ಯಹೂದಿಗಳು ಕನಿಷ್ಠ, ಜರ್ಮನ್ನರು ಶ್ರೇಷ್ಠ ಎಂದು ಹೇಳಲು ಹೋಗಿ ಹಿಟ್ಲರ್‌ ಹಾಳಾದ. ಕೊನೆಗೆ ಆತ್ಮಹತ್ಯೆಯನ್ನೂ ಮಾಡಿಕೊಂಡು ಸತ್ತ. ಬಿಜೆಪಿಯವರಿಗೂ ನಾನು ಅನೇಕ ಬಾರಿ ಹೇಳಿದ್ದೇನೆ.

ವಿಧಾನಪರಿಷತ್‌ (ಜು.15): ಯಹೂದಿಗಳು ಕನಿಷ್ಠ, ಜರ್ಮನ್ನರು ಶ್ರೇಷ್ಠ ಎಂದು ಹೇಳಲು ಹೋಗಿ ಹಿಟ್ಲರ್‌ ಹಾಳಾದ. ಕೊನೆಗೆ ಆತ್ಮಹತ್ಯೆಯನ್ನೂ ಮಾಡಿಕೊಂಡು ಸತ್ತ. ಬಿಜೆಪಿಯವರಿಗೂ ನಾನು ಅನೇಕ ಬಾರಿ ಹೇಳಿದ್ದೇನೆ. ನಾವೇ ಶ್ರೇಷ್ಠ, ನಮ್ಮ ಧರ್ಮವೇ ಶ್ರೇಷ್ಠ ಎಂದು ಹೇಳಬೇಡಿ. ಮನುಷ್ಯ ಮನುಷ್ಯರ ನಡುವೆ ಬೆಂಕಿ ಇಟ್ಟರೆ ಅದು ನಮ್ಮನ್ನೇ ಸುಡುತ್ತದೆ ಅಂತ. ಆದರೆ ಅವರು ಬಿಡುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ ಮಾತಿಗೂ ಬಿಜೆಪಿ ಸದಸ್ಯರು ಸಿಟ್ಟಾಗಿ ವಾಗ್ವಾದಕ್ಕಿಳಿದರು. ಈ ವೇಳೆ ಸಿದ್ದರಾಮಯ್ಯ ಅವರು, ಹಿಟ್ಲರ್‌ ಬಗ್ಗೆ ಮಾತನಾಡಿದರೆ ನಿಮಗೇಕೆ ಕೋಪ? ನೀವು ಹಿಟ್ಲರ್‌ ವಿಚಾರಗಳನ್ನು ಒಪ್ಪುತ್ತೀರಾ ಎಂದು ತಿವಿದರು.

ಇದಕ್ಕೆ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ, ನೀವು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಿ ಮಾತನಾಡಿದರೆ ನಮಗೆ ಬೇಸವರಿಲ್ಲ. ಶಕುನಿ ರೀತಿ ಮಾತನಾಡಬೇಡಿ ಎಂದು ಖಾರವಾಗಿಯೇ ತಿರುಗೇಟು ನೀಡಿದರು. ಕೋಟ ಶ್ರೀನಿವಾಸ ಪೂಜಾರಿ, ನೀವು ಎಲ್ಲ ಧರ್ಮದವರನ್ನೂ ಸಮಾನವಾಗಿ ಕಾಣುವುದಾಗಿ ಹೇಳುವವರು, ಒಂದು ಧರ್ಮದ ಟೋಪಿ ಧರಿಸಿಕೊಂಡು, ಮತ್ತೊಂದು ಸಮಾಜ ಕೇಸರಿ ಪೇಠ ತೊಡಿಸಲು ಬಂದಾಗ ಏಕೆ ನಿರಾಕರಿಸಿದಿರಿ ಎಂದು ಪ್ರಶ್ನಿಸಿದರು. ಮನುಷ್ಯರ ನಡುವೆ ಗೋಡೆ ಕಟ್ಟುವ, ಧರ್ಮ, ಜಾತಿಗಳ ನಡುವೆ ನಡುವೆ ಬೆಂಕಿ ಹಚ್ಚುವುದು ನಮ್ಮ ಪರಂಪರೆಯಲ್ಲ. ನಾವು ಒಂದು ಧರ್ಮ ಜಾತಿಗೆ ಅಂಟಿಕೊಂಡವರಲ್ಲ. ನಾವು ಸಂವಿಧಾನಕ್ಕೆ ತಲೆಬಾಗುವವರು ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ಕ್ರಷರ್‌ ಉದ್ಯಮದ ವಿರುದ್ಧ ರೇವಣ್ಣ ದಾಳಿ: ಶಿವಲಿಂಗೇಗೌಡ ಆಕ್ರೋಶ

ಕರ್ನಾಟಕದಿಂದಲೇ ಬಿಜೆಪಿ ಅವನತಿ ಶುರು: ‘ದೇಶದಲ್ಲಿ ಬಿಜೆಪಿಯ ಅವನತಿ ಕರ್ನಾಟಕದಿಂದಲೇ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಪ್ರಭಾವ ಮಂಕಾಗಿದೆ. ಮೋದಿಯವರು ರಾಜ್ಯದಲ್ಲಿ ಪ್ರಚಾರ ಮಾಡಿದ ಎಲ್ಲಾ ಕಡೆ ಬಿಜೆಪಿ ಹೀನಾಯವಾಗಿ ಸೋತಿರುವುದು ಇದಕ್ಕೆ ಸಾಕ್ಷಿ. ನೀವು ಇನ್ಮುಂದೆ ಮೋದಿ ನೆಚ್ಚಿಕೊಳ್ಳಬೇಡಿ.’ ಹೀಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮೇಲ್ಮನೆಯಲ್ಲಿ ಬಿಜೆಪಿ ಸದಸ್ಯರಿಗೆ ಸಲಹೆ ನೀಡುವ ಧಾಟಿಯಲ್ಲಿ ಛೇಡಿಸಿದ ಘಟನೆ ನಡೆಯಿತು. ಇದಕ್ಕೆ ಕೆರಳಿದ ಬಿಜೆಪಿ ಸದಸ್ಯರು ‘ದೇಶದಲ್ಲಿ ರಾಹುಲ್‌ ಗಾಂಧಿ ಹೋದ ಕಡೆಯಲ್ಲೆಲ್ಲಾ ಕಾಂಗ್ರೆಸ್‌ ಸೋತಿದೆ’ ಎಂದು ಪ್ರತಿದಾಳಿ ನಡೆಸಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ಏರ್ಪಟ್ಟು ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಜನ ಕಾಂಗ್ರೆಸ್‌ 136 ಸ್ಥಾನಗಳ ಸ್ಪಷ್ಟಬಹುಮತದ ಗೆಲುವು ನೀಡಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಜನ ಎರಡು ಬಾರಿ ಸಂಪೂರ್ಣ ಬಹುಮತ ನೀಡಿದ್ದಾರೆ. ಆದರೆ, ಬಿಜೆಪಿಗೆ ಒಮ್ಮೆಯೂ ಬಹುಮತ ನೀಡಿಲ್ಲ. ಹಿಂಬಾಗಿಲಿನಿಂದ ಅಧಿಕಾರ ನಡೆಸಿದ್ದೀರಿ. ಈ ಬಾರಿಯ ಚುನಾವಣೆಯಲ್ಲೂ ಹೇಳಿಕೊಳ್ಳುವ ಸಾಧನೆ ಏನೂ ಇಲ್ಲದಿದ್ದಕ್ಕೆ ಪ್ರಧಾನಿ ಮೋದಿ ಅವರನ್ನು 28 ಬಾರಿ ಕರೆತಂದು ರೋಡ್‌ ಶೋ, ಬಹಿರಂಗ ಸಭೆ ನಡೆಸಿದಿರಿ. ಆದರೆ, ಮೋದಿ ಹೋದ ಕಡೆಯಲ್ಲೆಲ್ಲಾ ಕಾಂಗ್ರೆಸ್‌ ಗೆದ್ದಿದೆ. ಇದರ ಅರ್ಥ ಮೋದಿ ಅವರ ಪ್ರಭಾವ ಕಡಿಮೆಯಾಗಿದೆ. ದೇಶದಲ್ಲಿ ಬಿಜೆಪಿಯ ಅವನತಿ ಕರ್ನಾಟಕದಿಂದಲೇ ಶುರುವಾಗಿದೆ. ಮುಂದೆ ಮೋದಿಯನ್ನು ಅವಲಂಬನೆ ಮಾಡಬೇಡಿ ಎಂದರು.

ನಡು ರಸ್ತೆಯಲ್ಲಿ ಯೋಧನ ಪತ್ನಿ ಏಕಾಂಗಿ ಹೋರಾಟ: ಯಾಕೆ ಗೊತ್ತಾ?

ಇದಕ್ಕೆ ಸಿಟ್ಟಾದ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ನಾರಾಯಣಸ್ವಾಮಿ, ರವಿಕುಮಾರ್‌ ಇನ್ನಿತರೆ ಸದಸ್ಯರು, ಮೋದಿ ಅವರು ಅತ್ಯಂತ ಪ್ರಭಾವಿ ನಾಯಕ ಎಂದು ಜಗತ್ತೇ ಹೇಳುತ್ತಿದೆ. ಕಾಂಗ್ರೆಸ್‌ನವರ ಸರ್ಟಿಫಿಕೇಟ್‌ ಬೇಕಿಲ್ಲ. ಈ ದೇಶದಲ್ಲಿ ರಾಹುಲ್‌ ಗಾಂಧಿ ಹೋದಲ್ಲೆಲ್ಲಾ ಕಾಂಗ್ರೆಸ್‌ ಸೋತಿದೆ ಎಂದು ತಿರುಗೇಟು ನೀಡಿದರು. ಈ ವೇಳೆ ಬಿಜೆಪಿಯ ರಘುನಾಥರಾವ್‌ ಮಲ್ಕಾಪುರೆ, ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಇಲ್ಲದಿದ್ದರೆ ಕಾಂಗ್ರೆಸ್‌ ಶೂನ್ಯ. 2019ರಲ್ಲಿ ಕಾಂಗ್ರೆಸ್‌ ವಿಪಕ್ಷ ಸ್ಥಾನಕ್ಕೂ ಅರ್ಹತೆ ಕಳೆದುಕೊಂಡಿತ್ತು ಎನ್ನುವುದನ್ನು ಮರೆಯಬೇಡಿ ಎಂದರು. ಅದಕ್ಕೆ ಕೆರಳಿದ ಕಾಂಗ್ರೆಸ್‌ನ ಕೆಲ ಸದಸ್ಯರು ಮುಂದಿನ ಲೋಕಸಭಾ ಚುನಾವಣೆಯಲ್ಲೂ ನಮ್ಮ ಪ್ರಭಾವ ತೋರಿಸುತ್ತೀವಿ ಎಂದರು.