ದಲಿತರ ಜಮೀನು ಕಾಪಾಡಲು ಕಾಯ್ದೆ ಶೀಘ್ರ ತಿದ್ದುಪಡಿ: ಸಿದ್ದರಾಮಯ್ಯ
ದಲಿತರ ಜಮೀನು ಹಕ್ಕು ಕಾಪಾಡುವ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಭೂ ಪರಭಾರೆ ನಿಷೇಧ (ಪಿಟಿಸಿಎಲ್) ಕಾಯ್ದೆಗೆ ಹೊಸದಾಗಿ ಕೆಲವೊಂದು ಅಂಶಗಳನ್ನು ಸೇರಿಸಿ ಪ್ರಸಕ್ತ ಅಧಿವೇಶನದಲ್ಲಿಯೇ ತಿದ್ದುಪಡಿ ಮಸೂದೆ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರು (ಜು.18): ದಲಿತರ ಜಮೀನು ಹಕ್ಕು ಕಾಪಾಡುವ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಭೂ ಪರಭಾರೆ ನಿಷೇಧ (ಪಿಟಿಸಿಎಲ್) ಕಾಯ್ದೆಗೆ ಹೊಸದಾಗಿ ಕೆಲವೊಂದು ಅಂಶಗಳನ್ನು ಸೇರಿಸಿ ಪ್ರಸಕ್ತ ಅಧಿವೇಶನದಲ್ಲಿಯೇ ತಿದ್ದುಪಡಿ ಮಸೂದೆ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪಿಟಿಸಿಎಲ್ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದಂತೆ ಸಚಿವರು, ಅಧಿಕಾರಿಗಳು, ಕಾನೂನು ತಜ್ಞರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಜಮೀನು ಹಕ್ಕು ಪರಭಾರೆ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ವಿಷಯದಲ್ಲಿ ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ.
ಈ ವಿಚಾರದಲ್ಲಿ ನಮ್ಮ ಕಾಳಜಿಗಳ ಜತೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಬಜೆಟ್‌ನಲ್ಲೂ ಈ ಕುರಿತು ಸ್ಪಷ್ಟಪಡಿಸಲಾಗಿದ್ದು, ಪ್ರಸ್ತುತ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿಯೇ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದರು. ಕಾಯ್ದೆಗೆ ಸಂಬಂಧಿಸಿದಂತೆ ಯಾವುದೇ ವಿವಾದ ಇರಬಾರದು. ಪಿಟಿಸಿಎಲ್ ಕಾಯ್ದೆಯ ಉದ್ದೇಶ ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಭೂಮಿ ಕಳೆದುಕೊಂಡವರಿಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಬಾರದು ಎಂಬ ಉದ್ದೇಶದಿಂದ ಸಭೆ ನಡೆಸಲಾಗುತ್ತಿದೆ. ದಲಿತ ಮುಖಂಡರು ಮತ್ತು ಕಾನೂನು ತಜ್ಞರ ಅಭಿಪ್ರಾಯ ಪಡೆಯಲಾಗಿದೆ. ಸರ್ಕಾರ ನೀಡಿದ ಭರವಸೆಯಂತೆ ಮೊದಲ ಅಧಿವೇಶನದಲ್ಲಿಯೇ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತರುವುದು ನಮ್ಮ ಉದ್ದೇಶ ಎಂದು ಹೇಳಿದರು.
ನುಡಿದಂತೆ ನಡೆಯುತ್ತಿದೆ ಕಾಂಗ್ರೆಸ್ ಪಕ್ಷ: ಸಚಿವ ಮಧು ಬಂಗಾರಪ್ಪ
ಸಚಿವರಾದ ಕೃಷ್ಣ ಬೈರೇಗೌಡ, ಎಚ್.ಸಿ.ಮಹದೇವಪ್ಪ, ಎಚ್.ಕೆ.ಪಾಟೀಲ್, ಡಾ.ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಶಿವರಾಜ ತಂಗಡಗಿ, ನಾಗೇಂದ್ರ, ಕೆ.ಎನ್.ರಾಜಣ್ಣ, ಆರ್.ಬಿ.ತಿಮ್ಮಾಪುರ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್, ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿಇತರರಿದ್ದರು. ಸಭೆಯಲ್ಲಿ ದಲಿತ ಮುಖಂಡರಾದ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ಶ್ರೀಧರ ಕಲಿವೀರ, ಬಸವರಾಜ ಕೌತಾಳ್, ಮಂಜು, ಇಂದೂಧರ ಹೊನ್ನಾಪುರ, ಹರಿರಾಮ್, ಮಾವಳ್ಳಿ ಶಂಕರ್, ಎನ್.ಮುನಿಸ್ವಾಮಿ, ವಿ.ನಾಗರಾಜ್, ಎನ್.ವೆಂಕಟೇಶ್ ಸೇರಿದಂತೆ 35ಕ್ಕೂ ಹೆಚ್ಚಿನ ದಲಿತ ಮುಖಂಡರು ಮತ್ತು ವಕೀಲರು ಉಪಸ್ಥಿತರಿದ್ದು, ತಮ್ಮ ಸಲಹೆ, ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಯ್ದೆ ತಿದ್ದುಪಡಿ ಏತಕ್ಕಾಗಿ?: ಭೂರಹಿತ ಎಸ್ಸಿ/ಎಸ್ಟಿಗಳಿಗಾಗಿ ಸರ್ಕಾರದಿಂದ ಮಂಜೂರು ಮಾಡುವ ಭೂಮಿಯನ್ನು ಖಾಸಗಿ ವ್ಯಕ್ತಿಗಳು, ಸಂಸ್ಥೆ ಸರ್ಕಾರದ ಅನುಮತಿಯಿಲ್ಲದೆ ಖರೀದಿಸಿದರೆ, ಅದರ ಬಗ್ಗೆ ನ್ಯಾಯಾಲಯ ಅಥವಾ ಸಕ್ಷಮ ಪ್ರಾಧಿಕಾರದಲ್ಲಿ ಪ್ರಕರಣ ದಾಖಲಿಸಿ ಹಿಂಪಡೆಯುವ ಹಕ್ಕು ಭೂಮಿ ಮಂಜೂರಾತಿ ಪಡೆದಿದ್ದ ಎಸ್ಸಿ/ಎಸ್ಟಿಸಮುದಾಯದ ಕುಟುಂಬದವರಿಗಿದೆ. ಹೀಗೆ ಭೂಮಿಯನ್ನು ಮರು ಮಂಜೂರಾತಿ ಮೂಲಕ ಹಿಂಪಡೆಯಲು ಅರ್ಜಿ ಸಲ್ಲಿಸಲು ಕಾಯ್ದೆಯಲ್ಲಿ ಯಾವುದೇ ಕಾಲಮಿತಿ ನಿಗದಿಯಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸುಪ್ರೀಂಕೋರ್ಚ್‌ನಲ್ಲಿ ಕೆಲ ಪ್ರಕರಣಗಳಲ್ಲಿ ಕಾಯ್ದೆಗೆ ವಿರುದ್ಧವಾಗಿ ತೀರ್ಪು ಬಂದಿದೆ. ಭೂಮಿ ಕಳೆದುಕೊಂಡವರು ಭೂಮಿ ಹಿಂಪಡೆಯಲು ಅರ್ಜಿ ಸಲ್ಲಿಸಲು ಕಾಲಮಿತಿ ನಿಗದಿ ಮಾಡದ ಕಾರಣ ಕಾಯ್ದೆಯ ದುರ್ಬಳಕೆಯಾಗುತ್ತಿದೆ.
ಶಿಗ್ಗಾಂವಿ ಕ್ಷೇತ್ರ ಶಿಕ್ಷಣ ಕಾಶಿಯಾಗಿಸುವೆ: ಮಾಜಿ ಸಿಎಂ ಬೊಮ್ಮಾಯಿ
ಹೀಗಾಗಿ ಭೂಮಿ ಕಳೆದುಕೊಂಡವರು ಸಲ್ಲಿಸಿದ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿತ್ತು. ಜತೆಗೆ ಕಾಯ್ದೆಯಲ್ಲಿ ಮರುಮಂಜೂರಾತಿ ಪಡೆಯಲು ಸೂಕ್ತ ಕಾಲಮಿತಿ ನಿಗದಿ ಮಾಡದಿದ್ದರೆ ಕಾಯ್ದೆಯನ್ನು ಪರಿಗಣಿಸಲು ಆಗದು ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು. ಹೀಗಾಗಿಯೇ ಕಾಯ್ದೆಗೆ ತಿದ್ದುಪಡಿ ತಂದು ಕಾಲಮಿತಿ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸುವ ಅಥವಾ ಕಾಲಮಿತಿ ನಿಗದಿ ಮಾಡುವ ಒತ್ತಡಕ್ಕೆ ಸರ್ಕಾರ ಸಿಲುಕಿತ್ತು. ಇದೀಗ ರಾಜ್ಯ ಸರ್ಕಾರ ಕಾಲಮಿತಿಯನ್ನು ನಿಗದಿ ಮಾಡುವ ಬದಲು ಭೂಮಿ ಮರುಮಂಜೂರಾತಿ ಮಾಡಿಕೊಳ್ಳಲು ಕಾಲಮಿತಿ ಅಗತ್ಯವಿಲ್ಲ ಎಂಬ ಅಂಶವನ್ನು ಕಾಯ್ದೆಗೆ ಸೇರಿಸಲು ಮುಂದಾಗಿದೆ. ಆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ಪಷ್ಟಪಡಿಸಿದ್ದು, ಹೀಗಾಗಿಯೇ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ ಎಂದಿದ್ದಾರೆ.