ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ತೆರಿಗೆ ಭಯೋತ್ಪಾದನೆ ಶುರುವಾಗಿದ್ದು, ₹60000 ಕೋಟಿ ಹೊಸ ತೆರಿಗೆ ವಿಧಿಸಲಾಗಿದೆ ಎಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಉಪ ಚುನಾವಣೆ ಬಳಿಕ ಕಾಂಗ್ರೆಸ್‌ನ ಅಧಃಪತನ ಆರಂಭವಾಗಲಿದೆ

ದಾವಣಗೆರೆ (ಏ.1): ಸಿದ್ದರಾಮ:ಯ್ಯ 2ನೇ ಅವಧಿಗೆ ಮುಖ್ಯಮಂತ್ರಿಯಾದ ನಂತರ ರಾಜ್ಯದಲ್ಲಿ ತೆರಿಗೆ ಭಯೋತ್ಪಾದನೆ ಶುರುವಾಗಿದ್ದು, ಮದ್ಯ, ಹಾಲು, ವಿದ್ಯುತ್‌ ಬೆಲೆಗಳನ್ನು ಹೆಚ್ಚಳ ಮಾಡುವುದ ಜತೆಗೆ ಭೂ ಕಂದಾಯ, ಮೋಟಾರು ವಾಹನಗಳ ಮೇಲಿನ ತೆರಿಗೆ ಹೆಚ್ಚಿಸಲಾಗಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 3 ವರ್ಷಗಳಲ್ಲಿ ₹60000 ಕೋಟಿಯಷ್ಟು ಹೊಸ ತೆರಿಗೆಯನ್ನು ಸಿದ್ದರಾಮಯ್ಯ ಸರ್ಕಾರ ಜನರ ಮೇಲೆ ಹೇರಿದ್ದು, ಇದು ಒಂದು ರೀತಿ ಟ್ಯಾಕ್ಸ್ ಟೆರರಿಸಂ ಆಗಿದೆ. ₹5 ಲಕ್ಷ ಕೋಟಿ ಹೊಸ ಸಾಲ ಮಾಡುವ ಮೂಲಕ ದಾಖಲೆ ಸಾಲದ ಸಾಧನೆ ಸಹ ಮಾಡಿದೆ ಎಂದರು.

ರಾಜ್ಯದ ಯಾವುದೇ ಜಮೀನು ನೋಂದಣಿಯಾದರೆ ಬೆಂಗಳೂರಿಗೆ ಭ್ರಷ್ಟಾಚಾರದ ಹಣ ಬರಬೇಕಿದೆ ಎಂದು ಪಿಡಬ್ಲ್ಯುಡಿ, ಅಬಕಾರಿ ಗುತ್ತಿಗೆದಾರರು ಆರೋಪಿಸುತ್ತಿದ್ದಾರೆ. ಭೂ ಪರಿವರ್ತನೆಯಲ್ಲೂ ಇಂತಿಷ್ಟು ಅಂತಾ ಲಂಚ ನಿಗದಿಯಾಗಿದೆ. ಕೇಂದ್ರ ಸರ್ಕಾರ ನೀಡುತ್ತಿರುವ ಅನ್ನಭಾಗ್ಯ ಅಕ್ಕಿ ಕಡಿಮೆ ಹಂಚಿಕೆಯಾದಷ್ಟೂ ರಾಜ್ಯ ಸರ್ಕಾರ ಸಂತೋಷಪಡುತ್ತದೆಂದು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದವರೇ ಹೇಳುತ್ತಿದ್ದಾರೆ ಎಂದು ದೂರಿದರು.

ತಹಸೀಲ್ದಾರ್‌ ಕಚೇರಿ, ಸಚಿವರ ಕಚೇರಿ, ಸಿಎಂ ಕಚೇರಿಯಿಂದಲೂ ಭ್ರಷ್ಟಾಚಾರ ಆರಂಭವಾಗಿದೆ. ವರ್ಗಾವಣೆ ದಂಧೆ ಕೈಗಾರಿಕೆಯಂತಾಗಿದ್ದು, ರಾಜ್ಯ ಸರ್ಕಾರದ ಆಡಳಿತ ಯಂತ್ರವು ಸಂಪೂರ್ಣವಾಗಿ ಕುಸಿದಿದೆ. ಭ್ರಷ್ಟಾಚಾರದ ಆರೋಪ ಮುಚ್ಚಿಕೊಳ್ಳಲು ಕಾಂಗ್ರೆಸ್ ಕೇಂದ್ರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ದುರಾಡಳಿತ ಮನೆ ಮನೆಗೂ ತಲುಪಿದ್ದು, ರಾಜ್ಯದ ಜನತೆ ಈಗ ಬದಲಾವಣೆಯನ್ನು ಬಯಸಿದ್ದಾರೆ ಎಂದು ತಿಳಿಸಿದರು.

ಉಪ ಚುನಾವಣೆ ಬಳಿಕ ಕಾಂಗ್ರೆಸ್ ಅಧಃಪತನ:

ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಕಾಂಗ್ರೆಸ್‌ನ ಅಧಃಪತನದ ಮೊದಲನೆಯ ಹೆಜ್ಜೆಯಾಗಲಿದೆ. ಅದಕ್ಕೆ ದಾವಣಗೆರೆ, ಬಾಗಲಕೋಟೆ ಜನ ಆಶೀರ್ವಾದ ಮಾಡುವ ವಿಶ್ವಾಸ ಇದೆ. ಬಿಜೆಪಿ ಒಗ್ಗಟಿನಿಂದ ಕೆಲಸ ಮಾಡುತ್ತಿದ್ದು, ಈ ದುಷ್ಟ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ನಾವ್ಯಾರೂ ವಿರಮಿಸುವುದಿಲ್ಲ. ಅದಕ್ಕಾಗಿ ಜನರು ಸಹ ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.

ನಕ್ಸಲಿಸಂ ಮುಕ್ತಕ್ಕೆ ಮೋದಿ, ಶಾ ಕಾರಣ:

ದೇಶದಲ್ಲಿ ನಕ್ಸಲಿಸಂ ಅನ್ನು ಪರಿಣಾಮಕಾರಿಯಾಗಿ ಬೇರು ಸಮೇತವಾಗಿ ತೆಗೆಯುವಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶ್ರಮಿಸಿದ್ದಾರೆ. ಈ ಇಬ್ಬರ ಶ್ರಮದಿಂದ ರೆಡ್ ಕಾರಿಡಾರ್ ಅನ್ನುವುದು ಸಂಪೂರ್ಣ ಅಳಿಸಿ ಹೋಗಿದೆ. ಸುಮಾರು 4 ಸಾವಿರಕ್ಕಿಂತ ಹೆಚ್ಚು ನಕ್ಸಲರು ಶರಣಾಗಿದ್ದಾರೆ ಎಂದು ಬೊಮ್ಮಾಯಿ ವಿವರಿಸಿದರು.