ಸದನದಲ್ಲಿ ಈಶ್ವರ್‌ ಖಂಡ್ರೆ-ಸ್ಪೀಕರ್‌ ಕಾಗೇರಿ ವಾಕ್ಸಮರ, ಕೋಲಾಹಲ

ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂಬ ಅಶ್ವತ್ಥನಾರಾಯಣ್‌ ಹೇಳಿಕೆ ಬಗ್ಗೆ ಕಾಂಗ್ರೆಸ್‌ನ ಯು.ಟಿ.ಖಾದರ್‌ ಪ್ರಸ್ತಾಪಿಸಿದರು. ಈ ಸಂಬಂಧ ಈಶ್ವರ್‌ ಖಂಡ್ರೆ ಮಾತನಾಡಲು ಅವಕಾಶ ಕೇಳಿದರೂ ನೀಡದೆ ಅಶ್ವತ್ಥನಾರಾಯಣ್‌ ಅವರಿಗೆ ಉತ್ತರ ನೀಡಲು ಸ್ಪೀಕರ್‌ ಅನುಮತಿ ನೀಡಿದರು.

speaker vishweshwar hegde kageri slams eshwar khandre for abusive remarks gvd

ವಿಧಾನಸಭೆ (ಫೆ.17): ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ್‌ ನೀಡಿದ್ದ ವಿವಾದಾತ್ಮಕ ಹೇಳಿಕೆ ಬಗ್ಗೆ ಮಾತನಾಡಲು ಅವಕಾಶ ಕೇಳಿದ ಕಾಂಗ್ರೆಸ್‌ ಸದಸ್ಯ ಈಶ್ವರ್‌ ಖಂಡ್ರೆ ವಿರುದ್ಧ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಏಕಾಏಕಿ ಗರಂ ಆದ ಘಟನೆ ನಡೆದಿದ್ದು, ಇದು ಇಬ್ಬರ ನಡುವೆ ವಾಕ್ಸಮರಕ್ಕೆ ಕಾರಣವಾಗಿ ಸದನದಲ್ಲಿ ಕೆಲ ಹೊತ್ತು ಕೋಲಾಹಲ ಸೃಷ್ಟಿಯಾಯಿತು. ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂಬ ಅಶ್ವತ್ಥನಾರಾಯಣ್‌ ಹೇಳಿಕೆ ಬಗ್ಗೆ ಕಾಂಗ್ರೆಸ್‌ನ ಯು.ಟಿ.ಖಾದರ್‌ ಪ್ರಸ್ತಾಪಿಸಿದರು. 

ಈ ಸಂಬಂಧ ಈಶ್ವರ್‌ ಖಂಡ್ರೆ ಮಾತನಾಡಲು ಅವಕಾಶ ಕೇಳಿದರೂ ನೀಡದೆ ಅಶ್ವತ್ಥನಾರಾಯಣ್‌ ಅವರಿಗೆ ಉತ್ತರ ನೀಡಲು ಸ್ಪೀಕರ್‌ ಅನುಮತಿ ನೀಡಿದರು. ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಈಶ್ವರ್‌ ಖಂಡ್ರೆ ವಿರುದ್ಧ ಸ್ಪೀಕರ್‌ ಏಕಾಏಕಿ ಸಿಟ್ಟಾದರು. ಖಂಡ್ರೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಕಾಗೇರಿ, ‘ಇದು ನಿಮಗೆ ಶೋಭೆ ತರುವುದಿಲ್ಲ. ಸುಮ್ಮನೆ ಕುಳಿತುಕೊಳ್ಳಿ, ನಿಮ್ಮನ್ನೆಲ್ಲಾ ಇಲ್ಲಿಗೆ ಆಯ್ಕೆ ಮಾಡಿ ಕಳಿಸಿದ್ದು ಯಾರು?’ ಎಂದರು. ಇದಕ್ಕೆ ಖಂಡ್ರೆ ಅವರು, ನಾನು ಅಂತಹದ್ದೇನು ಮಾತನಾಡಿದೆ ಎಂದು ಪ್ರಶ್ನಿಸಿದಾಗ ಮತ್ತಷ್ಟು ಸಿಟ್ಟಾದ ಅವರು, ‘ಹಿರಿಯರು ನಡೆದುಕೊಳ್ಳುವ ರೀತಿಯಾ ಇದು? ಇನ್ನೊಂದು ಹೆಜ್ಜೆ ಮುಂದಾದರೆ ಹೊರಗಡೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

ಸ್ವಂತ ಶಕ್ತಿ ಮೇಲೆ ಜೆಡಿಎಸ್‌ ಅಧಿಕಾರಕ್ಕೆ ಬರುವಂತೆ ಆಶೀರ್ವದಿಸಿ: ಎಚ್‌.ಡಿ.ಕುಮಾರಸ್ವಾಮಿ

ಅಲ್ಲದೆ, ನಿಮಗೆ ಮಾತ್ರ ಬಿಪಿ ಏರುವುದಾ, ನನಗೆ ಏರಲ್ವಾ? ನಿಮ್ಮನ್ನು ಆಯ್ಕೆ ಮಾಡಿದ ಜನರಿಗೆ ಬುದ್ಧಿ ಹೇಳಬೇಕಾಗುತ್ತದೆ. ಯಾರು ನಿಮ್ಮನ್ನು ಇಲ್ಲಿಗೆ ಕಳುಹಿಸಿದ್ದು? ಸದನವನ್ನು ಸವಾರಿ ಮಾಡಲು ಸಾಧ್ಯವಿಲ್ಲ’ ಎಂದು ಕಿಡಿ ಕಾರಿದರು. ಇದಕ್ಕೆ ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ, ಸದನವನ್ನು ಸವಾರಿಗೆ ಪಡೆಯುತ್ತಿರುವವರು ಯಾರು? ನಮ್ಮ ಸದಸ್ಯರು ಮಾತನಾಡಲು ಅವಕಾಶ ಕೇಳಿದರೆ ಅವರ ಕ್ಷೇತ್ರದ ಜನರನ್ನು ಅವಮಾನಿಸುವ ಮಾತು ಆಡುತ್ತಿದ್ದೀರಿ. ನಿಮ್ಮ ಉದ್ದೇಶವೇನು ಎಂದು ಪ್ರಶ್ನಿಸಿದರು.

ಬಾವಿಗಿಳಿದು ಧರಣಿ, ಕಲಾಪ ಮುಂದೂಡಿಕೆ: ಸ್ಪೀಕರ್‌ ವಿರುದ್ಧ ಸಿಟ್ಟಾದ ಈಶ್ವರ ಖಂಡ್ರೆ ಸದನದ ಬಾವಿಗಿಳಿದು ಧರಣಿ ನಡೆಸಿದರು. ನಾನು ಮಾತನಾಡಲು ಅವಕಾಶ ಕೇಳಿದ್ದೇನೆ. ಕೆಟ್ಟದಾಗಿ ಮಾತನಾಡಿಲ್ಲ. ವ್ಯವಸ್ಥೆಗೆ ಅಗೌರವ ನೀಡುವ ಮಾತನ್ನೂ ಆಡಿಲ್ಲ. ಪೂರ್ವಾಗ್ರಹಪೀಡಿತರಾಗಿ ನಮ್ಮ ಕ್ಷೇತ್ರದ ಜನರ ಆಯ್ಕೆಯನ್ನು ಪ್ರಶ್ನಿಸಿದ್ದು ತಪ್ಪು ಎಂದು ಹೇಳಿದರು. ಇದಕ್ಕೆ ಬೆಂಬಲವಾಗಿ ಕಾಂಗ್ರೆಸ್‌ ಸದಸ್ಯರು ಸದನದ ಬಾವಿಗಿಳಿದಿದ್ದರಿಂದ ಕಲಾಪವನ್ನು 15 ನಿಮಿಷಗಳ ಕಾಲ ಮುಂದೂಡಲಾಯಿತು. ಈ ಅವಧಿಯಲ್ಲಿ ಕಾಂಗ್ರೆಸ್‌ನ ಹಿರಿಯ ಸದಸ್ಯರು ಹಾಗೂ ಸ್ಪೀಕರ್‌ ನಡುವೆ ಸ್ಪೀಕರ್‌ ಕಚೇರಿಯಲ್ಲಿ ಸಂಧಾನದ ಮಾತುಕತೆ ನಡೆಯಿತು.

ಬಿಜೆಪಿ ದುರಾಡಳಿತದ ವಿರುದ್ಧ ಜನತೆಗೆ ಬೇಸರ: ಸಿದ್ದರಾಮಯ್ಯ

ಹೇಳಿಕೆ ಹಿಂಪಡೆದ ಕಾಗೇರಿ: ಬಳಿಕ ಕಲಾಪ ಸೇರಿದಾಗ ಕಾಗೇರಿ ಮಾತನಾಡಿ, ನಿಮ್ಮ ಕ್ಷೇತ್ರದ ಬಗ್ಗೆ ಹಾಗೂ ನಿಮ್ಮ ಬಗ್ಗೆ ನನಗೆ ಗೌರವವಿದೆ. ಉದ್ವೇಗದಲ್ಲಿ ನಾನು ಮಾತನಾಡಿದ್ದೇನೆ. ಕ್ಷೇತ್ರದ ಜನರ ಬಗ್ಗೆ ಮಾತನಾಡಿದ್ದು ತಪ್ಪು. ಅದನ್ನು ಮನಸ್ಸಿಗೆ ಹಾಕಿಕೊಳ್ಳದೆ ನಿಮ್ಮ ಸ್ಥಾನಕ್ಕೆ ನಡೆಯಿರಿ ಎಂದು ಮನವೊಲಿಕೆ ಮಾತನಾಡಿದರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಸ್ಪೀಕರ್‌ ಅವರು ಆಡಿದ ಕೊನೆಯ ಮಾತುಗಳು ಚುಚ್ಚುವಂತಿವೆ. ಆ ಮಾತುಗಳನ್ನು ಕಡತದಿಂದ ತೆಗೆಯಬೇಕು ಎಂದು ಹೇಳಿದರು. ಈ ವೇಳೆ ಕಡತ ಪರಿಶೀಲಿಸಿ ಅಂತಹ ಮಾತುಗಳನ್ನು ತೆಗೆಸಲಾಗುವುದು ಎಂದು ಸ್ಪೀಕರ್‌ ಭರವಸೆ ನೀಡಿದ್ದರಿಂದ ಈಶ್ವರ್‌ ಖಂಡ್ರೆ ವಾಪಸು ತಮ್ಮ ಸ್ಥಾನಕ್ಕೆ ಮರಳಿದರು.

Latest Videos
Follow Us:
Download App:
  • android
  • ios