂಡಿದ್ದಾರೆ. 

ಕಾರ್ಯಾಚರಣೆ ವೇಳೆ ಪೊಲೀಸರಿಗೆ ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ದೂರುಗಳು ಸಲ್ಲಿಕೆಯಾಗಿದ್ದು, ಕರ್ತವ್ಯಲೋಪವೆಸಗಿದ ಮೂವರು ಪೊಲೀಸರ ತಲೆದಂಡವಾಗಿದೆ. ಇದೇ ವೇಳೆ ಸಾರ್ವಜನಿಕರ ಸ್ವೀಕರಿಸಲು ಉದಾಸೀನತೆ ತೋರಿದ ಕೆಲ ಪೊಲೀಸರಿಗೆ ನೋಟಿಸ್‌ ಜಾರಿಗೊಂಡಿದ್ದು, ಅವರ ಮೇಲೆ ಶಿಸ್ತು ಕ್ರಮದ ತೂಗುಗತ್ತಿ ತೂಗಾಡುತ್ತಿದೆ.

ಲೋಕಸಭಾ ಚುನಾವಣೆ ಮತ ಪಟ್ಟಿ ಪರಿಷ್ಕರಣೆಗೆ ಬಿಜೆಪಿ ಅಭಿಯಾನ: ಕೇಂದ್ರ ಸಚಿವೆ ಶೋಭಾ

ಠಾಣೆಗಳಲ್ಲಿ ‘ಜನ ಸ್ನೇಹಿ’ ಆಡಳಿತವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮುಂದಾಗಿರುವ ಡಿಜಿಪಿ ಅಲೋಕ್‌ ಮೋಹನ್‌ ಅವರು, ಠಾಣೆಗಳಲ್ಲಿ ಜನಪರ ಆಡಳಿತ ವಾತಾವರಣ ಮೂಡಿಸಲು ಪೊಲೀಸರಿಗೆ ಬಿಸಿ ಮುಟ್ಟಿಸಿದ್ದಾರೆ. ಇದರ ಮೊದಲ ಹಂತವಾಗಿ ಮಫ್ತಿ ಕಾರ್ಯಾಚರಣೆ ನಡೆದಿದೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

‘ಮಫ್ತಿ ಆಪರೇಷನ್‌’ಗೆ ಎಸ್ಪಿ-ಡಿಸಿಪಿಗಳಿಗೆ ಸಾರಥ್ಯ: ಠಾಣೆಗಳಿಗೆ ದೂರು ಕೊಡಲು ಬರುವ ಸಾರ್ವಜನಿಕರೊಂದಿಗೆ ಪೊಲೀಸರು ದರ್ಪ ಮತ್ತು ಅಹಂಕಾರದಿಂದ ನಡೆದುಕೊಳ್ಳುತ್ತಾರೆ. ಜನರಿಂದ ದೂರು ಸ್ವೀಕರಿಸಿ ಎಫ್‌ಐಆರ್‌ ದಾಖಲಿಸಲು ಅನಗತ್ಯ ವಿಳಂಬ ಮಾಡುತ್ತಾರೆ. ಕೆಲವು ಬಾರಿ ರಾಜಕೀಯ ಅಥವಾ ಇತರೆ ಪ್ರಭಾವಗಳಿಗೆ ಒಳಗಾಗಿ ನೊಂದವರಿಂದ ದೂರು ಸ್ವೀಕರಿಸಲು ಪೊಲೀಸರು ನಿರಾಕರಿಸುತ್ತಿದ್ದಾರೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಸಾಮಾನ್ಯವಾಗಿವೆ. ಈ ಆಪವಾದದ ಕಳಂಕ ತೊಳೆಯಲು ಡಿಜಿಪಿ ಅವರು, ಠಾಣೆಗಳ ಸುಧಾರಣೆಗೆ ಶ್ರೀಕಾರ ಹಾಕಿದ್ದಾರೆ. ಠಾಣೆಗಳಲ್ಲಿ ಜನರ ಆಹವಾಲು ಆಲಿಸದೆ ನಿರ್ಲಕ್ಷ್ಯಿಸಿದರೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುತ್ತದೆ ಎಂದಿದ್ದಾರೆ.

ಠಾಣೆಗಳಲ್ಲಿ ಜನರೊಟ್ಟಿಗೆ ಪೊಲೀಸರ ವರ್ತನೆ ತಿಳಿಯಲು ಡಿಖಾಯತ್‌ (ಮಫ್ತಿ) ಕಾರ್ಯಾಚರಣೆ ನಡೆಸಿ ಖುದ್ದ ತಮ್ಮ ಕಚೇರಿಗೆ ವರದಿ ನೀಡುವಂತೆ ಆದೇಶಿಸಿದ ಡಿಜಿಪಿ ಅಲೋಕ್‌ ಮೋಹನ್‌ ಅವರು, ಈ ಕಾರ್ಯಾಚರಣೆಯನ್ನು ನಗರಗಳಲ್ಲಿ ಡಿಸಿಪಿಗಳು ಹಾಗೂ ಜಿಲ್ಲೆಗಳಲ್ಲಿ ಎಸ್ಪಿಗಳು ಮೇಲುಸ್ತುವಾರಿ ನಡೆಸಬೇಕು ಎಂದು ಸೂಚಿಸಿದ್ದರು. ಈ ಸೂಚನೆ ಹಿನ್ನಲೆಯಲ್ಲಿ ಮಫ್ತಿ ಆಪರೇಷನ್‌ ಕೈಗೊಂಡು ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ ಎಂದು ಡಿಜಿಪಿ ಅಲೋಕ್‌ ಮೋಹನ್‌ ತಿಳಿಸಿದ್ದಾರೆ.

ಏನಿದು ಮಫ್ತಿ ಆಪರೇಷನ್‌: ಠಾಣೆಗಳಿಗೆ ಸಾಮಾನ್ಯ ಜನರಂತೆ ದೂರು ಸಲ್ಲಿಸಲು ಬೇರೆ ವಿಭಾಗದ ಪೊಲೀಸರು ಮಫ್ತಿಯಲ್ಲಿ ತೆರಳಿ ಅಲ್ಲಿನ ಪರಿಸ್ಥಿತಿ ಪರಿಶೀಲಿಸುವ ಕಾರ್ಯಾಚರಣೆ ಇದಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಠಾಣೆಗಳಿಗೆ ಸಿಸಿಬಿ ಪೊಲೀಸರು, ಟ್ರಾಫಿಕ್‌ ಠಾಣೆಗಳಿಗೆ ಎಸ್ಪಿ ಅಥವಾ ಡಿಸಿಪಿ ಕಚೇರಿ ಸಿಬ್ಬಂದಿ ಹೋಗಿ ಪರೀಕ್ಷಿಸುವುದಾಗಿದೆ. ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದರೆ, ಜಿಲ್ಲೆಗಳಲ್ಲಿ ವಿಶೇಷ ಶಾಖೆ (ಎಸ್‌ಬಿ) ವಿಭಾಗದ ಅಧಿಕಾರಿಗಳು ಠಾಣೆಗಳ ಭೇಟಿ ನೀಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೂವರು ಅಮಾನತು, 100 ಮಂದಿಗೆ ನೋಟಿಸ್‌: ಈ ಮಫ್ತಿ ಕಾರ್ಯಾಚರಣೆ ರಾಜ್ಯದ ಎಲ್ಲ ಠಾಣೆಗಳಲ್ಲಿ ನಡೆಸಲಾಗಿದೆ. ಈ ಕಾರ್ಯಾಚರಣೆ ವರದಿ ಆಧರಿಸಿ ಸಾರ್ವಜನಿಕರ ದೂರಿಗೆ ಸ್ಪಂದಿಸದ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದ್ದು, 100ಕ್ಕೂ ಹೆಚ್ಚಿನ ಪೊಲೀಸರಿಗೆ ನೋಟಿಸ್‌ ನೀಡಲಾಗಿದೆ ಎಂದು ಡಿಜಿಪಿ ಅಲೋಕ್‌ ಮೋಹನ್‌ ಮಾಹಿತಿ ನೀಡಿದ್ದಾರೆ.

ಅಕ್ರಮ ಕಟ್ಟಡ, ಸೈಟಿಗೆ ದುಪ್ಪಟ್ಟು ಆಸ್ತಿ ತೆರಿಗೆ?: ಸಚಿವ ಈಶ್ವರ ಖಂಡ್ರೆ

ಠಾಣೆಗಳಲ್ಲಿ ಜನ ಸ್ನೇಹಿ ಆಡಳಿತ ಜಾರಿಗೊಳಿಸಲಾಗುತ್ತದೆ. ಮಫ್ತಿ ಕಾರ್ಯಾಚರಣೆ ಪರಿಣಾಮ ಶೇ.100ರಷ್ಟುದೂರು ಸ್ವೀಕಾರ ಪ್ರಕ್ರಿಯೆ ನಡೆದಿದೆ. ತಮ್ಮ ದೂರನ್ನು ಸ್ವೀಕರಿಸಲು ಠಾಣಾಧಿಕಾರಿ ನಿರಾಕರಿಸಿದರೆ ನಾಗರಿಕರು ನೇರವಾಗಿ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಬೇಕು. ಕರ್ತವ್ಯಲೋಪವೆಸಗಿದ ಸಿಬ್ಬಂದಿ ಮೇಲೆ ಕ್ರಮ ಜರುಗಿಸುತ್ತೇವೆ.
- ಅಲೋಕ್‌ ಮೋಹನ್‌, ಡಿಜಿ-ಐಜಿಪಿ

Latest Videos
Follow Us:
Download App:
  • android
  • ios