ಮೈಸೂರಿನಲ್ಲಿ ಮುಂದುವರಿದ ಸಂಸದ ಪ್ರತಾತ್ ಸಿಂಹ- ಕಾಂಗ್ರೆಸ್ ಮುಖಂಡರ ಜಟಾಪಟಿ
ಒಟ್ಟಾರೆ ಕಾಂಗ್ರೆಸ್‌ನ ಚರ್ಚೆ, ಬಹಿರಂಗ ಸವಾಲು ಕೇವಲ ಪತ್ರದ ನೀಡುವ ಮೂಲಕ ಮುಕ್ತಾಯವಾಗಿದೆ. ಆದರೆ ಪರಿಸ್ಥಿತಿ ಮಾತ್ರ ಇನ್ನೂ ತಿಳಿಯಾಗಿಲ್ಲ. ನಾವು ಸಂಸದರನ್ನ ಹುಡುಕೇ ಹುಡುಕುತ್ತೇವೆ, ಚರ್ಚೆ ಮಾಡೇ ಮಾಡುತ್ತೇವೆಂದು ಎಂ.ಲಕ್ಷ್ಮಣ್ ಪಟ್ಟು ಹಿಡಿದಿದ್ದು ಮುಂದೆ ಯಾವ ತಿರುವು ಪಡೆದುಕೊಳ್ಳುತ್ತೆ ಕಾದು ನೋಡಬೇಕಿದೆ.

ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು
ಮೈಸೂರು(ಸೆ.06): ಮೈಸೂರಿನಲ್ಲಿ ಸಂಸದ ಪ್ರತಾತ್ ಸಿಂಹ ವರ್ಸಸ್ ಕಾಂಗ್ರೆಸ್ ಮುಖಂಡರ ಜಟಾಪಟಿ ಮುಂದುವರೆದಿದೆ. ಪ್ರತಾತ್ ಸಿಂಹ ಸೋಲಿಸಿ ಅಂಥ ಸಿದ್ದರಾಮಯ್ಯ ಮನವಿ ಮಾಡಿದ್ದಕ್ಕೆ ಕೆಂಡಾಮಂಡಲ ಆಗಿದ್ದ ಪ್ರತಾತ್ ಸಿಂಹ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದರು. ಇದೀಗ ಸಿದ್ದು ವಿರುದ್ಧ ಮಾತನಾಡಿದ್ದ ಪ್ರತಾಪ್ ಸಿಂಹ ಹಿಂದೆ ಕೈ ಕಾರ್ಯಕರ್ತರು ಮುಗಿಬಿದಿದ್ದಾರೆ. ತಳ್ಳಾಟ ನೂಕಾಟ... ಪೊಲೀಸರ ಜೊತೆ ಜಟಾಪಟಿ... ಸಂಸದ ಕಚೇರಿ ಬಳಿ ಕುರ್ಚಿ ಟೇಬಲ್ ತಂದು ಕುಳಿತ ಕೈ ಕಾರ್ಯಕರ್ತರು.
ಇದು ಇವತ್ತು ಮೈಸೂರಿನ ಜಲದರ್ಶನಿ ಅಥಿತಿಗೃಹದಲ್ಲಿರುವ ಸಂಸದ ಪ್ರತಾತ್ ಸಿಂಹ ಕಚೇರಿ ಬಳಿ ಕಾಂಗ್ರೆಸ್ ನಡೆಸಿದ ಹೈ ಡ್ರಾಮದ ದೃಶ್ಯಗಳು. ಇದಕ್ಕೆ ಕಾರಣವಾಗಿದ್ದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರ ಬಹಿರಂಗ ಸವಾಲು. ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದ ಸಂಸದ ಪ್ರತಾತ್ ಸಿಂಹಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಬಹಿರಂಗ ಚರ್ಚೆಗೆ ಬರುವಂತೆ ಪಂಥಾಹ್ವಾನ ನೀಡಿದ್ರು. ಸಿಎಂ ಸಿದ್ದರಾಮಯ್ಯ ಅವರ ಸಾಧನೆಯ ದಾಖಲೆ ತರುತ್ತೇನೆ ನೀವು ನಿಮ್ಮ ಅವಧಿಯಲ್ಲಿ ಮಾಡಿರುವ ಕೆಲಸಗಳ ದಾಖಲೆಗಳನ್ನ ತನ್ನಿ ಎಂದು ಸವಾಲು ಹಾಕಿದ್ರು. ಅದರಂತೆ ಇಂದು ಸಂಸದರ ಕಚೇರಿ ಬಳಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಾರ್ಯಕರ್ತರ ಜೊತೆ ತೆರಳಿ ಚರ್ಚೆಗೆ ಒತ್ತಾಯ ಮಾಡಿದ್ರು.
ಸಿದ್ದರಾಮಯ್ಯಗೆ ಬಡವರ ಮಕ್ಕಳು ಉದ್ಧಾರವಾಗಬಾರದು: ಪ್ರತಾಪ್ ಸಿಂಹ ವಾಗ್ದಾಳಿ
ಎಂ.ಲಕ್ಷ್ಮಣ್ ಜೊತೆ ಕೈ ಕಾರ್ಯಕರ್ತರು ಸಹ ಆಗಮಿಸಿದ್ರು. ಈ ವೇಳೆ ಸಂಸದರು ಕಚೇರಿಯಲ್ಲಿ ಇರಲಿಲ್ಲ. ಪೊಲೀಸರ ಕೈ ಮುಖಂಡರು ಹಾಗೂ ಕಾರ್ಯಕರ್ತರನ್ನ ಸಂಸದರ ಕಚೇರಿ ಆವರಣದೊಳಗೆ ಬಿಡಲು ನಿರಾಕರಿಸಿದ್ರು. ಇದರಿಂದ ಕೆಲಕಾಲ ಬಿಗುವಿನ ವಾತಾವರಣ ಉಂಟಾಗಿತ್ತು. ನಾವು ಒಳಗೆ ಹೋಗೇ ಹೋಗುತ್ತೇಂದು ಪಟ್ಟು ಹಿಡಿದಿದ್ರು. ಪೊಲೀಸರು ಗೇಟ್ ಬಂದ್ ಮಾಡಿ ಎಲ್ಲರನ್ನ ಹೊರಗೆ ಕಳುಹಿಸಿದ್ರು. ಈ ವೇಳೆ ಮಾತಿನ ಚಕಮಕಿ ಸಹ ನಡೆಯಿತು. ಕೊನೆಗೆ ಚರ್ಚೆ ಬೇಡ ಸಂಸದರ ಆಪ್ತ ಸಹಾಯಕರಿಗೆ ಒಂದು ಮನವಿ ಪತ್ರ ಕೊಟ್ಟು ಬರುತ್ತೇಂದು ಕೆಪಿಸಿಸಿ ವಕ್ತಾರ ಹಾಗೂ ಕಾರ್ಯಕರ್ಯರು ಮನವಿ ಮಾಡಿದ್ರು.
ಇನ್ನೂ ಕಾಂಗ್ರೆಸ್ ಮನವಿಗೆ ಸ್ಪಂದಿಸಿದ ಪೊಲೀಸರು ಮನವಿ ಪತ್ರ ನೀಡಲು ಅನುಮತಿ ನೀಡಿದ್ರು. ಈ ವೇಳೆ ಚಿತ್ರೀಕರಣ ಮಾಡುತ್ತಿದ್ದ ಮಾಧ್ಯಮದವರನ್ನ ತಡೆದ ಘಟನೆಯೂ ನಡೆಯಿತು. ಈ ವೇಳೆ ಮಾಧ್ಯಮದವರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ಸಹ ನಡೆಯಿತು. ಮನವಿ ಪತ್ರ ಸಲ್ಲಿಸಿದ ಕೈ ಕಾರ್ಯಕರ್ತರು ವಾಪಸ್ ಆದ್ರು ಎಂದು ಗ್ರಾಮಾಂತರ ಅಧ್ಯಕ್ಷ ಬಿ.ಜೆ ವಿಜಯಕುಮಾರ್ ತಿಳಿಸಿದ್ದಾರೆ.
ಒಟ್ಟಾರೆ ಕಾಂಗ್ರೆಸ್‌ನ ಚರ್ಚೆ, ಬಹಿರಂಗ ಸವಾಲು ಕೇವಲ ಪತ್ರದ ನೀಡುವ ಮೂಲಕ ಮುಕ್ತಾಯವಾಗಿದೆ. ಆದರೆ ಪರಿಸ್ಥಿತಿ ಮಾತ್ರ ಇನ್ನೂ ತಿಳಿಯಾಗಿಲ್ಲ. ನಾವು ಸಂಸದರನ್ನ ಹುಡುಕೇ ಹುಡುಕುತ್ತೇವೆ, ಚರ್ಚೆ ಮಾಡೇ ಮಾಡುತ್ತೇವೆಂದು ಎಂ.ಲಕ್ಷ್ಮಣ್ ಪಟ್ಟು ಹಿಡಿದಿದ್ದು ಮುಂದೆ ಯಾವ ತಿರುವು ಪಡೆದುಕೊಳ್ಳುತ್ತೆ ಕಾದು ನೋಡಬೇಕಿದೆ.