ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷ ಮುನ್ನಡೆ ಸಾಧಿಸಿದ್ದು, ಅವರ ನಿವಾಸಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ. ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿರುವ ವಿಜಯ್ ಅವರ ಪ್ರವೇಶವು ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಫಲಿತಾಂಶದ ನಿರೀಕ್ಷೆ ಹೆಚ್ಚಾಗಿದೆ.
ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಂದುವರಿಯುತ್ತಿರುವ ನಡುವೆ, ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ನಾಯಕ ವಿಜಯ್ ಅವರ ಪಕ್ಷ ಮುನ್ನಡೆ ಸಾಧಿಸಿರುವ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ಕಟ್ಟು ನಿಟ್ಟುಗೊಳಿಸಲಾಗಿದೆ. ಚೆನ್ನೈಯಲ್ಲಿರುವ ವಿಜಯ್ ನಿವಾಸದ ಸುತ್ತಮುತ್ತ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ವಿಜಯ್ ಅವರ ಪ್ರಚಾರ ಸಭೆಗಳಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಹರಿದುಬಂದಿದ್ದರು. ಈ ವೇಳೆ ಕೆಲವು ದುರ್ಘಟನೆಗಳೂ ಸಂಭವಿಸಿವೆ. ವಿಶೇಷವಾಗಿ ಸೆಪ್ಟೆಂಬರ್ 27, 2025 ರಂದು ಕರೂರ್‌ನಲ್ಲಿ ನಡೆದ ವಿಜಯ್ ಅವರ ಮೊದಲ ಪ್ರಮುಖ ರಾಜಕೀಯ ರ‍್ಯಾಲಿಯಲ್ಲಿ ಜನದಟ್ಟಣೆಯಿಂದ ಕಾಲ್ತುಳಿತ ಉಂಟಾಗಿ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ 40ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದರ ಜೊತೆಗೆ, ವಿಜಯ್ ಅವರ ವಾಹನವನ್ನು ಹಿಂಬಾಲಿಸಿದ ಅಭಿಮಾನಿಗಳು ಹಲವೆಡೆ ಅಪಘಾತಕ್ಕೀಡಾದ ಘಟನೆಗಳೂ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಏಪ್ರಿಲ್ 23ರಂದು ನಡೆದ ವಿಧಾನಸಭಾ ಚುನಾವಣೆಯ ನಂತರ ಇಂದು ಮತ ಎಣಿಕೆ ನಡೆಯುತ್ತಿದ್ದು, ಈ ಬಾರಿ ವಿಜಯ್ ಅವರ ರಾಜಕೀಯ ಪ್ರವೇಶವೇ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿರುವ ವಿಜಯ್ ಅವರ ಪ್ರತಿಯೊಂದು ನಡೆಗೂ ಅಭಿಮಾನಿಗಳು ಹಾಗೂ ರಾಜಕೀಯ ವೀಕ್ಷಕರು ವಿಶೇಷ ಗಮನ ಹರಿಸುತ್ತಿದ್ದಾರೆ.
ಮೊದಲ ಚುನಾವಣೆಯಲ್ಲೇ ಭಾರೀ ಕುತೂಹಲ
ಈ ಚುನಾವಣೆಯು ವಿಜಯ್ ಅವರ ರಾಜಕೀಯ ಪಾದಾರ್ಪಣೆಗೆ ಮಹತ್ವದ ಘಟ್ಟವಾಗಿದೆ. ಅವರು ಪೆರಂಬೂರು ಮತ್ತು ತಿರುಚ್ಚಿ ಪೂರ್ವ ಎಂಬ ಎರಡು ಪ್ರಮುಖ ಕ್ಷೇತ್ರಗಳಿಂದ ಸ್ಪರ್ಧಿಸಿದ್ದು, ತಮ್ಮ ಪಕ್ಷ ಟಿವಿಕೆ ಮೂಲಕ ರಾಜ್ಯದಾದ್ಯಂತ ಹಲವಾರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಇದರಿಂದ ಈ ಚುನಾವಣೆ ಅಪಾರ ಕುತೂಹಲವನ್ನು ಹುಟ್ಟುಹಾಕಿದೆ.
ಚೆನ್ನೈ ಕ್ಷೇತ್ರಗಳ ಮಹತ್ವ
ರಾಜಧಾನಿ ಚೆನ್ನೈನಲ್ಲಿ ಒಟ್ಟು 16 ವಿಧಾನಸಭಾ ಕ್ಷೇತ್ರಗಳಿದ್ದು, ರಾಜ್ಯ ರಾಜಕೀಯದಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ. ರಾಧಾಕೃಷ್ಣನ್ ನಗರ, ಪೆರಂಬೂರು, ಕೊಳತ್ತೂರು, ವಿಲ್ಲಿವಕ್ಕಂ, ತಿರು.ವಿ.ಕೆ. ನಗರ, ಎಗ್ಮೋರ್, ರಾಯಪುರಂ, ಬಂದರು, ಚೆಪಾಕ್–ತಿರುವಲ್ಲಿಕೇಣಿ, ಅಣ್ಣಾ ನಗರ, ಸೈದಾಪೇಟ್, ಟಿ.ನಗರ, ಮೈಲಾಪುರ್, ವೆಲಚೇರಿ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳು ಈ ಪಟ್ಟಿಯಲ್ಲಿ ಸೇರಿವೆ.
2021ರ ಫಲಿತಾಂಶ ಮತ್ತು ಇಂದಿನ ಪೈಪೋಟಿ
2021ರ ವಿಧಾನಸಭಾ ಚುನಾವಣೆಯಲ್ಲಿ ಚೆನ್ನೈನ 16 ಕ್ಷೇತ್ರಗಳಲ್ಲಿ ಡಿಎಂಕೆ 15 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 1 ಸ್ಥಾನವನ್ನು ಪಡೆದಿತ್ತು. ಎಐಎಡಿಎಂಕೆ ಯಾವುದೇ ಸ್ಥಾನವನ್ನು ಗೆಲ್ಲಲಿಲ್ಲ. ಆದರೆ, ಈ ಬಾರಿ ವಿಜಯ್ ಅವರ ಪ್ರವೇಶದಿಂದ ರಾಜಕೀಯ ಸಮೀಕರಣಗಳು ಬದಲಾಗುವ ಸೂಚನೆಗಳು ದೊರೆಯುತ್ತಿವೆ. ಆಡಳಿತ ಪಕ್ಷ ಡಿಎಂಕೆ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಹರಸಾಹಸ ಪಡಬೇಕಾಗಿದ್ದು, ಎಐಎಡಿಎಂಕೆ ಹಾಗೂ ಟಿವಿಕೆ ಪಕ್ಷಗಳು ಕಠಿಣ ಪೈಪೋಟಿ ನೀಡುವ ನಿರೀಕ್ಷೆಯಿದೆ.
ಒಟ್ಟಿನಲ್ಲಿ ಟಿವಿಕೆ ಪಕ್ಷದ ಮುನ್ನಡೆ ಹಾಗೂ ವಿಜಯ್ ಅವರ ರಾಜಕೀಯ ಪ್ರಭಾವ ತಮಿಳುನಾಡಿನ ಚುನಾವಣೆಗೆ ಹೊಸ ಚೈತನ್ಯ ನೀಡಿದ್ದು, ಮತ ಎಣಿಕೆ ಮುಂದುವರಿಯುತ್ತಿರುವ ಈ ಸಂದರ್ಭದಲ್ಲಿ ಭದ್ರತಾ ವ್ಯವಸ್ಥೆಯೂ ಕಠಿಣಗೊಳಿಸಲಾಗಿದೆ. ಮುಂದಿನ ಕೆಲವು ಗಂಟೆಗಳಲ್ಲಿ ಸ್ಪಷ್ಟವಾಗುವ ಫಲಿತಾಂಶ ರಾಜ್ಯದ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದ್ದು, ಎಲ್ಲರ ಕಣ್ಣು ಈಗ ಅಂತಿಮ ಫಲಿತಾಂಶದತ್ತ ನೆಟ್ಟಿದೆ.


