ಕಲ್ಯಾಣ ಕರ್ನಾಟಕ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ: ಡಾ.ಅಜಯ್ ಸಿಂಗ್
ಕಲ್ಯಾಣ ಕರ್ನಾಟಕ ಜಿಲ್ಲೆಗಳ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ನೀಡಲಾದ ಅನುದಾನವನ್ನು ನಿಗದಿತ ಅವಧಿಯೊಳಗೆ ಬಳಸಿ ಸೂಕ್ತ ಪ್ರಗತಿ ಸಾಧಿಸುವಂತೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ರಾದ ಡಾ. ಅಜಯ್ ಸಿಂಗ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಯಾದಗಿರಿ (ಜ.25): ಕಲ್ಯಾಣ ಕರ್ನಾಟಕ ಜಿಲ್ಲೆಗಳ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ನೀಡಲಾದ ಅನುದಾನವನ್ನು ನಿಗದಿತ ಅವಧಿಯೊಳಗೆ ಬಳಸಿ ಸೂಕ್ತ ಪ್ರಗತಿ ಸಾಧಿಸುವಂತೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ರಾದ ಡಾ. ಅಜಯ್ ಸಿಂಗ್ ಅವರು ಅಧಿಕಾರಿಗಳಿಗೆ ಸೂಚಿಸಿದರು. ಬುಧವಾರ, ಜಿಪಂ ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವ್ಯಾಪ್ತಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಇದೇ ಮೊದಲ ಬಾರಿಗೆ ಯಾದಗಿರಿ ಜಿಲ್ಲೆಯಲ್ಲಿ ಇಂತಹ ಸಭೆ ನಡೆಸಿದ್ದು, ಕಲ್ಯಾಣ ಕರ್ನಾಟಕ ಭಾಗದ ಇತರೆ ಜಿಲ್ಲೆಗಳ ಪರಿಶೀಲನೆ ಸಹ ಮಾಡಲಾಗುವುದು. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಕಾರ್ಯಗಳಿಗಾಗಿ ಸರ್ಕಾರ ಆಯವ್ಯಯದಲ್ಲಿ ₹5000 ಕೋಟಿ ಘೋಷಿಸಿ ₹3000 ಕೋ ಹಂಚಿಕೆ ಮಾಡಿದೆ. ಕಾರಣ ಈ ಜಿಲ್ಲೆಯ ಅಧಿಕಾರಿಗಳು ಕೂಡ ಗುರಿಗೆ ತಕ್ಕಂತೆ ಸೂಕ್ತ ಪ್ರಗತಿ ಸಾಧಿಸಿ ಅನುದಾನ ಸಮರ್ಪಕ ಬಳಕೆ ಆಗುವಂತೆ ನೋಡಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮೈತ್ರಿ ತೀರ್ಮಾನ ಮಾಡದಿದ್ದರೆ ಜೆಡಿಎಸ್ ಪಕ್ಷ ಹೈಜಾಕ್ ಆಗ್ತಾ ಇತ್ತು: ವೈ.ಎಸ್.ವಿ.ದತ್ತ
ಕಲ್ಯಾಣ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳ ಅಭಿವೃದ್ಧಿ ಪರ್ವ ಆರಂಭಕ್ಕೆ ಮಾನ್ಯ ಮುಖ್ಯಮಂತ್ರಿಗಳು ಕೂಡ ಹೆಚ್ಚಿನ ಆಸಕ್ತಿ ವಹಿಸಿದ್ದು, 2021ರಿಂದ ಕೈಗೊಂಡ ಕಾಮಗಾರಿಗಳ ಬಗ್ಗೆ ಹಾಗೂ ಖರ್ಚು ಮಾಡದೆ ಇರುವ ಅನುದಾನದ ಬಗ್ಗೆ ಅಧಿಕಾರಿಗಳಿಂದ ಉತ್ತರ ಪಡೆಯಲಾಗುತ್ತಿದೆ. ಕಾರಣ ಬರುವ ಫೆಬ್ರುವರಿ ಅಂತ್ಯದೊಳಗೆ ಶೇ.90ರಷ್ಟು, ಪ್ರಗತಿಯಲ್ಲಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಅನುದಾನ ಬಳಸದೆ ಇರುವ ಬಗ್ಗೆ ಕಾಮಗಾರಿಗಳ ಮಾಹಿತಿ ಒದಗಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯಾದಗಿರಿ ಜಿಲ್ಲೆಯಲ್ಲಿ ಕಾಮಗಾರಿಗಳ ವೇಗ ಹೆಚ್ಚಿಸಬೇಕು. ಲಭ್ಯವಿರುವ ಅನುದಾನ ಬಳಸಿದಲ್ಲಿ ಇನ್ನು ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಅನುಕೂಲವಾಗುವುದು. ಕಲ್ಯಾಣ ಕರ್ನಾಟಕದ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಶೈಕ್ಷಣಿಕ ವ್ಯವಸ್ಥೆ ಸುಧಾರಣೆಗೆ ಹೆಚ್ಚಿನ ಗಮನ ನೀಡಲಾಗಿದೆ. ಅಕ್ಷರ ಅವಿಷ್ಕಾರ ಯೋಜನೆಯಡಿ ಅನುದಾನ ನೀಡಿದೆ. ಅತಿಥಿ ಶಿಕ್ಷಕರ ನೇಮಕಾತಿಗಳಿಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಮುಂಬರುವ ಎಸ್ಎಸ್ಎಲ್‌ಸಿ ಫಲಿತಾಂಶದಲ್ಲಿ ಗಣನೀಯ ಪ್ರಗತಿ ಸಾಧಿಸಬೇಕು. ರಾಜ್ಯಮಟ್ಟದ ರ್‍ಯಾಕಿಂಗ್ ನಲ್ಲಿ ಮೇಲಕ್ಕೆ ಬರಬೇಕು. ಇದಕ್ಕಾಗಿ ಮಂಡಳಿಯಿಂದ ಎಲ್ಲ ರೀತಿಯ ಸಹಕಾರ ಒದಗಿಸಲಾಗುವುದು ಎಂದು ಹೇಳಿದರು. ಕಲ್ಯಾಣ ಕರ್ನಾಟಕದ ಪ್ರದೇಶದ ಏಳು ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ತಲಾ ₹3.75 ಕೋಟಿ ಕಾಯ್ದಿರಿಸಲಾಗಿದೆ. ಕಲ್ಯಾಣ ಕರ್ನಾಟಕದ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಕಂದಾಯ ಸಚಿವರ ಅನುದಾನದ ನೆರವು ದೊಂದಿಗೆ ಅನುದಾನ ಕಾಯ್ದಿರಿಸಿದೆ. ಅದರಂತೆ ಬರುವ ಮಾರ್ಚ್ ಅಂತ್ಯದೊಳಗೆ ಶೇಕಡಾ ನೂರರಷ್ಟು ಅನುದಾನ ಬಳಸಲು ಸೂಚಿಸಿ, ಮುಂಬರುವ ಐದು ವರ್ಷಗಳ ಕ್ರಿಯಾ ಯೋಜನೆಯನ್ನು ಸಹ ಅಧಿಕಾರಿಗಳು ಸಿದ್ಧಪಡಿಸುವಂತೆ ಸೂಚಿಸಿದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು, ಈ ಮಂಡಳಿಯಿಂದ ಬಿಡುಗಡೆಯಾದ ಅನುದಾನ ಶೇಕಡಾ ನೂರರಷ್ಟು ಬಳಸಬೇಕು. ಸೂಕ್ತ ಪ್ರಗತಿ ಸಾಗಿಸಬೇಕು. ಶೈಕ್ಷಣಿಕ ವ್ಯವಸ್ಥೆ ಸುಧಾರಣೆಗೆ ಸೂಕ್ತ ಗಮನ ನೀಡಬೇಕು. ಜಿಲ್ಲೆಯಲ್ಲಿ ವಿವಿಧ ಗುಣಮಟ್ಟದ ಭವನಗಳ, ಶಾಲಾ-ಕಾಲೇಜು ಕಟ್ಟಡಗಳ ನಿರ್ಮಾಣ ಇತರೆ ಅಭಿವೃದ್ಧಿಗಳ ಕಾರ್ಯಗಳು ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳಲು ತಿಳಿಸಿದರು.
ರಾಮಲಲ್ಲಾ ಪ್ರತಿಷ್ಠಾಪನೆ ದಿನ ಮಸೀದಿ ಕೆಡವುವ ಸಂಕಲ್ಪ ತೊಟ್ಟಿದ್ದ ಸಂಸದ ಅನಂತ ಕುಮಾರ್ ಹೆಗಡೆ!
ಸಭೆಯಲ್ಲಿ ಸಂಸದ ರಾಜಾ ಅಮರೇಶ್ವರ್ ನಾಯಕ, ಶಾಸಕರುಗಳಾದ ಚೆನ್ನಾರೆಡ್ಡಿ ಪಾಟೀಲ ತುನ್ನೂರು, ಶರಣಗೌಡ ಕಂದಕೂರು, ಕೆಕೆಆರ್‌ಡಿಬಿ ಕಾರ್ಯದರ್ಶಿ ಸುಂದರೇಶಬಾಬು. ಯಾದಗಿರಿ ಡಿಸಿ ಡಾ.ಬಿ.ಸುಶೀಲಾ, ಜಿಪಂ ಸಿಇಓ ಗರೀಮಾ ಪನ್ವಾರ್, ಎಸ್‌ಪಿ ಸಂಗೀತಾ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.