ಬಿಜೆಪಿ ದುರಾಡಳಿತದ ವಿರುದ್ಧ ಜನತೆಗೆ ಬೇಸರ: ಸಿದ್ದರಾಮಯ್ಯ

ರಾಜ್ಯದ ಭ್ರಷ್ಟಹಾಗೂ ಜನವಿರೋ​ಧಿ ಸರ್ಕಾರದ ವಿರುದ್ಧ ಮತ ಹಾಕಲು ಹಾಗೂ ಈ ಸರ್ಕಾರವನ್ನು ಕಿತ್ತೊಗೆಯಲು ಜನತೆ ತೀರ್ಮಾನಿಸಿದ್ದು, ಬರುವ ಚುನಾವಣೆಯಲ್ಲಿ 130 ರಿಂದ 150 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್‌ ಪಕ್ಷ ಅಧಿ​ಕಾರಕ್ಕೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

Congress Leader Siddaramaiah Outraged Against BJP Govt At Bagalkote gvd

ಬಾಗಲಕೋಟೆ (ಫೆ.17): ರಾಜ್ಯದ ಭ್ರಷ್ಟಹಾಗೂ ಜನವಿರೋ​ಧಿ ಸರ್ಕಾರದ ವಿರುದ್ಧ ಮತ ಹಾಕಲು ಹಾಗೂ ಈ ಸರ್ಕಾರವನ್ನು ಕಿತ್ತೊಗೆಯಲು ಜನತೆ ತೀರ್ಮಾನಿಸಿದ್ದು, ಬರುವ ಚುನಾವಣೆಯಲ್ಲಿ 130 ರಿಂದ 150 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್‌ ಪಕ್ಷ ಅಧಿ​ಕಾರಕ್ಕೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ದುರಾಡಳಿತದ ವಿರುದ್ಧ ರಾಜ್ಯದ ಜನತೆ ಬೇಸತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ಮುಳುಗಿರುವ, ಅಭಿವೃದ್ಧಿ ವಿರೋಧಿ​ಯಾಗಿರುವ ಸರ್ಕಾರವನ್ನು ತೆಗೆಯಲು ಕಾಯುತ್ತಿರುವ ಜನತೆಗೆ ಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದರು.

ಮೋದಿ, ಶಾ ನೂರು ಬಾರಿ ಬಂದರೂ ಏನು ಪರಿಣಾಮವಿಲ್ಲ: ರಾಜ್ಯಕ್ಕೆ ಪ್ರವಾಹದ ವೇಳೆ, ಬರಗಾಲದ ಸಂದರ್ಭದಲ್ಲಿ ಬರಲಾರದ ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ಅವರು, ಕರ್ನಾಟಕಕ್ಕೆ ಚುನಾವಣೆ ವೇಳೆ ಬರುತ್ತಿದ್ದಾರೆ. ಕೋವಿಡ್‌ನಂತಹ ಸಂದರ್ಭದಲ್ಲಿ ಜನ ಸಾಯುವ ಸ್ಥಿತಿ ಇದ್ದಾಗ ಬರಲಾರದವರು ಈಗ ಬರಲು ಕಾರಣ ರಾಜ್ಯದ ಬಿಜೆಪಿಗೆ ಏನೂ ಬಂಡವಾಳ ಇಲ್ಲದಾಗಿದೆ. ಪ್ರಧಾನಿಯನ್ನೇ ನೆಚ್ಚಿಕೊಂಡಿದ್ದಾರೆ. ಆದರೆ, ಇವರನ್ನು ನಂಬುವ ಸ್ಥಿತಿಯಲ್ಲಿ ರಾಜ್ಯದ ಜನತೆ ಇಲ್ಲ. ಹೀಗಾಗಿ ಇವರು ನೂರು ಬಾರಿ ಬಂದರೂ ಏನು ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದರು.

ಕೊಟ್ಟ ಮಾತಿನಂತೆ ನಡೆಯದಿದ್ದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ

ಭ್ರಷ್ಟಾಚಾರದ ಆರೋಪದಲ್ಲಿಯೇ ಆಡಳಿತ ನಡೆಸಿರುವ ಬಿಜೆಪಿಗೆ ಮಾತನಾಡಲು ನೈತಿಕತೆ ಇಲ್ಲವಾಗಿದೆ. ಗುತ್ತಿಗೆದಾರರು ಪ್ರಧಾನಿಗೆ ಬರೆದ ಪತ್ರಕ್ಕೆ ಕನಿಷ್ಠ ರಾಜ್ಯದ ಮುಖ್ಯಮಂತ್ರಿಯಿಂದ ವಿವರಣೆ ಕೇಳದ ಪ್ರಧಾನಿಗಳು ಈ ದೇಶದಲ್ಲಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಆದಿಯಾಗಿ ಸಂಬಂಧಿ​ಸಿದ ಸಚಿವರನ್ನು ಗುತ್ತಿಗೆದಾರರು ಭೇಟಿಯಾಗಿ ತನಿಖೆ ಕೈಗೊಳ್ಳಲು ಒತ್ತಾಯಿಸಿದರೂ ಏನು ಪ್ರಯೋಜನವಾಗಲಿಲ್ಲ. ಪಿಎಸ್‌ಐ ಹಗರಣದಲ್ಲಿ ಶಾಸಕ ಯತ್ನಾಳ ಅವರು ಮಾಜಿ ಮುಖ್ಯಮಂತ್ರಿಯೊಬ್ಬರ ಮಗನ ಕೈವಾಡವಿದೆ ಎಂದರೂ ತನಿಖೆಯಾಗಲಿಲ್ಲ. ಅವರದೇ ಪಕ್ಷದ ವಿಶ್ವನಾಥ ಭದ್ರಾ ಮೇಲ್ದಂಡೆ ಯೋಜನೆಯ ಹಗರಣದ ಕುರಿತು ಮಾತನಾಡಿದರೂ ಉತ್ತರಿಸಿಲ್ಲ. 

ಇದೀಗ ಚಿತ್ರದುರ್ಗದ ಶಾಸಕ ಗೂಳಿಹಟ್ಟಿಶೇಖರ 18 ಸಾವಿರ ಕೋಟಿ ಟೆಂಡರ್‌ ಪ್ರಕ್ರಿಯೆ ಕುರಿತು ಪತ್ರವನ್ನೇ ಬರೆದಿದ್ದಾರೆ. ಇವೆಲ್ಲವೂ ಹಗರಣಗಳಲ್ಲವೆ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ನಾವು ಮಾಡಿರುವ ಆರೋಪಗಳಿಗೆ ಈವರೆಗೆ ಉತ್ತರಿಸಿಲ್ಲ. ಮಾತೆತ್ತಿದರೆ ನಿಮ್ಮ ಅವಧಿ​ಯಲ್ಲಿ ಹಗರಣಗಳಾಗಿಲ್ಲವೆ ಎನ್ನುತ್ತಾರೆ. ಹೀಗಾಗಿ 2008ರಿಂದ ನಮ್ಮ ಅವಧಿ ​ಸೇರಿದಂತೆ ಈವರೆಗಿನ ಎಲ್ಲ ಹಗರಣಗಳ ಕುರಿತು ಸುಪ್ರೀಂ ಕೋರ್ಚ್‌ನ ಹಾಲಿ ನ್ಯಾಯಾ​ಧೀಶರಿಂದ ತನಿಖೆಯಾಗಲಿ ಎಂದು ಆಗ್ರಹಿಸಿದರು. ಕಾಂಗ್ರೆಸ್‌ ಸರ್ಕಾರ ಅಧಿ​ಕಾರಕ್ಕೆ ಬಂದರೆ ರಾಜ್ಯಕ್ಕೆ ಸಂಬಂಧಿ​ಸಿದ ಭ್ರಷ್ಟಾಚಾರ ಹಾಗೂ ಹಗರಣಗಳ ಕುರಿತು ಕಮಿಷನ್‌ ನೇಮಕ ಮಾಡಿ ತನಿಖೆಗೆ ಒಳಪಡಿಸಲಾಗುವುದು ಎಂದು ಹೇಳಿದರು.

ಮುಂದುವರಿದ ತನಿಖಾ ಸಂಸ್ಥೆಗಳ ದುರ್ಬಳಕೆ: ಬಿಬಿಸಿ ಕಚೇರಿ ಮೇಲೆ ನಡೆಸಿದ ಐಟಿ ದಾಳಿ ಕುರಿತು ಮಾತನಾಡಿದ ಸಿದ್ದರಾಮಯ್ಯ, ಮೋದಿ ಆಡಳಿತದಲ್ಲಿ ಐಟಿ, ಇಡಿ, ಸಿಬಿಐನಂತಹ ತನಿಖಾ ಸಂಸ್ಥೆಗಳ ದುರ್ಬಳಕೆಯನ್ನು ತಂತ್ರಗಾರಿಕೆ ಮೂಲಕ ಮಾಡುತ್ತಿದ್ದಾರೆ. ಈ ವರೆಗೆ ಮಾಡಿರುವ ದಾಳಿಗಳಲ್ಲಿ ಶೇ.90ರಷ್ಟುತಮ್ಮ ವಿರುದ್ಧ ಮಾತನಾಡಿದವರ ಮೇಲೆಯೇ ಮಾಡಿದ್ದಾರೆ. ಸರ್ಕಾರವನ್ನು ದುರುಪಯೋಗ ಪಡಿಸಿಕೊಳ್ಳುವುದೇ ಕೇಂದ್ರದ ಉದ್ದೇಶವಾಗಿದೆ ಎಂದು ದೂರಿದರು. ಮೀಸಲಾತಿ ಹೆಚ್ಚಿಸಿದ್ದಾಗಿ ಹೇಳಿಕೊಳ್ಳುವ ಈ ಸರ್ಕಾರಕ್ಕೆ ನ್ಯಾಯಮೂರ್ತಿ ನಾಗಮೋಹನದಾಸ ನೇತೃತ್ವದ ಸಮಿತಿ ರಚನೆ ಮಾಡಿದ್ದು ನಾವು. ಸರ್ವಪಕ್ಷಗಳಲ್ಲಿ ಸಹಕಾರ ನೀಡಿದ್ದು ನಾವು ಎಂದ ಅವರು, ಸಂವಿಧಾನದ ತಿದ್ದುಪಡಿ ಹಾಗೂ ಶೆಡ್ಯೂಲ್‌ (9) ಸೇರ್ಪಡೆಗೆ ಒತ್ತಾಯಿಸಿದ್ದು ನಾವು. ಆದರೆ, ಅದನ್ನು ನಾವು ಈವರೆಗೂ ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಈ ಸರ್ಕಾರದಿಂದ ಸಾಧ್ಯವಾಗಿಲ್ಲ ಎಂದು ಟೀಕಿಸಿದರು.

ಸಿದ್ದರಾಮಯ್ಯ ಕೋಲಾರಕ್ಕೆ ಹೋಗಿ ಬಾದಾಮಿ ಜನರಿಗೆ ಮೋಸ: ಈಶ್ವರಪ್ಪ ಆಕ್ರೋಶ

ಸಾಮಾಜಿಕ ನ್ಯಾಯ ಕಾಂಗ್ರೆಸ್‌ ಪಕ್ಷದಿಂದ ಸಾಧ್ಯ: ಲಿಂಗಾಯತ ಸಮುದಾಯಕ್ಕೆ ಈ ಬಾರಿ ಹೆಚ್ಚಿನ ಟಿಕೆಟ್‌ ಬೇಡಿಕೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಲಿಂಗಾಯತ, ಒಕ್ಕಲಿಗ, ಹಿಂದುಳಿದ, ಕುರುಬ, ಮುಸ್ಲಿಂ ಸೇರಿದಂತೆ ಎಲ್ಲ ವರ್ಗದ ಜನತೆಗೆ ಸಾಮಾಜಿಕ ನ್ಯಾಯದಡಿ ಟಿಕೆಟ್‌ ನೀಡುವ ಪಕ್ಷ ಕಾಂಗ್ರೆಸ್‌ ಪಕ್ಷವಾಗಿದೆ. ಬಿಜೆಪಿಯವರು ಮುಸ್ಲಿಂ ಹಾಗೂ ಕ್ರೈಸ್ತರಿಗೆ ಟಿಕೆಟ್‌ ನೀಡಲು ಸಾಧ್ಯವೆ ಎಂದು ಹೇಳಿ, ಎಲ್ಲ ವರ್ಗದ ಜನತೆಗೆ ಕಾಂಗ್ರೆಸ್‌ ಪಕ್ಷದಿಂದ ಮಾತ್ರ ನ್ಯಾಯ ಸಿಗಲು ಸಾಧ್ಯ ಎಂದರು. ಚಿತ್ರ ನಟ ಸುದೀಪ ಅವರು ಕಾಂಗ್ರೆಸ್‌ ಸೇರುವ ಕುರಿತು ಉತ್ತರಿಸಿದ ಸಿದ್ದರಾಮಯ್ಯ, ನನಗೆ ಈ ಕುರಿತು ಮಾಹಿತಿ ಇಲ್ಲ. ಹೀಗಾಗಿ, ಮಾಹಿತಿ ಇಲ್ಲದೆ ಮಾತನಾಡುವುದು ತಪ್ಪಾಗುತ್ತದೆ ಎಂದರು. ಕಾನಿಪ ಸಂಘದ ಅಧ್ಯಕ್ಷ ಆನಂದ ದಲಬಂಜನ ಸ್ವಾಗತಿಸಿದರೆ, ಕಾರ್ಯದರ್ಶಿ ಶಂಕರ ಕಲ್ಯಾಣಿ ನಿರೂಪಿಸಿದರು. ಸಂಘದ ವತಿಯಿಂದ ಸಿದ್ದರಾಮಯ್ಯ ಅವರನ್ನು ಹಿರಿಯ ಪತ್ರಕರ್ತರಾದ ಈಶ್ವರ ಶೆಟ್ಟರ, ಮಹೇಶ ಅಂಗಡಿ, ಉಮೇಶ ಪೂಜಾರ ಸನ್ಮಾನಿಸಿದರು.

Latest Videos
Follow Us:
Download App:
  • android
  • ios