Asianet Suvarna News Asianet Suvarna News

ಸಭಾಪತಿ,ವಿಧಾನ ಪರಿಷತ್ ಸ್ಥಾನಕ್ಕೂ ಹೊರಟ್ಟಿ ರಾಜೀನಾಮೆ, ಬಿಜೆಪಿ ಸೇರ್ಪಡೆ ಬಗ್ಗೆಯೂ ಸ್ಪಷ್ಟನೆ

* ಸಭಾಪತಿ, ವಿಧಾನ ಪರಿಷತ್ ಸ್ಥಾನಕ್ಕೂ ಹೊರಟ್ಟಿ ರಾಜೀನಾಮೆ
* ಬಿಜೆಪಿ ಸೇರ್ಪಡೆ ಬಗ್ಗೆಯೂ ಬಸವರಾಜ ಹೊರಟ್ಟಿ ಸ್ಪಷ್ಟನೆ
* ವಿಧಾನ ಪರಿಷತ್ ಸಭಾಪತಿಯಾಗಿದ್ದ ಹೊರಟ್ಟಿ

JdS Leader basavaraj horatti resigns for legislative council chairman Post rbj
Author
Bengaluru, First Published May 16, 2022, 4:50 PM IST

ಬೆಂಗಳೂರು, (ಮೇ.16): ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಘೋಷಣೆ ಮಾಡಿದ್ದು, ರಾಜೀನಾಮೆ ಪತ್ರವನ್ನು ಉಪಸಭಾಪತಿಗೆ ನೀಡಿದ್ದಾರೆ.

ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡಿದ ಹೊರಟ್ಟಿ ಮಂಗಳವಾರ ಬಿಜೆಪಿಗೆ ಸೇರ್ಪಡೆಯಾಗುವುದಾಗಿ ತಿಳಿಸಿದ್ದು,  ರಾಜೀನಾಮೆ ಘೋಷಿಸುವ ಮೂಲಕ ಜೆಡಿಎಸ್​ಗೆ ದೊಡ್ಡ ಶಾಕ್ ನೀಡಿದ್ದಾರೆ.

ಇಂದು(ಸೋಮವಾರ) ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ರಾಜೀನಾಮೆ ನೀಡುವುದಾಗಿ ಅಧಿಕೃತವಾಗಿ ಘೋಷಿಸಿದ ಅವರು, ವಿಧಾನ ಪರಿಷತ್ ಸಚಿವಾಲಯದ ಆಡಳಿತದಲ್ಲಿ ಪ್ರಾಮಾಣಿಕ ಪಾರದರ್ಶಕತೆಗೆ ಆದ್ಯತೆ ನೀಡಿದ್ದೇನೆ. ಕಲುಷಿತವಾದ ರಾಜಕಾರಣದಲ್ಲಿ ನಮ್ಮಂತವರಿಗೆ ನೋವು ಆಗಿದೆ. ಆದರೆ ಮನಸ್ಸು ಇಲ್ಲದೆ ಇದ್ದರೂ ರಾಜಕೀಯದಲ್ಲಿ ಇರಬೇಕಾಗುತ್ತೆ ಎಂದು ಹೇಳಿದರು.

Family Politics: ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಕಮಲ ಮುಡಿದರೇ ಹೊರಟ್ಟಿ?

ಬಿಜೆಪಿ ಸೇರ್ಪಡೆ ಸಂಬಂಧಿಸಿದಂತೆ ಯಾವುದೇ ಷರತ್ತು ಹಾಕಿಲ್ಲ. ಕೇಂದ್ರ ಸಚಿವ ಅಮಿತ್ ಶಾ ಭೇಟಿ ಸಂದರ್ಭದಲ್ಲಿ ಯಾವುದೇ ಚರ್ಚೆ ಆಗಿಲ್ಲ. ಬಿಜೆಪಿಯ ರಾಜಕೀಯ ನಿಲುವಿನ ಬಗ್ಗೆ ಆಕ್ಷೇಪ ಇಲ್ಲ ಎಂದು ಸ್ಪಷ್ಟಪಡಿಸಿದರು

ನನಗೆ ಎಲ್ಲ ಪಕ್ಷದವರು ಸಹಕಾರ ಕೊಟ್ಟಿದ್ದಾರೆ. 1980ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ರಾಜಕೀಯ ಪ್ರವೇಶ ಮಾಡಿದೆ. 1986 ಜನತಾದಳ, ಲೋಕ ಶಕ್ತಿಯಲ್ಲಿ ಇದ್ದೆ. 2000ದಿಂದ ಇಲ್ಲಿಯವರೆಗೆ ಜೆಡಿಎಸ್‌ನಲ್ಲಿ ಇದ್ದೆ. ಜೆಡಿಎಸ್ ನಲ್ಲಿ ಕುಟುಂಬ ಸದಸ್ಯರ ತರ ನೋಡಿಕೊಂಡರು ಎಂದರು.

ಭಾರತದಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಪ್ರಬುದ್ಧ ರಾಜಕಾರಣಿ. ಅವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಜೆಡಿಎಸ್ ತೊರೆಯುವ ನಿರ್ಧಾರಕ್ಕೆ ಏನು ಕಾರಣ ಎಂಬ ಪ್ರಶ್ನೆಗೆ, ಆತ್ಮೀಯರು ಸಾಕಷ್ಟು ಒತ್ತಾಯ ಮಾಡಿದರು, ಆಕಸ್ಮಿಕವಾಗಿ ಕೆಲವು ಬದಲಾವಣೆ ಅಗತ್ಯ ಎಂದು ಹೇಳಿದರು.

ಕೆಲವೊಮ್ಮೆ ಆಕಸ್ಮಿಕವಾಗಿ ಬದಲಾವಣೆಗಳು ಆಗುತ್ತಿರುತ್ತವೆ. ಕೆಲವು ಸಾರಿ ಈ ರೀತಿಯ ಬದಲಾವಣೆ ಅನಿವಾರ್ಯ ಆಗಿತ್ತು. ಅದಕ್ಕಾಗಿ ನಾನು ಈ‌ ನಿರ್ಧಾರ ಮಾಡಿದ್ದೇನೆ ಎಂದು ಜೆಡಿಎಸ್ ತೊರೆಯುವ ನಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು. ನನ್ನ ಸೇರ್ಪಡೆಯಿಂದ ಬಿಜೆಪಿಯಲ್ಲಿ ವಿರೋಧ ಇಲ್ಲ. ಆದರೆ, ಒಬ್ಬರನ್ನು ಬಿಟ್ಟು ಬೇರೆ ಯಾರಿಗೂ ವಿರೋಧ ಇಲ್ಲ ಎಂದು ಪರೋಕ್ಷವಾಗಿ ಮೋಹನ್ ಲಿಂಬೀಕಾಯಿ ವಿರುದ್ಧ ಹೊರಟ್ಟಿ ಟಾಂಗ್ ಕೊಟ್ಟರು.

ಪಶ್ಚಿಮ ಶಿಕ್ಷಕರ ಕ್ಷೇತ್ರದ ಟಿಕೆಟ್?
ಪರಿಷತ್‌ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರುತ್ತಿರುವ ಬಸವರಾಜ ಹೊರಟ್ಟಿಗೆ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗುವ  ಸಾಧ್ಯತೆಗಳು ಹೆಚ್ಚಿವೆ. ಆದ್ರೆ, ಇದಕ್ಕೆ ಕೆಲ ಬಿಜೆಪಿ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿಯ ಟಿಕೆಟ್‌ ಆಕಾಂಕ್ಷಿ ಮೋಹನ್‌ ಲಿಂಬಿಕಾಯಿ ಬಹಿರಂಗವಾಗಿಯೇ ಹೊರಟ್ಟಿ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದು, ತಮಗೆ ಟಿಕೆಟ್ ಬೇಕೆಂದು ಪಟ್ಟು ಹಿಡಿದಿದ್ದಾರೆ.

ಹೊರಟ್ಟಿಗೆ ತೊಡೆತಟ್ಟಲಿರುವ ಲಿಂಬೆಕಾಯಿ
ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಟಿಕೆಟ್ ಕೈ ತಪ್ಪುವ ಭೀತಿಯಲ್ಲಿರುವ ಬಿಜೆಪಿ ಹಿರಿಯ ಮುಖಂಡ ಮೋಹನ್ ಲಿಂಬಿಕಾಯಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ.

ಈಗಾಗಲೇ ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿಯಲು ಅವರು ಕಳೆದ ಒಂದು ವರ್ಷದಿಂದಲೇ ಭರ್ಜರಿ ಸಿದ್ದತೆಯನ್ನು ನಡೆಸಿದ್ದರು. ಮತದಾರರು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಿದ್ದರು.

ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಹಾಲಿ ವಿಧಾನಪರಿಷತ್ ಸಭಾಪತಿಯಾಗಿರುವ ಬಸವರಾಜ ಹೊರಟ್ಟಿ ಅವರು ಜೆಡಿಎಸ್ ತೊರೆದು ಬಿಜೆಪಿ ಸೇರಲು ಮುಂದಾಗಿರುವುದರಿಂದ ಮೋಹನ ಲಿಂಬಿಕಾಯಿಗೆ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದೆ.
ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಲಿಂಬಿಕಾಯಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕೆಂದು ಅವರ ಹಿಂಬಾಲಕರು ಒತ್ತಡ ಹಾಕಿದ್ದಾರೆಂದು ತಿಳಿದುಬಂದಿದೆ.

ಒಂದು ವೇಳೆ ಬಸವರಾಜ ಹೊರಟ್ಟಿ ಅವರು ಬಿಜೆಪಿಯಿಂದ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಇದೇ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಬಾರದು ಎಂದು ನಿಷ್ಠಾವಂತ ಕಾರ್ಯಕರ್ತರು ಒತ್ತಡದ ತಂತ್ರ ಅನುಸರಿಸಿದ್ದಾರೆ.

ಕಾರ್ಯಕರ್ತರ ಒತ್ತಡಕ್ಕೆ ಸಿಲುಕಿರುವ ಲಿಂಬಿಕಾಯಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಮುಂದಾಗಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

ತಮ್ಮದು ಪಕ್ಷ ವಿರೋಧಿ ಚಟುವಟಿಕೆಯಲ್ಲ. ಕಾರ್ಯಕರ್ತರು, ಹಿತೈಷಿಗಳು, ಅಭಿಮಾನಿಗಳು ಹಾಗೂ ಸಮಾನಮನಸ್ಕರ ಒತ್ತಡಕ್ಕೆ ಮಣಿದು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದೇನೆ. ಇದು ಬಸವರಾಜ ಹೊರಟ್ಟಿ ಅವರ ವಿರುದ್ಧ ಹೋರಾಟವಲ್ಲ. ನನ್ನದು ಸೈದ್ದಾಂತಿಕ ಹೋರಾಟ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

Follow Us:
Download App:
  • android
  • ios