ಭ್ರಷ್ಟಾಚಾರ ಆರೋಪ: ಲೆಕ್ಕ ಕೊಟ್ಟ ಶ್ರೀರಾಮುಲು, ಅವ್ಯವಹಾರ ಸಾಬೀತಾದ್ರೆ ರಾಜೀನಾಮೆ ಸವಾಲ್
ಕೊರೋನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಜನರ ದುಡ್ಡನ್ನು ಕೊಳ್ಳೆ ಹೊಡೆದಿದೆ ಎಂದು ಆರೋಪಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಆರೋಗ್ಯ ಸಚಿವ ಶ್ರೀರಾಮುಲು ಲೆಕ್ಕ ಕೊಟ್ಟಿದ್ದಾರೆ. ಅದು ಈ ಕೆಳಗನಂತಿದೆ ನೋಡಿ.
ಬೆಂಗಳೂರು, (ಜುಲೈ.20): ಕೊರೋನಾ ಹೆಸರಿನಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು, ಇದಕ್ಕೆ ಲೆಕ್ಕ ಕೊಡಿ ಎಂದಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಆರೋಗ್ಯ ಸಚಿವ ಶ್ರೀರಾಮುಲು ಲೆಕ್ಕ ಒಪ್ಪಿಸಿದ್ದಾರೆ.
ಈ ಬಗ್ಗೆ ಇಂದು (ಸೋಮವಾರ) ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಮುಲು, ರಾಜ್ಯ ಸರ್ಕಾರ ಆರೋಗ್ಯ ಇಲಾಖೆಯ ಉಪಕರಣಗಳ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆಸಿಲ್ಲ. ಒಂದು ವೇಳೆ ಸಿದ್ದರಾಮಯ್ಯ ಅವರು ಮಾಡಿರುವ ಆರೋಪದಲ್ಲಿ ಒಂದೇ ಒಂದು ಸತ್ಯ ಸಾಬೀತುಪಡಿಸಿದ್ದೇ ಆದಲ್ಲೀ, ಈ ಕೂಡಲೇ ರಾಜೀನಾಮೆ ನೀಡುವುದಾಗಿ ಸವಾಲ್ ಹಾಕಿದರು.
ಸರ್ಕಾರದ ವಿರುದ್ಧ ‘ಲೆಕ್ಕ ಕೊಡಿ’ ಅಭಿಯಾನ: ಸಿದ್ದರಾಮಯ್ಯರಿಂದ 100 ಸೆಕೆಂಡಲ್ಲಿ 6 ಪ್ರಶ್ನೆ!
ಇನ್ನು ಇದೇ ವೇಳೆ ಆರೋಗ್ಯ ಇಲಾಖೆಯಿಂದ ಖರೀದಿಸಲಾದಂತ ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್ ಖರೀದಿಯ ಅವ್ಯವಹಾರದಲ್ಲಿನ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆರೋಪಕ್ಕೆ ಶ್ರೀರಾಮುಲು, ಪ್ರತಿಯೊಂದು ಹಣಕಾಸಿನ ವ್ಯವಹಾರದ ಬಗ್ಗೆ ಇಂಚಿಚು ಮಾಹಿತಿಯನ್ನು ಬಿಡುಗಡೆ ಮಾಡಿದರು.
ಶ್ರೀರಾಮುಲು ಲೆಕ್ಕದ ಮಾಹಿತಿ ಇಂತಿದೆ
* ಪಿಪಿಇ (PPE Kit) ಕಿಟ್ ಅನ್ನು ರಾಜ್ಯ ಸರ್ಕಾರ ಇದುವರೆಗೆ 9 ಲಕ್ಷದ 65 ಸಾವಿರ ಖರೀದಿ ಮಾಡಿದ್ದು, ಇದಕ್ಕೆ 79 ಕೋಟಿ 35 ಲಕ್ಷದ 16 ಸಾವಿರದ 816 ರೂಪಾಯಿಯನ್ನು ಖರ್ಚು ಮಾಡಲಾಗಿದೆ ಎಂಬುದಾಗಿ ಸ್ಪಷ್ಟ ಪಡಿಸಿದರು.
* ಎನ್-95 ಮಾಸ್ಕ್ ಖರೀದಿಯಲ್ಲಿಯೂ ಯಾವುದೇ ಅವ್ಯವಹಾರ ನಡೆದಿಲ್ಲ. ಮಾರ್ಚ್ 9ಕ್ಕೆ ಒಂದು ಮಾಸ್ಕ್ ಬೆಲೆ 147 ರೂ.ಇತ್ತು. ಮಾರ್ಚ್ 21ಕ್ಕೆ 126 ರೂ. ಆಗಿತ್ತು. ನಾವು ನೀಡಿದಂತ ಮಾಸ್ಕ್ ಸಂಖ್ಯೆಯನ್ನು ಯಾವುದೇ ಕಂಪನಿಗಳು ನೀಡಿಲ್ಲ. ಆದ್ರೂ ಒಂದೊಂದು ಬೆಲೆಯಲ್ಲಿ 11 ಲಕ್ಷದ 60 ಸಾವಿರ ಮಾಸ್ಕ್ ಗಳನ್ನು, ಒಟ್ಟು 11 ಕೋಟಿ 51 ಲಕ್ಷದ 58 ಸಾವಿರದ 226 ರೂ.ಬೆಲೆಯಲ್ಲಿ ಖರೀದಿ ಮಾಡಲಾಗಿದೆ ಎಂದು ತಿಳಿಸಿದರು.
ವೈದ್ಯಕೀಯ ಉಪಕರಣ ಮಾಹಿತಿ ನೀಡಲು ಅಂಜಿಕೆ ಯಾಕೆ? ಸರ್ಕಾರಕ್ಕೆ ಬಾಣ ಬಿಟ್ಟ ಸಿದ್ದು
* ಸರ್ಜಿಕಲ್ ಮಾಸ್ಕ್ ಖರೀದಿಯಲ್ಲೂ ಅವ್ಯವಹಾರ ಆಗಿದೆ ಎಂಬುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಇದರಲ್ಲೂ ಯಾವುದೇ ಅವ್ಯವಹಾರ ಖರೀದಿಯಲ್ಲಿ ನಡೆದಿಲ್ಲ. ಮೊದಲಿಗೆ ಮಾರ್ಚ್ 15ರಂದು ಕೇರಳದ ಕಂಪನಿಯೊಂದಕ್ಕೆ 8.10 ರೂ. ದರದಲ್ಲಿ 1 ಲಕ್ಷ 80 ಸಾವಿರ ಆರ್ಡರ್ ಮಾಡಲಾಗಿತ್ತು. ಆದ್ರೆ ಸಪ್ಲೈ ಮಾಡಲಿಲ್ಲ. ಬೆಂಗಳೂರಿನ ಕಂಪನಿಯೊಂದರಿಂದ 9.50 ರೂ ಬೆಲೆಯಲ್ಲಿ, 5 ಲಕ್ಷ ಆರ್ಡರ್ ಕೊಟ್ಟರೇ 30 ಸಾವಿರ ಮಾತ್ರ ನೀಡಿದ್ದು. ಇಡೀ 3 ತಿಂಗಳಲ್ಲಿ ಒಟ್ಟಾರೆಯಾಗಿ 30 ಸಾವಿರ ಸರ್ಜಿಕಲ್ ಮಾಸ್ಕ್ ಖರೀದಿ ಮಾಡಿದ್ದು, ಇದಕ್ಕೆ 28 ಲಕ್ಷದ 50 ಸಾವಿರ ರೂಪಾಯಿ ಮಾತ್ರ ಖರ್ಚಾಗಿದೆ ಎಂದರು.
* ಸ್ಯಾನಿಟೈಸರ್ ಅನ್ನು ವಿವಿಧ ಬೆಲೆಯಲ್ಲಿ ಖರೀದಿಸಲಾಗಿದ್ದು, 500 ML ಬಾಟಲಿಗೆ 250ರೂ.ಗೆ ಖರೀದಿ ಮಾಡಲಾಗಿದೆ. ಸ್ಯಾನಿಟೈಸರ್ ಖರೀದಿಗಾಗಿ ಒಟ್ಟು 2 ಕೋಟಿ 65 ಲಕ್ಷದ 80 ಸಾವಿರ ಮಾತ್ರ ಖರ್ಚು ಮಾಡಲಾಗಿದೆ.
ಒಟ್ಟಾರೆಯಾಗಿ ರಾಜ್ಯ ಸರ್ಕಾರದಿಂದ ಇದುವರೆಗೆ ಪಿಪಿಇ ಕಿಟ್ ಖರೀದಿ, ಎನ್-95 ಮಾಸ್ಕ್ ಖರೀದಿ, ಸರ್ಜಿಕಲ್ ಮಾಸ್ಕ್ ಖರೀದಿ ಹಾಗೂ ಸ್ಯಾನಿಟೈಸರ್ ಖರೀದಿಗಾಗಿ ಒಟ್ಟು 2 ಕೋಟಿ 65 ಲಕ್ಷದ 80 ಸಾವಿರ ಮಾತ್ರ ಖರ್ಚು ಮಾಡಲಾಗಿದೆ ಎಂದು ಶ್ರೀರಾಮುಲು ಮಾಹಿತಿ ನೀಡಿದರು.
150 ಕೋಟಿ ಅವ್ಯವಹಾರ ಅಂತಾರೆ ಸಿದ್ಧರಾಮಯ್ಯ. ಎಲ್ಲಿ ಆಗಿದೆ ಅಷ್ಟು ಅವ್ಯವಹಾರ? ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದಂತೆ ಯಾವುದೇ ಅವ್ಯವಹಾರ ನಡೆದಿಲ್ಲ. ಅಷ್ಟು ಹಣವನ್ನೂ ರಾಜ್ಯ ಸರ್ಕಾರ ಖರೀದಿ ಮಾಡಿಲ್ಲ. ಸಿದ್ದರಾಮಯ್ಯ ಅವರ ಆರೋಪಗಳೇ ಸುಳ್ಳು ಎಂದು ಶ್ರೀರಾಮುಲು ತಿರುಗೇಟು ನೀಡಿದರು.