ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಪ್ರತಿಯೊಂದು ನಿರ್ಧಾರವನ್ನೂ ರಾಜಕೀಯ ದ್ವೇಷದಿಂದಲೇ ಮಾಡುತ್ತಿದ್ದಾರೆ. ಇದೀಗ ಪಠ್ಯ ಪರಿಷ್ಕರಣೆ ಮಾಡುವ ಮೂಲಕ ದೇಶದ ಸಾಮಾಜಿಕ ಹರಿಕಾರರಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಪ್ರತಿಕ್ರಿಯಿಸಿದ್ದಾರೆ.

ಮಂಗಳೂರು (ಜೂ.17) ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಪ್ರತಿಯೊಂದು ನಿರ್ಧಾರವನ್ನೂ ರಾಜಕೀಯ ದ್ವೇಷದಿಂದಲೇ ಮಾಡುತ್ತಿದ್ದಾರೆ. ಇದೀಗ ಪಠ್ಯ ಪರಿಷ್ಕರಣೆ ಮಾಡುವ ಮೂಲಕ ದೇಶದ ಸಾಮಾಜಿಕ ಹರಿಕಾರರಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಪ್ರತಿಕ್ರಿಯಿಸಿದ್ದಾರೆ.

‘ಭಾರತ ಮಾತೆಯ ಅಮೃತ ಪುತ್ರರು’ ಎಂಬ ಸೂಲಿಬೆಲೆ ಅವರ ಪಠ್ಯ ಮಕ್ಕಳಲ್ಲಿ ದೇಶಪ್ರೇಮವನ್ನು ಬೆಳೆಸುವ ವಿಷಯವಾಗಿತ್ತು. ಸಾವರ್ಕರ್‌, ಸುಖದೇವ್‌, ಭಗತ್ಸಿಂಗ್‌ ಅವರ ಸ್ವಾತಂತ್ರ್ಯ ಹೋರಾಟ, ಜೀವನ ಕಥನಗಳನ್ನು ಮಕ್ಕಳಿಗೆ ತಿಳಿಸುವ ಪಠ್ಯವಾಗಿತ್ತು. ಇನ್ನು ‘ನಿಜವಾದ ಆದರ್ಶ ಪುರುಷ ಯಾರಾಗಬೇಕು’ ಎಂಬ ಸ್ವಾತಂತ್ರ್ಯ ಹೋರಾಟಗಾರ, ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕೇಶವ ಬಲಿರಾಮ್‌ ಹೆಡಗೇವಾರ್‌ ಅವರ ಭಾಷಣದ ಪಠ್ಯ ಅಳವಡಿಸಲಾಗಿತ್ತು. ಆದರೆ ಕಾಂಗ್ರೆಸ್‌ ಸರ್ಕಾರÜ ಅದರಲ್ಲೂ ರಾಜಕೀಯ ಹುಡುಕಿ, ಈ ವಿಷಯಗಳಿಗೆ ಕತ್ತರಿ ಹಾಕಿ ಮಕ್ಕಳ ಪಠ್ಯಲ್ಲಿ ಕಾಂಗ್ರೆಸ್‌ ಮನಸ್ಥಿತಿಯ ವಿಚಾರಧಾರೆಗಳನ್ನು ತುರುಕಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

ಮತದಾರರಿಗೆ ಕಾಂಗ್ರೆಸ್‌ ವಂಚನೆ ಸಾಬೀತು: ಮಂಗಳೂರು ದಕ್ಷಿಣ ಬಿಜೆಪಿ ಶಾಸಕ ವೇದವ್ಯಾಸ್‌ ಕಾಮತ್‌

ಬಿಜೆಪಿ, ಆರೆಸ್ಸೆಸ್‌ ಮೇಲಿನ ದ್ವೇಷದಿಂದ ಪಠ್ಯ ಬದಲಾವಣೆ ಮಾಡಿದರೆ ಅದರಿಂದ ಮಕ್ಕಳು, ಪೋಷಕರ ಮೇಲೆ ದುಷ್ಪರಿಣಾಮ ಬೀರಲಿದೆ. ಬದಲಾವಣೆ ಮಾಡುವುದಿದ್ದರೆ ಸಮಗ್ರವಾಗಿ ವಿಮರ್ಶಿಸಿ ಮಾಡಬೇಕಿತ್ತು. ಆದರೆ ರಾಜಕೀಯ ಕಾರಣಕ್ಕೋಸ್ಕರ ಬದಲಾವಣೆ ಮಾಡುವುದು ಅಕ್ಷ್ಯಮ್ಯ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮತಾಂತರ ನಿಷೇಧ ಕಾಯ್ದೆ ಹಿಂಪಡೆದರೆ ಹೋರಾಟ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದಿದ್ದ ಮತಾಂತರ ನಿಷೇಧ ಕಾಯ್ದೆ ವಾಪಸ್‌ ಪಡೆಯುವ ಕಾಂಗ್ರೆಸ್‌ ಸರ್ಕಾರದ ನಿರ್ಧಾರವನ್ನು ಸ್ಪಷ್ಟವಾಗಿ ವಿರೋಧಿಸುವುದಾಗಿ ಶಾಸಕ ವೇದವ್ಯಾಸ್‌ ಕಾಮತ್‌ ಹೇಳಿದ್ದಾರೆ.

ಮತಾಂತರ ಸಾಮಾಜಿಕ ಪಿಡುಗು. ಇದು ಸಮಾಜದ ಅವನತಿಗೆ ಕಾರಣವಾಗಬಲ್ಲದು ಎನ್ನುವ ಸದುದ್ದೇಶದಿಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಲವಂತದ ಮತಾಂತರ ನಿಷೇಧಿಸುವ ಕಾಯ್ದೆ ಜಾರಿಗೊಳಿಸಲಾಗಿತ್ತು. ಆದರೆ ಈಗ ಆಮಿಷಗಳನ್ನೊಡ್ಡಿ, ಬೆದರಿಸಿ ಮತಾಂತರ ಮಾಡುವವರಿಗೆ ಶಿಕ್ಷೆ ವಿಧಿಸುವ ಕಾನೂನನ್ನು ರದ್ದುಪಡಿಸುವ ನಿರ್ಧಾರ ಮೂಲಕ ಕಾಂಗ್ರೆಸ್‌ ಸಮಾಜಕ್ಕೆ ಏನು ಸಂದೇಶ ನೀಡಲು ಹೊರಟಿದೆ? ಮುಕ್ತವಾಗಿ ಮತಾಂತರಗೊಳಿಸಲು ಸಮಾಜ ವಿದ್ರೋಹಿಗಳಿಗೆ ಆಹ್ವಾನ ನೀಡುತ್ತಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯಗೆ ಅರುಳು ಮರುಳು ಶುರು: ವೇದವ್ಯಾಸ ಕಾಮತ್‌

ಬಲವಂತದಿಂದ ಮತಾಂತರ ಮಾಡುವವರಿಗೆ ಕಾನೂನಿನಡಿ ಶಿಕ್ಷೆಗೊಳಪಡಿಸುವ ಕಾಯ್ದೆಯನ್ನು ರದ್ದುಪಡಿಸುವ ಮೂಲಕ ರಾಜ್ಯದಲ್ಲಿ ಮತಾಂತರಿಗಳ ಅಟ್ಟಹಾಸಕ್ಕೆ ರತ್ನ ಕಂಬಳಿ ಹಾಸುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ. ನಿರಂತರವಾಗಿ ಹಿಂದೂ ಸಮಾಜವನ್ನು ಒಡೆಯುವ ಕೃತ್ಯವನ್ನು ಕಾಂಗ್ರೆಸ್‌ ಬೆಂಬಲಿಸುತ್ತದೆ. ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್‌ ಪಡೆಯುವ ತನ್ನ ನಿರ್ಧಾರವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಹಿಂದೂ ಸಮಾಜವು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.