ಸರ್ಕಾರದ ವಿರುದ್ಧ ‘ಲೆಕ್ಕ ಕೊಡಿ’ ಅಭಿಯಾನ: ಸಿದ್ದರಾಮಯ್ಯರಿಂದ 100 ಸೆಕೆಂಡಲ್ಲಿ 6 ಪ್ರಶ್ನೆ!
ಸರ್ಕಾರದ ವಿರುದ್ಧ ‘ಲೆಕ್ಕ ಕೊಡಿ’ ಅಭಿಯಾನ| ಸಿದ್ದರಾಮಯ್ಯರಿಂದ 100 ಸೆಕೆಂಡಲ್ಲಿ 6 ಪ್ರಶ್ನೆ| ಕೊರೋನಾ ನಿಯಂತ್ರಣದಲ್ಲಿ ಭ್ರಷ್ಟಾಚಾರ ಆರೋಪ| ಈ ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರಕ್ಕೆ ಆಗ್ರಹ| ಸಾಮಾಜಿಕ ಮಾಧ್ಯಮಗಳಲ್ಲಿ ಆಂದೋಲನ
ಬೆಂಗಳೂರು(ಜು.12): ‘ಕೊರೋನಾ ಸೋಂಕು ಬಂದಾಗಿನಿಂದ ಈವರೆಗೆ ರಾಜ್ಯ ಸರ್ಕಾರ ಖರ್ಚು ಮಾಡಿದ ಹಣವೆಷ್ಟು? ರಾಜ್ಯದ ಜನತೆ ಕೇಳುತ್ತಿದ್ದಾರೆ, ಲೆಕ್ಕ ಕೊಡಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕೊರೋನಾ ನಿಯಂತ್ರಣದಲ್ಲಿ ನಡೆದಿರುವ ಭ್ರಷ್ಟಾಚಾರದ ವಿರುದ್ಧ ಸಾಮಾಜಿಕ ಜಾಲತಾಣಗಳಾದ ಟ್ವೀಟರ್, ಫೇಸ್‌ಬುಕ್, ಯೂಟ್ಯೂಬ್‌ನಲ್ಲಿ ‘ಲೆಕ್ಕ ಕೊಡಿ’ ಹ್ಯಾಷ್‌ಟ್ಯಾಗ್‌ನೊಂದಿಗೆ ರಾಜ್ಯ ಸರ್ಕಾರದ ವಿರುದ್ಧ ವಿಡಿಯೋ ಅಭಿಯಾನ ಆರಂಭಿಸಿದ್ದಾರೆ. ಈ ಅಭಿಯಾನದ ಭಾಗವಾಗಿ 100 ಸೆಕೆಂಡಿನ ವಿಡಿಯೋದಲ್ಲಿ 6 ಪ್ರಶ್ನೆಗಳನ್ನು ಕೇಳಿದ್ದಾರೆ.
ಕೊರೋನಾ ಟೆಸ್ಟ್‌ಗೆ 1 ಲಕ್ಷ ಆಂಟಿಜೆನ್ ಕಿಟ್: ವಾರಾಂತ್ಯಕ್ಕೆ 40 ಸಾವಿರ ಹೆಚ್ಚುವರಿ ಪರೀಕ್ಷೆ
ಪ್ರಶ್ನೆಗಳು ಇವು:
1. ಕೊರೋನಾ ಸೋಂಕು ಬಂದಾಗಿನಿಂದ ಇದುವರೆಗೆ ರಾಜ್ಯ ಸರ್ಕಾರ ಖರ್ಚು ಮಾಡಿದ ಹಣ ಎಷ್ಟು? ಕೇಂದ್ರ ಸರ್ಕಾರ ಎಷ್ಟುನೀಡಿದೆ?
2. ಯಾವ ಯಾವ ಇಲಾಖೆ ಯಾವ ಬಾಬತ್ತಿಗೆ ಎಷ್ಟುಹಣ ಖರ್ಚು ಮಾಡಿವೆ?
3. ಪಿಪಿಇ ಕಿಟ್, ಟೆಸ್ಟ್ ಕಿಚ್,ಗ್ಲೌಸ್,ಸ್ಯಾನಿಟೈಸರ್, ಥರ್ಮಲ… ಸ್ಕ್ಯಾನರ್, ಕಿಯೋಸ್ಕ್ ಮುಂತಾದವುಗಳಿಗೆ ಮಾರುಕಟ್ಟೆದರ ಎಷ್ಟು? ನೀವು ಪ್ರತಿಯೊಂದನ್ನು ಯಾವ ದರಕ್ಕೆ ಖರೀದಿಸಿದ್ದೀರಿ?
4. ಈವರೆಗೆ ಎಷ್ಟುಫುಡ್ ಕಿಟ್, ಎಷ್ಟುಫುಡ್ ಪ್ಯಾಕೆಟ್ ಕೊಟ್ಟಿದ್ದೀರಿ? ಯಾರಿಗೆ ಕೊಟ್ಟಿದ್ದೀರಿ? ಪ್ರತಿಯೊಂದಕ್ಕೆ ಎಷ್ಟುಹಣ ಖರ್ಚು ಮಾಡಿದ್ದೀರಿ? ತಾಲೂಕುವಾರು, ವಾರ್ಡ್ ವಾರು ಲೆಕ್ಕ ಕೊಡಿ
ಸಿದ್ದರಾಮಯ್ಯ ಕೊಟ್ಟ ಪೆನ್ ಡ್ರೈವ್ ಸಾಕ್ಷಿಗೆ ಸಚಿವ ಅಶೋಕ್ ಸವಾಲು...!
5. ವಲಸೆ ಕಾರ್ಮಿಕರಿಗೆ ಪ್ರಯಾಣದ ಸಂದರ್ಭದಲ್ಲಿ ಎಷ್ಟುಫುಡ್ ಕಿಟ್ ಕೊಟ್ಟಿದ್ದೀರಿ? ಏನೇನು ಕೊಟ್ಟಿದ್ದೀರಿ? ಪ್ರತಿ ಕಿಟ್‌ಗೆ ಖರ್ಚು ಮಾಡಿದ ಹಣ ಎಷ್ಟು?
6. ಸಂಕಷ್ಟದಲ್ಲಿರುವ ಜನರಿಗೆ ಕೇಂದ್ರ , ರಾಜ್ಯ ಸರ್ಕಾರಗಳು ಘೋಷಿಸಿದ ಪ್ಯಾಕೇಜುಗಳು ಯಾವುವು? ಇದುವರೆಗೆ ಯಾವ ಯಾವ ವೃತ್ತಿಯವರಿಗೆ, ಯಾವ ಯಾವ ಸಮುದಾಯಕ್ಕೆ ಎಷ್ಟುಹಣ ಬಿಡುಗಡೆ ಮಾಡಿದ್ದೀರಿ? ಕೊರೋನಾ ಸಂತ್ರಸ್ತರ ಆರೈಕೆಗೆ ಎಷ್ಟುಹಣ ಖರ್ಚು ಮಾಡಿದ್ದೀರಿ? ಈ ಎಲ್ಲದರ ಲೆಕ್ಕ ಕೊಡಿ.