Asianet Suvarna News Asianet Suvarna News

ಕರ್ನಾಟಕ ರಾಜಕಾರಣದ ರಾಜಬೀದಿಯಲ್ಲಿ ಪಂಚರತ್ನ ಯಾತ್ರೆ ಸಾಗಿಬಂದ ಹಾದಿ.!

ರಾಷ್ಟ್ರೀಯ ಪಕ್ಷಗಳು ಚುನಾವಣೆಯ ಬಗ್ಗೆ ಯೋಚನೆಯನ್ನೂ ಮಾಡದ ಸಂದರ್ಭದಲ್ಲಿಯೇ ಪ್ರಾದೇಶಿಕ ಪಕ್ಷ ಜೆಡಿಎಸ್‌ ಮುಖ್ಯಸ್ಥ ಕುಮಾರಸ್ವಾಮಿ ಆರಂಭಿಸಿದ ಪಂಚರತ್ನ ಯಾತ್ರೆಯ ಹಾದಿಯನ್ನೊಮ್ಮೆ ನೀವೇ ನೋಡಿ..

The Pancharatna Yatra has passed through the Rajbeedi of Karnataka politics sat
Author
First Published Mar 27, 2023, 11:09 PM IST

ವರದಿ- ಸುರೇಶ್‌ ಎ.ಎಲ್. 

ಆಗಿನ್ನೂ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಚುನಾವಣೆಯ ಬಗ್ಗೆ ಯಾವುದೇ ಸಿದ್ದತೆಗಳನ್ನು ಮಾಡಿಕೊಳ್ಳೊ ಬಗ್ಗೆ ಯೋಚನೆಯನ್ನೂ ಮಾಡಿರಲಿಲ್ಲ. ಸಾಂಪ್ರದಾಯಿಕ ಎದುರಾಳಿಗಳಾದ ಎರಡೂ ಪಕ್ಷಗಳೂ ಕೂಡಾ ಪರಸ್ಪರರ ಮೇಲೆ ಕೆಸರೆರಚಾಟ ಮಾಡಿಕೊಂಡು ಇದ್ದ ಕಾಲವದು. ಆಗಲೇ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಮೈ ಕೊಡವಿಕೊಂಡು ಎದ್ದು ನಿಂತಿತ್ತು. ಸಾರ್ವತ್ರಿಕ ಚುನಾವಣೆಗೆ ಇನ್ನೂ ಏಳು ತಿಂಗಳಿಗೂ ಹೆಚ್ಚು ಕಾಲ ಬಾಕಿ ಇರುವಾಗಲೇ ಇಡೀ ರಾಜ್ಯದ ಜನರನ್ನು ತಲುಪೋ ಪ್ಲಾನ್ ಒಂದನ್ನು ರೆಡಿ ಮಾಡಿಕೊಂಡ ದಳಪತಿ , ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ  ಒಂದು ಗಟ್ಟಿ ನಿರ್ಧಾರ ಮಾಡಿಕೊಂಡು  ಹೊರಟೇ ಬಿಟ್ಟರು..

 ಹಾಗೇ ಒಂದೇ ಮನಸ್ಸಿನಿಂದ ಹೆಜ್ಜೆ ಮುಂದಿಟ್ಟ ಕುಮಾರಸ್ವಾಮಿ ಮನಸ್ಸಿನಲ್ಲಿ ಇದ್ದಿದ್ದು ಒಂದೇ.. ಈ ಬಾರಿಯ ಚುನಾವಣೆ ನಮ್ಮ ಪಕ್ಷಕ್ಕೆ ಮಾಡು ಇಲ್ಲವೇ ಮಡಿ ಎಂಬುದಲ್ಲ ಕೇವಲ ಮಾಡು ಅಷ್ಟೇ.. ಎರಡು ಬಾರಿ ರಾಜ್ಯವನ್ನಾಳಿದ ಕುಮಾರಸ್ವಾಮಿಗೆ ಎರಡೂ ಪಕ್ಷಗಳ ಜೊತೆ ಸಖ್ಯ ಮಾಡಿದ ಅನುಭವವಿದೆ. ಎರಡೂ ಸಲವೂ ಪೂರ್ಣ ಪ್ರಮಾಣದಲ್ಲಿ ಅಧಿಕಾರ ನಡೆಸಲೂ ಆಗದೇ ಇದ್ದರೂ  ಆಡಳಿತದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಹೆಮ್ಮೆಯಿದೆ. ಜನಪರ ಕಾರ್ಯಕ್ರಮಗಳನ್ನು ಕೊಟ್ಟ ಸಂತೃಪ್ತಿಯಿದೆ. ಆದರೂ ನಾಡಿನ ಜನರಿಗಾಗಿ ಇನ್ನೂ ಏನೋ ಮಾಡಬೇಕಿತ್ತು ಎಂಬ ಕೊರಗೂ ಇದೆ. ಅದಕ್ಕಾಗಿಯೇ ಈ ಸಲ ನನಗೂ ಒಂದು ಅವಕಾಶ ಕೊಡಿ ಅಂತಾ ನಾಡಿನ ಜನರ ಬಳಿ ಕೇಳಿಕೊಂಡು ಹೊರಟಿದ್ದಾರೆ.

ಅಂದಹಾಗೆ ತಮ್ಮ ಈ ಕನಸಿಗೆ, ಯೋಜನೆಗೆ , ಜೈತ್ರ ಯಾತ್ರೆಗೆ ಕುಮಾರಸ್ವಾಮಿ ಇಟ್ಟ ಹೆಸರು "ಪಂಚರತ್ನ ಯಾತ್ರೆ" ಇದು ನಾವು ಅಧಿಕಾರಕ್ಕೆ ಬಂದ್ರೆ ನಾಡಿನ ಜನತೆಗೆ , ಅವರ ನೆಮ್ಮದಿಗೆ ಅಂತಾ ನಾವು ಮಾಡಬಹುದಾದ ಕಾರ‍್ಯಕ್ರಮಗಳ ಹೆಸರು. ಪಕ್ಕದ ಆಂದ್ರದಲ್ಲಿ ವೈ ಎಸ್ ರಾಜಶೇಖರ ರೆಡ್ಡಿ ಯ ಪುತ್ರ ಜಗನ್ ಮೋಹನ್ 'ನವರತ್ನಾಲು' ಎಂಬ ಹೆಸರಿನಲ್ಲಿ ಯಾತ್ರೆಯನ್ನು ಮಾಡಿ ಜನರ ಮನಸನ್ನು ಗೆದ್ದಿದ್ದರು. ತಾವು ಅಧಿಕಾರಕ್ಕೆ ಬಂದ್ರೆ ಒಂಭತ್ತು ವಿಭಿನ್ನವಾದ ಯೋಜನೆಗಳನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದ್ದರು. ಈ ಯಾತ್ರೆಯ ಮೂಲಕ ಆಂದ್ರದ ಜನರ ಮನಸ್ಸನ್ನೂ ಗೆದ್ದಿದ್ದರು. ಮುಂದೆ ಆಂಧ್ರದ ಮುಖ್ಯಮಂತ್ರಿ ಗಾದಿಗೂ ಏರಿದರು. ಇದೇ ಕಾರ್ಯಕ್ರಮದ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲೂ ಕೂಡಾ ಕುಮಾರಸ್ವಾಮಿ ರೂಪಿಸಿದ ಯಾತ್ರೆಯೇ ಪಂಚರತ್ನ. 

ಪ್ರಧಾನಿಯಾಗಿ ದೇವೇಗೌಡರ ಸಾಧನೆ ಇಲ್ಲಿದೆ ನೋಡಿ: ನೀವು ಭಾವುಕರಾಗೋದು ಗ್ಯಾರಂಟಿ

ಪಂಚರತ್ನ ಯಾತ್ರೆ ಅಂದ್ರೆ 5 ಅಂಶಗಳ ಒಂದು ಯೋಜನೆ.
ಶಿಕ್ಷಣ, ಆರೋಗ್ಯ, ವಸತಿ, ಮಹಿಳೆ ಮತ್ತು ಯುವನವ ಸಬಲೀಕರಣ, ಹಾಗೂ ರೈತ ಚೈತನ್ಯ ಎಂಬ ಐದು ವಿಭಾಗಗಳಲ್ಲಿ ನಾಡಿನ ಜನತೆಗೆ ಅತ್ಯವಶ್ಯಕವಾಗಿರುವ ಸವಲತ್ತುಗಳನ್ನು ನೀಡುವುದೇ ಪಂಚರತ್ನ ಕಾರ್ಯಕ್ರಮದ ಉದ್ದೇಶ. ಪಂಚರತ್ನ ಕರ‍್ಯಕ್ರಮದ ಒಂದೊಂದೇ ಅಂಶಗಳನ್ನು ನೋಡ್ತಾ ಹೋಗೋದಾದ್ರೆ..

ಮೊದಲನೆಯದಾಗಿ ಶಿಕ್ಷಣ.
ಇವತ್ತು ಖಾಸಗಿ ಶಾಲೆಗಳು ಮಧ್ಯಮ ವರ್ಗದವರನ್ನು ಸುಲಿದು ತಿನ್ನುತ್ತಿವೆ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಮರೀಚಿಕೆಯಾಗಿದೆ. ಹಾಗಾಗಿಯೇ ಜೆಡಿಎಸ್ ಪಕ್ಷಕ್ಕೆ ಪೂರ್ಣ ಬಹುಮತದೊಂದಿಗೆ ಅಧಿಕಾರ ಕೊಟ್ಟರೆ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಬದಲಾವಣೆಗಳನ್ನು ತರುವುದಾಗಿ ಭರವಸೆ ಕೊಡ್ತಾ ಇದ್ದಾರೆ ಕುಮಾರಸ್ವಾಮಿ.. ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಿ ಬಡವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು ಕುಮಾರಸ್ವಾಮಿಯ ಕನಸು..

ಎರಡನೆಯದಾಗಿ ಆರೋಗ್ಯ. 
ಸರ್ಕಾರಿ ಆಸ್ಪತ್ರೆಗಳಲ್ಲಿ ಒಳ್ಳೆಯ ಡಾಕ್ಟರ್ ಗಳು ಸಿಗೋದೇ ಕಷ್ಟ. ಇನ್ನು ಸವಲತ್ತುಗಳಂತೂ ಕೇಳೋದೇ ಬೇಡಾ. ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಅಂತಾ ಹೋದ್ರೆ ಇರೋ ಆಸ್ತಿಯೆಲ್ಲಾ ಮಾರಿಕೊಂಡರೂ ಆಸ್ಪತ್ರೆಯಿಂದ ಆಚೆ ಬರೋ ಹೊತ್ತಿಗೆ ಮೊದಲಿನ ಹಾಗೆ ಆರೋಗ್ಯವಂತರಾಗಿ ಇರ‍್ತೀವಿ ಅನ್ನೋದೇ ಅನುಮಾನ.. ಹಾಗಾಗಿಯೇ ಪಂಚರತ್ನ ಕಾರ್ಯಕ್ರಮದ ಈ ಯೋಜನೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಒಳ್ಳೆಯ ಚಿಕಿತ್ಸೆ, ಮತ್ತಿತರ ಸವಲತ್ತುಗಳನ್ನು ಉಚಿತವಾಗಿ ನೀಡುವಂತೆ ಮಾಡುವುದು ಕುಮಾರಸ್ವಾಮಿಯ ಭರವಸೆ..

ಮೂರನೆಯದಾಗಿ ವಸತಿಯ ಆಸರೆ.
ಪ್ರತಿಯೊಬ್ಬರಿಗೂ ಇರುವ ಸ್ವಂತ ಸೂರಿನ ಕನಸನ್ನು ನನಸು ಮಾಡುವುದು ಈ ಯೋಜನೆಯ ಉದ್ದೇಶ.  ಸ್ವಾತಂತ್ರ್ಯ ಬಂದು ಮುಕ್ಕಾಲು ಶತಮಾನವೇ ಕಳೆದರೂ, ಪ್ರತಿಯೊಬ್ಬರಿಗೂ ಸ್ವಂತ ನೆಲೆ ಕಲ್ಪಿಸುವ ಸರ್ಕಾರಗಳ ಯೋಜನೆಗಳು ಇನ್ನೂ ಅನುಷ್ಟಾನಗೊಂಡಿಲ್ಲ. ಈ ಯೋಜನೆಯ ಮೂಲಕ ಎಲ್ಲರಿಗೂ ಸೂರು ಕಲ್ಪಿಸುವುದು ದಳಪತಿಯ ಮತ್ತೊಂದು ಭರವಸೆ.

ಟ್ರ್ಯಾಲಿ ಕುರ್ಚಿಯಲ್ಲಿ ದೇವೇಗೌಡ ರ್ಯಾಲಿ: ಜೆಡಿಎಸ್‌ಗೆ ಬಹುಮತ ಕೊಡಿಯೆಂದ ಮಾಜಿ ಪ್ರಧಾನಿ
  
ನಾಲ್ಕನೆಯದಾಗಿ ಮಹಿಳಾ ಮತ್ತು ಯವನವ ಸಬಲೀಕರಣ.
ಮಹಿಳೆಯರ ಸ್ವಾವಲಂಬಿ ಬದುಕಿಗೆ ಆಸರೆಯಾಗುವುದು, ಹಾಗೂ ಯುವಕರ ಉದ್ಯೋಗದ ಕನಸನ್ನು ನನಸು  ಮಾಡುವುದು ಕುಮಾರಸ್ವಾಮಿಯ ಭರವಸೆ, ಉದ್ಯೋಗ ದೊರಕಿಸುವುದಕ್ಕಿಂತಲೂ ಸ್ವಂತ ಕಾಲ ಮೇಲೆ ನಿಲ್ಲುವಂತೆ ಪ್ರೇರೇಪಿಸುವ ಕುಮಾರಸ್ವಾಮಿಯ ವಿನೂತನ ಯೋಜನೆಗೆ ಎಲ್ಲ ಕಡೆಯಿಂದಲೂ ಮೆಚ್ಚುಗೆ ಕೂಡಾ ದೊರಕುತ್ತಿದೆ.

ಐದನೆಯ ಯೋಜನೆಯೇ ರೈತ ಚೈತನ್ಯ..
ಇವತ್ತಿಗೂ ತಾವು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ದೊರಕದೇ ರೈತರು ಆತ್ಮಹತ್ಯೆಗಳಿಗೆ ಒಳಗಾಗುತ್ತಿರುವುದು ಒಂದು ರೀತಿಯಲ್ಲಿ ಪ್ರಜಾಪ್ರಭುತ್ವದ ಅಣಕವೇ ಸರಿ. ತಾವು ಮುಖ್ಯಮಂತ್ರಿಯಾಗಿದ್ದ ಅಲ್ಪ ಕಾಲಾವಧಿಯಲ್ಲೇ ಮೈತ್ರಿ ಸರ್ಕಾರದ ನಾನಾ ಪಡಿಪಾಟಲುಗಳ ನಡುವೆಯೇ ರೈತರ ಸಾಲಮನ್ನಾ ಮಾಡಿದ್ದ ಕುಮಾರಸ್ವಾಮಿ , ಈ ಬಾರಿ ಪೂರ್ಣ ಪ್ರಮಾಣದಲ್ಲಿ ಅಧಿಕಾರ ಸಿಕ್ಕರೆ ರೈತರು ಸ್ವಾವಲಂಬಿಗಲಾಗಿ ಬದುಕುವಂತೆ ಮಾಡುತ್ತೇನೆಂಬ ಭರವಸೆಯೊಂದಿಗೆ ಜನರ ಬಳಿ ಹೊರಟಿದ್ದಾರೆ. ಇಷ್ಟೆಲ್ಲಾ ಕನಸುಗಳನ್ನು ಕಟ್ಟಿಕೊಂಡು ಹೊರಟಿರುವ ಕುಮಾರಸ್ವಾಮಿಯ ಈ ಪಂಚರತ್ನ ಯಾತ್ರೆ ಶುರುವಾಗಿದ್ದು ಎಲ್ಲಿಂದ .. ? ನಡೆದುಬಂದ ದಾರಿ ಇದೆಯಲ್ಲಾ ಅದು ಕೂಡಾ ಬಹಳ ಇಂಟರೆಸ್ಟಿಂಗ್ ಆಗಿದೆ. ಈ ನಡುವೆ ಒಂದೆರಡು ದಾಖಲೆಗಳೂ ಆಗಿವೆ ಕಣ್ರೀ.. ಅದೆಲ್ಲಾವನ್ನೂ ಕೇಳ್ತಾ ಇದ್ರೆ ವಾವ್ ಅನಿಸದೇ ಇರದು.

ಎರಡು ಸಲ ಸಿಎಂ ಆದ್ರೂ, ಅಂದುಕೊಂಡ ಹಾಗೆ ಆಡಳಿತ ನಡೆಸಲು ಆಗದೇ ಇದ್ದ ನೋವು ಕುಮಾರಸ್ವಾಮಿ ಮನಸ್ಸಿನಲ್ಲಿ ಇತ್ತು. ರಾಷ್ಟೀಯ ಪಕ್ಷಗಳ ದುರಾಡಳಿತವನ್ನೂ ಅನುಭವಿಸಿಯೂ ಜನರು ಮತ್ತೆ ಮತ್ತೆ ಅದೇ ಕಡೆ ವಾಲುವುದರ ಬಗ್ಗೆ ಜಿಜ್ಞಾಸೆ ಯೂ ಇತ್ತು. ಶತಾಯಗತಾಯ ಈ ಸಲ ಹಾಗಾಗಲು ಬಿಡಬಾರದು, ಒಂದು ಅವಕಾಶ ಸಿಗಲಿ ಸಾಕು ತಾನೇನು ಅನ್ನೊದನ್ನು ಜನರ ಮುಂದೆ ತೋರಿಸುತ್ತೇನೆ ಅಂತಾ ಹೊರಟ ಕುಮಾರಸ್ವಾಮಿ, ಆಯ್ದುಕೊಂಡ ದಾರಿ ಯಾವುದು ಗೊತ್ತಾ.. 

ಕೋವಿಡ್ ನಂತಹಾ ಮಹಾಮಾರಿ ಎಲ್ಲ ಕಡೆ ಹಬ್ಬಿ ಇಡೀ ಮನುಕುಲವನ್ನೇ ಆತಂಕಕ್ಕೆ ಈಡು ಮಾಡಿದ್ದಂತಹಾ ಸಮಯವದು. ಒಂದು ಕಡೆ ಕೋವಿಡ್ ನ ಭಯ ಮತ್ತೊಂದು ಕಡೆ ಲಾಕ್ ಡೌನ್ ಗುಮ್ಮ. ಅಂತಹಾ ಸಂಧರ್ಭದಲ್ಲಿ ಬಿಡದಿಯ ತೋಟದ ಮನೆಯಲ್ಲಿಉಳಿದುಕೊಂಡ ಕುಮಾರಸ್ವಾಮಿ ಪುಸ್ತಕಗಳ ಲೋಕದಲ್ಲಿ ಮುಳುಗಿಹೋದ್ರು. ತಮಗೆ ದೊರೆತ ಬಿಡುವಿನ ಸಮಯವನ್ನು ಚೆನ್ನಾಗಿಯೇ ಬಳಸಿಕೊಂಡ ಕುಮಾರಸ್ವಾಮಿ ಒಂದು ಕ್ಷಣವನ್ನೂ ವ್ಯರ್ಥ ಮಾಡಲಿಲ್ಲ. ಆಗ ಹುಟ್ಟಿದ್ದೇ ಪಂಚರತ್ನ ಯಾತ್ರೆಯ ಕನಸು. ಆದ್ರೆ ಅದು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ತಿಂಗಳಾನುಗಟ್ಟಲೆ ಮನೆಯಿಂದ ದೂರವೇ ಉಳಿಯಬೇಕು. ಹಗಲೂ ರಾತ್ರಿ ಎನ್ನದೇ ರಾಜ್ಯ ಸುತ್ತಬೇಕು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡಬೇಕು. ಮೊದಲೇ ಆರೊಗ್ಯದ ಸಮಸ್ಯೆ ಬೇರೆ, ಆದ್ರೆ ನೀರಿಗೆ ಬಿದ್ದ ಮೇಲೆ ಮಳೆಯೇನು, ಚಳಿಯೇನು.? ಎಲ್ಲದಕ್ಕೂ ಸಿದ್ದರಾಗಿಯೇ ನಿಂತ ಕುಮಾರಸ್ವಾಮಿ ಒಮ್ಮೆ ದೀರ್ಘವಾಗಿ ಉಸಿರೆಳೆದುಕೊಂಡವರೇ ಎದ್ದು ನಿಂತೇ ಬಿಟ್ಟರು.

ನಿಮ್ಮ ಭೇಟಿಗಾಗಿ ದೇವರಲ್ಲಿ ಬೇಡಿಕೊಂಡಿದ್ದ ಕ್ಷಣ ಈಡೇರಿದೆ: ಕಣ್ಣೀರು ಹಾಕಿದ ದೇವೇಗೌಡರು

ತಾವು ಅಂದುಕೊಂಡ ಪಂಚರತ್ನ ಯಾತ್ರೆಯನ್ನು ಕೋಲಾರದ ಮುಳಬಾಗಿಲು ತಾಲೂಕಿನ ಕುರುಡುಮಲೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಆರಂಭ ಮಾಡಿಯೇ ಬಿಟ್ಟರು. ಕುರುಡುಮಲೆಯ ಗಣಪತಿ ಸಾಕಷ್ಟು ಮಹಿಮೆಗಳಿರುವ, ಇಷ್ಟಾರ್ಥಗಳನ್ನು ಪ್ರಸಾದಿಸುವ ದೇವರು ಅನ್ನುವ ನಂಬಿಕೆಯಿದೆ. ರಾಜಕೀಯವಾಗಿ ಕೂಡಾ ಈ ದೇವಸ್ಥಾನಕ್ಕೆ ಒಂದು ಹಿನ್ನಲೆಯಿದೆ. ಎಸ್ ಎಂ ಕೃಷ್ಣ ಅವರು ಇದೇ  ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ತಮ್ಮ ಪಾಂಚಜನ್ಯ ಯಾತ್ರೆಯನ್ನು ಆರಂಭ ಮಾಡ್ತಾರೆ. ಅದು ಅಭೂತಪೂರ್ವ ಯಶಸ್ಸನ್ನು ಕಂಡು ಮುಂದೆ ಎಸ್ ಎಂ ಕೃಷ್ಣ ಮುಖ್ಯಮಂತ್ರಿ ಗಾದಿಗೆ ಏರುತ್ತಾರೆ.. ಎಚ್ ಡಿ ದೇವೇಗೌಡರೂ ಸಹಾ ಇದೇ ದೇವಸ್ಥಾನದಿಂದಲೇ ತಮ್ಮ ಚುನಾವಣಾ ಪ್ರಚಾರವನ್ನು ಆರಂಭ ಮಾಡ್ತಾರೆ, ಅವರೂ ಕೂಡಾ ಮುಖ್ಯಮಂತ್ರಿ ಸ್ಥಾನಕ್ಕೆ ಏರುತ್ತಾರೆ.. ಇದೇ ಸೆಂಟಿಮೆಂಟ್ ಈಗಲೂ ವರ್ಕ್ಔಟ್ ಆಗಬಹುದು ಎಂಬುದು ಕುಮಾರಸ್ವಾಮಿಯ ಲೆಕ್ಕಾಚಾರ ಆಗಿದೆ.

ತಾನೊಂದು ಬಗೆದರೆ ದೈವ ಮತ್ತೊಂದು ಬಗೆಯುತ್ತೆ. ನವೆಂಬರ್ ಒಂದನೇ ತಾರೀಖು ಕೋಲಾರದ ಕುರುಡುಮಲೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಅಲ್ಲಿಂದ ನೇರವಾಗಿ ಮುಳಬಾಗಿಲಿನಲ್ಲಿ ಸಮಾವೇಶ ಮಾಡಬೇಕಿತ್ತು. ಆದ್ರೆ ಅಂದು ಜೋರು ಮಳೆ ಸುರಿದ ಕಾರಣ ಕುರುಡುಮಲೆ ದೇವಸ್ಥಾನದಲ್ಲಿ ಪೂಜೆಗೆ ಮಾತ್ರ ಪಂಚರತ್ನ ಯಾತ್ರೆ ಸೀಮಿತವಾಯಿತು. ತಮ್ಮ ಮಹತ್ವಾಕಾಂಕ್ಷೆ ಕಾರ್ಯಕ್ರಮಕ್ಕೆ ಈ ರೀತಿ ಆರಂಭದಲ್ಲೇ ತೊಡಕು ಉಂಟಾಗಿದ್ದು ಕುಮಾರಸ್ವಾಮಿ ಮನಸ್ಸಿನಲ್ಲಿ ಬೇಸರ ಮೂಡಿಸಿತು. ಆದ್ರೆ ಎಲ್ಲದಕ್ಕೂ ಶಕುನ ನಂಬುವ ಮಾಜಿ ಪ್ರದಾನಿ ದೇವೇಗೌಡರು ಮಳೆ ಬಂದಿದ್ದು ಶುಭಶಕುನ ಅಂತಾ ಹೇಳಿ ಕುಮಾರಸ್ವಾಮಿಗೆ ಧೈರ್ಯ ತುಂಬಿದ್ರು.. 
ಮುಂದೆ ನವೆಂಬರ್ ಹದಿನೆಂಟನೆಯ ತಾರೀಕು ಇದೇ ಮುಳಬಾಗಿಲಿನಲ್ಲಿ ಪಂಚರತ್ನ ಯಾತ್ರೆಯ ಸಮಾವೇಶ ನಡೆಸುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.. ಅಂದು ಆರಂಭವಾದ ಪಂಚರತ್ನ ಯಾತ್ರೆ  ಸಾಗಿದ ರಭಸ ಇದೆಯಲ್ಲಾ, ಮಾಜಿ ಪ್ರಧಾನಿ ದೇವೇಗೌಡರು ಮಳೆಯನ್ನು ಅದ್ಯಾಕೆ ಶುಭ ಶಕುನ ಅಂದ್ರು ಅನ್ನೋದು ಕುಮಾರಸ್ವಾಮಿಗೆ ಅರ್ಥವಾಗಿದ್ದು ಆಗಲೇ..

ಪಂಚರತ್ನ ಯಾತ್ರೆ ಒಂದೊಂದು ದಿನ ಒಂದೊಂದು ವಿಧಾನಸಬಾ ಕ್ಷೇತ್ರದಲ್ಲಿ ಸಾಗಿ ಬರ‍್ತಾ ಇದ್ರೆ ಜನರು ಸಾಗರದಂತೆ ಸೇರತೊಡಗಿದರು. ಬೆಳಿಗ್ಗೆ ಯಿಂದ ಸಂಜೆಯವರೆಗೂ ಪಂಚರತ್ನ ಯಾತ್ರೆಯ ಉದ್ದೇಶ, ತಮ್ಮ ಕನಸುಗಳನ್ನು ಜನರ ಜೊತೆ ಹಂಚಿಕೊಂಡ ಕುಮಾರಸ್ವಾಮಿ ಸಂಜೆ ಅದೇ ಕ್ಷೇತ್ರದ ಒಂದು ಕಡೆ ಗ್ರಾಮವಾಸ್ತವ್ಯ ಮಾಡತೊಡಗಿದರು. ತಾವು ಮೊದಲ ಭಾರಿ ಸಿಎಂ ಆಗಿದ್ದಾಗ ಮಾಡಿದ್ದ ಗ್ರಾಮವಾಸ್ತವ್ಯ ಎಂಬ ಜನಪ್ರಿಯ ಕಾರ್ಯಕ್ರಮವನ್ನೇ ಮತ್ತೆ ಪಂಚರತ್ನ ಯಾತ್ರೆಯಲ್ಲಿ ಕುಮಾರಸ್ವಾಮಿ ಶುರು ಮಾಡಿದ್ರು, ಈ ಮೂಲಕ ಜನರ ಬಳಿಗೇ ಆಡಳಿತ ಎಂಬ ಮಂತ್ರವನ್ನು ಜಪಿಸಿದ್ದರು.

ನಾವು ಐತಿಹಾಸಿಕ ಸಮಾವೇಶ ಮಾಡ್ತೇವೆ. ಇಂಥ ಕಾರ್ಯಕ್ರಮ ಹಿಂದೆ ನಡೆದಿಲ್ಲ; ಮುಂದೆ ನಡೆಯೋದಿಲ್ಲ: ಎಚ್‌ಡಿಕೆ

ಇಡೀ ಪಂಚರತ್ನ ಯಾತ್ರೆಯ ಜವಾಬ್ದಾರಿಯನ್ನು ತಾವೊಬ್ಬರೇ ಹೆಗಲ ಮೇಲೆ ಹೊತ್ತು ನಡೆದ ಕುಮಾರಸ್ವಾಮಿ ಮತ್ಯಾವ ನಾಯಕರನ್ನೂ ನೆಚ್ಚಿ ಕೂರಲಿಲ್ಲ, ಅತ್ತ ತಂದೆ ದೇವೇಗೌಡರು ಅನಾರೋಗ್ಯದ ಕಾರಣ ಮನೆಯಿಂದ ಹೊರಗೇ ಬರಲಿಲ್ಲ. ಒಂದು ಕಡೆ ತಂದೆಯ ಚಿಂತೆ, ಮತ್ತೊಂದು ಕಡೆ ಹಿಡಿದ ಕಾರ್ಯ ಸಾಧಿಸುವ ಹಠ. ಪಂಚರತ್ನ ಯಾತ್ರೆ ಸಾಗುವ ಕ್ಷೇತ್ರಗಳಲ್ಲಿ ಆಯಾ ಕ್ಷೇತ್ರದ ಅಭ್ಯರ್ಥಿಗಳನ್ನಷ್ಟೇ ತಮ್ಮ ಪಕ್ಕ ನಿಲ್ಲಿಸಿಕೊಳ್ತಿದ್ದ ಕುಮಾರಸ್ವಾಮಿ ಆ ಮೂಲಕ ಆ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯ ಸಾಮರ್ಥ್ಯವನ್ನೂ ತಮ್ಮ ಕಣ್ಣಿನಲ್ಲೇ ಅಳೆದುಬಿಡ್ತಾ ಇದ್ರು..

ಪಂಚರತ್ನ ಯಾತ್ರೆ ಮೂಲಕ ಕುಮಾರಸ್ವಾಮಿ ಸಾಗಿ ಬರ‍್ತಾ ಇದ್ರೆ, ಒಂದೊಂದು ಕ್ಷೇತ್ರದಲ್ಲೂ ಜನರು ಬಗೆಬಗೆಯ ಬೃಹತ್ ಹಾರಗಳನ್ನು ಕ್ರೇನ್ ಗಳಿಗೆ ಜೋತುಹಾಕಿ ಕಾಯುತ್ತಿದ್ದರು. ಅವತ್ತಿನ ತನಕ ರಾಜಕಾರಣಿಗಳಿಗೆ ಒಂದು ದೊಡ್ಡ ಆಪಲ್ ಹಾರ ಹಾಕುವುದಷ್ಟೇ ಟ್ರೆಂಡ್ ಆಗಿತ್ತು.. ಆದ್ರೆ ಕುಮಾರಸ್ವಾಮಿಯ ಪಂಚರತ್ನ ಯಾತ್ರೆಯಲ್ಲಿ ಅಭಿಮಾನಿಗಳು ಹೊಸ ಟ್ರೆಂಡ್ ಅನ್ನೇ ಹುಟ್ಟುಹಾಕಿದ್ರು..ಪ್ರತಿಯೊಂದು ಕ್ಷೇತ್ರದಲ್ಲೂ ಆಯಾ ಕ್ಷೇತ್ರದ ವಿಶೇಷತೆಗಳನ್ನು ಕೂಡಿದ್ದ ಹಾರಗಳನ್ನು ಹಾಕುವ ಮೂಲಕ ಕರ್ನಾಟಕದ ಇತಿಹಾಸದಲ್ಲಿ ಹೊಸ ದಾಖಲೆ ಬರೆದ್ರು... ಚಕ್ಕೋತಾ ಹಾರ,ಕ್ಯಾಪ್ಸಿಕಂ ಹಾರ, ಜೋಳದ ಹಾರ, ರಾಗಿ ತೆನೆಯ ಹಾರ, ಅರಿಶಿನ ಕುಂಕುಮದ ಹಾರ, ನಾಣ್ಯಗಳ ಹಾರ, ಶಾಲಾ ಬ್ಯಾಗ್ ಗಳ ಹಾರ, ಹತ್ತಿ ಹಾರ, ಕೈಗಾರಿಕಾ ಸಲಕರಣೆಗಳ ಹಾರ, ಮೆಟ್ರೋ ರೈಲಿನ ಮಾದರಿಯ ಹಾರ.. ಅಬ್ಬಬ್ಬಾ ಹೇಳುತ್ತಾ ಹೋದ್ರೆ ಮುಗಿಯೋದೇ ಇಲ್ಲ.. ದಾಖಲೆ ಅಂತಾ ಸುಮ್ನೆ ಹೇಳ್ತಾ ಇಲ್ಲ, ಅಕ್ಷರಶಃ ದಾಖಲೆಯೇ ಆಗಿ ಹೋಯಿತು.. ಏಷ್ಯಾ ಬುಕ್ ಆಫ್ ರೆಕಾರ್ಡ್, ಹಾಗೂ ಇಂಡಿಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ ಹಾರಗಳು ದಾಖಲೆಯಾಗಿ ಉಳಿದವು.. ಇದೀಗ ಕುಮಾರಸ್ವಾಮಿಗೆ ಹಾಕಿದ ಹಾರಗಳ ಸಂಖ್ಯೆ ಬರೊಬ್ಬರಿ ಒಂದು  ಸಾವಿರಕ್ಕೂ ಹೆಚ್ಚು..

ಪಂಚರತ್ನ ಯಾತ್ರೆಯ ಈ ಮಟ್ಟದ ಸಕ್ಸಸ್  ಅನ್ನು ಬಹುಶಃ ಕುಮಾರಸ್ವಾಮಿ ಕೂಡಾ ಊಹೆ ಮಾಡಿರಲಿಲ್ಲ ಅನ್ಸುತ್ತೆ. ಎಷ್ಟೋ ಕ್ಷೇತ್ರಗಳಲ್ಲಿ ಕುಮಾರಸ್ವಾಮಿಯ ಯಾತ್ರೆ ತಲುಪೋದಕ್ಕೆ ಮಧ್ಯ ರಾತ್ರಿ ಆಗ್ತಿತ್ತು. ಆಗಲೂ ಜನ ಸಾಗರೋಪಾದಿಯಲ್ಲಿ ಕಾದು ಕುಳಿತಿರುತ್ತಿದ್ರು. ಜನ ಬೆಂಬಲಕ್ಕೆ ಕುಮಾರಸ್ವಾಮಿ ಮೂಕವಿಸ್ಮಿತರಾಗಿದ್ದಾರೆ.. ವಿರೋಧಪಕ್ಷಗಳು ಮೂಗಿನ ಮೇಲೆ ಬೆರಳಿಟ್ಟುಕೊಂಡಿವೆ... ಕುಮಾರ ಸ್ವಾಮಿ ಆರಂಭಿಸಿದ ಪಂಚರತ್ನ  ಯಾತ್ರೆಯನ್ನು ಮೊದಲಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಬಹಳ ಲಘುವಾಗಿ ನೋಡಿದ್ದವು, ಆದ್ರೆ ಯಾವಾಗ ಈ ಮಟ್ಟದ ಜನ ಸೇರಲು ತೊಡಗಿದ್ರೋ ಆಗ ಸಣ್ಣಗೆ ನಡುಕ ಹುಟ್ಟಲು ಶುರುವಾಯಿತು. ಪಂಚರತ್ನ ಯಾತ್ರೆ ಮೇಲೆ ಒಂದು ಕಣ್ಣಿಡಲು ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಸೂಚನೆ ಕೊಡಲು ಆರಂಭಿಸಿದ್ರು..

ಜನರಂತೂ ಸಾಗರದಂತೆ ಸೇರತೊಡಗಿದ್ರು. ಕುಮಾರಸ್ವಾಮಿ ಊಟ ಮಾಡಿದ್ದೇ ಸಮಯ, ಮಲಗಿದ್ದೇ ಟೈಮು ಎಂಬಂತೆ ಆಗಿತ್ತು. ಕಾಂಗ್ರೆಸ್ ಮತ್ತು ಬಿಜೆಪಿಯ ಆಂತರಿಕ ಸಭೆಗಳಲ್ಲಿ ಪಂಚರತ್ನ ಯಾತ್ರೆ ಬಗ್ಗೆ ಮಾಹಿತಿ ಕಲೆ ಹಾಕಲು ಸೂಚನೆಗಳು ಬರತೊಡಗಿದವು.. ನೆಗ್ಲೆಕ್ಟ್ ಮಾಡಿ ತಪ್ಪು ಮಾಡಿಬಿಟ್ಟವೇನೋ ಎಂಬಂತೆ ಪೇಚಾಡಲು ಶುರು ಮಾಡಿದ್ರು..ಜೆಡಿಎಸ್ ನ ಭದ್ರ ಕೋಟೆಯಾದ ಹಳೇ ಮೈಸೂರು ಬಾಗವನ್ನು ಹೇಗಾದ್ರೂ ಭೇಧಿಸಬೇಕು ಅಂತಾ ಹೊರಟ್ರು, ತಮ್ಮ ಪಕ್ಷಗಳ ರಾಷ್ಟ್ರೀಯ ನಾಯಕರುಗಳನ್ನು ಕರೆತರಲು ಶುರು ಮಾಡಿದ್ರು. ಪ್ರಧಾನಿ ಮೋದಿಯನ್ನು ಕರೆಸಿ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಲೋಕಾರ್ಪಣೆ ಮಾಡಿಸಿದ್ರು.. ಆಗ ಹುಟ್ಟಿಕೊಂಡಿದ್ದೇ ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭದ ನೀಲನಕ್ಷೆ..

ಯಾವಾಗ ತಮ್ಮದೇ ಭದ್ರ ಕೋಟೆಯಲ್ಲಿ ಬಿಜೆಪಿಯ ನಾಯಕರು ಕೈಯಿಡಲು ಪ್ರಯತ್ನ ಪಟ್ಟರೋ.. ಅದೇ ಜಾಗದಲ್ಲಿಯೇ ತಮ್ಮ ಶಕ್ತಿ ಪ್ರದರ್ಶನ ಮಾಡಲು ಜೆಡಿಎಸ್ ಮುಂದಾಯಿತು. ಪಂಚರತ್ನ ಯಾತ್ರೆಯ ಸಮಾರೋಪ ಕಾರ್ಯಕ್ರಮವನ್ನು ಮೈಸೂರಿನಲ್ಲಿಯೇ ಮಾಡಬೇಕು ಅಂತಾ ಕುಮಾರಸ್ವಾಮಿ ನಿರ್ಧಾರ ಮಾಡಿದ್ರು. ಹತ್ತು ಲಕ್ಷಕ್ಕೂ ಹೆಚ್ಚು ಜನ ಸೇರಿಸಿ ತಮ್ಮ ಶಕ್ತಿಯೇನು ಅನ್ನೋದನ್ನು ಸಾಭೀತು ಪಡಿಸಿದ್ರು. ಆ ಮೂಲಕ ತಮ್ಮ ಭದ್ರಕೋಟೆಯನ್ನು ಯಾರೂ ಅಲುಗಾಡಿಸಲು ಸಾಧ್ಯವೇ ಇಲ್ಲ ಅನ್ನೋ ಸಂದೇಶವನ್ನೂ ಎಲ್ಲಿಗೆ ತಲುಪಬೇಕೋ ಅಲ್ಲಿಗೆ ಸೈಲೆಂಟಾಗಿಯೇ ತಲುಪಿಸಿದ್ರು...

ಪಂಚರತ್ನ ಯಾತ್ರೆಯ ಸಮಾರೋಪ ಕಾರ್ಯಕ್ರಮದ ಪ್ರಮುಖ ಹೈಲೈಟ್ ಅಂದ್ರೆ ಅದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು.. ಅನಾರೊಗ್ಯದ ಕಾರಣ ಕಳೆದ ಸುಮಾರು ತಿಂಗಳುಗಳಿಂದ ವಿಶ್ರಾಂತಿಯಲ್ಲಿದ್ದ ದೇವೇಗೌಡರು ಬಹಳ ಕಾಲದ ನಂತರ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಆ ಮೂಲಕ ತಮ್ಮ ಅಭಿಮಾನಿಗಳನ್ನೂ , ಕಾರ್ಯಕರ್ತರನ್ನೂ ಭಾವನಾತ್ಮಕವಾಗಿ ತಲುಪಿದ್ರು.ಗೌಡರು ಕಾರ್ಯಕ್ರಮದಲ್ಲಿ ಮಾತಾಡ್ತಾ ಇದ್ರೆ ಅಲ್ಲಿ ನೆರೆದಿದ್ದ ಕಾರ್ಯಕರ್ತರಲ್ಲಿ ಮಿಂಚಿನ ಸಂಚಾರವಾಗ್ತಿತ್ತು..

ಕೋಲಾರದ ಕುರುಡುಮಲೆಯಲ್ಲಿ ಆರಂಭವಾದ ಪಂಚರತ್ನ ಯಾತ್ರೆ ಮೈಸೂರಿನಲ್ಲಿ ನಡೆದ ಬೃಹತ್ ಕಾರ್ಯಕ್ರಮದೊಂದಿಗೆ ಸಮಾರೋಪಗೊಂಡಿದೆ. ರಾಜ್ಯದ ಇತಿಹಾಸದಲ್ಲಿ ಕುಮಾರಸ್ವಾಮಿಯ ಪಂಚರತ್ನ ಯಾತ್ರೆ ಹಲವು ದಾಖಲೆಗಳನ್ನು ಮೂಡಿಸಿದೆ. ಕುಮಾರಸ್ವಾಮಿ ಈಗ ಪರೀಕ್ಷೆ ಬರೆದ ವಿದ್ಯಾರ್ಥಿ. ಇನ್ನೇನಿದ್ರೂ ಫಲಿತಾಂಶಕ್ಕಾಗಿ ಕಾಯುವುದಷ್ಟೇ... ರಾಜ್ಯದ ಜನರ ಮನಸ್ಸಿನಲ್ಲಿ ಏನಿದೆಯೋ ತಿಳಿಯಲು ಇನ್ನೆರಡು ತಿಂಗಳಷ್ಟೇ ಬಾಕಿ.

Follow Us:
Download App:
  • android
  • ios