ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ‘ಬಿ ಫಾರ್ಮ್‌’ ನನಗೇ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. 

ವಿಜಯಪುರ (ಆ.26): ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ‘ಬಿ ಫಾರ್ಮ್‌’ ನನಗೇ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2024ರ ಲೋಕಸಭೆ ಚುನಾವಣೆಯಲ್ಲಿ ನನಗೇ ಟಿಕೆಟ್‌ ದೊರೆಯಲಿದೆ ಎಂದ ಅವರು, ಒಂದೊಮ್ಮೆ ಈಗಲೇ ಲೋಕಸಭೆಗೆ ಚುನಾವಣೆ ಘೋಷಣೆಯಾಗಿ ನನಗೆ ಟಿಕೆಟ್‌ ನೀಡಿದರೆ ಆಗಲೂ ಗೆಲವು ಸಾಧಿಸುತ್ತೇನೆ ಎಂದು ಹೇಳಿದರು. ಇನ್ನು, ನಾನು ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅನುದಾನ ಕೋರಿ ಸರ್ಕಾರಕ್ಕೆ ಸಾಕಷ್ಟು ಬಾರಿ ಪತ್ರ ಬರೆದಿದ್ದೇನೆ. ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯದಲ್ಲಿಯೂ ನನ್ನ ಕೊಡುಗೆ ಸಾಕಷ್ಟಿದೆ. ಹಾಗಾಗಿ, ವಿಜಯಪುರ ವಿಮಾನ ನಿಲ್ದಾಣದ ಕ್ರೆಡಿಟ್‌ ನನಗೇ ಸಲ್ಲುತ್ತದೆ ಎಂದು ಹೇಳಿದರು.

ಕಾರಜೋಳ, ನಾನು ಕುಳಿತು ಮಾತನಾಡುವೆ: ಮಾಜಿ ಸಚಿವ ಗೋವಿಂದ ಕಾರಜೋಳ ಅವರು ವಿಜಯಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿಲ್ಲ. ಒಂದು ವೇಳೆ ಹಾಗೇನಾದರೂ ಇದ್ದರೆ ನಾನು ಅವರು ಕುಳಿತು ಮಾತನಾಡುತ್ತೇವೆ ಎಂದು ಸಂಸದ ರಮೇಶ ಜಿಗಜಿಣಗಿ ಸ್ಪಷ್ಟಪಡಿಸಿದರು. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಲೋಕಸಭಾ ಕ್ಷೇತ್ರದಿಂದ ಗೋವಿಂದ ಕಾರಜೋಳ ಅವರು ಸ್ಪರ್ಧೆ ಮಾಡುತ್ತಾರೆ ಎಂದು ಎಲ್ಲೂ ಹೇಳಿಲ್ಲ. ಅವರು ಹಾಗೂ ನಾನು ಬೇರೆ ಅಲ್ಲ, ಒಂದು ವೇಳೆ ನಿಲ್ಲುತ್ತಾರೆ ಎಂದರೆ ನಿಲ್ಲಲ್ಲಿ. ಹಾಗೇನಿದ್ದರೂ ನಾವಿಬ್ಬರು ಕುಳಿತು ಮಾತನಾಡುತ್ತೇವೆ ಎಂದರು. ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಯಾರೇ ಬಂದು ನಿಲ್ಲಲ್ಲಿ ಎಂದರು.

ಪೊಲೀಸರ ಕಾರ್ಯವೈಖರಿ ಅರಿಯಲು ಡಿಜಿಪಿ ‘ಮಫ್ತಿ’ ತಂತ್ರ: ಮೂವರು ಸಸ್ಪೆಂಡ್‌

ನಾನು ಪತ್ರ ಕೊಟ್ಟಿಲ್ಲ: ವಿಜಯಪುರದ ವಜ್ರಹನುಮಾನ ಬಳಿ ಅಂಡರಪಾಸ್‌ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅಗತ್ಯ ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಇಲಾಖಾ ಅಧಿಕಾರಿಗಳು ಆರ್‌ಒಬಿ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸುತ್ತಿದ್ದಾರೆ, ಈ ಬಗ್ಗೆ ನಾನು ಪತ್ರವೇ ನೀಡಿಲ್ಲ. ಆದರೂ ಸಹ ಪತ್ರ ಸೃಷ್ಟಿಯಾಗಿದೆ. ಆ ಪತ್ರ ನಕಲಿಯೋ ಅಸಲಿಯೋ ಗೊತ್ತಿಲ್ಲ. ನಾನಂತೂ ಪತ್ರ ಕೊಟ್ಟಿಲ್ಲ. ಈ ಬಗ್ಗೆ ಮುಂದೆ ನೋಡೋಣ. ವಜ್ರಹನುಮಾನದಲ್ಲಿ ಅಂಡರ್‌ಪಾಸ್‌ ನಿರ್ಮಿಸಿದರೆ ಸೂಕ್ತ. ಹೀಗಾಗಿ ಅಂಡರ್‌ ಪಾಸ್‌ ನಿರ್ಮಾಣಕ್ಕೆ ಕ್ರಮ ಜರುಗಿಸಲಾಗುವುದು ಹೊರತು ಆರ್‌ಒಬಿ ಅಲ್ಲ ಎಂದರು.