ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತ ಮರುಎಣಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮಾಡಿದ 'ವೋಟ್ ಚೋರಿ' ಆರೋಪಕ್ಕೆ ಮಾಜಿ ಸಚಿವ ಸಿ.ಟಿ. ರವಿ ತಿರುಗೇಟು ನೀಡಿದ್ದಾರೆ. ತಮ್ಮದೇ ಸರ್ಕಾರವಿದ್ದಾಗ ಅಕ್ರಮ ಹೇಗೆ ಸಾಧ್ಯ ಎಂದು ಪ್ರಶ್ನಿಸಿ, ತನಿಖೆ ನಡೆಸುವಂತೆ ಸಿಎಂಗೆ ಸವಾಲು ಹಾಕಿದ್ದಾರೆ. 

ಚಿಕ್ಕಮಗಳೂರು(ಮೇ.5): ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತ ಮರುಎಣಿಕೆ ವಿಚಾರ ಈಗ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಮಾಡಿದ್ದ 'ವೋಟ್ ಚೋರಿ' ಎಂಬ ಗಂಭೀರ ಆರೋಪಕ್ಕೆ ಇದೀಗ ಮಾಜಿ ಸಚಿವ ಸಿ.ಟಿ. ರವಿ ಖಡಕ್ ತಿರುಗೇಟು ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಸಿಎಂಗೆ ಸಿಟಿ ರವಿ ಪ್ರಶ್ನೆಗಳ ಸುರಿಮಳೆ

'ಮಾನ್ಯ ಮುಖ್ಯಮಂತ್ರಿಗಳು ಹಿರಿಯರು, ಅವರು ಈ ರೀತಿ ಬೇಜಾಬ್ದಾರಿ ಹೇಳಿಕೆ ನೀಡಬಾರದು' ಎನ್ನುತ್ತಲೇ ಸಿ.ಟಿ. ರವಿ ಅವರು, ಹಳೆಯ ಲೆಕ್ಕಾಚಾರಗಳನ್ನೇ ಮುಂದಿಟ್ಟು ಸಿಎಂಗೆ ಇಕ್ಕಟ್ಟಿಗೆ ಸಿಲುಕಿಸುವ ಪ್ರಶ್ನೆಗಳನ್ನು ಎಸೆದಿದ್ದಾರೆ. ಚುನಾವಣಾ ನಡೆದಾಗ ರಾಜ್ಯದಲ್ಲಿ ಕೇಂದ್ರದಲ್ಲಿ ಬಿಜೆಪಿ ಇತ್ತು.ನಾನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿದ್ದೆ. ಆಗ ನಾವು 5ಕ್ಕೆ 5 ಸೋತೆವು. ನೀವು ಆರೋಪಿಸಿದ ಹಾಗೆ ಆ ರೀತಿ ಅಧಿಕಾರ ದುರುಪಯೋಗ ಪಡೆಸಿಕೊಂಡಿದ್ರೆ ಐದಕ್ಕೆ ಐದು ಸ್ಥಾನ ನಾವೇ ಗೆಲ್ಲಬೇಕಿತ್ತು, ಆದರೆ ಸೋತ್ವಿ ಎಂದು ಸಿಎಂ ಆರೋಪಕ್ಕೆ ತಿವಿದಿದ್ದಾರೆ.

ಬಿಜೆಪಿ ಸರ್ಕಾರ ಇದ್ದಾಗ ರಾಜೇಗೌಡ ಗೆದ್ದರು

ಅಂದು ಬಿಜೆಪಿ ಸರ್ಕಾರವಿದ್ದಾಗ ಕಾಂಗ್ರೆಸ್‌ನ ರಾಜೇಗೌಡರು ಗೆದ್ದರು. ಆದರೆ ಇಂದು ನ್ಯಾಯಾಲಯದ ಆದೇಶದಂತೆ ಮರುಎಣಿಕೆ ನಡೆದಾಗ ಜೀವರಾಜ್ ಗೆದ್ದಿದ್ದಾರೆ. ವಿಶೇಷವೆಂದರೆ, ಈಗ ರಾಜ್ಯದಲ್ಲಿರುವುದು ನಿಮ್ಮದೇ ಸರ್ಕಾರ. ಹಾಗಾದರೆ ಈ 'ವೋಟ್ ಚೋರಿ' ಮಾಡಿದ್ದು ಯಾರು? ಇದಕ್ಕೆ ನೀವೆ ಉತ್ತರ ಹೇಳಬೇಕು, ಯಾವುದು ಸತ್ಯ? ಅಕ್ರಮ ಯಾವಾಗ ಆಗಿದೆ? ನೀವು ಜೀವರಾಜ್ ಗೆಲುವಿನ ಬಗ್ಗೆ ಆಪಾದನೆ ಮಾಡ್ತಿದ್ದೀರೋ..? ಅಥವಾ ರಾಜೇಗೌಡ ಗೆಲುವಿನ ಬಗ್ಗೆ ಆಪಾದನೆ ಮಾಡ್ತಿದ್ದೀರೋ..? ಎಂದು ಅವರು ಪ್ರಶ್ನಿಸಿದ್ದಾರೆ.

ನಿಮ್ಮ ಸರ್ಕಾರದಲ್ಲಿ ವೋಟ್ ಚೋರಿ ಮಾಡಲು ಹೇಗೆ ಸಾಧ್ಯ?

ಮತ ಯಂತ್ರಗಳ ಭದ್ರತೆಯ ಬಗ್ಗೆಯೂ ಪ್ರಶ್ನಿಸಿರುವ ಸಿಟಿ ರವಿ ಅವರು, ಈಗ ಕಸ್ಟೋಡಿಯನ್ ಯಾರು? ಮತ ಯಂತ್ರಗಳ ಜವಾಬ್ದಾರಿ ಹೊತ್ತವರು ಯಾರು? ಪೊಲೀಸ್ ಇಲಾಖೆ ಮತ್ತು ಇಡೀ ಆಡಳಿತ ಯಂತ್ರ ನಿಮ್ಮ ಕೈಯಲ್ಲೇ ಇದೆ ಅಲ್ವಾ? ನಿಮ್ಮ ಅಧೀನದಲ್ಲಿದ್ದವರೇ ಕೇರ್ ಟೇಕರ್ ಆಗಿದ್ದಾಗ ಡಕಾಯಿತಿ ಮಾಡಲು ಹೇಗೆ ಸಾಧ್ಯ?" ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಿಎಂ ಸ್ಥಾನದಲ್ಲಿರುವ ನೀವು ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುವ ರೀತಿ ಆರೋಪ ಮಾಡಬೇಡಿ. ನಿಮ್ಮ ಕೈಯಲ್ಲೇ ತನಿಖಾ ಸಂಸ್ಥೆಗಳಿವೆ, ತನಿಖೆ ನಡೆಸಿ ಸತ್ಯ ಏನು ಅನ್ನೋದು ಹೊರಗೆ ಬರಲಿ ಎಂದು ಸಿ.ಟಿ. ರವಿ ಸಿಎಂ ಸಿದ್ದರಾಮಯ್ಯನವರಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ.

ಒಟ್ಟಿನಲ್ಲಿ ಶೃಂಗೇರಿ ಮರುಎಣಿಕೆ ಫಲಿತಾಂಶದ ಬಳಿಕ ಶುರುವಾದ ಈ ವಾಕ್ಸಮರ, ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್-ಬಿಜೆಪಿ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ.