2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸೋಲಿಸಲು ರಣತಂತ್ರ ರೂಪಿಸುತ್ತಿರುವ ವಿಪಕ್ಷಗಳು, ಎನ್‌ಡಿಎ ಮೈತ್ರಿಕೂಟಕ್ಕೆ ಪ್ರತಿಯಾಗಿ ‘ಐಎನ್‌ಡಿಐಎ-ಇಂಡಿಯಾ’ ಎಂಬ ಕೂಟ ರಚನೆಗೆ ನಿರ್ಧರಿಸಿವೆ. 

ಬೆಂಗಳೂರು (ಜು.19): 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸೋಲಿಸಲು ರಣತಂತ್ರ ರೂಪಿಸುತ್ತಿರುವ ವಿಪಕ್ಷಗಳು, ಎನ್‌ಡಿಎ ಮೈತ್ರಿಕೂಟಕ್ಕೆ ಪ್ರತಿಯಾಗಿ ‘ಐಎನ್‌ಡಿಐಎ-ಇಂಡಿಯಾ’ ಎಂಬ ಕೂಟ ರಚನೆಗೆ ನಿರ್ಧರಿಸಿವೆ. ಬೆಂಗಳೂರಿನಲ್ಲಿ ನಡೆದ 2 ದಿನಗಳ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಬಿಜೆಪಿಯ ಸರ್ವಾಧಿಕಾರಿ ಆಡಳಿತದಿಂದ ಅಪಾಯದಲ್ಲಿರುವ ದೇಶದ ಜಾತ್ಯತೀತ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಉಳಿಸಲು, ಜನರ ಸಮಸ್ಯೆಗಳಿಗೆ ಪರಿಹಾರದ ಉದ್ದೇಶದೊಂದಿಗೆ ಮಹಾ ಮೈತ್ರಿಕೂಟ ರಚಿಸಿ ಒಟ್ಟಾಗಿ ಹೋರಾಡುವ ಒಮ್ಮತಕ್ಕೆ ಬರಲಾಗಿದೆ ಎಂದು 26 ವಿಪಕ್ಷಗಳ ನಾಯಕರು ಜಂಟಿ ಘೋಷಣೆ ಮಾಡಿದ್ದಾರೆ.

ಸಂಸತ್ತಿನ ಬಜೆಟ್‌ ಅಧಿವೇಶನಕ್ಕೂ ಎರಡು ದಿನ ಮೊದಲು ನಡೆದ ವಿಪಕ್ಷಗಳ ಈ ಎರಡನೇ ಸಭೆಯು, ಮಹಾ ಮೈತ್ರಿಕೂಟಕ್ಕೆ ‘ಇಂಡಿಯನ್‌ ನ್ಯಾಷನಲ್‌ ಡೆವಲಪ್ಮೆಂಟಲ್‌ ಇನ್‌ಕ್ಲ್ಯೂಸಿವ್‌ ಅಲಯನ್ಸ್‌’ (ಐಎನ್‌ಡಿಐಎ-ಇಂಡಿಯಾ) ಎಂಬ ಹೆಸರನ್ನು ಅಂತಿಮಗೊಳಿಸಿದೆ. ಇದರ ಕೇಂದ್ರ ಕಚೇರಿ ದೆಹಲಿಯಲ್ಲಿ ಇರಲಿದೆ. ಈ ಮೈತ್ರಿಕೂಟದ ನಾಯಕತ್ವ ಯಾರು ವಹಿಸಬೇಕು, ಮೈತ್ರಿ ಕೂಟದ ನಿಲುವು, ರೂಪರೇಷೆ ಮುಂತಾದವುಗಳ ಬಗ್ಗೆ 11 ಮಂದಿ ಸದಸ್ಯರ ಸಮನ್ವಯ ಸಮಿತಿ ನಿರ್ಧರಿಸಲಿದೆ. ಮುಂಬೈನಲ್ಲಿ ನಡೆಯಲಿರುವ ಮೈತ್ರಿಕೂಟದ ಮುಂದಿನ ಸಭೆಯಲ್ಲಿ ಮೇಲ್ಕಂಡ ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಎಂದು ನಾಯಕರು ಮಾಹಿತಿ ನೀಡಿದ್ದಾರೆ.

ಹಿಟ್ಲರ್‌ ಬಗ್ಗೆ ಮಾತನಾಡಿದ್ರೆ ನಿಮಗೇಕೆ ಕೋಪ: ಬಿಜೆಪಿಗೆ ಸಿದ್ದು ಪ್ರಶ್ನೆ

‘ಎನ್‌ಡಿಎ’ ವರ್ಸಸ್‌ ‘ಇಂಡಿಯಾ’: ಸಭೆ ಬಳಿಕ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ವಿಪಕ್ಷ ನಾಯಕರು, ‘ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಸಿದ್ಧಾಂತಗಳನ್ನು ಬುಡಮೇಲು ಮಾಡುವುದು, ಸರ್ಕಾರ ಕೆಡವುದು, ಸರ್ಕಾರ ಖರೀದಿ ಮಾತ್ರವೇ ಕೇಂದ್ರ ಸರ್ಕಾರದ ಕೆಲಸ ಎಂದಾಗಿದೆ. ಅವರ ಸಂವಿಧಾನ ವಿರೋಧಿ ನಡೆ ವಿರುದ್ಧ ಹೋರಾಡಲು ‘ಇಂಡಿಯಾ’ ಕೂಟ ರಚನೆಯಾಗಿದೆ. ಇದು ‘ಎನ್‌ಡಿಎ ವರ್ಸಸ್‌ ಇಂಡಿಯಾ’ ಹೋರಾಟ. ಬಿಜೆಪಿ ಇಂಡಿಯಾವನ್ನು ಚಾಲೆಂಜ್‌ ಮಾಡುತ್ತದೆಯೇ ನೋಡೋಣ. ತಾಯಿ ನೆಲ ಭಾರತದ ನಿಜವಾದ ದೇಶಪ್ರೇಮಿಗಳು ನಾವು. ನಿಮಗೆ ಸಾಧ್ಯವಾದರೆ ನಮ್ಮನ್ನು ಹಿಡಿಯಿರಿ’ ಎಂದು ಬಿಜೆಪಿಗೆ ನಾಯಕರು ಸವಾಲೆಸೆದರು.

ಅಧಿಕಾರಕ್ಕೆ ಮೈತ್ರಿಯಲ್ಲ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ಮೈತ್ರಿ ಸಭೆ ಅಧಿಕಾರಕ್ಕೆ ಅಲ್ಲ. ಸಂವಿಧಾನ, ಪ್ರಜಾಪ್ರಭುತ್ವ, ಸಂವಿಧಾನಾತ್ಮಕ ಸಂಸ್ಥೆಗಳ ಉಳಿವು, ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡಲು ನಡೆಸಿದ್ದೇವೆ. ಬಿಜೆಪಿಯು ಪ್ರಜಾಪ್ರಭುತ್ವ ನಾಶ ಮಾಡಲು ಮುಂದಾಗಿದ್ದು, ಸಂವಿಧಾನದ ಮೇಲೆ ತೀವ್ರ ದಾಳಿ ನಡೆಸುತ್ತಿದೆ. ಸ್ವಾಯತ್ತ ಸಂಸ್ಥೆಗಳಾದ ಸಿಬಿಐ, ಇ.ಡಿ. ಸೇರಿದಂತೆ ಇತರೆ ಸಂಸ್ಥೆಗಳನ್ನು ವಿರೋಧ ಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರ ವಿರುದ್ಧ ಅಸ್ತ್ರವಾಗಿ ಬಳಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶವನ್ನು ರಕ್ಷಿಸಲು ನಾವು ಒಟ್ಟಾಗಿ ಸೇರಿದ್ದೇವೆ. ಆಯಾ ರಾಜ್ಯಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ದೇಶಕ್ಕಾಗಿ ಒಟ್ಟಾಗಿ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು.

ಇಷ್ಟು ಪಕ್ಷಗಳಿವೆಯಾ?: ಪಟನಾದಲ್ಲಿ ನಡೆದ ಮೊದಲ ಸಭೆಯಲ್ಲಿ 15 ಪಕ್ಷಗಳು ಸೇರಿದ್ದು, ಇಂದಿನ ಸಭೆಯಲ್ಲಿ 26 ಪಕ್ಷಗಳು ಸೇರಿದ್ದವು. ನಮ್ಮ ಸಭೆ ಬಳಿಕ ಮೋದಿ ಅವರು ಎನ್‌ಡಿಎ ಮೈತ್ರಿಕೂಟದ ಸಭೆ ಮಾಡಿದ್ದು, 30 ಪಕ್ಷಗಳ ಸಭೆ ಕರೆದಿದ್ದಾರೆ. ನಮ್ಮ ದೇಶದಲ್ಲಿ ಇಷ್ಟೊಂದು ಪಕ್ಷಗಳಿವೆ ಎಂಬುದೇ ನನಗೆ ಗೊತ್ತಿಲ್ಲ. ಅವುಗಳಲ್ಲಿ ಎಷ್ಟುಪಕ್ಷಗಳು ಚುನಾವಣೆ ಆಯೋಗದಲ್ಲಿ ನೋಂದಣಿಯಾಗಿವೆ ಗೊತ್ತಿಲ್ಲ. ನಾನು ಐದು ದಶಕಗಳಿಂದ ರಾಜಕೀಯದಲ್ಲಿದ್ದೇನೆ. ಎನ್‌ಡಿಎದಲ್ಲಿನ ಹಲವು ಪಕ್ಷಗಳ ಹೆಸರನ್ನು ನಾನು ಕೇಳೇ ಇಲ್ಲ ಎಂದು ಖರ್ಗೆ ಹೇಳಿದರು.

ಒಗ್ಗಟ್ಟು ನೋಡಿ ಮೋದಿಗೆ ಹೆದರಿಕೆ: ಇಷ್ಟುದಿನ ಬಿಜೆಪಿಯವರು ತಮ್ಮ ಮೈತ್ರಿ ಪಕ್ಷಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ. ಈಗ ವಿರೋಧ ಪಕ್ಷಗಳ ಒಗ್ಗಟ್ಟು ನೋಡಿ ಹೆದರಿದ್ದಾರೆ. ಇಲ್ಲಿ ಸೇರಿರುವ ನಾಯಕರು ಯಾವುದೋ ಅಧಿಕಾರದ ಆಸೆಗೆ ಸೇರಿಲ್ಲ. ದೇಶದ ಜನರ ಸಮಸ್ಯೆಗೆ ಪರಿಹಾರ ನೀಡಿ, ದೇಶದ ಹಿತಕಾಯಲು ಹೋರಾಟ ಮಾಡುವ ಉದ್ದೇಶದೊಂದಿಗೆ ಸೇರಿದ್ದಾರೆ. ನಾವು ದೇಶದ ಜನರ ಸಮಸ್ಯೆಗಳನ್ನು ಒಂದೊಂದಾಗಿ ತೆಗೆದುಕೊಂಡು ಎಲ್ಲಾ ರಾಜ್ಯಗಳಲ್ಲಿ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ ಎಂದರು.

ಯುಸಿಸಿ ಮಸೂದೆಯೇ ಮಂಡಿಸಿಲ್ಲ: ಯುಸಿಸಿ (ಏಕರೂಪ ನಾಗರಿಕ ಸಂಹಿತೆ) ವಿಚಾರವಾಗಿ ಎಲ್ಲಾ ಪಕ್ಷಗಳು ಒಮ್ಮತಕ್ಕೆ ಬಂದಿವೆಯೇ ಎಂದು ಕೇಳಿದ ಪ್ರಶ್ನೆಗೆ, ಯುಸಿಸಿ ಮಸೂದೆ ನನಗೆ ಸಿಕ್ಕಿಲ್ಲ. ನಿಮ್ಮ ಬಳಿ ಇದ್ದರೆ ಅದನ್ನು ನೀಡಿ. ಮಸೂದೆ ಇಲ್ಲದೆ ಅದರ ಬಗ್ಗೆ ಚರ್ಚೆ ಮಾಡಲು ಹೇಗೆ ಸಾಧ್ಯ? ನಾವು ಮಣಿಪುರ, ನಿರುದ್ಯೋಗ, ಹಣದುಬ್ಬರ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಹೇಗೆ ಹೋರಾಟ ಮಾಡಬೇಕು ಎಂಬ ಬಗ್ಗೆ ಚರ್ಚಿಸಿದ್ದೇವೆ ಎಂದು ಹೇಳಿದರು.

ಸೋನಿಯಾ ಗೈರು: ಪತ್ರಿಕಾಗೋಷ್ಠಿಯಲ್ಲಿ ಸೋನಿಯಾಗಾಂಧಿ, ಎಂ.ಕೆ. ಸ್ಟಾಲಿನ್‌, ನಿತೀಶ್‌ಕುಮಾರ್‌, ಲಾಲುಪ್ರಸಾದ್‌ ಯಾದವ್‌ ಹೊರತು ಪಡಿಸಿ ಸಭೆಯಲ್ಲಿ ಪಾಲ್ಗೊಂಡಿದ್ದ ಉಳಿದ ಎಲ್ಲ ನಾಯಕರು ಹಾಜರಿದ್ದರು.

ಯಾರಾರ‍ಯರು ಭಾಗಿ?: ಇದಕ್ಕೂ ಮುನ್ನ ದಿನವಿಡೀ ನಡೆದ ಸಭೆಯಲ್ಲಿ ಎಐಸಿಸಿ ವರಿಷ್ಠರಾದ ಸೋನಿಯಾಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ, ಟಿಎಂಸಿ ವರಿಷ್ಠರಾದ ಮಮತಾ ಬ್ಯಾನರ್ಜಿ, ಆಪ್‌ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌, ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್‌, ಮಾಜಿ ಮುಖ್ಯಮಂತ್ರಿ ಲಾಲುಪ್ರಸಾದ್‌ ಯಾದವ್‌, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಸೇರಿದಂತೆ ಘಟಾನುಘಟಿ ನಾಯಕರು ಪಾಲ್ಗೊಂಡಿದ್ದರು.

‘ಎನ್‌ಸಿಪಿಯಿಂದ ಶಾಸಕರು ಹೋಗಿರಬಹುದು, ಜನರಲ್ಲ’: ಎನ್‌ಸಿಪಿ, ಶಿವಸೇನೆ ಇಬ್ಬಾಗದ ಬಗ್ಗೆ ಮಾತನಾಡಿದ ಖರ್ಗೆ, ಎನ್‌ಸಿಪಿ ನಾಯಕ ಶರದ್‌ ಪವಾರ್‌, ಶಿವಸೇನೆ ನಾಯಕ ಉದ್ಧವ್‌ ಠಾಕ್ರೆ ಸೇರಿದಂತೆ ಪ್ರಾದೇಶಿಕ ಪಕ್ಷಗಳ ನಾಯಕರು ಇಲ್ಲಿದ್ದಾರೆ. ಶಾಸಕರು ಬಿಟ್ಟು ಹೋಗಿರಬಹುದು. ಆದರೆ ಜನರು ಬಿಟ್ಟು ಹೋಗಲ್ಲ. ಪಕ್ಷಗಳ ಸೃಷ್ಟಿಕರ್ತರು ಇವರೇ ಎಂದರು.

ಪ್ರಮುಖ ನಿರ್ಣಯಗಳು
- ದೇಶಾದ್ಯಂತ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದ್ವೇಷ, ದೌರ್ಜನ್ಯಕ್ಕೆ ತಡೆ
- ಎಲ್ಲ ಹಿಂದುಳಿದ ವರ್ಗಗಳ ನ್ಯಾಯಯುತ ಸೌಲಭ್ಯಕ್ಕಾಗಿ ಜಾತಿ ಗಣತಿ ವರದಿ ಜಾರಿ
- ಒಕ್ಕೂಟ ವ್ಯವಸ್ಥೆ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ರಕ್ಷಣೆಗೆ ಪರಾರ‍ಯಯ ಅಜೆಂಡಾ
- ವಿಪಕ್ಷಗಳ ಆಡಳಿತದ ರಾಜ್ಯಗಳಲ್ಲಿ ರಾಜ್ಯಪಾಲರಿಂದ ಆಗುತ್ತಿರುವ ದಾಳಿ ಬಗ್ಗೆ ಖಂಡನೆ
- ಮಣಿಪುರವನ್ನು ಶಾಂತಿ, ಸೌಹಾರ್ದತೆಯಿಂದ ಮುನ್ನಡೆಸಲು ಸಂಕಲ್ಪ ಮಾಡಲು ಸಮ್ಮತಿ
- ನಿರುದ್ಯೋಗ, ಅಗತ್ಯ ವಸ್ತುಗಳ ಬೆಲೆ ಏರಿಕೆ ಎದುರಿಸಲು ಹೋರಾಡುವ ಬಗ್ಗೆ ನಿರ್ಧಾರ
- ನೋಟು ಅಮಾನ್ಯೀಕರಣದಿಂದ ಆಗಿರುವ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯ
- ರಾಷ್ಟ್ರದ ಸಂಪತ್ತನ್ನು ಆತ್ಮೀಯರು ಅಥವಾ ಆಪ್ತರಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಕಿಡಿ
- ಬಿಜೆಪಿಯ ದ್ವೇಷಪೂರಿತ ವ್ಯವಸ್ಥಿತ ಪಿತೂರಿ, ದಾಳಿಗಳು ಸಂವಿಧಾನ ವಿರೋಧಿ ಎಂದು ಖಂಡನೆ
- ಬಿಜೆಪಿಯ ವಿರುದ್ಧ ಮಹಾಮೈತ್ರಿಕೂಟ ರಚಿಸಿ ಒಟ್ಟಾಗಿ ಹೋರಾಡಲು ವಿಪಕ್ಷಗಳಿಂದ ಒಮ್ಮತ
- ಮೈತ್ರಿಕೂಟಕ್ಕೆ ‘ಇಂಡಿಯನ್‌ ನ್ಯಾಷನಲ್‌ ಡೆವಲಪ್ಮೆಂಟಲ್‌ ಇನ್‌ಕ್ಲ್ಯೂಸಿವ್‌ ಅಲಯನ್ಸ್‌’ ಹೆಸರು
- ಇದರ ಕೇಂದ್ರ ಕಚೇರಿ ದೆಹಲಿಯಲ್ಲಿ ಸ್ಥಾಪನೆ. ಮುಂಬೈನಲ್ಲಿ ಮತ್ತೊಂದು ಸುತ್ತಿನ ಸಭೆಗೆ ತೀರ್ಮಾನ

ದಲಿತರ ಜಮೀನು ಕಾಪಾಡಲು ಕಾಯ್ದೆ ಶೀಘ್ರ ತಿದ್ದುಪಡಿ: ಸಿದ್ದರಾಮಯ್ಯ

ಎನ್‌ಡಿಎ ವಿರುದ್ಧ ‘ಇಂಡಿಯಾ’ ಗೆಲ್ಲಲಿದೆ. ಬಿಜೆಪಿ ಸೋಲಲಿದೆ, ಭಾರತ ಗೆಲ್ಲಲಿದೆ. ಬಿಜೆಪಿ ಸೋಲಿಗೆ ಇಂದಿನಿಂದ ನಾಂದಿ ಶುರುವಾಗಿದೆ. ಬಿಜೆಪಿ ಹಾಗೂ ಎನ್‌ಡಿಎಗೆ ‘ಇಂಡಿಯಾ’ಗೆ ಸವಾಲು ಹಾಕಲು ಸಾಧ್ಯವೇ? ನಿಮ್ಮ ಕೈಲಾದರೆ ನಮ್ಮನ್ನು ಹಿಡಿಯಿರಿ.
- ಮಮತಾ ಬ್ಯಾನರ್ಜಿ ಬಂಗಾಳ ಸಿಎಂ

ಪ್ರಧಾನಿ ಮೋದಿ ಅವರು ವಿಪಕ್ಷಗಳ ಸಭೆ ಬಳಿಕ ಎನ್‌ಡಿಎ ಸಭೆ ಮಾಡಿದ್ದಾರೆ. 30 ಪಕ್ಷಗಳ ಸಭೆ ಕರೆದಿದ್ದಾರೆ. ನಮ್ಮ ದೇಶದಲ್ಲಿ ಇಷ್ಟೊಂದು ಪಕ್ಷಗಳಿವೆ ಎಂಬುದೇ ನನಗೆ ಗೊತ್ತಿರಲಿಲ್ಲ. ಎನ್‌ಡಿಎಯಲ್ಲಿರುವ ಹಲವು ಪಕ್ಷಗಳ ಹೆಸರನ್ನು ನಾನು ಕೇಳೇ ಇಲ್ಲ.
- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಅಧ್ಯಕ್ಷ

ಇದು ಬಿಜೆಪಿ ಹಾಗೂ ವಿರೋಧಪಕ್ಷಗಳ ನಡುವಿನ ಹೋರಾಟವಲ್ಲ. ದೇಶದ ಧ್ವನಿಯಾಗಿ ಹೋರಾಟ ಮಾಡುತ್ತಿರುವುದರಿಂದ ಈ ಹೆಸರು (ಇಂಡಿಯಾ) ಆಯ್ದುಕೊಳ್ಳಲಾಗಿದೆ. ಇದು ಎನ್‌ಡಿಎ ಹಾಗೂ ಇಂಡಿಯಾ ನಡುವಿನ ಹೋರಾಟ.
- ರಾಹುಲ್‌ಗಾಂಧಿ, ಕಾಂಗ್ರೆಸ್‌ ನಾಯಕ