Lok Sabha Election 2024: ಬೆಂಗಳೂರು ಬದಲು ಏ.14ಕ್ಕೆ ಮೈಸೂರಲ್ಲಿ ಮೋದಿ ರ್‍ಯಾಲಿ
ಮೊದಲ ಹಂತದ ಲೋಕಸಭಾ ಚುನಾವಣೆಗೆ ಬಿಜೆಪಿ ಪರ ಪ್ರಚಾರ ಕೈಗೊಳ್ಳುವ ಉದ್ದೇಶದಿಂದ ಪ್ರಧಾನಿ ಮೋದಿ ಅವರು ರಾಜ್ಯದಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದು, ಮೈಸೂರು ಮತ್ತು ಮಂಗಳೂರಿನಲ್ಲಿ ಪ್ರಚಾರ ನಡೆಸಲಿದ್ದಾರೆ.
ಬೆಂಗಳೂರು(ಏ.11): ಈ ತಿಂಗಳ 14ರಂದು ಕರ್ನಾಟಕದಲ್ಲಿ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಪ್ರವಾಸದಲ್ಲಿ ಕೊಂಚ ಮಾರ್ಪಾಟಾಗಿದೆ. ಮೊದಲ ಹಂತದ ಲೋಕಸಭಾ ಚುನಾವಣೆಗೆ ಬಿಜೆಪಿ ಪರ ಪ್ರಚಾರ ಕೈಗೊಳ್ಳುವ ಉದ್ದೇಶದಿಂದ ಪ್ರಧಾನಿ ಮೋದಿ ಅವರು ರಾಜ್ಯದಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದು, ಮೈಸೂರು ಮತ್ತು ಮಂಗಳೂರಿನಲ್ಲಿ ಪ್ರಚಾರ ನಡೆಸಲಿದ್ದಾರೆ.
ಈ ಮೊದಲು ಬೆಂಗಳೂರಿನಲ್ಲಿ ಕಾರ್ಯಕ್ರಮ ಎಂದು ಹೇಳಲಾಗಿತ್ತು. ಇದೀಗ ಅದನ್ನು ಮೈಸೂರಿಗೆ ಸ್ಥಳಾಂತರಗೊಂಡಿದೆ. ಬೆಂಗಳೂರಿನಲ್ಲಿ ಈ ತಿಂಗಳ 19ರಂದು ಮೋದಿ ಅವರು ಸಮಾವೇಶದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
Watch Video: ಹೇಗಿರಲಿದೆ ಮೋದಿ ರಾಜ್ಯ ಪ್ರವಾಸದ ಇಂಪ್ಯಾಕ್ಟ್..? ದಕ್ಷಿಣ ಭದ್ರಕೋಟೆಯ ಮೇಲೆ ಪ್ರಧಾನಿ ಕಣ್ಣು!
14ರಂದು ಮೈಸೂರಿನಲ್ಲಿ ಸಂಜೆ 4 ಗಂಟೆಗೆ ಮೋದಿ ಅವರು ಮಹಾರಾಜ ಕಾಲೇಜು ಮೈದಾನದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಲೋಕಸಭಾ ಕ್ಷೇತ್ರಗಳ ಕಾರ್ಯಕರ್ತರ ಮತ್ತು ಸಾರ್ವಜನಿಕರ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಅದೇ ದಿನ ಸಂಜೆ ಸಂಜೆ 6 ಗಂಟೆಗೆ ಮಂಗಳೂರಿನಲ್ಲಿ ನಾರಾಯಣಗುರು ವೃತ್ತದಿಂದ ನವಭಾರತ್ ವೃತ್ತದವರೆಗೆ ಮೋದಿ ಅವರು ಒಂದೂವರೆ ಕಿ.ಮೀ. ರೋಡ್ ಶೋ ನಡೆಸಲಿದ್ದಾರೆ. ಈ ಎರಡೂ ಕಾರ್ಯಕ್ರಮಗಳ ಯಶಸ್ಸಿಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಬಿಜೆಪಿಯ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಹಾಗೂ ಶಾಸಕ ವಿ.ಸುನೀಲ್‌ಕುಮಾರ್ ತಿಳಿಸಿದ್ದಾರೆ.