ಬೆಂಗಳೂರು (ಜ.21):  ಕೃಷಿ ಕ್ಷೇತ್ರಕ್ಕೆ ಮಾರಕವಾದ ಕಾಯಿದೆಗಳನ್ನು ವಾಪಸು ಪಡೆಯದಿದ್ದರೆ ರೈತರು ದಂಗೆ ಏಳುವುದು ಖಚಿತ. ರೈತರು ಮನಸ್ಸು ಮಾಡಿದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಇಬ್ಬರನ್ನೂ ಅಧಿಕಾರದಿಂದ ಕೆಳಗಿಳಿಸಿ ಮನೆಗೆ ಕಳುಹಿಸಲು ಹೆಚ್ಚು ಸಮಯ ಬೇಕಾಗಿಲ್ಲ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರೈತ ವಿರೋಧ ಕಾಯಿದೆಗಳನ್ನು ಜಾರಿಗೆ ತಂದಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಜನತೆ ಮುಂಬರುವ ಚುನಾವಣೆಯಲ್ಲಿ ಜನತೆ ಮನೆಗೆ ಕಳಹಿಸುವುದು ಖಚಿತ. ಕಳೆದ 58 ದಿನಗಳಿಂದ ರೈತರು ದೆಹಲಿಯಲ್ಲಿ ಹಗಲು-ರಾತ್ರಿ ಎನ್ನದೆ, ಚಳಿ, ಗಾಳಿ, ಮಳೆ, ಬಿಸಿಲು ಲೆಕ್ಕಿಸದೆ ಪ್ರಾಣ ಪಣಕ್ಕಿಟ್ಟು ಚಳವಳಿ ನಡೆಸುತ್ತಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ.

'ಬಿಜೆಪಿ, ಸಂಘ ಪರಿವಾರದ ಸಿದ್ದಾಂತ ಸಿದ್ದರಾಮಯ್ಯ ಒಪ್ಪಿಕೊಳ್ಳಲಿ' ..

ರೈತರ ವಿರುದ್ಧ ಮರಣಶಾಸನದಂತಹ ಕಾಯಿದೆಗಳನ್ನು ಸರ್ವಾಧಿಕಾರಿ ಧೋರಣೆ ಮೂಲಕ ಜಾರಿಗೆ ತಂದಿರುವ ನರೇಂದ್ರ ಮೋದಿ ಮನುಷ್ಯತ್ವ ಮರೆತು ರೈತರ ಹೋರಾಟ ಹತ್ತಿಕ್ಕಲು ಯತ್ನಿಸುತ್ತಿದ್ದಾರೆ. ಅವರಿಗೆ ನಿಜವಾಗಿಯೂ ಮನುಷ್ಯತ್ವ ಇದ್ದರೆ ಹತ್ತಿಕ್ಕುವ ಪ್ರಯತ್ನ ಮಾಡುತ್ತಿರಲಿಲ್ಲ. ಬದಲಿಗೆ ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುತ್ತಿತ್ತು ಎಂದು ಕಿಡಿ ಕಾರಿದರು.

'ತಾಕತ್ತಿದ್ದರೆ ಡಿ.ಕೆ.ಶಿವಕುಮಾರ್​ ಸಿದ್ದರಾಮಯ್ಯಗೆ ನೋಟಿಸ್ ಕೊಡಲಿ'

ಎರಡನೇ ಸ್ವಾತಂತ್ರ್ಯ ಹೋರಾಟ ಅನಿವಾರ್ಯ:  ರೈತವಿರೋಧಿ ಕಾಯಿದೆಗಳು ಸಂವಿಧಾನಬದ್ಧವಾಗಿದ್ದಿದ್ದರೆ ನ್ಯಾಯಾಲಯ ತಡೆಯಾಜ್ಞೆ ನೀಡುತ್ತಿರಲಿಲ್ಲ. ರೈತರು ದಂಗೆ ಏಳಲು ಅವಕಾಶ ಮಾಡಿಕೊಡಬೇಡಿ ಎಂದು ನಾನು ಸೂಚ್ಯವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಹೇಳುತ್ತಿದ್ದೇನೆ. ಈ ಹಿಂದೆ ಜನರು ಈಸ್ಟ್‌ ಇಂಡಿಯಾ ಕಂಪನಿ ವಿರುದ್ಧ ದಂಗೆ ಎದ್ದಿದ್ದರು. ಇದೀಗ ಕೇಂದ್ರ ಹಾಗೂ ರಾಜ್ಯದ ವಿರುದ್ಧ ಎರಡನೇ ಸ್ವಾತಂತ್ರ್ಯ ಹೋರಾಟದ ಸ್ಥಿತಿ ಅನಿವಾರ್ಯವಾಗಿದೆ ಎಂದರು.

ಹೋರಾಟ ನಿಲ್ಲದು:  ನಮ್ಮ ಹೋರಾಟದಲ್ಲಿ ಇದು ಆರಂಭ ಮಾತ್ರ. ಇದು ಮುಂಬರುವ ವಿಧಾನಸಭೆ ಚುನಾವಣೆವರೆಗೆ ನಡೆಯಲಿದೆ. ಎಂಎಸ್‌ಪಿ ನಿಲ್ಲಿಸುವುದಿಲ್ಲ ಎಂದಾದರೆ ಕಾನೂನು ರೀತ್ಯ ಭರವಸೆ ನೀಡಿ ಎಂದು ಚಳವಳಿನಿರತ ರೈತರು ಕೇಳುತ್ತಿದ್ದಾರೆ. ಅದರಂತೆ ಕಾನೂನು ಪ್ರಕಾರ ಭರವಸೆ ನೀಡಬೇಕು. ಸ್ವಾಮಿನಾಥನ್‌ ವರದಿ ಜಾರಿಗೆ ತರಲೂ ಭರವಸೆ ನೀಡಬೇಕು. ನಮ್ಮ ಹೋರಾಟಗಳನ್ನು ಹತ್ತಿಕ್ಕಲು ಮುಂದಾದರೆ ಅದು ಬಿಜೆಪಿಗೇ ತಿರುಗುಬಾಣವಾಗಲಿದೆ ಎಂದು ಎಚ್ಚರಿಸಿದರು.