ದಿನಕ್ಕೆ 6 ಚಾಟಿ ಏಟು, 48 ದಿನ ಉಪವಾಸ, ಚಪ್ಪಲಿ ನಿಷೇಧ: ಏನಿದು ಅಣ್ಣಾಮಲೈ ಪ್ರತಿಭಟನೆ? ಶಾಕಿಂಗ್ ವಿಡಿಯೋ ವೈರಲ್
ದಿನಕ್ಕೆ 6 ಚಾಟಿ ಏಟು, 48 ದಿನ ಉಪವಾಸ, ಚಪ್ಪಲಿ ನಿಷೇಧ: ಏನಿದು ಅಣ್ಣಾಮಲೈ ಪ್ರತಿಭಟನೆ? ಶಾಕಿಂಗ್ ವಿಡಿಯೋ ವೈರಲ್ ಆಗಿದೆ.
ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಆದರೆ ಈ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಆಡಳಿತಾರೂಢ ಡಿಎಂಕೆ ಸರ್ಕಾರ ಆರೋಪಿಯ ಪರವಾಗಿ ನಿಂತಿರುವುದಾಗಿ ಬಿಜೆಪಿ ಆರೋಪಿಸುತ್ತಲೇ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಇದಾಗಲೇ ಭಾರೀ ಆಕ್ರೋಶ, ಪ್ರತಿಭಟನೆಗಳು ಕೂಡ ನಡೆದುಹೋಗಿವೆ. ಆರೋಪಿಯನ್ನು ಬಂಧಿಸಲಾಗಿದ್ದರೂ ಸರ್ಕಾರ ಆತನ ಪರವಾಗಿ ನಿಂತಿದೆ ಎನ್ನುವುದು ಬಿಜೆಪಿ ಆರೋಪ. ಎರಡನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿ ದೂರನ್ನು ದಾಖಲಿಸಿದಾಗ ವಿಷಯ ಬೆಳಕಿಗೆ ಬಂದಿತ್ತು. ವಿದ್ಯಾರ್ಥಿ ಸಂಘಟನೆಗಳಿಂದಲೂ ಪ್ರತಿಭಟನೆ ನಡೆಯುತ್ತಿದೆ. ಆದರೂ ಸರ್ಕಾರ ಮಾತ್ರ ಮೌನವಾಗಿದೆ ಎನ್ನುವುದು ಬಿಜೆಪಿಯ ರಾಜ್ಯಾಧ್ಯಕ್ಷರಾಗಿರುವ ಅಣ್ಣಾಮಲೈ ಆರೋಪ.
ಇದೀಗ ಡಿಎಂಕೆ ಸರ್ಕಾರದ ವಿರುದ್ಧ ಖುದ್ದು ದಂಡಿಸಿಕೊಳ್ಳುವ ಶಿಕ್ಷೆಯನ್ನು ತಾವೇ ಕೊಟ್ಟುಕೊಂಡಿದ್ದಾರೆ ಅಣ್ಣಾಮಲೈ. ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಈ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೂ ನಾನು ಚಪ್ಪಲಿ ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಮಾತ್ರವಲ್ಲದೇ, ದಿನಕ್ಕೆ ಆರು ಬಾರಿ ಚಾಟಿ ಏಟು, 48 ದಿನ ಉಪವಾಸ ಮಾಡುವುದಾಗಿಯೂ ಪ್ರತಿಜ್ಞೆ ಮಾಡಿದ್ದಾರೆ. ಅದರಂತೆ ತಮ್ಮ ನಿವಾಸದ ಎದುರು ಷರ್ಟ್ ಬಿಚ್ಚಿಕೊಂಡು ಅಣ್ಣಾಮಲೈ ಅವರು ಚಾಟಿಯಿಂದ ಏಟು ಕೊಟ್ಟುಕೊಳ್ಳುತ್ತಿರುವ ಶಾಕಿಂಗ್ ವಿಡಿಯೋ ವೈರಲ್ ಆಗಿದೆ. ಬಳಿಕ ಬಿಜೆಪಿ ಕಾರ್ಯಕರ್ತರು ಅವರನ್ನು ಬಂದು ತಬ್ಬಿಕೊಂಡಿದ್ದಾರೆ.
ಪತ್ನಿ- ಮಗ ದೂರದಲ್ಲಿ ವಾಸಿಸ್ತಿರೋದಕ್ಕೆ ಕಾರಣ... ಮೊದಲ ಬಾರಿ ಮೌನ ಮುರಿದ ನಟ ವಿನೋದ್ ರಾಜ್
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಡಿಎಂಕೆ ಸರ್ಕಾರದ ವಿರುದ್ಧ ಭಾರಿ ಟೀಕೆಗಳು ಕೇಳಿಬರುತ್ತಿವೆ. ಲೈಂಗಿಕ ದೌರ್ಜನ್ಯ ಪ್ರಕರಣವನ್ನು ನಿಭಾಯಿಸುವಲ್ಲಿ ಪೊಲೀಸರು ಮತ್ತು ರಾಜ್ಯ ಸರ್ಕಾರ ನಿರಾಸಕ್ತಿ ತೋರಿಸುತ್ತಿದೆ ಎಂದು ಬಿಜೆಪಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿ ಸಂಘಟನೆಗಳು ಆರೋಪಿಸುತ್ತಿವೆ.
ತಮ್ಮ ಮನೆಯ ಎದುರೇ ಈ ರೀತಿ ದೇಹ ದಂಡಿಸಿಕೊಳ್ಳುವುದಕ್ಕೆ ಕಾರಣವೂ ಇದೆ. ಅದೇನೆಂದರೆ, ಬಿಜೆಪಿ ಕಾರ್ಯಕರ್ತರು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿದರೆ, ಪೊಲೀಸರು ಅವರನ್ನು ಬಂಧಿಸುತ್ತಾರೆ. ಆದ್ದರಿಂದ ಬಿಜೆಪಿ ಸದಸ್ಯರು ತಮ್ಮ ಮನೆಗಳ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇಷ್ಟೇ ಅಲ್ಲದೇ. ಸರ್ಕಾರದ ಅಧಿಕಾರಿಗಳು ಮತ್ತು ಪೊಲೀಸರು ಸಂತ್ರಸ್ತೆಯ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ ಹಾಗು ಆಕೆಯ ಘನತೆಗೆ ಧಕ್ಕೆ ತಂದಿದ್ದಾರೆ. ಅಣ್ಣಾ ವಿಶ್ವವಿದ್ಯಾಲಯದ ಸಿಸಿಟಿವಿ ಕೊರತೆ ಇದೆ ಎಂದು ಅಣ್ಣಾಮಲೈ ಆರೋಪಿಸಿದ್ದಾರೆ. ಇದು ನಾಚಿಕೆಗೇಡಿನ ಕೃತ್ಯ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ತಾವು ಮೂರು ಪ್ರತಿಜ್ಞೆ ಮಾಡಿದ್ದಾರೆ.