ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 135 ಸ್ಥಾನಗಳ ಸ್ಪಷ್ಟಬಹುಮತದ ವಿಜಯ ಪತಾಕೆ ಹಾರಿಸಿದೆ. ಈ ಗೆಲುವಿಗೆ ಭಾರತ್‌ ಜೋಡೋ, ಮೇಕೆದಾಟು, ಪ್ರಜಾಧ್ವನಿಯಂತಹ ಬೃಹತ್‌ ಯಾತ್ರೆಗಳು ಒಂದೆಡೆ ಕಾರಣವಾದರೆ, ಮತ್ತೊಂದೆಡೆ ಬಿಜೆಪಿ ಸರ್ಕಾರದ ವಿರುದ್ಧ ಪ್ರಯೋಗಿಸಿದ ‘40% ಕಮಿಷನ್‌’ ಅಸ್ತ್ರ, ‘ಪೇಸಿಎಂ’ ಅಭಿಯಾನದಂತಹ ತಂತ್ರಗಳೂ ಪ್ರಮುಖ ಪಾತ್ರ ವಹಿಸಿದವು. 

ಬೆಂಗಳೂರು (ಮೇ.15): ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 135 ಸ್ಥಾನಗಳ ಸ್ಪಷ್ಟ ಬಹುಮತದ ವಿಜಯ ಪತಾಕೆ ಹಾರಿಸಿದೆ. ಈ ಗೆಲುವಿಗೆ ಭಾರತ್‌ ಜೋಡೋ, ಮೇಕೆದಾಟು, ಪ್ರಜಾಧ್ವನಿಯಂತಹ ಬೃಹತ್‌ ಯಾತ್ರೆಗಳು ಒಂದೆಡೆ ಕಾರಣವಾದರೆ, ಮತ್ತೊಂದೆಡೆ ಬಿಜೆಪಿ ಸರ್ಕಾರದ ವಿರುದ್ಧ ಪ್ರಯೋಗಿಸಿದ ‘40% ಕಮಿಷನ್‌’ ಅಸ್ತ್ರ, ‘ಪೇಸಿಎಂ’ ಅಭಿಯಾನದಂತಹ ತಂತ್ರಗಳೂ ಪ್ರಮುಖ ಪಾತ್ರ ವಹಿಸಿದವು. ಕಾಂಗ್ರೆಸ್‌ ನಡೆಸಿದ ಇಂತಹ ಕೆಲವು ಯಾತ್ರೆ ಹಾಗೂ ಸರ್ಕಾರದ ವೈಫಲ್ಯಗಳು, ಭ್ರಷ್ಟಾಚಾರ, ಹಗರಣಗಳನ್ನು ಜನರಿಗೆ ಮುಟ್ಟಿಸಲು ಪ್ರಯೋಗಿಸಿದ ಅಸ್ತ್ರಗಳನ್ನು ಸಿದ್ಧಪಡಿಸಿದ್ದು ಪಕ್ಷದ ರಾಜಕೀಯ ತಂತ್ರಗಾರ ಬಳ್ಳಾರಿ ಮೂಲದವರಾದ ಸುನಿಲ್‌ ಕನುಗೋಲು ಮತ್ತು ತಂಡ.

ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ನಾಯಕರು ನಡೆಸಿದ ‘ಭಾರತ್‌ ಜೋಡೋ’ ಯಾತ್ರೆಯ ರೂಪುರೇಷೆಯನ್ನು ಸಿದ್ಧಪಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜನರೊಂದಿಗೆ ಸಂಪರ್ಕ ಸಾಧಿಸಲು ಈ ಯಾತ್ರೆ ಅನುಕೂಲ ಮಾಡಿತು. ಬಿಜೆಪಿ ಆಡಳಿತ ವೈಫಲ್ಯ, ಭ್ರಷ್ಟಾಚಾರದ ವಿರುದ್ಧ ತನ್ನ ಸಾಮಾಜಿಕ ಜಾಲತಾಣದ ಮೂಲಕ ನಡೆಸಿದ 40 ಪರ್ಸೆಂಟ್‌ ಕಮಿಷನ್‌, ಪೇಸಿಎಂ ಅಭಿಯಾನದಂತಹ ಅಸ್ತ್ರಗಳನ್ನು ಸಿದ್ದಪಡಿಸಿಕೊಟ್ಟಿದ್ದು ಇದೇ ಸುನಿಲ್‌ ಕನುಗೋಲು. ಅವರು ಹೆಣೆದ ಈ ತಂತ್ರಗಳನ್ನು ಪಕ್ಷ ಸಮರ್ಥವಾಗಿ ಬಳಸಿಕೊಂಡಿದ್ದು ಕಾಂಗ್ರೆಸ್‌ ಸ್ಪಷ್ಟಬಹುಮತದೊಂದಿಗೆ ಅಧಿಕಾರ ಹಿಡಿಯಲು ಸಹಾಯವಾದವು.

ಯಡಿಯೂರಪ್ಪ, ಶೆಟ್ಟರ್, ಈಶ್ವರಪ್ಪರನ್ನು ಕಡೆಗಣಿಸಿರೋದು ಬಿಜೆಪಿ‌ಯ ಇಂದಿನ ಸ್ಥಿತಿಗೆ ಕಾರಣ: ದಿಂಗಾಲೇಶ್ವರ ಸ್ವಾಮೀಜಿ

ಚುನಾವಣೆಗೂ ಮುನ್ನ ಕಾಂಗ್ರೆಸ್‌ ಪಕ್ಷ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಜನರಿಗೆ ಪರಿಣಾಮಕಾರಿಯಾಗಿ ಮುಟ್ಟಿಸುವಂತಹ ಪ್ರಚಾರದ ತಂತ್ರಗಾರಿಕೆ ಹಿಂದೆ ಈ ತಂಡ ಕೆಲಸ ಮಾಡಿದೆ. ಪಕ್ಷದ ಅಭ್ಯರ್ಥಿಗಳ ಆಯ್ಕೆ ಹಾಗೂ ಬಹಳ ಬೇಗ ಪಟ್ಟಿಬಿಡುಗಡೆ ಮಾಡುವ ವಿಚಾರದಲ್ಲೂ ಕಾಂಗ್ರೆಸ್‌ ಸುನಿಲ್‌ ವರದಿಯನ್ನು ಪರಿಗಣಿಸಿದ್ದು ವಿಶೇಷ. ಪಕ್ಷದ ಕೆಲವು ನಾಯಕರನ್ನು ಹೊರತುಪಡಿಸಿ ಮಿಕ್ಕೆಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಿ ಇವರ ತಂಡ ವರದಿ ನೀಡಿತ್ತು.

ಸುನೀಲ್‌ ಕನುಗೋಲು ಯಾರು?: 2014ರ ರಾಜ್ಯ ವಿಧಾನಸಭೆ ಚುನಾವಣೆ ಸಮಯದಲ್ಲಿ ಬಿಜೆಪಿ ಪರ ಚುನಾವಣಾ ತಂತ್ರಗಾರರಾಗಿ ಕೆಲಸ ಮಾಡಿದ್ದ ಪ್ರಶಾಂತ್‌ ಕಿಶೋರ್‌ ತಂಡದಲ್ಲಿ ಸುನಿಲ್‌ ಕನಗೋಲು ಕಾರ್ಯನಿರ್ವಹಿಸಿದ್ದರು. ಬದಲಾದ ಸನ್ನಿವೇಶದಲ್ಲಿ ಆ ತಂಡದಿಂದ ಬೇರ್ಪಟ್ಟು ‘ಮೈಟ್‌ ಶೇರ್‌ ಅನಾಲಿಟಿಕ್ಸ್‌’ ಹೆಸರಲ್ಲಿ ತಮ್ಮದೇ ತಂಡದೊಂದಿಗೆ ಬೇರೆ ಬೇರೆ ರಾಜ್ಯಗಳಲ್ಲಿ ಡಿಎಂಕೆ, ಎಐಡಿಎಂಕೆ ಸೇರಿದಂತೆ ವಿವಿಧ ಪಕ್ಷಗಳ ಪರವಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಬಳಿಕ ಕಾಂಗ್ರೆಸ್‌ಗೆ ಹತ್ತಿರವಾಗಿದ್ದ ಸುನೀಲ್‌ ರಾಹುಲ್‌ ಗಾಂಧಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡರು. 

Davanagere: ಆಸ್ತಿ ವಿಚಾರಕ್ಕೆ ಆಸ್ಪತ್ರೆಯಲ್ಲೇ ಅಣ್ಣನಿಗೆ ಚಾಕು ಹಾಕಿ ಕೊಲೆ ಮಾಡಿದ ತಮ್ಮ

ಕಳೆದ ವರ್ಷ ಕಾಂಗ್ರೆಸ್‌ ನಾಯಕರು ನಡೆಸಿದ್ದ ಚಿಂತನಾ ಶಿಬಿರದ ಬಳಿಕ ಸುನೀಲ್‌ ಅವರನ್ನು ಸೋನಿಯಾ ಗಾಂಧಿ ಮುಂಬರುವ 2024ರ ಲೋಕಸಭೆ ಚುನಾವಣೆಯ ಕಾಂಗ್ರೆಸ್‌ ಪರ ತಂತ್ರಗಾರರಾಗಿ ನೇಮಿಸುವ ಜತೆಗೆ ಬಳಿಕ ಕರ್ನಾಟಕ ವಿಧಾನಸಬೆ ಚುನಾವಣೆಗೂ ತಂತ್ರಗಳನ್ನು ಹೆಣೆಯುವ ಜವಾಬ್ದಾರಿ ನೀಡಿದ್ದರು. ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಸುನೀಲ ಕನುಗೋಲು ಮುಂದೆ ಸಾಲು ಸಾಲು ಸವಾಲುಗಳು ನಿಂತಿದೆ. ಮುಂಬರುವ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಪರ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ಮಿಜೋರಂನಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ವಿಷಯದಲ್ಲಿ ತಂತ್ರಗಾರಿಕೆ ಮಾಡುವ ಸವಾಲು ಇವರ ಮುಂದಿದೆ.