Asianet Suvarna News Asianet Suvarna News

ಮೈಸೂರು, ಚಾಮರಾಜನಗರ ಎರಡೂ ಕ್ಷೇತ್ರಗಳಲ್ಲೂ ಹಾಲಿ ಸಂಸದರ ಸ್ಪರ್ಧೆ ಇಲ್ಲ

ಮೈಸೂರಿನಿಂದ ಈವರೆಗೆ ಹನ್ನೊಂದು, ಚಾಮರಾಜನಗರದಿಂದ ಆರು ಮಂದಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಈ ಪೈಕಿ ಮೈಸೂರಿನಲ್ಲಿ ಮೂವರು ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. ಚಾಮರಾಜನಗರದಲ್ಲಿ ಇಬ್ಬರು ಕಾಂಗ್ರೆಸ್‌ ಪರ, ಒಬ್ಬರು ತಟಸ್ಥರಾಗಿದ್ದಾರೆ.

there is no contest current MPs from mysuru and chamarajanagar Loksabha constituency rav
Author
First Published Apr 12, 2024, 9:07 AM IST

- ಅಂಶಿ ಪ್ರಸನ್ನಕುಮಾರ್‌
ಮೈಸೂರಿನಿಂದ ಈವರೆಗೆ ಹನ್ನೊಂದು, ಚಾಮರಾಜನಗರದಿಂದ ಆರು ಮಂದಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಈ ಪೈಕಿ ಮೈಸೂರಿನಲ್ಲಿ ಮೂವರು ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. ಚಾಮರಾಜನಗರದಲ್ಲಿ ಇಬ್ಬರು ಕಾಂಗ್ರೆಸ್‌ ಪರ, ಒಬ್ಬರು ತಟಸ್ಥರಾಗಿದ್ದಾರೆ.

ಮೈಸೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದವರ ಪೈಕಿ ಎಂ.ಎಸ್‌. ಗುರುಪಾದಸ್ವಾಮಿ, ಎನ್‌. ರಾಚಯ್ಯ, ಎಂ. ಶಂಕರಯ್ಯ, ಎಸ್‌.ಎಂ. ಸಿದ್ದಯ್ಯ, ಎಚ್‌.ಡಿ. ತುಳಸಿದಾಸ್‌, ಎಂ. ರಾಜಶೇಖರಮೂರ್ತಿ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಚಂದ್ರಪ್ರಭಾ ಅರಸು ಅವರು ಈಗ ಬದುಕಿಲ್ಲ.

ಮಾಜಿ ಸಂಸದರಾದ ಸಿ.ಎಚ್‌. ವಿಜಯಶಂಕರ್, ಎಚ್. ವಿಶ್ವನಾಥ್‌ [ಹಾಲಿ ವಿಧಾನ ಪರಿಷತ್‌ ಸದಸ್ಯರು], ಹಾಲಿ ಸಂಸದರಾದ ಪ್ರತಾಪ್‌ ಸಿಂಹ ಅವರು ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಯದುವಂಶದ ಋಣ ತೀರಿಸುವ ಸಮಯ ಬಂದಿದೆ, ಪ್ರಚಾರಕ್ಕೆ ಹೋಗುತ್ತೇನೆ: ಎಚ್.ವಿಶ್ವನಾಥ್

ವಿಜಯಶಂಕರ್‌ ಅವರು ಒಂದು ಬಾರಿ ಬಿಜೆಪಿಯಿಂದ ಹುಣಸೂರು ಶಾಸಕ, ಎರಡು ಬಾರಿ ಮೈಸೂರಿನಿಂದ ಸಂಸದರು. ಒಮ್ಮೆ ಪೂರ್ಣಾವಧಿಗೆ ವಿಧಾನ ಪರಿಷತ್‌ ಸದಸ್ಯರು ಹಾಗೂ ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಸಣ್ಣ ಕೈಗಾರಿಕೆ ಹಾಗೂ ಅರಣ್ಯ ಖಾತೆ, ಚಾಮರಾಜನಗರ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ನಂತರ 2014 ರಲ್ಲಿ ಹಾಸನದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು. 2019 ರಲ್ಲಿ ಕಾಂಗ್ರೆಸ್‌ ಸೇರಿ ಲೋಕಸಭಾ ಚುನಾವಣೆಯಲ್ಲಿ ಮೈಸೂರಿನಿಂದಲೇ ಸ್ಪರ್ಧಿಸಿ ಸೋತರು. ಮತ್ತೆ ಬಿಜೆಪಿಗೆ ಮರಳಿ, 2023ರ ಚುನಾವಣೆಯಲ್ಲಿ ಪಿರಿಯಾಪಟ್ಟಣದಿಂದ ಸ್ಪರ್ಧಿಸಿ ಸೋತರು. ಈಗ ಬಿಜೆಪಿಯಲ್ಲಿಯೇ ಇದ್ದು, ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಎಚ್. ವಿಶ್ವನಾಥ್‌ ಅವರು ಕೆ.ಆರ್‌. ನಗರದಿಂದ ಕಾಂಗ್ರೆಸ್‌ ಟಿಕೆಟ್‌ ಮೇಲೆ ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾಗಿ, ಎಂ. ವೀರಪ್ಪ ಮೊಯ್ಲಿ, ಎಸ್‌.ಎಂ. ಕೃಷ್ಣ ಸಂಪುಟದಲ್ಲಿ ಕ್ರಮವಾಗಿ ಕನ್ನಡ ಮತ್ತು ಸಂಸ್ಕತಿ, ಅರಣ್ಯ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ, ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದರು. ನಂತರ 2009 ರಲ್ಲಿ ಮೈಸೂರಿನಿಂದ ಕಾಂಗ್ರೆಸ್‌ ಟಿಕೆಟ್‌ ಮೇಲೆ ಲೋಕಸಭೆಗೆ ಆಯ್ಕೆ. 2014 ರಲ್ಲಿ ಸೋಲು. 2018 ರಲ್ಲಿ ಜೆಡಿಎಸ್‌ ಸೇರಿ ಹುಣಸೂರಿನಿಂದ ಶಾಸಕರಾದರು. 2019 ರಲ್ಲಿ ಬಿಜೆಪಿ ಸೇರಿ, ಉಪ ಚುನಾವಣೆಯಲ್ಲಿ ಸೋತರು. ಬಿಜೆಪಿ ಸರ್ಕಾರ ಇದ್ದಾಗ ಸಾಹಿತ್ಯ ಕೋಟಾದಲ್ಲಿ ವಿಧಾನಪರಿಷತ್‌ ಸದಸ್ಯರಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದ ನಂತರ ಆ ಕಡೆ ವಾಲಿದ್ದರು. ಮೈಸೂರಿನಿಂದ ಟಿಕೆಟ್‌ಗೆ ಯತ್ನಿಸಿದ್ದರು. ಸಿಗಲಿಲ್ಲ. ಹೀಗಾಗಿ ಈಗ ಬಿಜೆಪಿ ಪರ ಪ್ರಚಾರದಲ್ಲಿ ನಿರತರಾಗಿದ್ದಾರೆ.

2014, 2019 ರಲ್ಲಿ ಮೈಸೂರಿನಿಂದ ಸತತ ಎರಡು ಬಾರಿ ಆಯ್ಕೆಯಾಗಿದ್ದ ಹಾಲಿ ಸಂಸದ ಪ್ರತಾಪ್‌ ಸಿಂಹ ಅವರಿಗೆ ಈ ಬಾರಿ ಟಿಕೆಟ್‌ ಸಿಕ್ಕಿಲ್ಲ. 1989ರ ನಂತರ ಅಂದರೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ನಂತರ ಸತತ ಎರಡನೇ ಬಾರಿ ಆಯ್ಕೆಯಾಗಿದ್ದ ಪ್ರತಾಪ್‌ ಸಿಂಹ ಅವರಿಗೆ ಈ ಬಾರಿ ಟಿಕೆಟ್‌ ಸಿಕ್ಕಿ, ಗೆದ್ದಿದ್ದಲ್ಲಿ ಎಚ್‌.ಡಿ. ತುಳಸಿದಾಸ್‌ ನಂತರ ಸತತ ಮೂರು ಬಾರಿ ಆಯ್ಕೆಯಾದ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದರು. ಟಿಕೆಟ್‌ ಜೊತೆಗೆ ಹ್ಯಾಟ್ರಿಕ್‌ ಸಾಧಿಸುವ ಕನಸು ಭಗ್ನವಾಗಿದೆ. ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಚಾಮರಾಜನಗರದಿಂದ ಆಯ್ಕೆಯಾದವರಲ್ಲಿ ಎಸ್‌.ಎಂ. ಸಿದ್ದಯ್ಯ, ಬಿ. ರಾಚಯ್ಯ, ಆರ್‌. ಧ್ರುವನಾರಾಯಣ ಈಗ ಬದುಕಿಲ್ಲ. ಚಾಮರಾಜನಗರದಿಂದ ಆರು ಬಾರಿ ಸಂಸದ, ನಂಜನಗೂಡಿನಿಂದ ಎರಡು ಬಾರಿ ಶಾಸಕ, ಕೇಂದ್ರ ಹಾಗೂ ರಾಜ್ಯದಲ್ಲಿ ಮಂತ್ರಿಯಾದ ಹೆಗ್ಗಳಿಕೆ ಹೊಂದಿರುವ ಹಾಲಿ ಸಂಸದ ವಿ. ಶ್ರೀನಿವಾಸಪ್ರಸಾದ್‌ ಈ ಬಾರಿ ಸ್ಪರ್ಧಿಸಿಲ್ಲ. ಅವರು ಚುನಾವಣಾ ರಾಜಕಾರಣದಿಂದ ನಿವೃತ್ತರಾಗಿದ್ದಾರೆ. ಅವರ ನಿವಾಸಕ್ಕೆ ಕಾಂಗ್ರೆಸ್‌ ಹಾಗೂ ಬಿಜೆಪಿ ಮುಖಂಡರು ಲಗ್ಗೆ ಹಾಕಿ, ತಮ್ಮನ್ನು ಬೆಂಬಲಿಸುವಂತೆ ಕೋರಿದ್ದರೂ ಅವರು ತಟಸ್ಥರಾಗಿದ್ದಾರೆ. ಆದರೆ ಅವರ ಸಹೋದರ ರಾಮಸ್ವಾಮಿ ಸೇರಿದಂತೆ ಬೆಂಬಲಿಗರು ಕಾಂಗ್ರೆಸ್‌ ಸೇರಿದ್ದಾರೆ. ಅವರ ಅಳಿಯ ಬಿ. ಹರ್ಷವರ್ಧನ್‌ ನಂಜನಗೂಡಿನ ಮಾಜಿ ಶಾಸಕರಾಗಿದ್ದು, ಕ್ಷೇತ್ರದಲ್ಲಿ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ.

Lok Sabha Election 2024: ಬೆಂಗಳೂರು ಬದಲು ಏ.14ಕ್ಕೆ ಮೈಸೂರಲ್ಲಿ ಮೋದಿ ರ್‍ಯಾಲಿ

1996, 1998- ಎರಡು ಬಾರಿ ಸಂಸದರಾಗಿದ್ದ ಎ. ಸಿದ್ದರಾಜು ನಂತರ ಎರಡು ಚುನಾವಣೆಯಲ್ಲಿ ಸೋತರು. 2004 ರಲ್ಲಿ ಜೆಡಿಎಸ್‌ ಟಿಕೆಟ್‌ ಮೇಲೆ ಗೆದ್ದಿದ್ದ ಕಾಗಲವಾಡಿ ಶಿವಣ್ಣ ನಂತರ ಕಾಂಗ್ರೆಸ್‌ ಕಡೆ ವಾಲಿದರೂ ಟಿಕೆಟ್‌ ಸಿಗಲಿಲ್ಲ. ಈ ಇಬ್ಬರು ಕಾಂಗ್ರೆಸ್‌ ನಲ್ಲಿಯೇ ಇದ್ದು, ಆಗಾಗ್ಗೆ ಸಭೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

2009, 2013. 2018 ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಧ್ರುವನಾರಾಯಣ ಅವರ ಪಾಲಾಯಿತು. ಈ ಪೈಕಿ ಮೊದಲೆರಡು ಬಾರಿ ಗೆದ್ದಿದ್ದ ಧ್ರುವನಾರಾಯಣ ಅವರು ಈಗ ಬದುಕಿಲ್ಲ. ಈ ಬಾರಿ ಟಿಕೆಟ್‌ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಪುತ್ರ ಸುನಿಲ್‌ ಬೋಸ್‌ ಪಾಲಾಗಿದೆ

Follow Us:
Download App:
  • android
  • ios