ಕಾಂಗ್ರೆಸ್ ಹೈಕಮಾಂಡ್‌ಗೆ ರಾಜ್ಯ ಸರ್ಕಾರವೇ ಎಟಿಎಂ: ಬಿ.ವೈ.ವಿಜಯೇಂದ್ರ ಆರೋಪ
ರಾಜ್ಯದ ಕಾಂಗ್ರೆಸ್ ಸರ್ಕಾರ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 187 ಕೋಟಿ ಹಣವನ್ನು ತೆಲಂಗಣ ಬ್ಯಾಂಕ್ ಖಾತೆಗೆ ವರ್ಗಾಯಿಸಿರುವ ಅನುಮಾನವಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಗಂಭೀರ ಆರೋಪಿಸಿದರು.
ಶಿವಮೊಗ್ಗ (ಮೇ.31): ರಾಜ್ಯದ ಕಾಂಗ್ರೆಸ್ ಸರ್ಕಾರ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 187 ಕೋಟಿ ಹಣವನ್ನು ತೆಲಂಗಣ ಬ್ಯಾಂಕ್ ಖಾತೆಗೆ ವರ್ಗಾಯಿಸಿರುವ ಅನುಮಾನವಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಗಂಭೀರ ಆರೋಪಿಸಿದರು. ಪಟ್ಟಣದ ನಾಡ್ತಿ ಬಡಾವಣೆಯಲ್ಲಿರುವ ಮಾರಿಕಾಂಬಾ ಸಭಾಭವನದಲ್ಲಿ ನೈಋತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಮತದಾರರರು ಮತ್ತು ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
ಬಿಜೆಪಿ ಪಕ್ಷ ಪ್ರಶ್ನಿಸುವ ಮೊದಲೇ ರಾಜ್ಯ ಸರ್ಕಾರ ಸಮಜಾಯಿಷಿ ನೀಡುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಹೈಕಮಾಂಡಿಗೆ ಎಟಿಎಂ ಆಗಿರುವ ಸರ್ಕಾರಕ್ಕೆ ಇದು ಪ್ರಥಮ ಸಾಕ್ಷಿಯಾಗಿದ್ದು ಅನೇಕ ಅವ್ಯವಹಾರ ಹೊರಬರಲಿದೆ. ಭ್ರಷ್ಟಾಚಾರದ ಆರೋಪ ಹೊತ್ತಿರುವ ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡಬೇಕು. ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ತನಿಖೆ ಬಳಿಕವಷ್ಟೇ ಚಂದ್ರಶೇಖರನ್ ಆತ್ಮಹತ್ಯೆ ಸತ್ಯ ಬಯಲು: ಗೃಹ ಸಚಿವ ಪರಮೇಶ್ವರ್
ರಾಜ್ಯ ಸರ್ಕಾರ ಅಭಿವೃದ್ಧಿಯಲ್ಲಿ ಶೂನ್ಯ ಸಾಧನೆ ಮಾಡಿದೆ. ವರ್ಷ ಕಳೆದಿದ್ದರು ವಿವಿಧ ಯೋಜನೆ, ಕಾಮಗಾರಿಯ ಗುದ್ದಲಿಪೂಜೆ ಸಹ ಮಾಡಲು ಸಾಧ್ಯವಾಗಿಲ್ಲ. ಬಿಜೆಪಿಯ ಬಗ್ಗೆ ತೆಗಳುತ್ತಿದ್ದ ಕಾಂಗ್ರೆಸ್ ಮುಖಂಡರ ನಿಜ ಸ್ವರೂಪ ರಾಜ್ಯದ ಜನರಿಗೆ ಗೊತ್ತಾಗಿದೆ ಎಂದರು. ಡಾ.ಧನಂಜಯ ಸರ್ಜಿ ಆಯ್ಕೆಯ ಬಗ್ಗೆ ನಾನಾ ಬಣ್ಣ ಕಟ್ಟುವ ಪ್ರಯತ್ನ ನಡೆಯಿತ್ತಿದೆ. ಕೆ.ಎಸ್. ಈಶ್ವರಪ್ಪ ಅವರೇ ಪ್ರಥಮವಾಗಿ ಸರ್ಜಿ ಹೆಸರು ಶಿಫಾರಸ್ಸು ಮಾಡಿದ್ದರು. ಅವರು ಹೊಟ್ಟೆಪಾಡಿಗಾಗಿ ರಾಜಕೀಯ ಮಾಡಬೇಕಾದ ಅವಶ್ಯಕತೆ ಇಲ್ಲ. ಪಕ್ಷ ಸಂಘಟನೆಗೆ ಶಕ್ತಿ ತುಂಬುತ್ತಿರುವ ಅವರಿಗೆ ದೇವದುರ್ಲಭ ಕಾರ್ಯಕರ್ತರು ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕು ಎಂದು ಮತಯಾಚಿಸಿದರು.
ಅಭಿವೃದ್ಧಿಗೆ ಹಣ ಕೇಳಿದರೆ ಗೃಹಲಕ್ಷ್ಮೀ ಯೋಜನೆಯಿಂದ ಜನ ನೆಮ್ಮದಿಯಾಗಿದ್ದಾರೆ. ಅಭಿವೃದ್ಧಿಗೆ ಯಾಕೆ ಹಣಬೇಕು ಅಂತ ಸಿದ್ದರಾಮಯ್ಯ ವೈಯಕ್ತಿಕ ಭಾವನೆಯನ್ನು ನನ್ನೊಂದಿಗೆ ಹಂಚಿಕೊಂಡಿದ್ದಾರೆ. ಮತ ಗಳಿಕೆಗಾಗಿ ಈ ದೇಶದಲ್ಲಿ ಹುಟ್ಟಿರೋದೇ ಸ್ವೇಚ್ಛಾಚಾರಕ್ಕೆ ಎಂಬ ಸಮುದಾಯದ ತುಷ್ಠೀಕರಣಕ್ಕೆ ಕಾಂಗ್ರೆಸ್ಸಿಗೆ ಇರುವುದು ನಾಚಿಕೆ ಗೇಡು ಮತ್ತು ಈ ಪಕ್ಷವನ್ನ ಗುಡಿಸಿ ಹಾಕಬೇಕಿದೆ ಸರ್ಕಾರದ ವರ್ಷದ ಸಂಭ್ರಮ ಆಚರಿಸಿಕೊಳ್ಳುವ ಅರ್ಹತೆ ಕೂಡ ಅವರಿಗಿಲ್ಲ. ಅಡ್ಡ ದಿಡ್ಡಿ ಆಡಳಿತ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂಬ ಸಂದೇಶ ಈ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ನೀಡಬೇಕಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಶಿವಮೊಗ್ಗದಲ್ಲಿ ನಿತ್ಯ ಅಘಾತಕಾರಿ ಸುದ್ದಿಗಳು ವರದಿಯಾಗುತ್ತಿದೆ. ವಿಧಾನ ಪರಿಷತ್ತು ಚುನಾವಣೆ ರಾಜ್ಯದ ಭವಿಷ್ಯದ ದಿಕ್ಕು ಬದಲಿಸುವ ಅಚಲವಾದ ನಂಬಿಕೆ ಇದೆ. ಬಿಜೆಪಿಯ ಯೋಜನಾಬದ್ಧ ಕತೃತ್ವ ಶಕ್ತಿಗೆ ಮತದಾರರು ಬೆಂಬಲಿಸಬೇಕು” ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಹೇಳಿದರು.
ಬಿತ್ತನೆ ಬೀಜ ದರ ಏರಿಸಿ ಕಾಂಗ್ರೆಸ್ಸಿನಿಂದ ರೈತರ ಸುಲಿಗೆ: ಮಾಜಿ ಸಚಿವ ಬಿ.ಸಿ.ಪಾಟೀಲ ಟೀಕೆ
ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಮತಯಾಚಿಸಿದರು. ವೇದಿಕೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಬಾಳೇಬೈಲು ರಾಘವೇಂದ್ರ, ತಾಲ್ಲೂಕು ಬಿಜೆಪಿ ಅಧ್ಯಕ್ಷ ನವೀನ್ ಹೆದ್ದೂರು, ಜೆಡಿಎಸ್ ಅಧ್ಯಕ್ಷ ಕುಣಜೆ ಕಿರಣ್, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಪ್ರಶಾಂತ್ ಕುಕ್ಕೆ, ಮುಖಂಡರಾದ ನಾಗರಾಜ ಶೆಟ್ಟಿ, ಅಶೋಕಮೂರ್ತಿ, ಕಾಸರವಳ್ಳಿ ಶ್ರೀನಿವಾಸ್, ಗೀತಾ, ಚಂದವಳ್ಳಿ ಸೋಮಶೇಖರ್, ಸಾಲೇಕೊಪ್ಪ ರಾಮಚಂದ್ರ, ಯಶೋಧ ಇದ್ದರು.