Asianet Suvarna News Asianet Suvarna News

ಸ್ವಂತ ಶಕ್ತಿ ಮೇಲೆ ಜೆಡಿಎಸ್‌ ಅಧಿಕಾರಕ್ಕೆ ಬರುವಂತೆ ಆಶೀರ್ವದಿಸಿ: ಎಚ್‌.ಡಿ.ಕುಮಾರಸ್ವಾಮಿ

ಜೆಡಿಸ್‌ ಮುಖಂಡ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಪಂಚರತ್ನ ಯಾತ್ರೆ ತಾಲೂಕಿನ ಹಲಗೇರಿ ಗ್ರಾಮಕ್ಕೆ ಆಗಮಿಸಿದಾಗ ಭವ್ಯ ಸ್ವಾಗತ ಕೋರಲಾಯಿತು. 

Bless JDS to Come to Power on its Own Power Says HD Kumaraswamy gvd
Author
First Published Feb 17, 2023, 1:40 AM IST | Last Updated Feb 17, 2023, 1:40 AM IST

ರಾಣಿಬೆನ್ನೂರು (ಫೆ.17): ಜೆಡಿಸ್‌ ಮುಖಂಡ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಪಂಚರತ್ನ ಯಾತ್ರೆ ತಾಲೂಕಿನ ಹಲಗೇರಿ ಗ್ರಾಮಕ್ಕೆ ಆಗಮಿಸಿದಾಗ ಭವ್ಯ ಸ್ವಾಗತ ಕೋರಲಾಯಿತು. ಪಕ್ಷದ ಕಾರ್ಯಕರ್ತರು ಅವರಿಗೆ ಕ್ರೇನ್‌ ಮೂಲಕ ಹೂವಿನ ಹಾರ ಅರ್ಪಿಸುವ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಚ್‌.ಡಿ. ಕುಮಾರಸ್ವಾಮಿ, ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯದ ಅಭಿವೃದ್ಧಿ ಕುರಿತು ಚಿಂತನೆ ನಡೆಸುವುದಕ್ಕಿಂತ ಪರಸ್ಪರ ಪರ್ಸೇಂಟೇಜ್‌ ವಿಚಾರವಾಗಿ ಆರೋಪ ಪ್ರತ್ಯಾರೋಪದಲ್ಲಿ ನಿರತವಾಗಿದ್ದು ರಾಜ್ಯವನ್ನು ಲೂಟಿ ಹೊಡೆಯಲು ಪೈಪೋಟಿ ನಡೆಸುತ್ತಿವೆ. 

ಈ ನಿಟ್ಟಿನಲ್ಲಿ ರಾಜ್ಯದ ಜನತೆ ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡುವ ಮೂಲಕ ಸುಭಿಕ್ಷ ಆಡಳಿತಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಬಿಜೆಪಿ ಸರ್ಕಾರ ರಸಗೊಬ್ಬರ ದರವನ್ನು ಒಂದಕ್ಕೆ ನಾಲ್ಕು ಪಟ್ಟು ಏರಿಕೆ ಮಾಡಿ ರೈತರ ಹಿತವನ್ನು ಕಡೆಗಣಿಸಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಖರೀದಿ ಮಾಡಲು ಎಕರೆಗೆ ಹತ್ತು ಸಾವಿರ ನೀಡುತ್ತೇವೆ. ರೈತರು ಸಾಲಗಾರರಾಗಬಾರದು ಎಂಬುದು ನಮ್ಮ ಚಿಂತನೆಯಾಗಿದೆ. ಭೂಮಿಯಿಲ್ಲದ ಕೂಲಿ ಕಾರ್ಮಿಕರಿಗೆ ಪ್ರತಿ ತಿಂಗಳು .15 ಸಾವಿರ ಆರ್ಥಿಕ ನೆರವು ನೀಡುವ ಕಾರ್ಯಕ್ರಮ ಜಾರಿಗೆ ತರುತ್ತೇವೆ. ಯುವಕರಿಗೆ ಉದ್ಯೋಗ ನೀಡುವುದು ಪಂಚರತ್ನ ಯೋಜನೆಯ ಭಾಗವಾಗಿದೆ. 

ನಾನು ಬಿಜೆಪಿ, ಕಾಂಗ್ರೆಸ್‌ಗೆ ಟಾರ್ಗೆಟ್‌: ಎಚ್‌.ಡಿ.ಕುಮಾರಸ್ವಾಮಿ

ಮನೆಯಿಲ್ಲದವರಿಗೆ ನಿವೇಶನ ನೀಡಿ ಮನೆ ನಿರ್ಮಿಸಿ ಕೊಡುತ್ತೇವೆ. 60 ವರ್ಷ ಮೇಲ್ಪಟ್ಟತಂದೆ​-ತಾಯಿಗಳಿಗೆ ಪ್ರತಿ ತಿಂಗಳು .5 ಸಾವಿರ ಸಹಾಯ ಧನ ಹಾಗೂ ಅಂಗವಿಕಲರ ಮಾಸಾಶನ .5 ಸಾವಿರಕ್ಕೆ ಏರಿಸಲಾಗುವುದು. ಇದಲ್ಲದೆ ಸ್ತ್ರೀ ಶಕ್ತಿ ಸಂಘಗಳ ಸಾಲವನ್ನು ಅಧಿಕಾರ ಸ್ವೀಕರಿಸಿದ ತಕ್ಷಣವೇ ಮನ್ನಾ ಮಾಡುತ್ತೇವೆ. ಈ ಹಿಂದೆ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದರೂ ಕೆಲವರಿಗೆ ಬಿಜೆಪಿ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಅದನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನೀಡಲಾಗುವುದು. ಪಾಟೀಲ ಪುಟ್ಟಪ್ಪನವರ ಜನ್ಮಸ್ಥಳವಾಗಿರುವ ಹಲಗೇರಿ ಗ್ರಾಮದಲ್ಲಿ ಅವರ ಪುತ್ಥಳಿ ನಿರ್ಮಿಸಲಾಗುವುದು. ಹೊಲಗಳಿಗೆ ರಸ್ತೆ, ಗರಡಿಮನಿ ನಿರ್ಮಾಣ ಮಾಡಲಾಗುವುದು. ಪಂಚರತ್ನ ಯೋಜನೆಗಳ ಜಾರಿಗೆ 2.5 ಲಕ್ಷ ಕೋಟಿ ಬೇಕಾಗುತ್ತದೆ. ಅದಕ್ಕಾಗಿ ನಮ್ಮ ಪಕ್ಷ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರುವಂತೆ ಜನರು ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

ಬಿಜೆಪಿಯವರಂತೆ ಅಮಾಯಕರ ಬಲಿಕೊಟ್ಟು ರಾಜಕಾರಣ ಮಾಡಿಲ್ಲ: ಎಚ್‌ಡಿಕೆ

ಇಲ್ಲಿಂದ ಯಾತ್ರೆಯು ಅಂತರವಳ್ಳಿ, ಆಲದಕಟ್ಟಿ, ಹಾರೋಗೊಪ್ಪ, ನಿಟ್ಟೂರ, ಗೋಡಿಹಾಳ, ಕುಪ್ಪೇಲೂರ, ತುಮ್ಮಿನಕಟ್ಟಿ, ಮಾಳನಾಯಕನಹಳ್ಳಿ, ನಿಟಪಳ್ಳಿ, ಕೋಟಿಹಾಳ, ಹೊಳೆ ಆನ್ವೇರಿ, ಹನುಮನಹಳ್ಳಿ, ಇಟಗಿ, ಮಾಗೋಡ ಗ್ರಾಮಗಳಲ್ಲಿ ಸಂಚರಿಸಿ ನಗರಕ್ಕೆ ಬಂದು ಸೇರಿತು. ಯಾತ್ರೆಯು ಅಂತರವಳ್ಳಿ ಆಗಮಿಸಿದಾಗ ಕುಮಾರಸ್ವಾಮಿ ಹೊಲದ ಕೆಲಸದಲ್ಲಿ ನಿರತರಾಗಿದ್ದ ರೈತ ಮಹಿಳೆಯರೊಂದಿಗೆ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು. ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ, ಜಿಲ್ಲಾಧ್ಯಕ್ಷ ಜಯಾನಂದ ಜೆ.ಕೆ., ಅಭ್ಯರ್ಥಿ ಮಂಜುನಾಥ ಗೌಡಶಿವಣ್ಣನವರ, ಮಹೇಶ ಹೊನ್ನಜ್ಜೇರ, ಪ್ರವೀಣ ಹೊದ್ದಿಗೇರಿ ಮತ್ತಿತರರಿದ್ದರು.

Latest Videos
Follow Us:
Download App:
  • android
  • ios