Asianet Suvarna News Asianet Suvarna News

MLC Election: ಶಿಕ್ಷಕರ ಕ್ಷೇತ್ರದ ಮತದಾರರಾಗಲು ಶಿಕ್ಷಕರಿಗಿಲ್ಲ ಆಸಕ್ತಿ

*  ಈ ವರೆಗೆ 17419 ಶಿಕ್ಷಕರ ನೋಂದಣಿ
*  ಅಭ್ಯರ್ಥಿಗಳೇ ಮತದಾರರ ನೋಂದಣಿ ಮಾಡಿಸಬೇಕಿಲ್ಲಿ
*  ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ಕೊನೆಯ ದಿನದವರೆಗೂ ನೋಂದಣಿ ಮಾಡಿಸುವ ಅವಕಾಶ
 

Teachers Not Interested in Becoming Voters in the MLC Election grg
Author
Bengaluru, First Published May 18, 2022, 11:25 AM IST

ಶಿವಾನಂದ ಗೊಂಬಿ

ಹುಬ್ಬಳ್ಳಿ(ಮೇ.18):  ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್‌ ಪ್ರತಿನಿಧಿ ಆಯ್ಕೆಯ ಚುನಾವಣೆ ಆಗಲೇ ಘೋಷಣೆಯಾಗಿದೆ. ಇಲ್ಲಿ ಶಿಕ್ಷಕರೇ ಮತದಾರರು. ಆದರೆ ಮತದಾರರಾಗುವ ಆಸಕ್ತಿ ಶಿಕ್ಷಕರಿಗೇ ಇಲ್ಲ. ಇದು ಅಭ್ಯರ್ಥಿಗಳನ್ನು ಕಂಗಾಲು ಮಾಡಿದೆ.

ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಒಬ್ಬ ಸದಸ್ಯನನ್ನು ಆಯ್ಕೆ ಮಾಡಿ ಕಳುಹಿಸುವುದಕ್ಕಾಗಿ ಈ ಚುನಾವಣೆ ನಡೆಯಲಿದೆ. ಕಳೆದ ಏಳು ಬಾರಿ ಈ ಕ್ಷೇತ್ರದಿಂದ ಬಸವರಾಜ ಹೊರಟ್ಟಿಅವರೇ ಆಯ್ಕೆಯಾಗಿದ್ದುಂಟು. ಪ್ರತಿ ಚುನಾವಣೆಯಲ್ಲಿ ಹೊಸದಾಗಿಯೇ ನೋಂದಣಿ ಮಾಡಿಸಿ ಮತದಾರರಾಗಬೇಕು. ಇದು ಈ ಚುನಾವಣೆಯ ವಿಶೇಷ.

ಸಭಾಪತಿ,ವಿಧಾನ ಪರಿಷತ್ ಸ್ಥಾನಕ್ಕೂ ಹೊರಟ್ಟಿ ರಾಜೀನಾಮೆ, ಬಿಜೆಪಿ ಸೇರ್ಪಡೆ ಬಗ್ಗೆಯೂ ಸ್ಪಷ್ಟನೆ

ಮತದಾರರೆಷ್ಟು?:

ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಸೇರಿ ನಾಲ್ಕು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕ್ಷೇತ್ರವಿದು. ಈ ನಾಲ್ಕು ಜಿಲ್ಲೆಗಳ ಶಿಕ್ಷಕರು, ಉಪನ್ಯಾಸಕರು ಇದರ ಮತದಾರರು. ನಾಲ್ಕು ಜಿಲ್ಲೆಗಳಲ್ಲಿ ಸೇರಿಸಿದರೆ ಕನಿಷ್ಠವೆಂದರೂ 50 ಸಾವಿರಕ್ಕೂ ಅಧಿಕ ಮತದಾರರಾಗುವ ಅರ್ಹ ಶಿಕ್ಷಕರಿದ್ದಾರೆ ಎಂದು ಮೂಲಗಳು ತಿಳಿಸುತ್ತವೆ. ಆದರೆ ಹೆಚ್ಚಿನ ಶಿಕ್ಷಕರಲ್ಲಿ ಮತದಾರರಾಗುವ ಆಸಕ್ತಿಯೇ ಇಲ್ಲ. ಶಿಕ್ಷಕರಾರ‍ಯರು ತಾವಾಗಿ ಮುಂದೆ ಬಂದು ಮತದಾರರಾಗುವ ಗೋಜಿಗೆ ಹೋಗುತ್ತಿಲ್ಲ. ಅಭ್ಯರ್ಥಿಗಳಾಗ ಬಯಸುವವರೇ ತಾವೇ ಅರ್ಜಿ ತುಂಬಿ, ಅದಕ್ಕೆ ಬೇಕಾದ ದಾಖಲೆಗಳನ್ನು ಪಡೆದು ನೋಂದಣಿ ಮಾಡಿಸುವ ಪರಿಸ್ಥಿತಿ ಎದುರಾಗಿದೆ.

ಈ ವರೆಗೂ 17,419 ಜನ ಮಾತ್ರ ಶಿಕ್ಷಕರು ನೋಂದಣಿ ಮಾಡಿಸಿ ಮತದಾರರಾಗಿದ್ದಾರೆ. ಇದರಲ್ಲಿ ಧಾರವಾಡ ಜಿಲ್ಲೆಯಲ್ಲೇ ಕೊಂಚ ಹೆಚ್ಚು. ಧಾರವಾಡದಲ್ಲಿ 5884, ಹಾವೇರಿ 4671, ಗದಗ- 3259 ಹಾಗೂ ಉತ್ತರ ಕನ್ನಡ ಜಿಲ್ಲೆಯ 3605 ಮತದಾರರಿದ್ದಾರೆ. ಇವರೆಲ್ಲರನ್ನು ಅಭ್ಯರ್ಥಿಗಳ ಪರವಾಗಿ ಬೆಂಬಲಿಗರೇ ನೋಂದಣಿ ಮಾಡಿಸಿರುವುದುಂಟು. ಕಳೆದ ಚುನಾವಣೆಯಲ್ಲಿ 23 ಸಾವಿರಕ್ಕೂ ಅಧಿಕ ಮತದಾರರಿದ್ದರು. ಈ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ಕೊನೆಯ ದಿನದವರೆಗೂ ನೋಂದಣಿ ಮಾಡಿಸುವ ಅವಕಾಶವಿದೆ. ಆದರೂ ಶಿಕ್ಷಕರಾರ‍ಯರೂ ತಾವಾಗಿಯೇ ಮುಂದಾಗುತ್ತಿಲ್ಲ ಎಂಬ ಬೇಸರ ರಾಜಕೀಯ ಪಕ್ಷಗಳದ್ದು.

ಮಕ್ಕಳಿಗೆ ಪಾಠ ಹೇಳುವ, ಮತದಾನ, ಪ್ರಜಾಪ್ರಭುತ್ವದ ಬಗ್ಗೆ ತಿಳಿಸಿಕೊಡುವ ಶಿಕ್ಷಕರಿಗೆ ಮತದಾರರಾಗುವ ಆಸಕ್ತಿ ಇಲ್ಲದಿರುವುದು ನಿಜಕ್ಕೂ ಬೇಸರದ ಸಂಗತಿ. ಆದರೆ ನೋಂದಣಿಗೆ ಇನ್ನೂ ಕಾಲಾವಕಾಶವಿದೆ. ಇನ್ನಾದರೂ ಶಿಕ್ಷಕರು ನೋಂದಣಿ ಮಾಡಿಸಲು ಮುಂದಾಗಬೇಕು ಎಂಬುದು ಪ್ರಜ್ಞಾವಂತರ ಆಗ್ರಹ.

ಎಲ್ಲ ಸಮಸ್ಯೆಗೂ ಭಗವದ್ಗೀತೆಯಿಂದ ಮುಕ್ತಿ: ಏಷ್ಯಾದ ಅತಿದೊಡ್ಡ ಜ್ಞಾನಲೋಕ ಮ್ಯೂಸಿಯಂ ಲೋಕಾರ್ಪಣೆ

ನಮಗೂ ಮತದಾನದ ಹಕ್ಕು ನೀಡಿ ಪ್ರಾಥಮಿಕ ಶಾಲಾ ಶಿಕ್ಷಕರು

ಶಿಕ್ಷಕರ ಕ್ಷೇತ್ರದಿಂದ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಪ್ರೌಢ, ಪಿಯು, ಪದವಿ, ವಿಶ್ವ ವಿದ್ಯಾಲಯ ಸೇರಿದಂತೆ ವಿವಿಧ ಹಂತದ ಶಿಕ್ಷಕರು, ಉಪನ್ಯಾಸಕರು ಮತದಾರರಾಗಿದ್ದಾರೆ. ಆದರೆ ಪ್ರಾಥಮಿಕ ಶಾಲಾ ಶಿಕ್ಷಕರು ಮಾತ್ರ ಇದರ ಮತದಾರರಲ್ಲ. ಇದು ಸರಿಯಲ್ಲ. ಇದಕ್ಕೆ ಸಂಬಂಧಪಟ್ಟಂತೆ ಕಾನೂನು ತಿದ್ದುಪಡಿ ತಂದು ನಮ್ಮನ್ನೂ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ಪ್ರಾಥಮಿಕ ಶಾಲಾ ಶಿಕ್ಷಕರದು. ಈ ವಿಷಯವಾಗಿ ಹಲವಾರು ಬಾರಿ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ಈ ವರೆಗೂ ಸರ್ಕಾರ ತಿದ್ದುಪಡಿ ತರಲು ಕ್ರಮ ಕೈಗೊಂಡಿಲ್ಲ. ಇನ್ನು ಮೇಲಾದರೂ ನಮ್ಮನ್ನು ಮತದಾರರನ್ನಾಗಿ ಮಾಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ ಸಜ್ಜನ ಆಗ್ರಹಿಸಿದ್ದಾರೆ.

ಶಿಕ್ಷಕರ ಕ್ಷೇತ್ರದಲ್ಲಿ ಮತದಾರರನ್ನು ನಾವೇ ನೋಂದಣಿ ಮಾಡಿಸಬೇಕು. ಆ ಕೆಲಸವನ್ನು ನಾವು ಕಳೆದ ಕೆಲ ತಿಂಗಳಿಂದ ಮಾಡಿಸುತ್ತಿದ್ದೇವೆ. ಇದೀಗ 17 ಸಾವಿರಕ್ಕೂ ಅಧಿಕ ಮತದಾರರ ನೋಂದಣಿ ಆಗಿದೆ. ಇನ್ನೂ ಸಮಯವಿದೆ. ಇನ್ನಷ್ಟು ಜನ ಶಿಕ್ಷಕರ ನೋಂದಣಿ ಆಗುವುದು ಎಂಬ ವಿಶ್ವಾಸವಿದೆ ಅಂತ ಕಾಂಗ್ರೆಸ್‌ ಅಭ್ಯರ್ಥಿ ಬಸವರಾಜ ಗುರಿಕಾರ ತಿಳಿಸಿದ್ದಾರೆ.  
 

Follow Us:
Download App:
  • android
  • ios