ಬಿತ್ತನೆ ಬೀಜ ದರ ಏರಿಸಿ ಕಾಂಗ್ರೆಸ್ಸಿನಿಂದ ರೈತರ ಸುಲಿಗೆ: ಮಾಜಿ ಸಚಿವ ಬಿ.ಸಿ.ಪಾಟೀಲ ಟೀಕೆ
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ರೈತರ ಬಿತ್ತನೆ ಬೀಜದ ದರ ಶೇ. 60ರಷ್ಟು ಹೆಚ್ಚಳ ಮಾಡಿರುವುದೇ ಅವರ ಸಾಧನೆಯಾಗಿದೆ. ಒಂದು ಕೈಯಲ್ಲಿ ಗ್ಯಾರಂಟಿ, ಇನ್ನೊಂದು ಕೈಯಲ್ಲಿ ಸುಲಿಗೆ ಮಾಡುತ್ತಿರುವುದೇ ಇವರ ಘನಕಾರ್ಯವಾಗಿದೆ ಎಂದು ಸರ್ಕಾರದ ವಿರುದ್ಧ ಮಾಜಿ ಸಚಿವ ಬಿ.ಸಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ಹಿರೇಕೆರೂರು (ಮೇ.31): ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ರೈತರ ಬಿತ್ತನೆ ಬೀಜದ ದರ ಶೇ. 60ರಷ್ಟು ಹೆಚ್ಚಳ ಮಾಡಿರುವುದೇ ಅವರ ಸಾಧನೆಯಾಗಿದೆ. ಒಂದು ಕೈಯಲ್ಲಿ ಗ್ಯಾರಂಟಿ, ಇನ್ನೊಂದು ಕೈಯಲ್ಲಿ ಸುಲಿಗೆ ಮಾಡುತ್ತಿರುವುದೇ ಇವರ ಘನಕಾರ್ಯವಾಗಿದೆ ಎಂದು ಸರ್ಕಾರದ ವಿರುದ್ಧ ಮಾಜಿ ಸಚಿವ ಬಿ.ಸಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಗೃಹ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಹಂಗಾಮಿನಲ್ಲಿ ಭೀಕರ ಬರದಿಂದ ರೈತರು ತತ್ತರಿಸಿದ್ದು, ಸಾಲ ಸೋಲ ಮಾಡಿ ಬೆಳೆದ ಬೆಳೆಗಳು ಬಿರು ಬಿಸಿಲಿನ ಝಳಕ್ಕೆ ಒಣಗಿ ನಾಶವಾಗಿವೆ. ಕೊಳವೆ ಬಾವಿಗಳು ನೀರಿಲ್ಲದೆ ಬತ್ತಿ ಹೋಗಿವೆ.
ಇಂತಹ ಶೋಚನೀಯ ಸ್ಥಿತಿಯಲ್ಲಿದ್ದ ರೈತ ಮುಂಗಾರು ಹಂಗಾಮಿನಲ್ಲಿ ಬಂದ ಮಳೆಯಿಂದಾಗಿ ಹರ್ಷಿತನಾಗಿ ಜಮೀನು ಉಳುಮೆ ಮಾಡಿ, ಹಸನು ಮಾಡಿಕೊಂಡಿದ್ದಾರೆ. ಈ ಹೊತ್ತಿನಲ್ಲೇ ಬಿತ್ತನೆ ಬೀಜಗಳ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿರುವುದು ಖಂಡನೀಯ. ಕಳೆದ ವರ್ಷ ರೈತರು ಸಾಲ ಮಾಡಿ ಬೀಜ, ಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ ಬೆಳೆ ಮಳೆ ಆಗದೇ ಸಂಕಷ್ಟದಲ್ಲಿದ್ದಾರೆ. ಈಗ ಹೊಸದಾಗಿ ಬೀಜ ಮತ್ತು ಗೊಬ್ಬರಕ್ಕೆ ಮತ್ತೆ ಸಾಲ ಮಾಡಬೇಕು. ಬೆಲೆ ಹೆಚ್ಚಳ ಮಾಡಿರುವುದು ಮತ್ತೆ ರೈತರನ್ನು ಸಂಕಷ್ಟಕ್ಕೆ ನೂಕಿದಂತಾಗಿದೆ.
ಕಳೆದ ವರ್ಷ ಬರಗಾಲದಿಂದಾಗಿ ಗುಣಾತ್ಮಕ ಬೀಜಗಳ ಉತ್ಪಾದನೆ ಆಗಿಲ್ಲ ಎಂಬ ನೆಪ ಒಡ್ಡಿ ಪ್ರಸಕ್ತ ಮುಂಗಾರು ಹಂಗಾಮಿಗೆ ಸರಕಾರ ರೈತ ಸಂಪರ್ಕ ಕೇಂದ್ರಗಳ ಮೂಲಕ ನೀಡುವ ರಿಯಾಯಿತಿ ದರದ ಬಿತ್ತನೆ ಬೀಜಗಳ ದರ ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿರುವುದು ಕಳೆದ ವರ್ಷ ಬರದಿಂದ ಕಂಗೆಟ್ಟಿರುವ ರೈತರಿಗೆ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರಕಾರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಉಚಿತವಾಗಿ ಬೀಜ ನೀಡಬೇಕಿತ್ತು. ಅದು ಬಿಟ್ಟು ಬೆಲೆ ಹೆಚ್ಚಿಸಿರುವುದು ರೈತರಿಗೆ ಬಲವಾದ ಹೊಡೆತ ಬಿದ್ದಿದೆ. ಸರಕಾರ ಗ್ಯಾರಂಟಿಗಳಿಗೆ ೫೭ ಸಾವಿರ ಕೋಟಿ ರು.ಗಳನ್ನು ವ್ಯಯ ಮಾಡುತ್ತಿದೆ.
ಸಚಿವರ ರಾಜೀನಾಮೆ ಕೇಳುವ ನೈತಿಕತೆ ಸಿಎಂ ಕಳೆದುಕೊಂಡಿದ್ದಾರೆ: ಬೊಮ್ಮಾಯಿ
ಆದರೆ ರೈತರ ಸಬ್ಸಿಡಿಗಾಗಿ ಕೇವಲ ೨೫ ಕೋಟಿ ರು.ಗಳನ್ನು ಮೀಸಲಿಟ್ಟಿದ್ದರೆ ರೈತರು ಕಷ್ಟ ದೂರ ಮಾಡಬಹುದಿತ್ತು. ಕೇವಲ ಭಾಗ್ಯಗಳ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿರುವ ಸರಕಾರ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತದೆ. ಕೊಟ್ಟ ಹಾಗೆ ಕೊಟ್ಟು ಜನರಿಗೆ ಗೊತ್ತೇ ಆಗದಂತೆ ಜೇಬಿಗೆ ಕೈ ಹಾಕಿ ಜನರಿಂದ ಕಿತ್ತುಕೊಳ್ಳುತ್ತಿರುವ ಸರಕಾರ ಕೂಡಲೇ ರೈತರ ನೆರವಿಗೆ ಬಂದು ಬಿತ್ತನೆ ಬೀಜದ ದರ ಇಳಿಕೆಗೆ ಕ್ರಮ ಕೈಗೊಳ್ಳಬೇಕು ಮತ್ತು ಮುಕ್ತ ಮಾರುಕಟ್ಟೆಯಲ್ಲಿ ದರ ಏರಿಕೆಗೆ ನಿಯಂತ್ರಣ ವಿಧಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ರವಿಶಂಕರ ಬಾಳಿಕಾಯಿ, ಕೆ.ಜಿ. ಪ್ರತಾಪ್, ನಾಗರಾಜ ಬಣಕಾರ ಇದ್ದರು.