ಬರಗಾಲ ಇದೆ, ಬೆಳೆ ಹಾಕಬೇಡಿ ಅಂತ ರೈತರಿಗೆ ಹೇಳಿದ್ದೇವೆ: ಡಿ.ಕೆ.ಶಿವಕುಮಾರ್
ರಾಜ್ಯದ ರೈತರ ಹಾಲಿ ಬೆಳೆಗಳನ್ನು ರಕ್ಷಣೆ ಮಾಡಿದ್ದು, ಬರ ಘೋಷಣೆ ಮಾಡಿರುವುದರಿಂದ ಮುಂದೆ ಯಾವುದೇ ಬೆಳೆ ಹಾಕಬಾರದು ಎಂಬುದಾಗಿ ತಿಳಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು (ಅ.07): ರಾಜ್ಯದ ರೈತರ ಹಾಲಿ ಬೆಳೆಗಳನ್ನು ರಕ್ಷಣೆ ಮಾಡಿದ್ದು, ಬರ ಘೋಷಣೆ ಮಾಡಿರುವುದರಿಂದ ಮುಂದೆ ಯಾವುದೇ ಬೆಳೆ ಹಾಕಬಾರದು ಎಂಬುದಾಗಿ ತಿಳಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ಭಾಗದ ಪ್ರದೇಶದಲ್ಲಿ ನಮಗೆ 106 ಟಿಎಂಸಿ ನೀರಿನ ಅಗತ್ಯವಿದ್ದು, ಸದ್ಯಕ್ಕೆ 56 ಟಿಎಂಸಿ ನೀರು ಇದೆ. ಎರಡು ದಿನಗಳ ಕಾಲ ಮಳೆ ಬಿದ್ದ ಕಾರಣ ಅ.1ರಂದು 13 ಸಾವಿರ, 2ರಂದು 23 ಸಾವಿರ, 3ರಂದು 20 ಸಾವಿರ, 4ರಂದು 15 ಸಾವಿರ, 5ರಂದು 10 ಸಾವಿರ ಕ್ಯುಸೆಕ್ ನೀರು ಒಳಹರಿವು ಮೂಲಕ ಸಂಗ್ರಹವಾಗಿದೆ ಎಂದು ವಿವರಿಸಿದರು.
ರಾಜ್ಯದ ರೈತರ ಹಾಲಿ ಬೆಳೆಗಳನ್ನು ರಕ್ಷಣೆ ಮಾಡಿದ್ದು ಸಮಾಧಾನದ ವಿಷಯವಾಗಿದೆ. ಬರ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮುಂದೆ ಯಾವುದೇ ಬೆಳೆ ಹಾಕಬಾರದು ಎಂದು ರೈತರಿಗೆ ತಿಳಿಸಲಾಗಿದೆ. ಮುಂದಿನ ತಿಂಗಳು ಮತ್ತೆ ಮಳೆಯಾಗುವ ಸಾಧ್ಯತೆ ಇದೆ. ಈ ವರ್ಷ ಸಂಕಷ್ಟದ ವರ್ಷವಾಗಿದೆ ಎಂದು ಹೇಳಿದರು. ತಮಿಳುನಾಡಿಗೆ 3 ಸಾವಿರ ಕ್ಯುಸೆಕ್ ನೀರು ಹರಿಬಿಡಲು ನಮ್ಮಲ್ಲಿ ನೀರಿಲ್ಲ ಎಂದು ಮೇಲ್ಮನವಿ ಸಲ್ಲಿಸಿದ್ದೇವೆ. ಮೇಕೆದಾಟು ಯೋಜನೆ ಜಾರಿ ಪ್ರಸ್ತಾವನೆಯನ್ನು ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಕಾನೂನು ಸಿದ್ಧತೆ ಮಾಡುತ್ತಿದ್ದೇವೆ. ಹಂತಹಂತವಾಗಿ ನಾವು ಹೋಗಬೇಕಾಗಿದೆ ಎಂದರು.
ಹಿಂದುಳಿದ ಸಮುದಾಯಕ್ಕೆ ರಾಜಕೀಯ ಮೀಸಲಾತಿ: ನ್ಯಾ.ಭಕ್ತವತ್ಸಲ ಹೇಳಿದ್ದೇನು?
ಸ್ಥಗಿತಗೊಂಡ ಕಾಮಗಾರಿಗಳಿಗೆ ಚಾಲನೆ: ಇಲಾಖೆಗಳಿಂದ ಅನುಮತಿ ಪಡೆದು ಸ್ಥಗಿತವಾಗಿರುವ ಬೆಂಗಳೂರಿನ ಅಭಿವೃದ್ಧಿ ಕಾಮಗಾರಿಗಳನ್ನು ಪುನರಾರಂಭಿಸಲು ಸೂಚನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ವಸಂತನಗರದ ಅಯ್ಯಪ್ಪಸ್ವಾಮಿ ದೇವಾಸ್ಥಾನದ ಪಕ್ಕ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಹಾಗೂ ಜಯಮಹಲ್ ಪ್ಯಾಲೇಸ್ ರಸ್ತೆಯ ಅಗಲೀಕರಣ ಹಾಗೂ ಅಂಡರ್ ಗ್ರೌಂಡ್ ಕೇಬಲ್ ಅಳವಡಿಕೆ ಕಾಮಗಾರಿಯನ್ನು ಪರಿಶೀಲಿಸಿದ ಅವರು, ತ್ವರಿತವಾಗಿ ಈ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ಟೆಂಡರ್ ಶ್ಯೂರ್ ಕಾಮಗಾರಿ ನಡೆದಿವೆ. ಟೆಂಡರ್ ಶ್ಯೂರ್ ರಸ್ತೆಯಲ್ಲಿ ಮುಂದೆ ಯಾರೂ ಕೂಡ ರಸ್ತೆಯನ್ನು ಅಗೆಯಬಾರದು. ಕೇಬಲ್ ಲೈನ್ ಎಳೆದುಕೊಂಡು ಹೋಗಲು ಅವಕಾಶ ಮಾಡಿಕೊಡಲಾಗಿದೆ. ಅವುಗಳನ್ನು ಯಾರೂ ಉಪಯೋಗಿಸುತ್ತಿಲ್ಲ. ನಾವು ಎಲ್ಲೆಲ್ಲಿ ಈ ವ್ಯವಸ್ಥೆ ಕಲ್ಪಿಸಿದ್ದೇವೆ, ಅಲ್ಲೆಲ್ಲಾ ಇದರ ಕಾನೂನುಬದ್ಧವಾಗಿ ಉಪಯೋಗ ಮಾಡಿಕೊಳ್ಳಬೇಕು. ಬೆಂಗಳೂರಿನ ಅಂದ ಹೆಚ್ಚಿಸಲು ಕೇಬಲ್‌ಗಳನ್ನು ಅಂಡರ್ ಗ್ರೌಂಡ್‌ನಲ್ಲಿ ತೆಗೆದುಕೊಂಡು ಹೋಗಬೇಕು ಎಂದರು.
ಸಿಎಂ ಜತೆ ರಹಸ್ಯ ಮಾತುಕತೆ ನಡೆದಿಲ್ಲ, ನಡೆದರೂ ಹೇಳಲ್ಲ: ಶಾಮನೂರು ಶಿವಶಂಕರಪ್ಪ
ಮಳೆ ನೀರು ರಸ್ತೆಯ ಮೇಲೆ ನಿಲ್ಲಬಾರದು. ಒಳಚರಂಡಿ ಮೂಲಕ ಹರಿದುಹೋಗಬೇಕು. ಅದಕ್ಕಾಗಿ ಈಗಾಗಲೇ ಅನುಮತಿ ನೀಡಲಾಗಿರುವ ಕಾಮಗಾರಿಗಳನ್ನು ಪುನರಾರಂಭಿಸಲು ಸೂಚಿಸಿದ್ದೇನೆ. ಇನ್ನು ರಸ್ತೆ ಗುಂಡಿಗಳ ಬಗ್ಗೆ ಸಾರ್ವಜನಿಕರು ಅಧಿಕಾರಿಗಳಿಗೆ ಮಾಹಿತಿ ನೀಡಬಹುದು. ಕೂಡಲೇ ಅವುಗಳನ್ನು ಸರಿಪಡಿಸಲಾಗುವುದು. ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಗುರುತಿಸಲು ಚರ್ಚೆ ಮಾಡಿದ್ದೇವೆ. ಪೊಲೀಸ್ ಇಲಾಖೆ ಹಾಗೂ ಪಾಲಿಕೆ ಸೇರಿ ರಸ್ತೆಗುಂಡಿಗಳನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಆದ್ಯತೆ ಮೇರೆಗೆ ಗುಂಡಿ ಮುಚ್ಚಿ ಎಂದು ಸೂಚಿಸಿದರು.