ಗ್ಯಾರಂಟಿ ಯೋಜನೆಯಡಿ ರಾಜ್ಯದ ಬಡವರಿಗೆ 10 ಕೆ.ಜಿ. ಅಕ್ಕಿ ವಿತರಣೆ ಮಾಡಲು ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ನೀಡುತ್ತಿಲ್ಲ ಎಂಬ ಕಾಂಗ್ರೆಸ್ ಆರೋಪಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ/ಶಿವಮೊಗ್ಗ (ಜೂ.19): ಗ್ಯಾರಂಟಿ ಯೋಜನೆಯಡಿ ರಾಜ್ಯದ ಬಡವರಿಗೆ 10 ಕೆ.ಜಿ. ಅಕ್ಕಿ ವಿತರಣೆ ಮಾಡಲು ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ನೀಡುತ್ತಿಲ್ಲ ಎಂಬ ಕಾಂಗ್ರೆಸ್ ಆರೋಪಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೆಚ್ಚುವರಿ ಅಕ್ಕಿಯನ್ನು ಖರೀದಿ ಮಾಡಿ ಕೊಡುವುದು ರಾಜ್ಯ ಸರ್ಕಾರದ ಕರ್ತವ್ಯ. ಕೊಟ್ಟಭರವಸೆಯಂತೆ ಅಕ್ಕಿ ವಿತರಣೆ ಮಾಡಿ. 10 ಕೆ.ಜಿ.ಯಲ್ಲಿ 1 ಗ್ರಾಂ ಅಕ್ಕಿ ಕಡಿಮೆಯಾದರೂ ಜನ ಅದನ್ನು ಒಪ್ಪಲ್ಲ ಎಂದು ಯಡಿಯೂರಪ್ಪ ಖಡಕ್ಕಾಗಿ ಹೇಳಿದ್ದಾರೆ.
ಇದೇ ವೇಳೆ, ಕಾಂಗ್ರೆಸ್ ನಾಯಕರ ಆರೋಪಕ್ಕೆ ಕಿಡಿಕಾರಿರುವ ಬೊಮ್ಮಾಯಿ, ಜು.1ರಂದು ರಾಜ್ಯದ ಜನತೆಗೆ 10 ಕೆ.ಜಿ. ಉಚಿತ ಅಕ್ಕಿಯನ್ನು ನೀಡದೆ ಹೋದರೆ ಬಿಜೆಪಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಯಡಿಯೂರಪ್ಪ, ಅಕ್ಕಿ ವಿತರಣೆ ವಿಚಾರದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ವಿನಾಕಾರಣ ಗೊಂದಲ ಉಂಟುಮಾಡುತ್ತಿದ್ದಾರೆ. ಜನರಿಗೆ ಇವರು ಗ್ಯಾರಂಟಿ ಕೊಟ್ಟು ಈಗ ಕೇಂದ್ರ ಸರ್ಕಾರವನ್ನು ಅನಗತ್ಯವಾಗಿ ದೂಷಣೆ ಮಾಡೋದು ಸರಿಯಲ್ಲ.
ಸಾಂಸ್ಕೃತಿಕ, ಚಾರಿತ್ರಿಕ, ಬೌದ್ಧಿಕ ನೆಲೆಗಟ್ಟಿನಲ್ಲಿ ಮೈಸೂರು ಅಭಿವೃದ್ಧಿ: ಸಚಿವ ಮಹದೇವಪ್ಪ
ಈಗಾಗಲೇ ಕೇಂದ್ರ ಸರ್ಕಾರ 5 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ಕೊಡುತ್ತಿದೆ. ಯಾವುದೇ ಸಮಯದಲ್ಲೂ ಮೋದಿ ಅವರು ಹೆಚ್ಚುವರಿ ಅಕ್ಕಿ ಕೊಡ್ತೇವೆ ಎಂದು ಹೇಳಿಲ್ಲ. ಅದು ರಾಜ್ಯ ಸರ್ಕಾರದ ಜವಾಬ್ದಾರಿ. ಎಲ್ಲಿಯಾದರೂ ಅಕ್ಕಿಯನ್ನು ಖರೀದಿ ಮಾಡಿ ಕೊಡಲಿ. ಗೊಂದಲ ಮಾಡದೇ ಅಕ್ಕಿ ವಿತರಣೆ ಮಾಡಲಿ. 10 ಕೆ.ಜಿ.ಯಲ್ಲಿ 1 ಗ್ರಾಂ ಅಕ್ಕಿ ಕಡಿಮೆಯಾದರೂ ಜನ ಅದನ್ನು ಒಪ್ಪಲ್ಲ ಎಂದರು. ಇದೇ ವೇಳೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಬೊಮ್ಮಾಯಿ, ಅಕ್ಕಿ ವಿಷಯವಾಗಿ ಕಾಂಗ್ರೆಸ್ ಸರ್ಕಾರ ಪರಾರಯಯ ವ್ಯವಸ್ಥೆ ಮಾಡಬೇಕಿತ್ತು. ಚುನಾವಣೆ ವೇಳೆ ಭರವಸೆ ನೀಡಿ, ಇದೀಗ ಅಕ್ಕಿ ಬರುವುದಿಲ್ಲ ಎಂದು ಕುಂಟು ನೆಪ ಹೇಳುತ್ತಿದೆ.
ಯೋಜನೆಗಳ ಫಲಿತಾಂಶದ ಸಮಗ್ರ ವರದಿ ಸಲ್ಲಿಸಿ: ಅಧಿಕಾರಿಗಳಿಗೆ ಸಂಸದ ಡಿ.ಕೆ.ಸುರೇಶ್ ಸೂಚನೆ
ಇದು ಕಾಂಗ್ರೆಸ್ ಗ್ಯಾರಂಟಿಯಿಂದ ಹಿಂದೆ ಹೋದಂತೆ ಅರ್ಥ. ಒಂದು ವೇಳೆ, ಜು.1ರಂದು ರಾಜ್ಯದ ಜನತೆಗೆ 10 ಕೆ.ಜಿ. ಉಚಿತ ಅಕ್ಕಿ ನೀಡದೆ ಹೋದರೆ ಬಿಜೆಪಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ರಾಜ್ಯದ ರೈತರು ಅಕ್ಕಿ ಕೊಡುವುದಕ್ಕೆ ಮುಂದೆ ಬಂದರೆ ಅದನ್ನು ರಾಜ್ಯ ಸರ್ಕಾರ ಖರೀದಿ ಮಾಡಬೇಕು. ಕೇಂದ್ರದಿಂದ ಬಿಜೆಪಿಯವರೇ ಕೊಡಿಸಿ ಎನ್ನುವುದು ಸರಿಯಲ್ಲ. ಇದೀಗ ಛತ್ತೀಸ್‌ಗಢದಿಂದ ಅಕ್ಕಿ ತರುತ್ತೇವೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಹೇಗಾದರೂ ತರಲಿ, ನಮಗೆ ಬಡ ಜನರಿಗೆ ಒಳ್ಳೆಯದಾದರೆ ಸಾಕು. ಕಾಂಗ್ರೆಸ್ ಸರ್ಕಾರದ ಈ ಜನಪ್ರಿಯತೆ ಬಹಳ ದಿನ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದರು.
