ನಮ್ಮ ನಡೆ ಕೃಷ್ಣೆ ಕಡೆ ಎಲ್ಲಿ ಹೋಯ್ತು ಎಂದು ಜನರಿಗೆ ಉತ್ತರ ಕೊಡಿ. ಗ್ಯಾರಂಟಿ ಬಗ್ಗೆ ವಿಶ್ವಾಸ ಇದ್ದರೆ ಸೂಟ್‌ಕೇಸ್ ಸಮೇತ ಯಾಕೆ ಠಿಕಾಣಿ ಹೂಡಿದ್ದೀರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನೆಯ ಸುರಿಮಳೆಗೈದರು.

ಬಾಗಲಕೋಟೆ (ಏ.01): ವಿಶೇಷ ಕ್ಯಾಬಿನೆಟ್ ಮಾಡಿ ಮುಳುಗಡೆ ಪ್ರದೇಶದ ರೈತರಿಗೆ ಪರಿಹಾರ ಕೊಡುತ್ತೇವೆ ಎಂದು ಪೊಳ್ಳು ಭರವಸೆ ನೀಡಿ ಇಲ್ಲಿಯವರೆಗೆ ಎಷ್ಟು ಸಾವಿರ ಕೋಟಿ ಬಿಡುಗಡೆ ಮಾಡಿದ್ದೀರಿ? ನಮ್ಮ ನಡೆ ಕೃಷ್ಣೆ ಕಡೆ ಎಲ್ಲಿ ಹೋಯ್ತು ಎಂದು ಜನರಿಗೆ ಉತ್ತರ ಕೊಡಿ. ಗ್ಯಾರಂಟಿ ಬಗ್ಗೆ ವಿಶ್ವಾಸ ಇದ್ದರೆ ಸೂಟ್‌ಕೇಸ್ ಸಮೇತ ಯಾಕೆ ಠಿಕಾಣಿ ಹೂಡಿದ್ದೀರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮುಖ್ಯಮಂತ್ರಿಗಳ ವಿರುದ್ಧ ಪ್ರಶ್ನೆಯ ಸುರಿಮಳೆಗೈದರು.

Add Asianetnews Kannada as a Preferred SourcegooglePreferred

ಉಪಚುನಾವಣೆ ನಿಮಿತ್ತ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರವಾಗಿ ನವನಗರದ ವಾರ್ಡ್ ನಂ.31, 35, 19ರಲ್ಲಿ ಮನೆಮನೆಗೆ ಅಬ್ಬರದ ಪ್ರಚಾರ ಮಾಡಿ ಕಾರ್ಯಕರ್ತರ ಮನೆಯಲ್ಲಿ ಚಹಾ ಸವಿದು ಮತಯಾಚನೆ ಮಾಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆ ಅನುದಾನ ವಿಚಾರಕ್ಕೆ ಸಿಎಂಗೆ ತಿರುಗೇಟು ನೀಡಿ ಬೊಗಳೆ ಹೊಡೆದುಕೊಂಡೆ ಮೂರು ವರ್ಷ ಕಳೆದಿದ್ದಾರೆ ಎಂದು ದೂರಿದರು.

ನಾಲ್ಕು ತಿಂಗಳ ಹಿಂದೆ ವಿಶೇಷ ಕ್ಯಾಬಿನೆಟ್ ಮಾಡಿ ಮುಳುಗಡೆ ಪ್ರದೇಶ ರೈತರಿಗೆ ಒಂದು ಎಕರೆ ನೀರಾವರಿ ಭೂಮಿಗೆ ₹40 ಲಕ್ಷ, ಒಣಭೂಮಿಗೆ ₹30 ಲಕ್ಷ ಅಂತ ಹೇಳಿದ್ದರು. ಎಷ್ಟು ಬಿಡುಗಡೆಯಾಗಿದೆ ಉತ್ತರ ಕೊಡಲಿ. 2010 ರಲ್ಲಿ ಸುಪ್ರೀಂ ಕೋರ್ಟ್‌ ಆದೇಶ ಹೊರತಾಗಿಯೂ ಆಂಧ್ರ, ತೆಲಂಗಾಣ ಡಿ ಸ್‌ಪ್ಯೂಟ್‌ ಆಯ್ತು ಅಂತ ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ನಾಲ್ಕು ವರ್ಷ ಮುಂದೆ ಹೋಗಲು ಬಿಡದೇ ಕೇಂದ್ರದ ಮೇಲೆ ಗೂಬೆ ಕೂಡಿಸಿಕೊಂಡು, ತಮ್ಮ ವೈಫಲ್ಯ ಮುಚ್ಚಿಕೊಳ್ಳುವ ಕುತಂತ್ರ, ಷಡ್ಯಂತ್ರ ಮಾಡುವಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ ಎಂದು ಕಿಡಿ ಕಾರಿದರು.

ಸರ್ಕಾರಕ್ಕೆ ರೈತರ ಬಗ್ಗೆ, ಉತ್ತರ ಕರ್ನಾಟಕ ಬಗ್ಗೆ ಕಾಳಜಿ ಇಲ್ಲ. ನೀರಾವರಿ ಯೋಜನೆಗೆ ಹಣ ಒದಗಿಸಲು ಸಮಯವಿಲ್ಲ, ಹಣವಂತೂ ಮೊದಲೇ ಇಲ್ಲ. ಬಿಜೆಪಿ ಮೇಲೆ ಭ್ರಷ್ಟಾಚಾರದ ಸುಳ್ಳು ಆರೋಪ ಹೊರಿಸಿ ಅಧಿಕಾರಕ್ಕೆ ಬಂದು ಹಗರಣಗಳ ಆಗರವಾಗಿ ನಿಂತಿದೆ. ನೈತಿಕತೆ ಇಲ್ಲದೇ ಬಾಗಲಕೋಟೆಯಲ್ಲಿ ಸೋಲುವ ಭಯದಿಂದ ಮುಖ್ಯಮಂತ್ರಿಗಳು 10-15 ಮಂತ್ರಿಗಳ ಜೊತೆ ಸೂಟಕೇಸ್ ಸಮೇತ ಠಿಕಾಣಿ ಹೂಡಿದ್ದಾರೆ. ದಾವಣಗೆರೆ, ಬಾಗಲಕೋಟೆಯಲ್ಲಿ ಸೋಲಿನ ಭಯದಲ್ಲಿ ಝೆಂಡಾ ಹಾಕಿಕೊಂಡು ಕೂತಿದ್ದಾರೆ. ಎರಡೂ ಕಡೆಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಭಿವೃದ್ಧಿ ಸಹಿಸದ ಕಾಂಗ್ರೆಸ್

ವಿಧಾನ ಪರಿಷತ್ ಸದಸ್ಯ ಪಿ.ಎಚ್ ಪೂಜಾರ್ ಮಾತನಾಡಿ, ಅಭಿವೃದ್ಧಿ ಸಹಿಸದ ಕಾಂಗ್ರೆಸ್ ಗೂಬೆಕೂರಿಸಿ ಅಧಿಕಾರಕ್ಕೆ ಬರುವ ನೀಚ ಬುದ್ಧಿಯನ್ನು ಮೈಗೂಡಿಸಿಕೊಂಡಿದೆ. ಬಾಗಲಕೋಟೆಯ ಬುಡಾ, ಆರ್.ಟಿ.ಒ ಡ್ರೈವಿಂಗ್ ಟ್ರ್ಯಾಕ್, ಮೇಲ್ದರ್ಜೆಗೆ ಏರಿಸಿದ ನಗರಸಭೆ, ಜಿಲ್ಲಾಡಳಿತ ಭವನದ ನವೀಕರಣ ಸೇರಿದಂತೆ ಸಾಲು ಸಾಲು ಬಿಜೆಪಿ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಕಣ್ತುಂಬಿಕೊಳ್ಳಲಿ. ಸುಳ್ಳು ಹರಡುವುದನ್ನು ಬಿಟ್ಟು ಇನ್ನಾದರೂ ಪಾಠ ಕಲಿಯಲಿ. ವೀರಣ್ಣ ಚರಂತಿಮಠರ ಗೆಲುವನ್ನು ತಡೆಯಲು ಸಾಧ್ಯವಿಲ್ಲ ಎಂದರು. ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಮಾತನಾಡಿದರು. ಈ ವೇಳೆ ಎಂ.ಡಿ.ಲಕ್ಷ್ಮೀ ನಾರಾಯಣ, ಜಮಖಂಡಿ ಶಾಸಕ ಜಗದೀಶ್ ಗುಡಗುಂಟಿ, ಮಾಜಿ ಸಚಿವ ರಾಜುಗೌಡ ನಾಯಕ್, ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ್ ಸೇರಿದಂತೆ ಅನೇಕರು ಇದ್ದರು.