*  ಬಿಜೆಪಿ ನೀಡಿದ ಪ್ರಕಟಣೆಯಲ್ಲಿ ಸಾಧನೆಗಳ ವಿವರವೇ ಇಲ್ಲ*  ಭ್ರಷ್ಟಾಚಾರ, ಆಡಳಿತ ವೈಫಲ್ಯವೇ ಸಾಧನೆ*  ಮಹದಾಯಿ ಏಕೆ ಜಾರಿ ಮಾಡುತ್ತಿಲ್ಲ? 

ಬೆಂಗಳೂರು(ಜ.30):  ಅಧಿಕಾರಕ್ಕೆ ಬರುವ ಮುನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳ ಪೈಕಿ ಎಷ್ಟು ಸಾಧನೆ ಮಾಡಿದ್ದೇವೆ ಎಂದು ಹೇಳಿದ್ದರೆ ಅದನ್ನು ಸಾಧನೆಯೆನ್ನಬಹುದು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಮ್ಮ 6 ತಿಂಗಳ ಅಡಳಿತದ ಬಗ್ಗೆ ನೀಡಿರುವ ಪ್ರಕಟಣೆಯಲ್ಲಿ ಸಾಧನೆಯ ವಿವರಗಳೇ ಇಲ್ಲ. ಬದಲಾಗಿ ಮತ್ತೆ ಪೊಳ್ಳು ಭರವಸೆಗಳನ್ನು ನೀಡಲಾಗಿದೆ. ಏಕೆಂದರೆ, ಈ ಸರ್ಕಾರದ ನಿಜ ಸಾಧನೆ ಭ್ರಷ್ಟಾಚಾರ ಹಾಗೂ ಆಡಳಿತ ನಿರ್ವಹಣೆಯಲ್ಲಿ ವೈಫಲ್ಯವೇ ಆಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ.

ಬೊಮ್ಮಾಯಿ ಸರ್ಕಾರಕ್ಕೆ ಆರು ತಿಂಗಳು ತುಂಬಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ(Government of Karnataka) ತನ್ನ ಸಾಧನೆ ಪಟ್ಟಿ(Achievement List) ಪ್ರಕಟಿಸಿರುವ ಹಿನ್ನೆಲೆಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ ಅವರು ಈ ಸರ್ಕಾರ ವೈಫಲ್ಯಅನುಭವಿಸಿದೆ ಎಂದು ಆರೋಪಿಸಿ, ಅಂಕಿ-ಅಂಶಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

Karnataka Politics: ದರ ಏರಿಸಬೇಡಿ, 50% ನಿರ್ಬಂಧ ರದ್ದುಮಾಡಿ: ಕಾಂಗ್ರೆಸ್‌ ಆಗ್ರಹ

ಎಲ್ಲ ರಂಗದಲ್ಲಿ ವಿಫಲ:

ರಾಜ್ಯದಲ್ಲಿ(Karnataka) ಬಿಜೆಪಿ ಸರ್ಕಾರ(BJP Government) ಅಸ್ತಿತ್ವಕ್ಕೆ ಬಂದು ಎರಡೂವರೆ ವರ್ಷಗಳಾಗಿದ್ದು, ಬೊಮ್ಮಾಯಿ ಅವರದ್ದು ಹಿಂದಿನ ಯಡಿಯೂರಪ್ಪ(BS Yediyurappa) ಅವರ ಸರ್ಕಾರದ ಮುಂದುವರೆದ ಭಾಗವೇ ಹೊರತು ಹೊಸ ಸರ್ಕಾರವೇನಲ್ಲ, 2018ರಲ್ಲಿ ಬಿಜೆಪಿ ಜನರಿಗೆ ನೀಡಿದ್ದ ಚುನಾವಣೆ ಪ್ರಣಾಳಿಕೆಗೆ(Manifesto) ಯಡಿಯೂರಪ್ಪ ಅವರ ಸರ್ಕಾರದಷ್ಟೇ ಬೊಮ್ಮಾಯಿ ಅವರ ಸರ್ಕಾರಕ್ಕೂ ಅನ್ವಯವಾಗುತ್ತದೆ ಹೀಗಾಗಿ ಭ್ರಷ್ಟಾಚಾರ ಮತ್ತು ವೈಫಲ್ಯಗಳು ಬಿಜೆಪಿ ಸರ್ಕಾರದ ಈ ಸರ್ಕಾರದ ನಿಜ ಸಾಧನೆಯಾಗಿದೆ ಎಂದರು.

ಬಿಜೆಪಿಯ ಈವರೆಗಿನ ಆಡಳಿತದಲ್ಲಿ ನೀರಾವರಿ, ಹೈದರಾಬಾದ್‌ ಕರ್ನಾಟಕ(Hyderabad Karnataka) ಅಭಿವೃದ್ಧಿಗೆ ಹೆಚ್ಚು ವೆಚ್ಚ ಮಾಡಿಲ್ಲ. ಕೋವಿಡ್‌ ನಿರ್ವಹಣೆಯಲ್ಲಿ ವಿಫಲವಾಗಿದೆ, ಕೊರೋನಾದಿಂದ(Coronavirus) ಮೃತಪಟ್ಟ ಅನೇಕ ಕುಟುಂಬಗಳಿಗೆ ಪರಿಹಾರ ಕೊಟ್ಟಿಲ್ಲ, ಪರಿಶಿಷ್ಟ ಜಾತಿಗೆ ಸ್ವಯಂ ಉದ್ಯೋಗ(Jobs) ಕೈಗೊಳ್ಳಲು ಹಾಗೂ ಗಂಗಾ ಕಲ್ಯಾಣ ಯೋಜನೆಗೆ ಕಡಿಮೆ ಹಣ ಕೊಟ್ಟಿದ್ದಾರೆ ಎಂದು ಅವರು ಅಂಕಿ ಅಂಶಗಳ ಸಹಿತ ವಿವರಿಸಿದರು.
ಐದು ವರ್ಷಗಳಲ್ಲಿ ನೀರಾವರಿಗೆ 1.5 ಲಕ್ಷ ಕೋಟಿ ರು. ಖರ್ಚು ಮಾಡುವುದಾಗಿ ಬಿಜೆಪಿ ಹೇಳಿತ್ತು. ಅಂದರೆ ವರ್ಷಕ್ಕೆ 30 ಸಾವಿರ ಕೋಟಿ ರು. ಖರ್ಚು ಮಾಡಬೇಕು, ಆದರೆ ಈ ವರ್ಷ ವೆಚ್ಚ ಮಾಡಿರುವುದು 6,300 ಕೋಟಿ ರು.ಮಾತ್ರ.ಹಿಂದೆ ತಮ್ಮ ಸರ್ಕಾರದ ಅವಧಿಯಲ್ಲಿ ಗ್ರಾಮೀಣ ಸೇವಾ ಕೇಂದ್ರ(Rural Service Center) ಆರಂಭಿಸಲಾಗಿತ್ತು. ಈಗ ಅದನ್ನು ‘ಗ್ರಾಮ ಒನ್‌’ ಎಂದು ಹೆಸರು ಬದಲಾವಣೆ ಮಾಡಿದ್ದಾರೆ, ಇದು ಸರ್ಕಾರದ ಸಾಧನೆಯೇ ಎಂದು ಅವರು ಪ್ರಶ್ನಿಸಿದರು.

ಹೈದರಾಬಾದ್‌ ಕರ್ನಾಟಕದ ಅಭಿವೃದ್ಧಿಗಾಗಿ 3000 ಕೋಟಿ ರು. ಖರ್ಚು ಮಾಡುವುದಾಗಿ ಸರ್ಕಾರ ಹೇಳಿದೆ. ಆದರೆ ಈವರೆಗೆ ಕ್ರಿಯಾ ಯೋಜನೆ ರೂಪಿಸಿ ಬಿಡುಗಡೆ ಮಾಡಿರುವುದು 1200 ಕೋಟಿ ರು. ಹೈದರಾಬಾದ್‌ ಕರ್ನಾಟಕ ಹೆಸರು ಬದಲಾಯಿಸಿದೆ ಅಷ್ಟೇ, ಹಣಕಾಸಿನ ಲಾಭ ಏನೂ ಇಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.

ಕೊರೋನಾ ಎರಡನೇ ಅಲೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೇ ಜನ ಹಾದಿ ಬೀದಿಯಲ್ಲಿ ಪ್ರಾಣ ಬಿಟ್ಟರು, ಸರ್ಕಾರ 38 ಸಾವಿರ ಜನರು ಸತ್ತಿದ್ದಾರೆ ಎಂದು ಸುಳ್ಳು ಲೆಕ್ಕ ಹೇಳಿದೆ.ಯಾವ ಆಸ್ಪತ್ರೆಯಲ್ಲಿ ಎಷ್ಟುಜನ ಸತ್ತಿದ್ದಾರೆಂದು ಲೆಕ್ಕ ಕೊಟ್ಟರೆ ಆಗ ಸತ್ಯ ಬಯಲಾಗುತ್ತದೆ ಎಂದು ಹೇಳಿದರು.ಕೋವಿಡ್‌ನಿಂದ(Covid19) ಮೃತರಾದ 27,074 ಕುಟುಂಬಗಳಿಗೆ ಕೇಂದ್ರ ಸರ್ಕಾರ(Central Government) ತಲಾ 50 ಸಾ.ರು. ಪರಿಹಾರ ನೀಡಿದೆ. ರಾಜ್ಯ ಸರ್ಕಾರ 13,541

ಕುಟುಂಬಗಳಿಗೆ ತಲಾ ಒಂದು ಲಕ್ಷ ರು. ಪರಿಹಾರ ನೀಡಿದೆ. ಇನ್ನುಳಿದ ಕುಟುಂಬಗಳಿಗೆ ಪರಿಹಾರ(compensation) ಕೊಟ್ಟಿಲ್ಲ, ಕಿಸಾನ್‌ ಸಮ್ಮಾನ್‌ ಯೋಜನೆಯಡಿ ರಾಜ್ಯದಲ್ಲಿರುವ 87 ಲಕ್ಷ ರೈತರ ಕುಟುಂಬಗಳ ಪೈಕಿ ಕೇವಲ 50 ಲಕ್ಷ ಕುಟುಂಬಗಳು ಹಣ ಪಡೆದಿವೆ, ಅದೇ ರೀತಿ ತಮ್ಮ ಸರ್ಕಾರ ಜಾರಿಗೆ ತಂದಿದ್ದ ‘ವಿದ್ಯಾಸಿರಿ’ ಹಾಗೂ ‘ಅರಿವು’ ಯೋಜನೆಯನ್ನು ನಿಲ್ಲಿಸಿದ್ದಾರೆ.ಕನಿಷ್ಟಬೆಂಬಲ ಬೆಲೆಯಲ್ಲಿ ಭತ್ತ, ರಾಗಿ, ತೊಗರಿಯನ್ನು ಸಾಕಷ್ಟುಕಡಿಮೆ ಪ್ರಮಾಣದಲ್ಲಿ ಖರೀದಿ ಮಾಡುತ್ತಿದ್ದಾರೆ ಎಂದು ವಿವರಿಸಿದರು.

Karnataka Politics: ಕೈ ಮುಗಿತೀನಿ, ಜೆಡಿಎಸ್‌ಗೆ ಮತ ಹಾಕ್ಬೇಡಿ: ಸಿದ್ದರಾಮಯ್ಯ

ಮಹದಾಯಿ ಏಕೆ ಜಾರಿ ಮಾಡುತ್ತಿಲ್ಲ?:

ಮಹದಾಯಿ ಯೋಜನೆ(Mahdayi Project) ಸಂಬಂಧ ಗೋವಾ(Goa) ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಯೋಜನೆ ಜಾರಿ ಮಾಡಲು ಏನಾಗಿದೆ, ಮೇಕೆದಾಟು ಯೋಜನೆಗೆ ಪರಿಸರ ಇಲಾಖೆ ಅನುಮತಿ ಪಡೆಯಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಸರ್ವ ವ್ಯಾಪಿ, ಸರ್ವ ಸ್ಪರ್ಶಿ ಎಂಬ ಹೊಸ ಪದ ಹುಡುಕಿದ್ದಾರೆ. ಹೊಸ ಪದ ಬಿಟ್ಟರೆ ಬೇರೇನೂ ಮಾಡಿಲ್ಲ, ಅಂತಃಕರಣ ಎಂದು ಬೇರೆ ಹೇಳುತ್ತಾರೆ. ಬಡವರಿಗೆ ಅನುಕಂಪ ಬೇಕಿಲ್ಲ, ಅಭಿವೃದ್ಧಿ ಬೇಕು. ಆದರೆ ಇವರು ಬಣ್ಣ ಬಣ್ಣದ ಜಾಹೀರಾತು ಕೊಟ್ಟು ಸುಳ್ಳು ಹೇಳುತ್ತಾರೆ ಅಂತ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.